fbpx
ಮಾಹಿತಿ

ನಡೆದಾಡುವ ದೇವರಿಗೆ 110ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ

ನಡೆದಾಡುವ ದೇವರು, ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಶ್ರೀಗಳು ಶನಿವಾರ 110ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಈ ಸಂಭ್ರಮಾಚರಣೆಯನ್ನು ತುಮಕೂರು ಸೇರಿದಂತೆ ನಾಡಿನ ಜನತೆ ಹಬ್ಬದ ರೀತಿ ಆಚರಿಸಲಿದ್ದಾರೆ. ಈಗಾಗಲೇ ನಗರಾದ್ಯಂತ ಬಂಟಿಂಗ್, ಬ್ಯಾನರ್‍ಗಳು ರಾರಾಜಿಸುತ್ತಿವೆ.

ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳು 1908ರಲ್ಲಿ ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಪಟೇಲ್ ಹೊನ್ನಪ್ಪ ಮತ್ತು ಗಂಗಮ್ಮ ನವರ ಮಗನಾಗಿ ಜನಿಸಿದರು. ವೀರಾಪುರ ಮತ್ತು ನಾಗವಲ್ಲಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪಿಯುಸಿ ಮತ್ತು ಡಿಗ್ರಿ ಪದವಿ ಪಡೆದ ಕಾಲಜ್ಞಾನಿ ಶ್ರೀ ಉದ್ಧಾನ ಶಿವಯೋಗಿ ಸ್ವಾಮಿಗಳಿಂದ 1930ರಲ್ಲಿ ದೀಕ್ಷೆ ಸ್ವೀಕರಿಸಿ 1941ರಲ್ಲಿ ಮಠಾಧಿಪತಿಗಳಾದರು. ಜನಾನುರಾಗಿ ಭಾವನೆ, ಬಡವರ ಮೇಲೆ ಅನುಕಂಪ, ಶಿಸ್ತಿನ ಜೀವನ, ಮಾನವೀಯ ಗುಣಗಳಿಂದ ಪ್ರಸಿದ್ಧಿ ಪಡೆದವರು. 128 ಶಾಲಾ ಕೇಂದ್ರಗಳನ್ನು ಹೊಂದಿರೋ ಮಠದಲ್ಲಿ ಈಗಲೂ 10 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ನಸುಕಿನ ಜಾವ 2 ಗಂಟೆಗೆ ಏಳುವ ಶ್ರೀಗಳು ಸ್ನಾನ, ಶಿವಪೂಜೆ ಮುಗಿಸಿ ಬೆಳಗಿನ ಜಾವ 5.30 ರಿಂದ 6ರ ವೇಳೆಗೆ ಕಚೇರಿಗೆ ಬರ್ತಾರೆ. ರಾತ್ರಿ 9.30 ರವರೆಗೂ ಒಂದಲ್ಲೊಂದು ಕಾರ್ಯದಲ್ಲಿ ತೊಡಗಿ ರಾತ್ರಿ 11 ಗಂಟೆ ವೇಳೆಗೆ ನಿದ್ರೆಗೆ ಜಾರಿ ಆರೋಗ್ಯವನ್ನ ಕಾಪಾಡಿಕೊಂಡು ಬಂದಿದ್ದಾರೆ.


ಶ್ರೀಗಳ 110 ನೇ ಹುಟ್ಟುಹಬ್ಬದ ಅಂಗವಾಗಿ ನಗರದಾದ್ಯಂತ ಶುಭಾಶಯದ ಬ್ಯಾನರ್ ಹಾಗೂ ಬಂಟಿಂಗ್ಸ್ ಗಳು ರಾರಾಜಿಸುತ್ತಿವೆ. ನಾಳೆ ಭೂರಿ ಭೋಜನದ ವ್ಯವಸ್ಥೆ ಮಾಡಲಾಗಿದೆ. 2 ಲಕ್ಷ ಭಕ್ತರಿಗೆ ಆಗುವಷ್ಟು ಪಾಯಸ, 250 ಕ್ವಿಂಟಲ್ ಬೂಂದಿ, ಚಿತ್ರಾನ್ನ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ಸಿದ್ಧಪಡಿಸಲಾಗುತ್ತಿದೆ.

ನಿನ್ನೆ ಮಠದ ಆವರಣದಿಂದ ಹೊರಟ ರಥ ಯಾತ್ರೆ ಹಾಸನ, ಚಿಕ್ಕಮಗಳೂರು, ಕೊಡಗು, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಸಂಚರಿಸಿ ಶ್ರೀಗಳ ಜನ್ಮ ದಿನವಾದ ಏ.1ರಂದು ಗುರುವಂದನೆಯೊಂದಿಗೆ ಮುಕ್ತಾಯಗೊಳ್ಳಲಿದೆ.

ಮಠದ ಆವರಣದಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳು ರಥವನ್ನು ವೀಕ್ಷಿಸಿ ತೆರಳಿದರೆ, ಶ್ರೀ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ರಥಯಾತ್ರೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಧನಿಯ ಕುಮಾರ್, ಮಾಜಿ ಸಂಸದ ಜಿ.ಎಸ್.ಬಸವರಾಜು, ಎಸ್.ನಾಗಣ್ಣ, ಕೋರಿ ಮಂಜುನಾಥ್, ಚನ್ನಬಸಪ್ಪ, ಎನ್.ಆರ್.ಜಗದೀಶ್, ಮಂಚಲದೊರೆ ಆರಾಧ್ಯ, ಹೆಬ್ಬಾಕ ರವಿ, ಚಂದ್ರಮಳಿ, ಹೆಚ್.ಎನ್.ದೀಪಕ್, ಎಸ್‍ಐಟಿ ಪ್ರಾಂಶಪಾಲ ಡಾ.ಶಿವಕುಮಾರಯ್ಯ, ಸಿದ್ದಗಂಗಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಟಿ.ಕೆ.ನಂಜುಂಡಪ್ಪ, ಹೆಚ್.ಮಲ್ಲಿಕಾರ್ಜುನ, ಶ್ರೀಧರ್, ವೆಂಕಟಾಚಲ, ವಿನಯಜೈನ್ ಮತ್ತಿತರರು ಹಾಜರಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top