ಸಮಾಚಾರ

ವಿದ್ಯಾರ್ಥಿಗೆ ಪೆನ್ಸಿಲ್ ನಿಂದ ಚುಚ್ಚಿದ ಶಿಕ್ಷಕ

ಹೈದರಾಬಾದಿನ ಬೋವನಪಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ತಾನು ಪಾಠ ಮಾಡುತ್ತಿದ್ದ ವೇಳೆ 2 ನೇ ತರಗತಿ ವಿದ್ಯಾರ್ಥಿಯೊಬ್ಬ ಅಪ್ಪಣೆ ಪಡೆಯದೆ ಹೊರ ಹೋದನೆಂಬ ಕಾರಣಕ್ಕೆ ಸಿಟ್ಟಿಗೆದ್ದ ಶಿಕ್ಷಕನೊಬ್ಬ ಚೂಪಾದ ಪೆನ್ಸಿಲ್ ತುದಿಯಿಂದ ವಿದ್ಯಾರ್ಥಿಯ ಕುತ್ತಿಗೆಗೆ ಚುಚ್ಚಿದ ಘಟನೆ ನಡೆದಿದೆ.

ಶುಕ್ರವಾರದಂದು ಈ ಘಟನೆ ನಡೆದಿದ್ದು, ವೆಂಕಟೇಶ್ವರನ್ ಎಂಬವರ ಪುತ್ರ ನಾಣಿ ಎಂಬಾತ ಅನಂತಯ್ಯ ಎಂಬ ಶಿಕ್ಷಕರು ತೆಲುಗು ಪಾಠ ಮಾಡುತ್ತಿದ್ದ ವೇಳೆ ತರಗತಿಯಿಂದ ಎದ್ದು ಹೊರ ಹೋಗಿದ್ದಾನೆ. ಕೆಲ ಸಮಯದ ಬಳಿಕ ಆತ ವಾಪಾಸ್ ಬಂದಿದ್ದು, ಇದನ್ನು ಗಮನಿಸಿದ ಶಿಕ್ಷಕ ಅನಂತಯ್ಯ ನಾಣಿಗೆ ಬೆತ್ತದಿಂದ ಥಳಿಸಿದ್ದಾರೆ.

ಸಾಲದ್ದಕ್ಕೆ ಚೂಪಾದ ಪೆನ್ಸಿಲ್ ನಿಂದ ಆತನ ಕುತ್ತಿಗೆಗೆ ಚುಚ್ಚಿದ್ದು, ಇದರಿಂದಾಗಿ ಅರ್ಧ ಇಂಚು ಆಳದ ಗಾಯವಾಗಿ ರಕ್ತ ಸುರಿಯಲಾರಂಭಿಸಿದೆ. ಕುಸಿದು ಬಿದ್ದ ವಿದ್ಯಾರ್ಥಿಯನ್ನು ತಾನೇ ಬೈಕ್ ನಲ್ಲಿ ಕರೆದುಕೊಂಡು ಹೋದ ಶಿಕ್ಷಕ ಅನಂತಯ್ಯ, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಆತನನ್ನು ಮನೆಗೆ ಬಿಟ್ಟಿದ್ದಾನೆ. ಬ್ಯಾಂಡೇಜ್ ಹಾಕಿಸಿಕೊಂಡು ಬಂದ ಮಗನನ್ನು ಕಂಡು ಆತಂಕಗೊಂಡ ಪೋಷಕರು ವಿಚಾರಿಸಿದ ವೇಳೆ ಸತ್ಯಾಂಶ ಬಯಲಾಗಿದೆ. ಇದೀಗ ಶಿಕ್ಷಕನ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆಯಲ್ಲದೇ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆ, ತನಿಖೆ ನಡೆಸಿ ಶಿಕ್ಷಕನ ವಿರುದ್ದ ಕ್ರಮ ಕೈಗೊಳ್ಳಲು ಮುಂದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top