fbpx
Awareness

ಮೆದುಳು ಶಕ್ತಿಶಾಲಿಯೋ ಅಥವಾ ಕಂಪ್ಯೂಟರ್ ಬಲಶಾಲಿಯೋ??

ಮನುಷ್ಯನ ಮೆದುಳು ಹಾಗೂ ಕಂಪ್ಯೂಟರ್ – ಈ ಎರಡರಲ್ಲಿ ಈಗ ಯಾವುದು ಪ್ರಬಲ? ಮನುಷ್ಯನ ಮೆದುಳು ವಿಕಾಸ ಹೊಂದುತ್ತ ಬಂದಿದೆ. ವರ್ಷ ವರ್ಷವೂ ಹೆಚ್ಚು ಶಕ್ತಿಶಾಲಿ ಕಂಪ್ಯೂಟರ್‍ಗಳು ತಯಾರಾಗುತ್ತಿವೆ. ಹೀಗಾಗಿ ಅವೆರಡರ ನಡುವಿ ಹೋಲಿಕೆ ಸಹಜ. ಅದರಲ್ಲೂ ಚೆಸ್ ಗ್ರ್ಯಾಂಡ್‍ಮಾಸ್ಟರ್‍ಗಳು ಕಂಪ್ಯೂಟರ್ ವಿರುದ್ಧ ಚೆಸ್ ಆಡುವಾಗ ಇಂತಹ ಹೋಲಿಕೆಯನ್ನು ಸಾಮಾನ್ಯವಾಗಿ ಮಾಡಲಾಗುತ್ತದೆ.

Image result for brain and computer
ಬುದ್ಧಿವಂತರ ಬಗ್ಗೆ ಮಾತನಾಡುವಾಗ `ಅವರ ಬ್ರೇನ್ (ಮೆದುಳು) ಕಂಪ್ಯೂಟರ್ ಇದ್ದ ಹಾಗೆ’ ಎನ್ನುವ ವಾಡಿಕೆಯೂ ಇದೆ. ಮನುಷ್ಯರ ಮೆದುಳನ್ನು ಹಲವು ಯಂತ್ರಗಳಿಗೆ ಹೋಲಿಸುವ ಅಭ್ಯಾಸ ಹಿಂದಿನ ಕಾಲದಿಂದಲೂ ಜನರಲ್ಲಿ ಇದೆ. ಹಿಂದೆ ಗಡಿಯಾರಕ್ಕೆ, ಟೆಲಿಫೋನ್ ಸ್ವಿಚ್‍ಬೋರ್ಡಿಗೆ – ಹೀಗೆ ನಾನಾ ಆವಿಷ್ಕಾರಗಳಿಗೆ ಹೋಲಿಸಿ ಮಾತನಾಡುತ್ತಿದ್ದರು. ಈಗ ಕಂಪ್ಯೂಟರ್‍ಗೆ ಹೋಲಿಸುವ ಸರದಿ.
ಕಂಪ್ಯೂಟರ್ ಬುದ್ಧಿವಂತಿಕೆಯ ಯಂತ್ರ. ಮನುಷ್ಯರಿಗಿಂತಲೂ ವೇಗವಾಗಿ ಲೆಕ್ಕಹಾಕುವ ಶಕ್ತಿ ಈ ಯಂತ್ರಕ್ಕಿದೆ. ಹೀಗಾಗಿ ಅದನ್ನು ಮನುಷ್ಯರಿಗೆ ಹೋಲಿಸಿ ಮಾತನಾಡುವ ಅಭ್ಯಾಸ ಬಂದಿದೆ.
ಇಂತಹ ಹೋಲಿಕೆಯ ಹಿಂದೆ ಎರಡು ಉದ್ದೇಶಗಳಿರುತ್ತವೆ. `ಕಂಪ್ಯೂಟರ್ ಅನ್ನು ಸೃಷ್ಟಿಸಿದವನು ಮನುಷ್ಯ. ಹೀಗಾಗಿ ಕಂಪ್ಯೂಟರ್‍ಗಿಂತಲೂ ಮನುಷ್ಯನ ಮೆದುಳಿನ ಬುದ್ಧಿಶಕ್ತಿಯೇ ಹೆಚ್ಚು’ ಎನ್ನುತ್ತಾರೆ ಕೆಲವರು. ಇತರರು `ಆದರೂ ಕಂಪ್ಯೂಟರ್ ಲೆಕ್ಕಾಚಾರ ಮಾಡುವಂತೆ ಮನುಷ್ಯ ಮಾಡಲಾರ. ಆದ್ದರಿಂದ ಅದೇ ಹೆಚ್ಚು ಉತ್ತಮ’ ಎನ್ನುತ್ತಾರೆ.

Image result for brain and computer
ಕತ್ತಿಯನ್ನು ತಯಾರಿಸಿದ್ದು ಮನುಷ್ಯ. ಹಾಗೆಂದು ಮನುಷ್ಯನ ಕೈಗಳೇ ಕತ್ತಿಗಿಂತಲೂ ಹರಿತ ಎನ್ನಲಾದೀತೆ? ಹಾಗಾದರೆ ಕತ್ತಿಯೇ ಶ್ರೇಷ್ಠ ಎನ್ನಬಹುದೇ? ಹಾಗೂ ಹೇಳಲಾಗದು, ಹೀಗೂ ಹೇಳಲಾಗದು, ಅಲ್ಲವೆ? ಕತ್ತಿ ಹೇಗೆ ಒಂದು ಯಂತ್ರವೋ ಹಾಗೆಯೇ ಕಂಪ್ಯೂಟರ್ ಸಹ ಒಂದು ಯಂತ್ರ. ಎರಡನ್ನೂ ಬೇರೆ ಬೇರೆ ಉದ್ದೇಶಗಳಿಗೆ ಮನುಷ್ಯ ತಯಾರಿಸಿದ್ದಾನೆ. ತನ್ನ ಕೈಗಳಿಗಿಂತಲೂ ಹರಿತವಾದ ವಸ್ತುವನ್ನು ತಯಾರಿಸಿರುವ ಮಾನವ ತನಗಿಂತಲೂ ವೇಗವಾಗಿ ಲೆಕ್ಕಹಾಕಬಲ್ಲ ಯಂತ್ರವನ್ನೂ ತಯಾರಿಸಿದ್ದಾನೆ.

Image result for brain and computer
ನಮ್ಮ ಅಂಗಗಳನ್ನು ಬಳಸಿ ನಾವೇ ಖುದ್ದಾಗಿ ಎಷ್ಟೋ ಕೆಲಸಗಳನ್ನು ಮಾಡಲಾಗದು. ಅಂತಹ ಕೆಲಸಗಳನ್ನು ಸುಲಭವಾಗಿ ಮಾಡುವ ಸಲುವಾಗಿಯೇ ನಾವು ಯಂತ್ರಗಳನ್ನು ತಯಾರಿಸಿದ್ದೇವೆ. ಅಂದರೆ ಅಂತಹ ಯಂತ್ರಗಳನ್ನು ತಯಾರಿಸಿದ ನಾವು ಬುದ್ಧಿವಂತರು ಎನ್ನುವುದು ನಿಜ. ಹಾಗೆಯೇ ನಾವೇ ತಯಾರಿಸಿದ ಯಂತ್ರಗಳು ಕೆಲವು ಕ್ಷೇತ್ರಗಳಲ್ಲಿ ನಮ್ಮ ಸ್ವಂತ ಶಕ್ತಿಯನ್ನು ಮೀರಿಸಿವೆ
ಎನ್ನುವುದೂ ನಿಜ.

Image result for brain and computer
ಈಗ ಬ್ರೇನ್ ಮತ್ತು ಕಂಪ್ಯೂಟರ್ ವಿಷಯಕ್ಕೆ ಮತ್ತೆ ಬರೋಣ. ಕೆಲವು ಕೆಲಸಗಳನ್ನು ಕಂಪ್ಯೂಟರ್‍ಗಿಂತಲೂ ನಮ್ಮ ಮೆದುಳು ಚೆನ್ನಾಗಿ ಮಾಡುತ್ತದೆ. ಮತ್ತೆ ಕೆಲವು ಕೆಲಸಗಳನ್ನು ನಮ್ಮ ಮೆದುಳಿಗಿಂತಲೂ ಕಂಪ್ಯೂಟರ್ ಚೆನ್ನಾಗಿ ಮಾಡುತ್ತದೆ. ಏನನ್ನಾದರೂ ಹೆಚ್ಚುವಾಗ, ಕತ್ತರಿಸುವಾಗ ಕತ್ತಿಯನ್ನು ಬಳಸುತ್ತೇವೆ. ಆದರೆ ತಬಲ ಬಾರಿಸುವಾಗ ನಮ್ಮ ಬೆರಳುಗಳನ್ನೇ ಬಳಸುತ್ತೇವೆ, ಅಲ್ಲವೇ? ಹಾಗೆಯೇ ಕಂಪ್ಯೂಟರ್ ವಿಷಯದಲ್ಲೂ ಸಹ.

Image result for brain and computer
ಮನುಷ್ಯ ತನ್ನ ಬುದ್ಧಿಶಕ್ತಿ ಹೆಚ್ಚಾದಂತೆಲ್ಲ ಏನು ಮಾಡಿದ ಗೊತ್ತೆ? ತನ್ನ ಬುದ್ಧಿಶಕ್ತಿಗೆ ಕಾರಣವಾಗಿರುವ ತನ್ನ ಮೆದುಳಿನ ಬಗ್ಗೆ (ಆ ಮೆದುಳನ್ನೆ ಉಪಯೋಗಿಸಿಕೊಂಡು!) ಹೆಚ್ಚು ಹೆಚ್ಚು ತಿಳಿಯಲು ಹೊರಟ! ನಮ್ಮ ಮೆದುಳು ಹೇಗೆ ಕಾರ್ಯಗಳನ್ನು ಮಾಡುತ್ತದೆ ಎಂಬ ಕುರಿತು ವಿಜ್ಞಾನಿಗಳು ಇನ್ನೂ ಸಂಶೋಧನೆಗಳನ್ನು ಮಾಡುತ್ತಲೇ ಇದ್ದಾರೆ.
ಆದರೆ ಮೆದುಳು ನಮ್ಮ ಬ್ರಹ್ಮಾಂಡದ ಹಾಗೆ. ಅದರ ಬಗ್ಗೆ ನಮಗೆ ಗೊತ್ತಿರುವುದಕ್ಕಿಂತಲೂ ಗೊತ್ತಿಲ್ಲದಿರುವುದೇ ಹೆಚ್ಚು!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top