fbpx
Health

ಲವಂಗ ಟೀ ನಲ್ಲಿ ಅಡಗಿರುವ ಔಷಧೀಯ ಗುಣಗಳು!

ಟೀ ಸೇವನೆ ಮಾಡುವುದು ನಮ್ಮ ದೇಶದ ಜನರಿಗೆ ಹೊಸದೇನಲ್ಲ. ಹಲವಾರು ಶತಮಾನಗಳಿಂದ ಚಹಾ ಸೇವನೆ ರೂಢಿಯಲ್ಲಿದೆ. ಚಹಾ ಸೇವನೆಯಿಂದ ಮನಸ್ಸಿಗೆ ಉಲ್ಲಾಸ ದೊರೆಯುತ್ತದೆ ಎಂಬ ನಂಬಿಕೆ ಪ್ರತಿಯೊಬ್ಬರಲ್ಲಿದೆ. ಆದರೆ, ಇದರಿಂದಾಗುವ ಪ್ರಯೋಜನಗಳು ಹಲವರಿಗೆ ಗೊತ್ತಿಲ್ಲ ಎಂದರೂ ತಪ್ಪಾಗಲಾರದು.

ಹಾಲು ಬೆರೆಸಿ ತಯಾರು ಮಾಡುವ ವಿಧಾನ ಒಂದಾದರೆ, ಇತ್ತೀಚಿನ ದಿನಗಳಲ್ಲಿ ಬ್ಲಾಕ್ ಟೀ, ಗ್ರೀನ್ ಟೀ ಮುಂತಾದವು ಚಾಲ್ತಿಯಲ್ಲಿವೆ. ಬ್ಲಾಕ್ ಟೀ, ಗ್ರೀನ್ ಟೀ ಕುಡಿದರೆ ಕೊಬ್ಬಿನಾಂಶ ದೇಹಕ್ಕೆ ಸೇರುವುದಿಲ್ಲ ಎಂಬ ನಂಬಿಕೆ ಜನರಲ್ಲಿ ಹೆಚ್ಚಾಗುತ್ತಿದೆ.

ಪ್ರತಿನಿತ್ಯ ಚಹಾ ಇಲ್ಲದೆ ಬಹುತೇಕ ಮಂದಿ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಆರಂಭಿಸುವುದಿಲ್ಲ. ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ಚಹಕ್ಕಾಗಿ ಚಡಪಡಿಸುತ್ತಾರೆ. ಟೀ ಇಂತವರಿಗೆಲ್ಲ ಮೊದಲ ಆಹಾರ, ನಂತರವೇ ಉಳಿದ ಕೆಲಸ ಕಾರ್ಯಗಳಲ್ಲಿ ತೊಡಗುತ್ತಾರೆ.

ಒಂದೇ ಬಗೆಯ ಚಹಾ ಕುಡಿದು ನಾಲಿಗೆ ಜಡ್ಡು ಕಟ್ಟಿದ್ದರೆ, ಟೀ ತಯಾರಿಸುವ ವಿಧಾನದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬಹುದು. ಟೀ ಕುದಿಸುವಾಗ ಏಲಕ್ಕಿ, ದಾಲ್ಚಿನಿ, ಹಾಲಿಲ್ಲದ ಟೀಯಲ್ಲಿ ಪುದಿನಾ, ಲಿಂಬೆ, ಶುಂಠಿ ಮೊದಲಾದವುಗಳನ್ನು ಬೆರೆಸಿ ರುಚಿಯನ್ನು ಬದಲಾಯಿಸಿಕೊಳ್ಳಬಹುದು. ಆ ಮೂಲಕ ದೇಹದ ಆರೋಗ್ಯವನ್ನೂ ಸುಧಾರಿಸಿಕೊಳ್ಳುವ ಪ್ರಯತ್ನ ಮಾಡಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ಬಗೆ ಬಗೆಯ ಮಸಾಲೆಗಳ ಮಿಶ್ರಣವಿರುವ ಟೀ ಮಸಾಲೆ ಸಿದ್ಧರೂಪದಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಈ ಸಾಲಿಗೆ ಲವಂಗದ ಪುಡಿ ಸೇರಿಸಿದ ಟೀ ಸೇರ್ಪಡೆಯಾಗಿದೆ. ಸಹಜವಾಗಿ ಹಲ್ಲುನೋವಿದ್ದಾಗ ಲವಂಗವನ್ನು ನೋವಿನ ಜಾಗಕ್ಕೆ ಇಟ್ಟುಕೊಂಡು ಪರಿಹಾರ ಪಡೆಯಲೆತ್ನಿಸುವುದು ವಾಡಿಕೆಯಾಗಿದೆ. ಟೀ ಜೊತೆಗೆ ಲವಂಗ ಸೇರಿಸಿ ತಯಾರಿಸಿದರೆ ಟೀ ರುಚಿಮಾತ್ರ ಬದಲಾಗುವುದಿಲ್ಲ, ಆರೋಗ್ಯ ಪರಿಸ್ಥಿತಿಯೂ ಉತ್ತಮಗೊಳ್ಳಲಿದೆ.

ಲವಂಗದ ಟೀ ಸೇವನೆಯಿಂದಾಗಿ ಹಲ್ಲು ನೋವು ಮತ್ತು ಒಸಡು ನೋವುಗಳು ದೂರವಾಗಲಿವೆ. ಒಸಡುಗಳ ಸೋಂಕನ್ನು ನಿವಾರಿಸಿ ನೋವನ್ನು ಕಡಿಮೆಮಾಡಲಿದೆ. ಲವಂಗ ಬೆರೆಸಿ ಕುದಿಸಿದ ಟೀ ಸ್ವಲ್ಪ ತಣ್ಣಗಾದ ನಂತರ ಬಾಯಲ್ಲಿ ಹಾಕಿಕೊಂಡು ಮುಕ್ಕಳಿಸಿದರೆ ಹಲ್ಲು ಮತ್ತು ಒಸಡು ನೋವು ಶಮನವಾಗಲಿದೆ.

ತಲೆ ಭಾರ (ಸೈನಸ್) ಸೋಂಕಿದ್ದಲ್ಲಿ ಲವಂಗ ಪುಡಿ ಬೆರೆಸಿದ ಟೀ ಕುಡಿದರೆ ಆ ಸೋಂಕು ದೂರವಾಗುತ್ತದೆ. ಲವಂಗದಲ್ಲಿರುವ ಮೆಗ್ನೀಶಿಯಂ ಮತ್ತು ವಿಟಮಿನ್ ? `ಇ’ ಮತ್ತು `ಕೆ’ ಇರುವುದರಿಂದ ಜ್ವರ ಮತ್ತಿತರ ಸಮಸ್ಯೆಗಳನ್ನು ಪರಿಹರಿಸಲಿದೆ.

ಈ ರೀತಿ ತಯಾರಿಸಿದ ಟೀಯನ್ನು ಊಟಕ್ಕೆ ಮುನ್ನ ಕುಡಿದು ಜೀರ್ಣಾಂಗಗಳಲ್ಲಿ ರಕ್ತ ಸಂಚಾರ ಉತ್ತಮಗೊಳ್ಳಲಿದೆ. ಅಲ್ಲದೆ ಹೊಟ್ಟೆಯಲ್ಲಿ ಉಂಟಾಗುವ ಆಮ್ಲೀಯತೆ, ಅಜೀರ್ಣ, ಹುಳಿತೇಗು, ಅಪಾನವಾಯು ಮುಂತಾದವುಗಳನ್ನು ದೂರ ಮಾಡಲಿದೆ.

ಲವಂಗ ಟೀ ಮಾಡಬೇಕಾದರೆ ಲವಂಗಗಳನ್ನು ಒರಳಿನಲ್ಲಿ ಕುಟ್ಟಿ ಮಾಡಬೇಕು, ರವೆ ಗಾತ್ರದಷ್ಟು ಇರುವಂತೆ ಪುಡಿ ಮಾಡಬೇಕು, ಇದನ್ನು ಟೀಪುಡಿ ಜೊತೆ ಸೇರಿಸಿ 5-10 ನಿಮಿಷ ಚೆನ್ನಾಗಿ ಕುದಿಸಿ ಸೋಸಿ ಕುಡಿಯಬೇಕು. ಇಂತಹ ಟೀಗೆ ಹಾಲು ಅಗತ್ಯವೆನಿಸಿದರೆ ಹಾಕಿಕೊಳ್ಳಬಹುದು. ಸಕ್ಕರೆ ಪ್ರಮಾಣ ನಿಮ್ಮ ನಿರ್ಧಾರಕ್ಕೆ ಬಿಟ್ಟದ್ದು. ತಣ್ಣಗಾದ ನಂತರ ಸಂಗ್ರಹಿಸಿಟ್ಟುಕೊಂಡು ಸಿದ್ಧರೂಪದ ಔಷಧಿಯಂತೆಯೂ ಬಳಸಬಹುದಾಗಿದೆ.

ಲವಂಗ ಟೀ ತಯಾರಿಸುವುದು ಹೇಗೆ ಎಂದು ತಿಳಿಯೋಣವೇ?

ಒಂದು ಚಿಕ್ಕ ಚಮಚ ಲವಂಗಗಳನ್ನು ಕುಟ್ಟಿ ಪುಡಿಮಾಡಿ. ಅಂದರೆ ಈ ಪುಡಿ ದಪ್ಪರವೆಯಷ್ಟು ಪುಡಿಯಾದರೆ ಸಾಕು. ಟೀ ತಯಾರಿಸುವಾಗ ಈ ಪುಡಿಯನ್ನು ಒಂದು ಕಪ್‌ಗೆ ಒಂದು ಚಿಕ್ಕಚಮಚದಷ್ಟು ಪ್ರಮಾಣದಲ್ಲಿ ಸೇರಿಸಿ ಕುದಿಸಿ. ಕುದಿ ಪ್ರಾರಂಭವಾದ ಬಳಿಕ ಉರಿಯನ್ನು ತಗ್ಗಿಸಿ ಸುಮಾರು ಐದರಿಂದ ಹತ್ತು ನಿಮಿಷ ಕುದಿಸಿ. ಬಳಿಕ ಸುಮಾರು ಅರ್ಧ ಚಿಕ್ಕಚಮಚ ನಿಮ್ಮ ಆಯ್ಕೆಯ ಟೀಪುಡಿ ಸೇರಿಸಿ ಚಿಕ್ಕ ಉರಿಯಲ್ಲಿ ಇನ್ನೂ ನಾಲ್ಕಾರು ನಿಮಿಷ ಕುದಿಸಿ. ಬಳಿಕ ಈ ನೀರನ್ನು ಸೋಸಿ ಇದರಲ್ಲಿ ನಿಮ್ಮ ಆಯ್ಕೆಗೆ ತಕ್ಕಷ್ಟು ಹಾಲು ಸಕ್ಕರೆ ಬೆರೆಸಿ ಕುಡಿಯಿರಿ.

ಕೊಂಚ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಿ ಸೋಸಿದ ಬಳಿಕ ಬಾಟಲಿಯಲ್ಲಿ ಸಂಗ್ರಹಿಸಿಟ್ಟರೆ ಹಲ್ಲು ನೋವು ಮೊದಲಾದ ಸಂದರ್ಭಗಳಲ್ಲಿ ಸಿದ್ಧರೂಪದ ಔಷಧಿಯಂತೆಯೂ ಬಳಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top