fbpx
Karnataka

ಕಾವೇರಿ ಕುರಿತ ಸುಪ್ರೀಂಕೋರ್ಟಿನ ತೀರ್ಪು ತಿರಸ್ಕರಿಸಲು ಸಾಂವಿಧಾನಿಕ ಮತ್ತು ನ್ಯಾಯಿಕ ಕಾರಣಗಳಿವೆ

ಕಾವೇರಿ ವಿವಾದದ ಬಗ್ಗೆ ಇಂದು ಸುಪ್ರೀಂ ಕೋರ್ಟು ನೀಡಿರುವ ತೀರ್ಮಾನ  ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿರುವುದು ಸ್ಪಷ್ಟ. ಅಷ್ಟು ಮಾತ್ರವಲ್ಲ. ಅದು ಅಸಾಂವಿಧಾನಿಕ ಮತ್ತು ನ್ಯಾಯಬಾಹಿರವೂ ಆಗಿದೆ. ಹಾಗೂ ಇದು ಒಕ್ಕೂಟ ವ್ಯವಸ್ಥೆಯಲ್ಲೂ ತಿರಸ್ಕರಿಸಲು ಯೋಗ್ಯವಾಗಿದೆ. ಇದನ್ನು ತಿರಸ್ಕರಿಸಬೇಕೆಂದು ಕನ್ನಡಿಗರು  ಸರ್ಕಾರವನ್ನು ಒತ್ತಾಯಿಸುತ್ತಾರೆ. ನ್ಯಾಯಬದ್ಧ ತೀರ್ಮಾನವನ್ನು ಕೊಡಲು ಆಗ್ರಹಿಸಿ ಇತರ ಉನ್ನತ ಸಾಂವಿಧಾನಿಕ ಮತ್ತು ರಾಜಕಾರಣ ಹಾಗೂ ಹೋರಾಟದ ಮಾರ್ಗಗಳನ್ನು ತುರ್ತಾಗಿ ಅನುಸರಿಸಬೇಕಿದೆಯೆಂದು ಕನ್ನಡಿಗರು ಭಾವಿಸುತ್ತಾರೆ.

ಇಂದಿನ ತೀರ್ಪಿನ ಪ್ರಮುಖ ಅಂಶಗಳು-ಅ) ೨೭ನೇ ತಾರೀಕಿನ ತನಕ ದಿನಕ್ಕೆ ೬೦೦೦ ಕ್ಯುಸೆಕ್ಸ್ನಂತೆ ೪೨೦೦೦ ಕ್ಯುಸೆಕ್ಸ್ ನೀರು ಬಿಡಬೇಕು ಆ) ಅತ್ಯಂತ ಮುಖ್ಯವಾಗಿ ಇನ್ನು ನಾಲ್ಕು ವಾರಗಳಲ್ಲಿ  ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ- Cauvery Management Board (CMB) ಯನ್ನು ಸ್ಥಾಪಿಸಲು ಕ್ರಮ ತೆಗೆದುಕೊಳ್ಳತಕ್ಕದ್ದು. ಇ) ಕಾವೇರಿ ಮೇಲುಸ್ತುವಾರಿ ಮಂಡಳಿ ಕೊಟ್ಟ ತೀರ್ಪಿನ ಬಗ್ಗೆ ಇನ್ನು ಮೂರು ದಿನಗಳಲ್ಲಿ ಎರದು ರಾಜ್ಯಗಳು ಆಕ್ಷೇಪಣೆ ಸಲ್ಲಿಸತಕ್ಕದ್ದು.

ತೀರ್ಪಿನ ಈ ಎಲ್ಲಾ ಅಂಶಗಳೂ  ಅನ್ಯಾಯಯುತ ಮತ್ತು ಅಸಾಂವಿಧಾನಿಕ ಏಕೆಂದರೆ:

೧. ಕಾವೇರಿ ಮೇಲುಸ್ತುವಾರಿ ಮಂಡಳಿ ಮಳೆ ಪ್ರಮಾಣ, ಡ್ಯಾಂಗಳ ನೀರಿನ ಮಟ್ಟ, ನೀರಿನ ಹರಿವು , ಅಗತ್ಯ ಇತ್ಯಾದಿಗಳೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಅಂಕಿಅಂಶಗಳ ಸಮೇತ ದಿನವಿಡೀ ಕೂತುಕೊಂಡು ಚರ್ಚೆ ಮಾಡಿ ಒಂದು ಸೂತ್ರ ಮತ್ತು ಆಧಾರದನ್ವಯ ದಿನಕ್ಕೆ ೩,೦೦೦ ಕ್ಯೂಸೆಕ್ಸ್ ಬಿಡಬೇಕೆಂದು ತೀರ್ಮಾನ ಕೊಟ್ಟಿತು. ಇದು ಸಹ ಸರಿಯಲ್ಲ ಎಂದು ಅದಕ್ಕೆ ಬೇಕಾದ ವೈಜ್ಞಾನಿಕ ತರ್ಕ ಮತ್ತು ಅಂಕಿಅಂಶಗಳನ್ನು ಕೊಟ್ಟು ಎರಡೂ ರಾಜ್ಯಗಳು ವಾದಿಸಬಹುದು.  ಅವುಗಳಲ್ಲಿರುವ ಅಂಶಗಳು ಮನವರಿಕೆಯಾಗುವಂತೆ ಇದ್ದರೆ ಮಾತ್ರ ಮೇಲುಸ್ತುವಾರಿ ಸಮಿತಿ ಕೊಟ್ಟ ತೀರ್ಮಾನವನ್ನೂ ಸಹ ಉನ್ನತ ನ್ಯಾಯ ಸ್ಥಾನವಾದ ಸುಪ್ರೀಂ ಕೋರ್ಟು ಬದಲಿಸುವ ಅಧಿಕಾರವನ್ನು ಹೊಂದಿದೆ ಎಂಬುದೇನೋ ನಿಜ.

ಆದರೆ ಸುಪ್ರೀಂ ಕೋರ್ಟು ಮೇಲುಸ್ತುವಾರಿ ಸಮಿತಿ ಹೇಳಿದ ೩೦೦೦ ಕ್ಯುಸೆಕ್ಸ್ ಪ್ರಮಾಣವನ್ನು ೬೦೦೦ ಎಂದು ಬದಲಿಸಿರುವುದಕ್ಕೆ ಯಾವುದೇ ವೈಜ್ಞಾನಿಕ ತರ್ಕವು ಇಲ್ಲ. ಕಾನೂನು ಅಥವಾ ನ್ಯಾಯಿಕ ಅಂಶಗಳು ಇಲ್ಲ. ಇದು ಏಕಪಕ್ಷೀಯವಾದದ್ದು. ಹಾಗೂ ಅವೈಜ್ಞಾನಿಕ ಖಾಜಿ ನ್ಯಾಯದ ಸ್ವರೂಪದ್ದು. ಏಕೆಂದರೆ ಸೆಪ್ಟೆಂಬರ್ ೫ರಂದು ತಮಿಳುನಾಡು ೨೦೦೦೦ ಕ್ಯುಸೆಕ್ಸ್ ಕೇಳಿದ್ದರು. ಕರ್ನಾಟಕ ೧೦೦೦೦ ಬಿಡುತ್ತೇವೆಂದು ಹೇಳಿತ್ತು. ಆಗಲೂ ಸುಪ್ರೀಂ ಕೋರ್ಟು ಯಾವುದೇ ತರ್ಕ ವಿಲ್ಲದೆ ಅವೆರೆಡರ ಮಧ್ಯದ ಪ್ರಮಾಣ ೧೫,೦೦೦ ಎಂದು ನಿಗದಿ ಮಾಡಿತು. ನಂತರ ಸೆಪ್ಟೆಂಬರ್ ೧೨ ರಂದು ಕರ್ನಾಟಕ ೯,೦೦೦ ಎಂದರೆ ತಮಿಳುನಾಡು ೧೫,೦೦೦ ಕ್ಕಿಳಿಯಿತು. ಆಗ ಕೋರ್ಟು ಅದರ ಮಧ್ಯದ ೧೨,೦೦೦ ಕ್ಯುಸೆಕ್ಸ್ ಎಂದು ಹೇಳಿತು. ಇಂದು ತಮಿಳುನಾಡು ೯೦೦೦ ಕೇಳಿತು. ಮೇಲುಸ್ತುವಾರಿ ಸಮಿತಿ ೩೦೦೦ ಎಂದು ಹೇಳಿತ್ತು. ಕೋರ್ಟು ಅದರ ಮಧ್ಯದ ಪ್ರಮಾಣ ೬೦೦೦ ಎಂದು ನಿಗದಿ ಮಾಡಿದೆ. ಆದರೆ ಕರ್ನಾಟಕ ಅದರ ಮುಂದಿಟ್ಟ ಅತ್ಯಂತ ಬವಣೆಯ ಕಥೆಯನ್ನಾಗಲೀ, ಇನ್ನಿತರ ಯಾವುದೇ ವಾದವನ್ನು ಪರಿಗಣಿಸಿಯೇ ಇಲ್ಲ.

ಮೇಲಾಗಿ ನೀರಿನ ಪ್ರಮಾಣ ನಿಗದಿ ಮಾಡುವ ಜವಾಬ್ದಾರಿ ನ್ಯಾಯಮಂಡಳಿಯ ತೀರ್ಮಾನದಂತೆ ಮತ್ತು ಈ ಹಿಂದಿನ ಸುಪ್ರೀಂ ಕೋರ್ಟಿನ ತೀರ್ಮಾನದಂತೆ, ಮೇಲುಸ್ತುವಾರಿ ಸಮಿತಿಯದ್ದೇ ವಿನಃ ಸುಪ್ರೀಂ ಕೋರ್ಟಿನದ್ದಲ್ಲ. ಸೆಪ್ಟೆಂಬರ್ ೫ ರಂದು ಇದೇ ಪೀಠ ಕೊಟ್ಟ ಆದೇಶದಲ್ಲೂ ಇದು ಸ್ಪಷ್ಟವಾಗಿದೆ. ಹೀಗಾಗಿ ಇದು ಅನ್ಯಾಯಯುತ ಮತ್ತು ಅವೈಜ್ಞಾನಿಕವಾದ ಮತ್ತು ಅನುಷ್ಠಾನ ಮಾಡಲು ಅಸಾಧ್ಯವಾದ ಆದೇಶವಾಗಿದೆ. ತಾನೇ ಎರಡೆರಡು ಬಾರಿ ಕೊಟ್ಟ ತೀರ್ಮಾನವನ್ನು ತಾನೇ ಮೀರುವುದೆಂದರೆ, ಸುಪ್ರೀಂಕೋರ್ಟಿನಂತಹ ಸ್ಥಾನದ ಘನತೆಯನ್ನು ಅದೇ ಕಳೆದುಹಾಕಿದೆ.

ಆ) ಕಾವೇರಿ ನಿರ್ವಹಣಾ ಮಂಡಳಿ: ಈ ತೀರ್ಪಿನಲ್ಲಿ ಎಲ್ಲಕ್ಕಿಂತ ಅಸಾಂವಿಧಾನಿಕ ಮತ್ತು ಅನ್ಯಾಯಯುತವಾದ ಆದೇಶ ನಾಲ್ಕು ವಾರಗಳಲ್ಲಿ ಕಾವೇರಿ ನಿರ್ವಹಣಾ ಮಂಡಲಿ ರಚಿಸಬೇಕೆಂದಿರುವುದು. ಏಕೆಂದರೆ:

ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಬೇಕು ಎನ್ನುವುದು ನ್ಯಾಯಮಂಡಲಿಯ ಅಂತಿಮ ಆದೇಶಗಳಲ್ಲಿ ಒಂದು. ಕರ್ನಾಟಕ ಮತ್ತು ತಮಿಳುನಾಡು ಎರಡೂ ಕೂಡ ಇಡೀ ಈ ಅಂತಿಮ ಆದೇಶವನ್ನೇ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿವೆ. ಸುಪ್ರೀಂ ಕೋರ್ಟು ಮೇಲ್ಮನವಿಯನ್ನು ಅಂಗೀಕರಿಸಿರುವುದಲ್ಲದೆ ಈ ಅರ್ಜಿಯಲ್ಲಿ ಹಲವು ಸಾಂವಿಧಾನಿಕ ಅಂಶಗಳಿರುವುದರಿಂದ ಅದನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಿದೆ. ಹೀಗಾಗಿ ಕಾವೇರಿ ನಿರ್ವಹಣಾ ಮಂಡಳಿಯ ರಚನೆಯೂ ಒಳಗೊಂಡಂತೆ  ಇಡೀ ಅಂತಿಮ ಆದೇಶ ಈಗ ದ್ವಿಸದಸ್ಯ ಪೀಠಕ್ಕಿಂತ ಉನ್ನತವಾದ ತ್ರಿಸದಸ್ಯ ಪೀಠದ ಮುಂದಿದೆ. ಹೀಗಿರುವಾಗ  ಕಾವೇರಿ ಮಂಡಲಿ ರಚಿಸಲು ದ್ವಿಸದಸ್ಯ ಪೀಠ ತೀರ್ಮಾನ ಕೊಟ್ಟಿರುವುದೇ ಅಸಾಂವಿಧಾನಿಕ.

ಅಲ್ಲದೇ ಈ ನಿರ್ವಹಣಾ ಮಂಡಳಿ ನ್ಯಾಯ ಮಂಡಲಿ ಕೊಟ್ಟ ತೀರ್ಮಾನವನ್ನು ಅನುಷ್ಠಾನಕ್ಕೆ ತರುವ implementation authority ಅಷ್ಟೆ. ಆದರೆ ಎಷ್ಟು ಪ್ರಮಾಣದ ನೀರು ಹಂಚಿಕೆಯಾಗಬೇಕು ಎನ್ನುವ ಪ್ರಮಾಣವೇ ಸುಪ್ರೀಂ ಕೋರ್ಟಿನಲ್ಲಿ ತಗಾದೆಯಲ್ಲಿರುವಾಗ, ಸಂಕಷ್ಟ ಪರಿಹಾರ ಸೂತ್ರ ದ ಮಾನದಂಡಗಳೇ ತಕರಾರಿನಲ್ಲಿರುವಾಗ ಈ ನಿರ್ವಹಣಾ ಮಂಡಳಿ ಯ ರಚನೆಯೇ ಅನ್ಯಾಯಯುತವಾದದ್ದು. ಹೀಗಾಗಿ ಕೂಡಾ ಇದನ್ನು ಎಲ್ಲಾ ಪಕ್ಷಗಳು ಮತ್ತು ಕೇಂದ್ರ ಮತ್ತು ಕರ್ನಾಟಕ ಸರ್ಕಾರ ತಿರಸ್ಕರಿಸಬೇಕೆಂದು ಕರ್ನಾಟಕ ಜನ ಒತ್ತಾಯಿಸುತ್ತಾರೆ.

ತಕ್ಷಣಕ್ಕೆ ಏನು ಮಾಡಬಹುದು:

೧. ಕೂಡಲೇ ಸರ್ವ ಪಕ್ಷಗಳ ಸಭೆ. ಸಾಧ್ಯವಾದರೆ ಮಂಡ್ಯದಲ್ಲಿ.

೨. ಎಲ್ಲಾ ಎಂಪಿ ಮತ್ತು ಶಾಸಕರ ನಿಯೋಗ ಪ್ರಧಾನಿ ಮತ್ತು ರಾಷ್ಟ್ರಪತಿಗಳ ಬಳಿ. ಯಾವ ಕಾರಣಕ್ಕೂ ತ್ರಿಸದಸ್ಯ ಪೀಠದ ಆದೇಶ ಬರುವ ತನಕ ಕಾವೇರಿ ನಿರ್ವಹಣಾ ಮಂಡಳಿ ಆಗಕೂಡದೆಂದು ಒತ್ತಾಯ. ಒಪ್ಪದಿದ್ದರೆ ಸಾಮೂಹಿಕ ರಾಜೀನಾಮೆ.

೩. ಪ್ರಧಾನಿಯವರು ಯಾವ ಕಾರಣಕ್ಕೂ ಈಗಲೇ ಕಾವೇರಿ ಮಂಡಳಿ ಸಾಧ್ಯ್ಯವಿಲ್ಲವೆಂದು ಅಫಿಡವಿಟ್ ಮಂಡಿಸಲು ಆಗ್ರಹಿಸಬೇಕು.

೩. ತಜ್ಞರ ಸಮಿತಿ ಭೇಟಿ ಮಾಡಿ ಮರು ಪರಿಶೀಲನೆ ಮಾಡದ ಹೊರತು ೬೦೦೦ ಕ್ಯುಸೆಕ್ಸ್ ಹರಿಸುವುದಿಲ್ಲವೆಂಬ ತೀರ್ಮಾನ.

a1088f52-3956-47f4-8ff1-0f638f1ed4b2

ಇವೆಲ್ಲವನ್ನೂ ಮಾಡುವಾಗ ಈವರೆಗೆ ಅವರಿವರ ಮೇಲೆ ಗೂಬೆ ಕೂರಿಸುತ್ತಾ ಮೋದಿಯನ್ನು ರಕ್ಷಿಸುತ್ತಿರುವ ಬಿಜೆಪಿ ಪಕ್ಷವು ಜವಾಬ್ದಾರಿಯಿಂದ ವರ್ತಿಸಲು ಮತ್ತು ಕರ್ನಾಟಕ ಸರ್ಕಾರದೊಂದಿಗೆ ಸಹಕರಿಸಬೇಕೆಂದು ಒತ್ತಾಯಿಸುತ್ತೇವೆ. ಪ್ರಧಾನಿಯ ಪಾತ್ರ ಈಗ ಎಲ್ಲಕ್ಕಿಂತ ಮುಖ್ಯ ಎಂಬುದನ್ನು ಪ್ರಧಾನಿಯವರಿಗೆ ಮನವರಿಕೆ ಮಾಡುವ ಜವಾಬ್ದಾರಿ ಬಿಜೆಪಿ ಸಂಸದರದ್ದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top