fbpx
ಮಾಹಿತಿ

ಜಯಪ್ರಕಾಶ್ ಹೆಗ್ಡೆ ಸೇರಿ ಹಲವರು ಬಿಜೆಪಿಗೆ ಸೇರ್ಪಡೆ: 15ರ ನಂತರ ಕೃಷ್ಣಗೆ ಸೇರ್ಪಡೆ?

ಕಾಂಗ್ರೆಸ್‍ನಲ್ಲಿ ಉದ್ಭವಿಸಿರುವ ಭಿನ್ನಮತ ಇದೀಗ ಬಿಜೆಪಿಗೆ ವಲಸೆ ಹೋಗುವ ಹಂತಕ್ಕೆ ತಲುಪಿದ್ದು, ಉಡುಪಿಯ ಸಂಸದ ಜಯಪ್ರಕಾಶ್‍ ಹೆಗ್ಡೆ, ಹೋಸಪೇಟೆ ಮಾಜಿ ಶಾಸಕ ರತನ್‍ ಸಿಂಗ್‍ ಸೇರಿದಂತೆ ಹಲವು ಮುಖಂಡರು ಬುಧವಾರ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಇದೀಗ ಮಾಜಿ ಕೇಂದ್ರ ಸಚಿವ ಎಸ್‍.ಎಂ. ಕೃಷ್ಣ ಸೇರ್ಪಡೆಗೆ ಮಾತುಕತೆ ಅಂತಿಮ ಹಂತ ತಲುಪಿದ್ದು, ಮಾರ್ಚ್‍ 15ರ ನಂತರ ರಾಷ್ಟ್ರಮಟ್ಟದ ಸಮಾವೇಶದಲ್ಲಿ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ಬೆಳಗ್ಗೆ ನಡೆದ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಮಾಜಿ ಸಚಿವ ಜಯಪ್ರಕಾಶ್‍ ಹೆಗ್ಡೆ, ರತನ್‍ ಸಿಂಗ್, ಮಾಜಿ ಬ್ಲಾಕ್ ಕಾಂಗ್ರೆಸ್‍ ಕಾರ್ಯದರ್ಶಿ ಮೇಘನಾಥ ಶೆಟ್ಟಿ ಬಿಜೆಪಿಗೆ ಸೇರ್ಪಡೆಗೊಂಡರು.

ಬಿಜೆಪಿಗೆ ಸೇರ್ಪಡೆ ನಂತರ ಮಾಧ್ಯಮ ಜೊತೆ ಮಾತನಾಡಿದ ಜಯಪ್ರಕಾಶ್ ಹೆಗ್ಡೆ, ಕಾಂಗ್ರೆಸ್‍ನಲ್ಲಿ ಸೂಕ್ತ ಗೌರವ ದೊರೆಯದ ಕಾರಣ ಈ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಯಿತು ಎಂದಿದ್ದಾರೆ.

ಇದೇ ವೇಳೆ ಎಸ್‍.ಎಂ.ಕೃಷ್ಣ ಅವರೊಂದಿಗೆ ಯಡಿಯೂರಪ್ಪ ಮತ್ತು ಅಶೋಕ್‍ ಹಲವು ಸುತ್ತಿನ ಮಾತುಕತೆ ನಂತರ ಬಿಜೆಪಿ ಸೇರ್ಪಡೆ ಖಚಿತಪಡಿಸಿಕೊಂಡಿದ್ದಾರೆ. ಇನ್ನೆರಡು ದಿನದಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಸೇರ್ಪಡೆ ಕುರಿತು ದಿನಾಂಕ ನಿಗದಿಯಾಗಲಿದೆ. ಮೂಲಗಳ ಪ್ರಕಾರ ಮಾರ್ಚ್‍ 15ರ ನಂತರ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಕೃಷ್ಣ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ.

ಇದೇ ವೇಳೆ ಮಾಜಿ ಶಾಸಕಿ ಪರಿಮಳ ನಾಗಪ್ಪ ಬಿಜೆಪಿ ಸೇರ್ಪಡೆ ಕುರಿತು ಗೊಂದಲ ಉಂಟಾಗಿದ್ದು, ಈ ಬಗ್ಗೆ ಮಾಜಿ ಸಚಿವ ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಿರಿಯ ಮುಖಂಡರು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top