Karnataka

ರಾಷ್ಟ್ರೀಯ ಸಬ್ ಜೂನಿಯರ್ ಈಜು ಚಾಂಪಿಯನ್ಷಿಪ್ನಲ್ಲಿ ಚಿನ್ನ ಗೆದ್ದ ಕರ್ನಾಟಕದ ಕಪಿಲ್, ವಿದಿತ್

ಬೆಂಗಳೂರು: ಕರ್ನಾಟಕದ ಸ್ಪರ್ಧಿಗಳು ರಾಜ್ಯ ಈಜು ಸಂಸ್ಥೆ ಆಶ್ರಯದ ರಾಷ್ಟ್ರೀಯ ಸಬ್ ಜೂನಿಯರ್ ಈಜು ಚಾಂಪಿಯನ್ಷಿಪ್ನಲ್ಲಿ ಪಾರಮ್ಯ ಸಾಧಿಸಿದ್ದಾರೆ. ಕಪಿಲ್ ಶೆಟ್ಟಿ, ವಿದಿತ್ ಎಸ್. ಶಂಕರ್ ಮತ್ತು ಅಮೆ ಬಿ. ಪಾಟೀಲ್ ಅವರು ಶುಕ್ರವಾರ ಚಿನ್ನಕ್ಕೆ ಕೊರಳೊಡ್ಡಿದರು.

ಬಸವನಗುಡಿ ಈಜು ಕೇಂದ್ರದಲ್ಲಿ ನಡೆದ ಬಾಲಕರ ಗುಂಪು-3ರ 100 ಮೀಟರ್ಸ್ ಬ್ಯಾಕ್ಸ್ಟ್ರೋಕ್ ವಿಭಾಗದಲ್ಲಿ ರಾಜ್ಯ ಕಪಿಲ್ ಒಂದು ನಿಮಿಷ 10.69 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿ ಮೊದಲನೇ ಸ್ಥಾನ ಪಡೆದರು.

ಆರಂಭದಿಂದಲೇ ನಿಖರ ವೇಗ ಕಾಯ್ದುಕೊಂಡು ಈಜಿದ ಕಪಿಲ್ ಅವರು ಎದುರಾಳಿಗಳ ಸವಾಲನ್ನು ಮೀರಿ ನಿಲ್ಲುವಲ್ಲಿ ಯಶಸ್ವಿಯಾದರು. ಕಪಿಲ್ಗೆ ತೀವ್ರ ಪೈಪೋಟಿ ಒಡ್ಡಿದ ಪಶ್ಚಿಮ ಬಂಗಾಳದ ಲಸ್ಕರ್ ಸಾಹಿಲ್ ಒಂದು ನಿಮಿಷ 13.03 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ತಮ್ಮದಾಗಿಸಿಕೊಂಡರು. ರಾಜ್ಯದ ಧ್ಯಾನ್ ಬಾಲಕೃಷ್ಣ ಅವರು (ಕಾಲ: 1:13.83ಸೆ.) ಈ ವಿಭಾಗದ ಕಂಚಿಗೆ ತೃಪ್ತಿಪಟ್ಟರು.

ಹಾಲಿ ಚಾಂಪಿಯನ್ ಕರ್ನಾಟಕ ತಂಡ ಮೂರನೇ ದಿನದ ಅಂತ್ಯಕ್ಕೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ರಾಜ್ಯ ತಂಡದ ಖಾತೆಯಲ್ಲಿ ಒಂಬತ್ತು ಚಿನ್ನ ಹಾಗೂ ತಲಾ ಐದು ಬೆಳ್ಳಿ ಮತ್ತು ಕಂಚು ಇದೆ.

ಎಂಟು ಚಿನ್ನ, ಏಳು ಬೆಳ್ಳಿ ಮತ್ತು ಎಂಟು ಕಂಚು ಹೊಂದಿರುವ ಮಹಾರಾಷ್ಟ್ರ ತಂಡ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಸ್ಸಾ ತಂಡ ತಲಾ ಆರು ಚಿನ್ನ ಮತ್ತು ಬೆಳ್ಳಿ ಹಾಗೂ ಐದು ಕಂಚು ಜಯಿಸಿದ್ದು ಪಟ್ಟಿಯಲ್ಲಿ ಮೂರನೇ ಸ್ಥಾನ ತನ್ನದಾಗಿಸಿಕೊಂಡಿದೆ.

ವಿದಿತ್ ಮಿಂಚು: ಬಾಲಕರ ಗುಂಪು-4ರ 200 ಮೀಟರ್ಸ್ ವೈಯಕ್ತಿಕ ಮೆಡ್ಲೆ ವಿಭಾಗದಲ್ಲಿ ಕರ್ನಾಟಕದ ಭರವಸೆ ಎನಿಸಿದ್ದ ವಿದಿತ್ ಎಸ್. ಶಂಕರ್ ಅವರು ತಮ್ಮ ಮೇಲಿನ ನಿರೀಕ್ಷೆ ಹುಸಿಗೊಳಿಸಲಿಲ್ಲ. ವಿದಿತ್ ಅವರು 2 ನಿಮಿಷ 46.87 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿ ಚಿನ್ನದ ನಗೆ ಚೆಲ್ಲಿದರು.

ಮಹಾರಾಷ್ಟ್ರದ ಸಾವಂತ್ ರೊನಕ್ ಮತ್ತು ತಮಿಳುನಾಡಿನ ಎಚ್. ನಿತಿಕ್ ಅವರು ಕ್ರಮವಾಗಿ 2 ನಿಮಿಷ 47.49 ಸೆಕೆಂಡು ಹಾಗೂ 2 ನಿಮಿಷ 51. 52 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಮತ್ತು ಕಂಚಿಗೆ ಕೊರಳೊಡ್ಡಿದರು.

ಅಮೆಗೆ ಚಿನ್ನ: ಬಾಲಕರ ಗುಂಪು-4ರ 50 ಮೀಟರ್ಸ್ ಫ್ರೀಸ್ಟೈಲ್ನಲ್ಲಿ ರಾಜ್ಯದ ಅಮೆ ಬಿ. ಪಾಟೀಲ್ ಚಿನ್ನಕ್ಕೆ ಮುತ್ತಿಟ್ಟರು. ಅಮೆ ಅವರು 31.31 ಸೆಕೆಂಡುಗಳಲ್ಲಿ ಗುರಿ ಕ್ರಮಿಸುವ ಮೂಲಕ ಈ ಸಾಧನೆ ಮಾಡಿದರು. ಪಶ್ಚಿಮ ಬಂಗಾಳದ ಪಾತ್ರ ಪ್ರಾಂಜಲ್ ಅವರು 31.48 ಸೆಕೆಂಡು ಗಳಲ್ಲಿ ನಿಗದಿತ ಗುರಿ ಮುಟ್ಟಿ ಬೆಳ್ಳಿ ಜಯಿಸಿದರೆ, ಮಹಾರಾಷ್ಟ್ರದ ಸಾವಂತ್ ರೋನಕ್ (32.00ಸೆ) ಕಂಚು ಒಲಿಸಿಕೊಂಡರು.

ನೀನಾಗೆ ಬೆಳ್ಳಿ: ಬಾಲಕಿಯರ ಗುಂಪು-3ರ 100 ಮೀಟರ್ಸ್ ಬ್ರೆಸ್ಟ್ಸ್ಟ್ರೋಕ್ ವಿಭಾಗದಲ್ಲಿ ರಾಜ್ಯದ ನೀನಾ ವೆಂಕಟೇಶ್ ಬೆಳ್ಳಿ ತಮ್ಮದಾಗಿಸಿಕೊಂಡರು. ನೀನಾ ಆರಂಭದಿಂದಲೇ ಶರವೇಗ ದಲ್ಲಿ ಗುರಿಯೆಡೆಗೆ ಮುನ್ನುಗ್ಗಿದರಾದರೂ ಮಹಾರಾಷ್ಟ್ರದ ಛತ್ರ ಅಯೆಕಾ ಅವರನ್ನು ಹಿಂದಿಕ್ಕಲು ಆಗಲಿಲ್ಲ. ಅಯೆಕಾ ಒಂದು ನಿಮಿಷ 15. 38 ಸೆಕೆಂಡುಗಳಲ್ಲಿ ಅಂತಿಮ ಗೆರೆ ಮುಟ್ಟಿ ಚಿನ್ನದ ಸಂಭ್ರಮ ಆಚರಿಸಿದರು.

ಮಹಾರಾಷ್ಟ್ರದ ಅಮಿನ್ ವೇದಿಕ ಒಂದು ನಿಮಿಷ 16.86 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿ ಕಂಚಿನ ಸಾಧನೆ ಮಾಡಿದರು.

ಕೂಟ ದಾಖಲೆ: ಮೂರನೇ ದಿನವಾದ ಶುಕ್ರವಾರ ಮೂರು ಕೂಟ ದಾಖಲೆಗಳು ನಿರ್ಮಾಣವಾದವು. ಬಾಲಕರ 50 ಮೀಟರ್ಸ್ ಬ್ರೆಸ್ಟ್ಸ್ಟ್ರೋಕ್ನಲ್ಲಿ ಪಶ್ಚಿಮ ಬಂಗಾಳದ ಸ್ವದೇಶ್ ಮಂಡಲ್, ಬಾಲಕಿಯರ 50 ಮೀಟರ್ಸ್ ವಿಭಾಗದಲ್ಲಿ ಮಹಾರಾಷ್ಟ್ರದ ವೇದಿಕ ಅಮಿನ್ ಮತ್ತು ಬಾಲಕಿಯರ 50 ಮೀಟರ್ಸ್ ಬಟರ್ಫ್ಲೈ ವಿಭಾಗದಲ್ಲಿ ಅಸ್ಸಾಂನ ಉತ್ತರ ಗೊಗೊಯ್ ಅವರು ನೂತನ ದಾಖಲೆ ಬರೆದರು.

50 ಮೀಟರ್ಸ್ ಬ್ರೆಸ್ಟ್ಸ್ಟ್ರೋಕ್ನಲ್ಲಿ ಸ್ವದೇಶ್ 34.87 ಸೆಕೆಂಡುಗಳಲ್ಲಿ ಗುರಿ ಸೇರಿ 2010ರಲ್ಲಿ ಮಹಾರಾಷ್ಟ್ರದ ವಿರಾಜ್ ಪ್ರಭು ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿದರು.

ಬಾಲಕಿಯರ ವಿಭಾಗದಲ್ಲಿ ವೇದಿಕ 37.4 ಸೆಕೆಂಡುಗಳಲ್ಲಿ ಅಂತಿಮ ಗೆರೆ ಮುಟ್ಟಿ 2010ರಲ್ಲಿ ಮಹಾರಾಷ್ಟ್ರದ ಮೋನಿಕಾ ಗಾಂಧಿ ನಿರ್ಮಿಸಿದ್ದ ದಾಖಲೆಯನ್ನು ಮೀರಿ ನಿಂತರು.

50 ಮೀಟರ್ಸ್ ಬಟರ್ಫ್ಲೈ ವಿಭಾಗದಲ್ಲಿ ಉತ್ತರ 31. 25 ಸೆಕೆಂಡುಗಳಲ್ಲಿ ಗುರಿ ಸೇರುವ ಮೂಲಕ ತಮಿಳುನಾಡಿನ ಶೆರ್ಲಿನ್ ಮೇಘನಾ ದೇವದಾಸನ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top