fbpx
Awareness

ಇನ್ನು ಕೆಲವೇ ವರ್ಷಗಳಲ್ಲಿ ತೈಲ ಇಂಧನ ಖಾಲಿ ಆಗಲಿದೆ!!!

ಪರ್ಯಾಯ ಮೂಲ ಬಳಸಲು ಸಕಾಲ
ಪ್ರಪಂಚದ ತೈಲನಿಕ್ಷೇಪ ಖಾಲಿಯಾಗುತ್ತಿದೆ ಎಂಬ ಮಾತನ್ನು ಹಲವು ದಶಕಗಳಿಂದ ಕೇಳುತ್ತಿದ್ದೇವೆ. ಪ್ರಪಂಚದಾದ್ಯಂತ ಸುಮಾರು ನೂರು ಮಿಲಿಯ ಬ್ಯಾರಲ್‍ಗಳಷ್ಟು ತೈಲವನ್ನು ಈ ಜಗತ್ತು ಪ್ರತಿದಿನ ಸುಡುತ್ತಿದೆ. ವಸುಂಧರೆ ರತ್ನಗರ್ಭಳೆಂದು ಇನ್ನೆಷ್ಟು ದಿನ ಈ ಅಮೂಲ್ಯ ಸಂಪತ್ತನ್ನು ಹೊರತೆಗೆಯಲು ಸಾಧ್ಯ? ಪ್ರಪಂಚದಾದ್ಯಂತ ಇರುವ ಎಲ್ಲ ತೈಲಬಾವಿಗಳನ್ನು ಬಗೆದು ಗೋರಿದರೂ ಇನ್ನು ಐವತ್ತುವರ್ಷಗಳ ಕಾಲ ಮಾತ್ರ ನಾವು ಪೆಟ್ರೋಲ್-ಡೀಸೆಲ್‍ನಲ್ಲಿ ಓಡಾಡುವ ವಾಹನಗಳನ್ನು ಬಳಸಬಹುದು. 2060ರ ಹೊತ್ತಿಗೆ ಭೂಮಿಯ ತೈಲಭಂಡಾರ ಭಣಗುಡುತ್ತದೆ. ಹಾಗೆಂದು ಕೈಕಟ್ಟಿ ಕೂರೋಣವೇ? ಅದೂ ಸಾಧ್ಯವಿಲ್ಲ! ಬೆಂಗಳೂರಲ್ಲೇ ವಾಹನಗಳ ಸಂಖ್ಯೆ ಒಂದು ಕೋಟಿ ದಾಟುತ್ತಿದೆ. ಪ್ರತಿ ನಗರದಲ್ಲಿ, ಪ್ರತಿ ದೇಶದಲ್ಲಿ ಜನ ಲಂಗುಲಗಾಮಿಲ್ಲದೆ ವಾಹನಗಳನ್ನು ಕೊಳ್ಳುತ್ತಾ ಬಳಸುತ್ತಾ ಹೋಗುತ್ತಿದ್ದಾರೆ. ಪೆಟ್ರೋಲ್‍ನಿಧಿ ಕರಗುವ ಮುನ್ನ ಇನ್ನೊಂದು ಶಕ್ತಿಮೂಲ ಹುಡುಕಿಕೊಳ್ಳದಿದ್ದರೆ ಎತ್ತಿನಗಾಡಿಯನ್ನು ನೆಚ್ಚಿಕೊಳ್ಳುವ ಕಾಲ ಬರಬಹುದು!
ಇದು ಕೇವಲ ವಾಹನಗಳ ಮಾತಾಯಿತು. ಮನೆಯನ್ನು ಬೆಳಗುವ, ಕಾರ್ಖಾನೆಗಳನ್ನು ನಡೆಸುವ ವಿದ್ಯುತ್ತಿನ ಕತೆ ಏನು? ಭೂಮಿಯಲ್ಲಿ ಕಲ್ಲಿದ್ದಲ ಸಂಪತ್ತುಕೂಡ ದಿನೇದಿನೇ ಕರಗುತ್ತಿದೆ. ಭೂಮಿಯ ಮೇಲಿನ ಜನಸಂಖ್ಯೆ ಎಂಬ ಸಂಪತ್ತು ಮಾತ್ರ ಬೆಳೆಯುತ್ತಲೇ ಇದೆ! ಭೂಗರ್ಭದಿಂದ ಸಿಗುತ್ತಿರುವ ಸಂಪನ್ಮೂಲಗಳು ಖಾಲಿಯಾದರೆ ಹೊಸದಾಗಿ ಬೇರೆ ಮೂಲಗಳನ್ನು ಹುಡುಕಿಕೊಳ್ಳಲೇಬೇಕು. ನಮ್ಮೆಲ್ಲರ ದಿನಚರಿ ಸುಸೂತ್ರವಾಗಿ ನಡೆಯಬೇಕಾದರೆ ಶಕ್ತಿಯ ನಿರಂತರ ಸರಬರಾಜು ಇರಬೇಕಾದದ್ದು ಅನಿವಾರ್ಯ. ಒಮ್ಮೆ ಬಳಸಿದ ಮೇಲೆ ನಶಿಸಿಹೋಗುವ ಸಂಪನ್ಮೂಲಗಳನ್ನು ಹೆಚ್ಚು ಬಳಸುವಂತಿಲ್ಲ ಎಂದು ಗೊತ್ತಾಗುತ್ತಿದ್ದಂತೆ ಮನುಷ್ಯನ ಚಿತ್ತ ಪುನರ್ಬಳಕೆ ಮಾಡಬಹುದಾದ ಅಥವಾ ನವೀಕರಿಸಬಹುದಾದ ಶಕ್ತಿಯ ಕಡೆ ಹರಿಯಿತು. ಕಲ್ಲಿದ್ದಲು, ಕಲ್ಲೆಣ್ಣೆಗಳ ಬಳಕೆ ಕಡಿಮೆ ಮಾಡಿ ಇತರೇ ಮೂಲಗಳಿಂದ ಶಕ್ತಿಯನ್ನು ಉತ್ಪಾದಿಸಬೇಕೆಂಬ ಅರಿವು ಹುಟ್ಟಿತು. ನೀರು, ಗಾಳಿ, ಸಮುದ್ರದ ಅಲೆ, ಭೂಮಿಯ ಆಳದ ಶಾಖ ಮುಂತಾದ ಚೈತನ್ಯಮೂಲಗಳನ್ನು ಹೆಚ್ಚಾಗಿ ಬಳಸಿದರೆ ಮಾತ್ರ ಭವಿಷ್ಯದಲ್ಲಿ ತನ್ನನ್ನು ಉಳಿಸಿಕೊಳ್ಳಬಹುದು ಎಂಬ ಜ್ಞಾನೋದಯವಾಯಿತು.
ಯುರೋಪಿನ ಹಲವು ಸಣ್ಣಪುಟ್ಟ ದೇಶಗಳು ಕೂಡ ಪರ್ಯಾಯ ಶಕ್ತಿಮೂಲಗಳನ್ನು ಬಲವಾಗಿ ನೆಚ್ಚಿಕೊಳ್ಳುತ್ತಿವೆ. ಡೆನ್ಮಾರ್ಕ್ 2014ರಲ್ಲಿ 40% ವಿದ್ಯುಚ್ಛಕ್ತಿಯನ್ನು ಪವನತಂತ್ರಜ್ಞಾನದಿಂದ ಪಡೆದಿದೆ. ಯುನೈಟೆಡ್ ಕಿಂಗ್‍ಡಂನಲ್ಲಿ70 ಲಕ್ಷ ಮನೆಗಳನ್ನು ಬೆಳಗುತ್ತಿರುವುದು ಮತ್ತೆ ಪವನಶಕ್ತಿಯೇ. ಜರ್ಮನಿಯಲ್ಲಿ 1990ರಿಂದ ಇಲ್ಲಿಯವರೆಗೆ ಪರ್ಯಾಯ ಶಕ್ತಿಮೂಲಗಳ ಬಳಕೆ 8 ಪಟ್ಟು ಹೆಚ್ಚಾಗಿದೆ. ಸ್ಕಾಟ್ಲೆಂಡ್ ಕೇವಲ ಗಾಳಿಶಕ್ತಿಯನ್ನು ಬಳಸಿ ಉತ್ಪಾದಿಸುತ್ತಿರುವ ವಿದ್ಯುತ್ತು ಒಟ್ಟು 40 ಲಕ್ಷ ಮನೆಗಳಿಗೆ ಸಾಕು. ಯುರೋಪಿಯನ್ ಒಕ್ಕೂಟ ತನ್ನ ಎಲ್ಲ ಸದಸ್ಯ ದೇಶಗಳಿಗೂ ಇಂತಿಷ್ಟು ಎಂದು ಟಾರ್ಗೆಟ್ ಕೊಟ್ಟು ಅಷ್ಟು ವಿದ್ಯುತ್ತನ್ನಾದರೂ ಪ್ರತೀದೇಶ ಪರ್ಯಾಯ ಶಕ್ತಿಮೂಲಗಳಿಂದಲೇ ಪಡೆಯಬೇಕೆಂದು ತಾಕೀತು ಮಾಡುತ್ತಿದೆ. ತಾನು ಹೇಳಿದ್ದನ್ನು 2020ರ ಒಳಗೆ ಮಾಡಿತೋರಿಸಬೇಕೆಂದು ಕಟ್ಟಪ್ಪಣೆ ಮಾಡಿದೆ. ಅಚ್ಚರಿಯ ಮಾತೆಂದರೆ, ಬಲ್ಗೇರಿಯ, ಎಸ್ಟೋನಿಯ ಮತ್ತು ಸ್ವೀಡನ್ – ಈ ಮೂರು ದೇಶಗಳು ಡೆಡ್‍ಲೈನಿಗೆ ಇನ್ನೂ ಎಂಟು ವರ್ಷಗಳಿರುವಾಗಲೇ ಒಕ್ಕೂಟ ಹೇಳಿದ ಗುರಿಯನ್ನು ಮುಟ್ಟಿಯಾಗಿದೆ!

2014ರ ಒಂದೇ ವರ್ಷದಲ್ಲಿ ಜಗತ್ತಿನಲ್ಲಿ 100 ಗೀಗಾವ್ಯಾಟ್‍ಗಳಷ್ಟು ಶಕ್ತಿಯನ್ನು ಸೌರ ಮತ್ತು ಪವನಮೂಲಗಳಿಂದ ಪಡೆಯಲಾಯಿತು. ವರ್ಷವರ್ಷವೂ ಈ ಪ್ರಮಾಣವನ್ನು 40-50% ಏರಿಸುತ್ತಾಹೋಗಲು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಭಾರತ, 2017ರ ಒಳಗಾಗಿ 30 ಗೀಗಾವ್ಯಾಟ್ ಶಕ್ತಿಯನ್ನು ಪುನರ್ಬಳಕೆಯ ಆಕರಗಳಿಂದ ಪಡೆಯಲು ಉದ್ದೇಶಿಸಿದೆ. ಭಾರತ ಇದನ್ನೊಂದು ದಾಪುಗಾಲು ಎಂದು ಪರಿಗಣಿಸಿದರೂ, ಜಾಗತಿಕಮಟ್ಟದಲ್ಲಿ ಆಗುತ್ತಿರುವ ಕೆಲಸಗಳನ್ನು ನೋಡಿದರೆ ಇದೊಂದು ಪುಟ್ಟ ಹೆಜ್ಜೆಯೇ. ಒಂದು ಗಾಳಿಶಕ್ತಿಯಿಂದ ತಿರುಗುವ ಟರ್ಬೈನ್ 300 ಮನೆಗಳನ್ನು ಬೆಳಗಿಸಬಲ್ಲುದು. ಭೂಮಿಯ ಮೇಲೆ ಒಂದು ದಿನದಲ್ಲಿ ಬೀಳುವ ಸೌರಶಕ್ತಿ ಇಡೀ ಜಗತ್ತಿನ ಒಂದುವರ್ಷದ ಶಕ್ತಿಯ ಬೇಡಿಕೆಯನ್ನು ಪೂರೈಸಬಲ್ಲುದೆಂದರೆ ಅದರ ಪರಿಮಾಣವನ್ನು ಲೆಕ್ಕ ಹಾಕಬಹುದು!

ಭಾರತದ ಪ್ರತಿರಾಜ್ಯದಲ್ಲಿ ಒಂದೊಂದು ದೊಡ್ಡ ಪ್ರಮಾಣದ ಸೌರ ಮತ್ತು ವಾಯುಶಕ್ತಿಯ ವಿದ್ಯುತ್ ಉತ್ಪಾದಕ ಘಟಕಗಳನ್ನು ಸ್ಥಾಪಿಸಿದರೂ ಅದರಿಂದ ಬಹಳಷ್ಟು ಪ್ರಯೋಜನ ಇದೆ. ಅಷ್ಟರಮಟ್ಟಿಗೆ ನವೀಕರಿಸಲಾಗದ ಇಂಧನಗಳ ಬಳಕೆಯನ್ನು ತಡೆಗಟ್ಟಬಹುದು. ಭಾರತಕ್ಕೆ ಅತಿ ಉದ್ದದ ಸಮುದ್ರ ತೀರವಿದೆ. ನಿರಂತರವಾಗಿ ಬೀಸಿಬರುವ ಸಮುದ್ರದ ಅಲೆಗಳನ್ನು, ಅವುಗಳ ಉಬ್ಬರ-ಇಳಿತಗಳಿಗೆ ಅನುಗುಣವಾಗಿ ಬುದ್ಧಿವಂತಿಕೆಯಿಂದ ಬಳಸಿಕೊಂಡರೆ ನಾವು ಅದರಿಂದಲೂ ಟರ್ಬೈನುಗಳನ್ನು ತಿರುಗಿಸಿ ವಿದ್ಯುತ್ ಉತ್ಪಾದನೆ ಮಾಡಬಹುದು.

ಸಮುದ್ರದ ತೆರೆಗಳಿಂದ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನದ ಕಡೆಗೆ ನಮ್ಮ ದೇಶದ ಯಾವ ರಾಜ್ಯವೂ (ಅತಿ ಉದ್ದದ ತೀರವಿರುವ ಗುಜರಾತ್ ಕೂಡ) ಆಸಕ್ತಿ ತೋರದಿರುವುದು ವಿಸ್ಮಯಕಾರಿ! ಕರ್ನಾಟಕವಂತೂ ಇನ್ನೂ ಆಂಧ್ರದಿಂದ ಬರುವ ಕಲ್ಲಿದ್ದಲನ್ನು ನಂಬಿಕೊಂಡೇ ರಾಯಚೂರು ಉಷ್ಣವಿದ್ಯುತ್ ಸ್ಥಾವರವನ್ನು ನಡೆಸುತ್ತಿದೆ. ಈ ಸ್ಥಾವರ ತನ್ನ ಕೆಲಸ ನಿಲ್ಲಿಸಿ ಕೈಕಟ್ಟಿ ನಿಂತರೆ ಮುಂದೇನು ಎಂಬ ಬಗ್ಗೆ ನಮ್ಮ ರಾಜ್ಯಸರಕಾರದ ಬಳಿ ಯಾವುದೇ ದೂರಗಾಮೀ ಯೋಜನೆ ಇಲ್ಲ. 2030ರ ಹೊತ್ತಿಗೆ ಪರ್ಯಾಯ ಶಕ್ತಿಮೂಲಗಳ ಕ್ಷೇತ್ರದಲ್ಲಿ ಒಟ್ಟು ಒಂದೂಕಾಲು ಕೋಟಿ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಅಂದಾಜಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top