fbpx
News

ನಾಯಕತ್ವ ತೊರೆಯಲು ನಿಜವಾದ ಕಾರಣ ಏನು ಗೊತ್ತಾ? ಧೋನಿ ಮನದಾಳದ ಮಾತು

ಭಾರತ ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್‍ ಧೋನಿ ಸಿಂಗ್‍ ಏಕಾಏಕಿ ಏಕದಿನ ಮತ್ತು ಟಿ-20 ಪಂದ್ಯಗಳ ನಾಯಕತ್ವ ತ್ಯಜಿಸಿದ ವಿಷಯ ಈಗ ಚರ್ಚೆಯ ವಿಷಯವಾಗಿದೆ.ಒಬ್ಬೊಬ್ಬರು ಒಂದೊಂದು ರೀತಿಯ ಕಾರಣಗಳನ್ನು ಊಹಿಸುತ್ತಿದ್ದಾರೆ. ಆದರೆ ಧೋನಿ ಸ್ವತಃ ಈ ವಿಷಯದ ಕುರಿತು ಮಾತನಾಡಿದ್ದಾರೆ.

ಇಂಗ್ಲೆಂಡ್‍ ವಿರುದ್ಧದ ಏಕದಿನ ಸರಣಿಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮನಬಿಚ್ಚಿ ಮಾತನಾಡಿದ ಧೋನಿ, ನಾಯಕತ್ವ ತ್ಯಜಿಸಲು ನಿಜವಾದ ಕಾರಣ ಏನು? ವೃತ್ತಿಜೀವನದಲ್ಲಿ ಕಂಡ ಒಳ್ಳೆಯ ಹಾಗೂ ಕಠಿಣ ದಿನಗಳು ಹಾಗೂ ವಿರಾಟ್‍ ಕೊಹ್ಲಿ ಹೇಗೆ ಒಬ್ಬ ಕ್ರಿಕೆಟಿಗನಾಗಿ ಬೆಳೆದುನಿಂತ… ಹೀಗೆ ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ.

ನಾಯಕತ್ವ ತೊರೆದಿದ್ದೇಕೆ?

ಟೆಸ್ಟ್‍ ಗೆ ಒಬ್ಬ, ಸೀಮಿತ ಓವರ್‍ ಗಳಿಗೆ ಒಬ್ಬ ನಾಯಕನ ಆಯ್ಕೆ ಸರಿಯಲ್ಲ. ಒಂದೊಂದು ಮಾದರಿಗೆ ನಾಯಕನಾಗಿರಬೇಕು ಎಂಬುದು ನನ್ನ ನಿಲುವು. ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆದ ಸರಣಿಯೇ ನನ್ನ ಕೊನೆಯ ಸರಣಿ ಎಂದು ತೀರ್ಮಾನಿಸಿದ್ದೆ. ಒಬ್ಬ ಆಟಗಾರ ಎಲ್ಲಾ ಮಾದರಿಗೂ ನಾಯಕನಾಗಿರಬೇಕು.

ಕೊಹ್ಲಿ ಟೆಸ್ಟ್‍ ತಂಡದ ನಾಯಕನಾದ ಮೇಲೆ ಈ ವಿಷಯ ಕುರಿತು ಹಲವಾರು ಬಾರಿ ಯೋಚಿಸಿದ್ದೆ. ಒಡಕು ನಾಯಕತ್ವ ನಮ್ಮಲ್ಲಿ ನಡೆಯುವುದಿಲ್ಲ. ಅದರು ಸರಿಯೂ ಅಲ್ಲ. ಆದರೆ ಕೊಹ್ಲಿಗೆ ಸ್ವಲ್ಪ ಸಮಯ ಸಿಗಲಿ ಎಂಬ ಕಾರಣಕ್ಕೆ ಸುಮ್ಮನಿದ್ದೆ. ಈಗ ಕೊಹ್ಲಿ ಎಲ್ಲಾ ಮಾದರಿಯ ನಾಯಕತ್ವ ವಹಿಸಲು ಸಮರ್ಥರಾಗಿದ್ದಾರೆ ಎಂದು ಧೋನಿ ವಿವರಿಸಿದರು.

ನಾಯಕನಾಗಿ ಕೊಹ್ಲಿ

ಒಬ್ಬ ಕ್ರಿಕೆಟಿಗನಾಗಿ ಕೊಹ್ಲಿ ಸಾಕಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ನನ್ನ ಪ್ರಕಾರ ಈಗಿನ ತಂಡ ಅದ್ಭುತವಾಗಿದೆ. ಸಂಖ್ಯೆಗಳ ಆಧಾರದ ಮೇಲೆ ಹೇಳುವುದಾದರೆ ನನಗಿಂತ ಕೊಹ್ಲಿ ಹೆಚ್ಚು ಪಂದ್ಯಗಳನ್ನು ಗೆಲ್ಲುವ ದಾಖಲೆ ಮಾಡುತ್ತಾರೆ ಎಂಬ ವಿಶ್ವಾಸವಿದೆ.

ನಾಯಕನಾಗಿ ಪ್ರಯಣ ಹೇಗಿತ್ತು?

ಕಿರಿಯರು ಬರುತ್ತಿದ್ದಂತೆ ಹಿರಿಯರು ಹಿಂದೆ ಸರಿಯುತ್ತಿರುತ್ತಾರೆ. ಇದು ಕ್ರಿಕೆಟ್‍ ಜೀವನ. ಈ ಅವಧಿಯಲ್ಲಿ ಸಾಕಷ್ಟು ಒಳ್ಳೆಯ ದಿನಗಳನ್ನು ಕಂಡಿದ್ದೇನೆ. ಹಾಗೆ ಕಠಿಣ ಸಂದರ್ಭಗಳೂ ಎದುರಾಗಿವೆ. ಒಳ್ಳೆಯದನ್ನು ಮಾತ್ರ ನೆನೆಯುತ್ತಾ ಮುಂದೆ ಸಾಗುವುದನ್ನು ಎದುರು ನೋಡುತ್ತೇನೆ.

ಕ್ರಿಕೆಟ್‍ ಅನ್ನುವುದು ಮಾನಸಿಕ ಆಟ. ಬ್ಯಾಟಿಂಗ್‍ ಕ್ರಮಾಂಕದಲ್ಲಿ ಬದಲಾವಣೆ ಆದರೂ ಹೊಂದಿಕೊಳ್ಳುವುದು ಕಷ್ಟ. ಆದರೆ ಅದು ನನಗೆ ಕರಗತವಾಗಿತ್ತು ಎಂದು ಧೋನಿ ವಿವರಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top