ಸಮಾಚಾರ

ಮೂರಲ್ಲ, 2 ಲಕ್ಷ ಮೀರಿ ನಗದು ವ್ಯವಹಾರ ಮಾಡಿದರೆ ಎಲ್ಲಾ ಹಣ ವಶ

ಏಪ್ರಿಲ್ 1ರಿಂದ ದೇಶದಲ್ಲಿ ಯಾರೂ 2 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ನಗದು ವ್ಯವಹಾರ ಮಾಡುವಂತಿಲ್ಲ! ಒಂದು ವೇಳೆ ಮಾಡಿದರೆ ಅಷ್ಟೂ ಹಣ ಸರಕಾರದ ಪಾಲಾಗಲಿದೆ!

ಹೌದು, ಕೇಂದ್ರ ಸರಕಾರ ಬಜೆಟ್‍ನಲ್ಲಿ 3 ಲಕ್ಷ ಮೇಲಿನ ನಗದು ವ್ಯವಹಾರ ಮಾಡಿದರೆ ತೆರಿಗೆ ವಿಧಿಸುವುದಾಗಿ ಹೇಳಿತ್ತು. ಇದೀಗ ಏಪ್ರಿಲ್ 1ರಿಂದ ಬಜೆಟ್‍ ಜಾರಿಗೆ ಬರುತ್ತಿದ್ದಂತೆ ಸರಕಾರ ಈ ಪ್ರಸ್ತಾಪದಲ್ಲಿ ಮಹತ್ವದ ಬದಲಾವಣೆಗೆ ಮನಸ್ಸು ಮಾಡಿದೆ.

ಬಜೆಟ್‍ನಲ್ಲಿ ಹೇಳಿದಂತೆ 3 ಲಕ್ಷದ ಮಿತಿಯನ್ನು 2 ಲಕ್ಷ ರೂ.ಗೆ ಇಳಿಸಲು ಸರಕಾರ ಪ್ರಸ್ತಾಪವನ್ನು ಮುಂದಿಟ್ಟಿದೆ. ಇದರಿಂದ ಏಪ್ರಿಲ್ 1ರಿಂದ 2 ಲಕ್ಷ ಮೇಲ್ಪಟ್ಟು ನಗದು ವ್ಯವಹಾರ ಮಾಡಿದರೆ ಶೇ.100ರಷ್ಟು ದಂಡ ವಿಧಿಸಲಾಗುತ್ತದೆ. ಅಂದರೆ ನೀವು ನಗದು ವ್ಯವಹಾರ ಮಾಡಿದ ಎಲ್ಲಾ ಮೊತ್ತವನ್ನು ಸರಕಾರ ತನ್ನ ಸುಪರ್ದಿಗೆ ಪಡೆಯಲಿದೆ.

ಕಪ್ಪುಹಣದ ಹಾವಳಿಯನ್ನು ತಡೆಯಲು ಡಿಜಿಟಲ್ ಪೇಮೆಂಟ್‍ಗೆ ಒತ್ತು ನೀಡಿರುವ ಕೇಂದ್ರ ಸರಕಾರ ನಗದು ವ್ಯವಹಾರಕ್ಕೆ ಕಡಿವಾಣ ಹಾಕುವುದಾಗಿ ತಿಳಿಸಿತ್ತು.

ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಫೆಬ್ರವರಿಯಲ್ಲಿ ಬಜೆಟ್‍ ಮಂಡಿಸಿದಾಗ 3 ಲಕ್ಷ ರೂ. ನಗದು ವ್ಯವಹಾರಕ್ಕೆ ಸೀಮಿತಗೊಳಿಸುವ ಪ್ರಸ್ತಾಪ ಮುಂದಿಟ್ಟಿದ್ದರು. ಈ ಬಗ್ಗೆ ಕಾನೂನಿನಲ್ಲಿ ಸೂಕ್ತ ತಿದ್ದುಪಡಿ ತರುವುದಾಗಿ ತಿಳಿಸಿದ್ದರು. ಇದೀಗ ಸರಕಾರ ಸೂಚನೆ ಮೇರೆಗೆ ಈ ಮಿತಿಯನ್ನು 2 ಲಕ್ಷಕ್ಕೆ ಮಿತಿಗೊಳಿಸಲಾಗುತ್ತಿದ್ದು, ಇದನ್ನು ಮೀರಿದ ನಗದು ವ್ಯವಹಾರ ನಡೆಸಿದರೆ ಕಾನೂನು ಬಾಹಿರ ಎಂದು ಪರಿಗಣಿಸಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.

ಕಪ್ಪುಹಣ ತಡೆಗಟ್ಟುವ ಹಿನ್ನೆಲೆಯಲ್ಲಿ ಡಿಜಿಟಲ್‍ ವ್ಯವಹಾರ ಪ್ರೋತ್ಸಾಹಿಸಲು ಸರಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.

ನೂತನ ನಿಯಮದ ಪ್ರಕಾರ 2 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ನಗದು ವ್ಯವಹಾರ ಮಾಡಿದರೆ ಶೇ.100ರಷ್ಟು ದಂಡ ವಿಧಿಸಲಾಗುವುದು.

ಬಜೆಟ್‍ ಮೇಲಿನ ಚರ್ಚೆ ವೇಳೆ ರೆವಿನ್ಯೂ ಸೆಕ್ರೆಟರಿ ಹಂಸ್‍ಮುಖ್ ಆದ್ಯ ಭಾರೀ ಪ್ರಮಾಣದ ನಗದು ವ್ಯವಹಾರವನ್ನು ಸರಕಾರ ನಿಗಾ ವಹಿಸಿದೆ. ನಗದು ರೂಪದಲ್ಲಿ ಹೆಚ್ಚಾಗಿ ಎಲ್ಲಿ ವ್ಯವಹಾರ ಆಗುತ್ತಿದೆ ಎಂಬುದನ್ನು ಗಮನಿಸಲಾಗುತ್ತಿದೆ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top