fbpx
Karnataka

ಭಾರೀ ವರ್ಷಧಾರೆಯಿಂದ ಮೈದುಂಬಿದ ಕಾವೇರಿ, ರಾಜ್ಯದ ಜಲಾಶಯಗಳಿಗೆ ಬಂತು ಜೀವಕಳೆ.

ಬೆಂಗಳೂರು: ಬರದ ಬೇಗೆಯಲ್ಲಿ ಬೆಂದು ಬರಿದಾಗಿದ್ದ ರಾಜ್ಯದ ಜಲಾಶಯಗಳಿಗೆ ಈಗ ಜೀವಕಳೆ ಬಂದಿದೆ. ಕಾವೇರಿ ಜಲಾನಯನ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯಗಳ ಒಳಹರಿವು ಹೆಚ್ಚಳವಾಗಿ ನೀರಿನ ಮಟ್ಟವೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದೇ ರೀತಿ ಮಳೆ ಮುಂದುವರೆದರೆ ಇನ್ನೆರಡು ವಾರದಲ್ಲಿ ಬಹುತೇಕ ನಾಲ್ಕ್ಕು ಜಲಾಶಯಗಳು ಭರ್ತಿಯಾಗುವ ಸಾಧ್ಯತೆಗಳಿವೆ. ಹವಾ ಮುನ್ಸೂಚನೆ ಪ್ರಕಾರ ಜು.15ರವರೆಗೂ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಜೂನ್ ತಿಂಗಳಿನಲ್ಲಿ ಉತ್ತಮ ಮಳೆಯಾಗಿದ್ದರೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಜಲಾಶಯಗಳಿಗೆ ನೀರು ಸಂಗ್ರಹವಾಗಲಿಲ್ಲ.

ಆದರೂ ಕೂಡ ಕಳೆದ ವರ್ಷಕ್ಕಿಂತ ಜಲಾಶಯಗಳ ನೀರಿನ ಮಟ್ಟ ತುಂಬ ಕಡಿಮೆಯಿದೆ. ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 79 ಅಡಿಗೆ ತಲುಪಿದ್ದು, ಕಳೆದ ಎರಡು ದಿನಗಳಲ್ಲಿ 10 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 17 ಸಾವಿರ ಕ್ಯೂಸೆಕ್ಸ್ ಹೆಚ್ಚು ನೀರು ಬರುತ್ತಿದ್ದು , ಜಲಾಶಯದಿಂದ ಹೊರಕ್ಕೆ ಒಂದೂವರೆ ಸಾವಿರ ಕ್ಯೂಸೆಕ್ಸ್ಗೂ ಹೆಚ್ಚು ನೀರನ್ನು ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 107 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿತ್ತು. ಇನ್ನು 40 ಟಿಎಂಸಿಯಷ್ಟು ನೀರು ಈ ಜಲಾಶಯಕ್ಕೆ ಬರಬೇಕಾಗಿದೆ.

ಹಾರಂಗಿ ಜಲಾಶಯಕ್ಕೆ ನಾಲ್ಕು ಸಾವಿರ ಕ್ಯೂಸೆಕ್ಗೂ ಹೆಚ್ಚು ನೀರು ಹರಿದುಬರುತ್ತಿದ್ದು , 2832 ಅಡಿಗೆ ನೀರಿನ ಮಟ್ಟ ತಲುಪಿದೆ. ಇನ್ನು ನಾಲ್ಕು ಟಿಎಂಸಿಯಷ್ಟು ಈ ಜಲಾಶಯಕ್ಕೆ ನೀರು ಬರಬೇಕಾಗಿದೆ. ಕಳೆದ ವರ್ಷ 2837 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಹೇಮಾವತಿ ಜಲಾಶಯಕ್ಕೂ 13 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹರಿದುಬರುತ್ತಿದ್ದು , 2873 ಅಡಿಗೆ ನೀರಿನ ಮಟ್ಟ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2904 ಅಡಿಯಷ್ಟು ನೀರಿತ್ತು. ಕಬಿನಿ ಜಲಾಶಯಕ್ಕೂ 16 ಸಾವಿರ ಕ್ಯೂಸೆಕ್ಸ್ಕ್ಕೂ ಹೆಚ್ಚು ಒಳಹರಿವು ಹರಿದುಬರುತ್ತಿದೆ. 2259 ಅಡಿ ನೀರಿದ್ದು , ಕಳೆದ ವರ್ಷ 2283 ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಒಂದು ಸಾವಿರಕ್ಕೂ ಹೆಚ್ಚು ನೀರನ್ನು ಜಲಾಶಯದಿಂದ ಹೊರಕ್ಕೆ ಬಿಡಲಾಗುತ್ತಿದೆ. ರಾಜ್ಯಾದ್ಯಂತ ಕೃಷಿ ಚಟುವಟಿಕೆಗಳು ಬಿರುಸುಗೊಂಡಿದ್ದು, ರಾಜ್ಯದ ಜನ ನೆಮ್ಮದಿಯ ನಿಟ್ಟುಸಿರುಬಿಡುವಂತಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top