fbpx
Awareness

ದುಬಾರಿಯಾಗುತ್ತಿರುವ ಹೋಟೆಲ್ ಊಟ; ಬಡವರಿಗೆ ತಳ್ಳುಗಾಡಿವನೇ ಅನ್ನದಾತ!!!

ಹೊಟ್ಟೆ ತುಂಬಿಸುವ ತಳ್ಳುವ ಗಾಡಿ
ತುತ್ತಿನ ಚೀಲ ತುಂಬಿಸಿಕೊಳ್ಳಲು ಹಳ್ಳಿಯಿಂದ ನಗರದೆಡೆ ಮುಖ ಮಾಡುವ ಹಲವರು ಹೊಟ್ಟೆ ತುಂಬಿಸಿಕೊಳ್ಳಲು ಹೆಣಗಾಡುತ್ತಾರೆ. ಅಂತವರಿಗೆ ರಸ್ತೆ ಬದಿ ಗಾಡಿಗಳೇ ಸ್ವರ್ಗ!ಮೆಟ್ರೊನಗರದ ಗಗನಚುಂಬಿ ಕಟ್ಟಡಗಳ ಮಧ್ಯೆ ಸಾಗುವ ವಿಶಾಲವಾದ ರಸ್ತೆಯ ಪಕ್ಕದ ಫುಟ್‍ಪಾತ್ ಮೇಲೆ ತಳ್ಳುವ ಗಾಡಿಯಲ್ಲಿ ಊಟ, ತಿಂಡಿಯನ್ನು ಸರಬರಾಜು ಮಾಡುವವರು ಸಾವಿರಾರು ಹಸಿದ ಹೊಟ್ಟೆಗಳಿಗೆ ಅನ್ನ ನೀಡುತ್ತಿದ್ದಾರೆ. ಅದು ಕೂಡ ಕಡಿಮೆ ದರದಲ್ಲಿ.

Image result for indian street food

ಪ್ರತಿದಿನ ಬರುವ ನೂರಾರು ಜನ ವಲಸಿಗರನ್ನು ತನ್ನ ಒಡಲಾಳದಲ್ಲಿ ಇಟ್ಟುಕೊಂಡು ಸಲಹುತ್ತಿರುವ ಬೆಂಗಳೂರು, ಅವರಿಗೊಂದು ಉತ್ತಮ ಜೀವನವನ್ನು ಕಟ್ಟಿಕೊಳ್ಳುವಲ್ಲಿ ಆಸರೆಯಾಗಿ ನಿಂತಿದೆ. ಉನ್ನತ ವ್ಯಾಸಂಗ ಮಾಡಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಅರಿಸಿಕೊಂಡು ಬರುವವರಿಂದ ದಿನಗೂಲಿ ಹುಡುಕಿಕೊಂಡು ಬರುವ ಕಾರ್ಮಿಕರು ಸಂಖ್ಯೆ ಅಸಂಖ್ಯಾತ. ತಮ್ಮ ಊರಿನಿಂದ ದೂರದ ಅಪರಿಚಿತ ಸ್ಥಳದಲ್ಲಿ ಬಂದು, ಮಹಾನಗರದ ಅಬ್ಬರದ ವಾತಾವರಣದಲ್ಲಿ ಒಂದು ರೀತಿಯ ಆತಂಕ ಮನೆ ಮಾಡಿರುತ್ತದೆ. ಈ ಜನರಿಗೆ ಊಟ ತಿಂಡಿಯ ಸಮಸ್ಯೆಯೇ ಹೆಚ್ಚು ಕಾಡುತ್ತದೆ.

Image result for indian street food

ದೊಡ್ಡ ದೊಡ್ಡ ಹೋಟೆಲ್‍ಗಳಲ್ಲಿ ತಟ್ಟೆಯಲ್ಲಿರುವ ಖಾದ್ಯಗಳಿಗಿಂತ ಅದಕ್ಕಿರುವ ಬೆಲೆಯೇ ಹೆಚ್ಚಿರುವ ಅನುಭವ! ಹಸಿದ ಹೊಟ್ಟೆಗೆ ಅನ್ನ ಹಾಕಲೇಬೇಕು ಆದರೆ ಕೈಯಲ್ಲಿ ಹೆಚ್ಚು ದುಡ್ಡಿಲ್ಲ ಎಂದು ಯೋಚಿಸುವವರಿಗೆ ರಸ್ತೆ ಬದಿಯ ಗಾಡಿಯಲ್ಲಿ ದೊರೆಯುವ ರಾಗಿ ಮುದ್ದೆ ಬಸ್ಸಾರು, ಅನ್ನ ತಿಳಿಸಾರು ಮೃಷ್ಟಾನ ಭೋಜನದ ಸಮಾನ. ಇಪ್ಪತ್ತು, ಮೂವತ್ತು ರೂ.ಗಳಿಗೆ ಲಭ್ಯವಿರುವ ಆಹಾರವನ್ನು ಸೇವಿಸಲು ಸರದಿ ನಿಂತು ಕಾಯುವುದನ್ನು ನಗರದ ಹಲವು ಕಡೆ ಕಂಡಿದ್ದೇವೆ.

Image result for indian street food

ಕಡಿಮೆ ಹಣ ಮಾತ್ರವಲ್ಲದೇ, ರುಚಿಯಲ್ಲಿಯೂ ಕೂಡ ಹೋಟೆಲ್ ಆಹಾರಕ್ಕಿಂತ ಉತ್ತಮ ಎಂದು ಹೇಳುವವರು ತುಂಬಾ ಜನ. ಬಡವರು, ಕೆಳವರ್ಗದವರು ಮಾತ್ರ ಇಂತಹ ಸ್ಥಳದಲ್ಲಿ ಆಹಾರ ಸೇವಿಸುತ್ತಾರೆ ಎಂಬ ತಪ್ಪು ಕಲ್ಪನೆಯಿದ್ದರೆ ತೆಗೆದು ಹಾಕಿ. ಸಾಫ್ಟ್‍ವೇರ್ ಸಂಸ್ಥೆಗಳಲ್ಲಿ ಕೈತುಂಬಾ ಸಂಬಳ ಪಡೆಯುವ ಎಷ್ಟೋ ಟೆಕ್ಕಿಗಳಿಗೂ ರಸ್ತೆಬದಿ ಗಾಡಿಗಳು ಅಚ್ಚುಮೆಚ್ಚು. ದಿನಕ್ಕೊಂದು ಬಗೆಯ ತಿಂಡಿಗಳು ಮನೆಯ ಊಟವನ್ನೇ ನೆನಪಿಸುತ್ತವೆ ಎಂದು ಹೇಳುತ್ತಾ ಇಲ್ಲಿಗೆ ಬಂದು ಊಟ ಮಾಡಿಕೊಂಡು ಹೋಗುತ್ತಾರೆ. ಲಾಭದಾಯಕ ಉದ್ದಿಮೆತಳ್ಳುವ ಗಾಡಿಯಲ್ಲಿ ಮನೆಯಿಂದ ಆಹಾರ ಸಿದ್ಧಪಡಿಸಿ ನಿಗದಿತ ಸ್ಥಳಕ್ಕೆ ತಳ್ಳಿಕೊಂಡು ಬರುವರು ಇದೀಗ ಆಟೋ ಹಾಗೂ ವೊಮ್ನಿಗಳಲ್ಲಿ ಆಹಾರವನ್ನು ತರುತ್ತಿದ್ದಾರೆ.

ಗ್ರಾಹಕರಿಗೆ ಬಿಸಿ ಬಿಸಿ ಆಹಾರವನ್ನು ಪೂರೈಸುವ ಉದ್ದೇಶದಿಂದ ವಾಹನಗಳಲ್ಲಿ ತರುತ್ತೇವೆ. ಒಳ್ಳೆಯ ಆಹಾರವನ್ನು ಹುಡುಕಿಕೊಂಡು ಬರುವವರಿಗೆ ಮನೆಯಲ್ಲಿ ತಯಾರಿಸಿ ಸಾದಾ ಊಟವೇ ಹೆಚ್ಚು ರುಚಿಕರವೆನಿಸುತ್ತದೆ. ಆದ್ದರಿಂದ ಹೆಚ್ಚು ಬಗೆಯ ಆಹಾರ ನೀಡುವುದಕ್ಕಿಂತ ಲಭ್ಯವಿರುವ ಆಹಾರವನ್ನೇ ರುಚಿಕರವಾಗಿ ಮಾಡಿ ಬಡಿಸುವುದು ನಮ್ಮ ಧ್ಯೇಯ ಎನ್ನುತ್ತಾರೆ ಗಾಡಿ ಮಾಲೀಕರು. ವಿಜಯನಗರ, ರಾಜಾಜಿನಗರ, ಮಲ್ಲೇಶ್ವರ, ರಿಚ್ಮಂಡ್ ರಸ್ತೆ, ಹಲಸೂರು, ಎಂ.ಜಿ.ರಸ್ತೆ, ಜಯನಗರ ಹೀಗೆ ಎಲ್ಲೆಡೆ ಗಾಡಿಗಳಲ್ಲಿ ಆಹಾರ ಪುರೈಸುವುದನ್ನು ಕಾಣಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top