ಸಮಾಚಾರ

ಉಡುಪಿಯಲ್ಲಿ ನಿರೂಪಕಿ ಅನುಶ್ರೀ ಮದುವೆ!

ಸರಿಗಮಪದಲ್ಲಿ ಸಂಗೀತ ನಿರ್ದೇಶಕ ಅರ್ಜುನ್‍ ಜನ್ಯ ಅವರಿಗೆ ಮದುವೆ ಮಾಡ್ಕೊಳ್ಳಿ ಅಂತ ಕಾಲೆಳೆದು ತಲೆತಿನ್ನುತ್ತಿದ್ದ ನಿರೂಪಕಿ ಅನುಶ್ರೀ ಮದುವೆ ಆಗಿ ಹೋಗಿದೆ. ಉಡುಪಿಯಲ್ಲಿ ಅನುಶ್ರೀ ಅವರ ವಿವಾಹ ಸದ್ದಿಲ್ಲದೆ ಜರುಗಿ ಹೋಗಿದೆ. ಆದರೆ ಹುಡುಗ ಮಾತ್ರ ಅರ್ಜುನ್‍ ಜನ್ಯ ಅಲ್ಲವೇ ಅಲ್ಲ!

ಅರ್ಜುನ್ ಜನ್ಯ ಅಲ್ಲ ಮೇಲೆ ಮತ್ತಿನ್ಯಾರು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಅನುಶ್ರೀ ಅವರ ಕೈ ಹಿಡಿದ ಹುಡುಗ ರಜನೀಶ್‍ ಅಂತ. ಆತ ಕೂಡ ನಟ.

ಅಂದ ಹಾಗೆ ನಿಮಗೆ ಈಗ ಸುಳಿವು ಸಿಕ್ಕಿರಬೇಕು. ಹೌದು, ಇದು ಅನುಶ್ರೀ ಅವರ ನಿಜವಾದ ಮದುವೆಯಲ್ಲ. `ಕೋರಿ ರೊಟ್ಟಿ` ತುಳು ಚಿತ್ರದ ಚಿತ್ರೀಕರಣದಲ್ಲಿ ಮದುವೆ ದೃಶ್ಯ ಸೆರೆ ಹಿಡಿಯಲಾಗುತ್ತಿತ್ತು. ದುಬೈ ಉದ್ಯಮಿಗಳು ಬಂಡವಾಳ ಹೂಡಿದ್ದು, ತುಳು ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಬಜೆಟ್‍ ಚಿತ್ರ ಇದಾಗಿದೆ.

ಉಡುಪಿ ಸಮೀಪದ ಮಣಿಪಾಲದ ಆರ್‍ಎಸ್‍ಬಿ ಸಭಾ ಭವನದಲ್ಲಿ ಹಾಕಲಾಗಿದ್ದ ಭವ್ಯ ಸೆಟ್‍ನಲ್ಲಿ ಮದುವೆ ಅಲಂಕಾರದಲ್ಲಿ ಅನುಶ್ರೀ ಕಂಗೊಳಿಸುತ್ತಿದ್ದರು, ಕ್ಲೈಮ್ಯಾಕ್ಸ್‍ನಲ್ಲಿ ರಜನೀಶ್ ಅವರೊಂದಿಗಿನ ಮದುವೆ ದೃಶ್ಯಗಳನ್ನು ಚಿತ್ರೀಕರಿಸಲಾಯಿತು.

ಮೂರು ದಿನ ಇದೇ ರೀತಿ ಮದುವೆ ಉಡುಗೆಯಲ್ಲೇ ಅನುಶ್ರೀ ಇದ್ದರು. ಮದುವೆ ಮನೆಗೆ ರೌಡಿಗಳು ಎಂಟ್ರಿ ಕೊಟ್ಟು ಹೊಡೆದಾಡುವ ದೃಶ್ಯ ಸೆರೆ ಹಿಡಿಯಲಾಗುತ್ತಿದೆ.

ಒಂದು ತಿಂಗಳ ಕಾಲ ನಿರಂತರ ಉಡುಪಿ- ಮಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಮೂಲತಃ ಕರಾವಳಿಯವರಾಗಿದ್ರೂ ಅನುಶ್ರೀ ಇದೇ ಮೊದಲ ಬಾರಿಗೆ ತುಳು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರೀಲ್ ಮದುವೆಯಾಯ್ತು, ರಿಯಲ್ ಮದುವೆ ಯಾವಾಗ? ಅನ್ನೋ ಪ್ರಶ್ನೆಗೆ ಉತ್ತರಿಸಿದ ಅನುಶ್ರೀ, ನಾನು ಸಿಕ್ಕಾಪಟ್ಟೆ ಯಂಗ್. ಮನೆ ಕಟ್ಟಿಯಾಯ್ತು. ಮದುವೆಗೆ ಕಾಲ ಕೂಡಿ ಬಂದಾಗ ಒಳ್ಳೆ ಹುಡುಗ ಸಿಕ್ಕಿದ ಕೂಡಲೇ ಮದುವೆಯಾಗ್ತಿನಿ ಎಂದು ಉತ್ತರಿಸಿದರು.

ಕೋರಿ ರೊಟ್ಟಿಗೂ ಮೊದಲು ಸದ್ಯ ಶೂಟ್ ನಡೆಯುತ್ತಿರುವ ಸಂದರ್ಭದಲ್ಲೂ ತುಳು ಚಿತ್ರಗಳಲ್ಲಿ ನಟಿಸುವಂತೆ ಸುಮಾರು ಆಫರ್‍ಗಳು ಅನುಶ್ರೀಗೆ ಬಂದಿದೆ. ಆದ್ರೆ ಅದ್ಯಾವುದನ್ನೂ ಅವರು ಒಪ್ಪಿಕೊಂಡಿಲ್ಲವಂತೆ. ಒಳ್ಳೆ ಕಥೆ, ಒಳ್ಳೆ ಡೈರೆಕ್ಟರ್ ಸಿಕ್ಕರೆ ತುಳುವಿನಲ್ಲಿ ಇನ್ನಷ್ಟು ಚಿತ್ರಗಳಲ್ಲಿ ನಟಿಸುತ್ತೇನೆ ಅಂದರು ಅನುಶ್ರೀ.

ಚಿತ್ರದಲ್ಲಿ ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ ಬೋಳಾರ್, ಕನ್ನಡದ ಹಿರಿಯ ನಟ ಹರೀಶ್ ರಾಯ್, ಇಳಾ ವಿಟ್ಲ- ಸ್ಥಳೀಯ ರಂಗಭೂಮಿ ಕಲಾವಿದರ ದಂಡೇ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top