fbpx
ಮನೋರಂಜನೆ

ರಾಜಕೀಯದಲ್ಲಿ ಒಟ್ಟಿಗೆ ಕೈಜೋಡಿಸಲು ಸಜ್ಜಾಗ್ತಿದ್ದಾರೆ ರಜಿನಿ ಮತ್ತು ಉಪೇಂದ್ರ?

ರಾಜಕೀಯದಲ್ಲಿ ಒಟ್ಟಿಗೆ ಕೈಜೋಡಿಸಲು ಸಜ್ಜಾಗ್ತಿದ್ದಾರೆ ರಜಿನಿ ಮತ್ತು ಉಪೇಂದ್ರ?

 

ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್ ಕಡೆಗೂ ರಾಜಕೀಯ ಪ್ರವೇಶವನ್ನು ಖಚಿತಪಡಿಸಿದ್ದಾರೆ. ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಸ್ವತಂತ್ರ ಪಕ್ಷವನ್ನೇ ಘೋಷಿಸಿ ತಿಂಗಳಾಗುತ್ತಾ ಬಂದಿದೆ. ಆದರೆ ಬೇರೆ ಬೇರೆ ದಿಕ್ಕಿನಲ್ಲಿ ನಡೆದಿರೋ ಈ ರಾಜಕೀಯ ವಿದ್ಯಮಾನ ಒಂದೇ ಬಿಂದುವಿನಲ್ಲಿ ಸಂಧಿಸಲಿದೆಯಾ? ಸದ್ಯ ಹರಿದಾಡುತ್ತಿರೋ ಸೂಕ್ಷ್ಮ ಸುದ್ದಿಗಳ ಪ್ರಕಾರ ಅದು ನಿಜವಾಗೋ ಲಕ್ಷಣಗಳೇ ಹೇರಳವಾಗಿವೆ!

 

 

ಸದ್ಯಕ್ಕೆ ರಜನೀಕಾಂತ್ ತಮಿಳುನಾಡು ರಾಜ್ಯವನ್ನು ಮಾತ್ರವೇ ಕೇಂದ್ರವಾಗಿಟ್ಟುಕೊಂಡು ರಾಜಕೀಯವಾದ ಹೆಜ್ಜೆಯಿಡುತ್ತಿದ್ದಾರೆ. ಆದರೆ ಓರ್ವ ನಟನಾಗಿ ವಿಶ್ವಾಧ್ಯಂತ ಪ್ರಸಿದ್ಧಿ ಪಡೆದಿರೋ, ಭರಪೂರ ಗೆಲುವು ಕಂಡಿರೋ ಕನಸುಗಳು ಒಂದು ರಾಜ್ಯದ ಬೇಲಿಯೊಳಗೇ ಸುತ್ತಾಡಲು ಸಾಧ್ಯವಿಲ್ಲ. ಒಂದು ಮೂಲದ ಪ್ರಕಾರ ರಜನಿ ತಮ್ಮ ಹೊಸಾ ಪಕ್ಷ ಬೇರುಗಳನ್ನು ಗಟ್ಟಿ ಮಾಡಿಕೊಳ್ಳುವ ಸಲುವಾಗಷ್ಟೇ ರಾಜ್ಯದ ಪರಿಮಿತಿಯೊಳಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅವರ ಪ್ರಧಾನ ಟಾರ್ಗೆಟ್ ಇರೋದು ರಾಷ್ಟ್ರ ರಾಜಕಾರಣ!

 

 

ಇನ್ನೇನು ಎರಡು ವರ್ಷದ ಹೊತ್ತಿಗೆ ಲೋಕಸಭಾ ಚುನಾವಣೆ ನಡೆಯುತ್ತದಲ್ಲಾ? ಆ ಹೊತ್ತಿಗೆಲ್ಲಾ ತಮಿಳುನಾಡಲ್ಲಿ ಯಾರೂ ಅಲ್ಲಾಡಿಸದಂತೆ ಪಕ್ಷವನ್ನು ನೆಲೆಗಾಣಿಸಿ ತದ ನಂತರದಲ್ಲಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬೇರೆ ರಾಜ್ಯಗಳಿಗೂ ಪಕ್ಷವನ್ನು ವಿಸ್ತರಿಸಿ ಸ್ವತಂತ್ರವಾಗಿ ಅಧಿಕಾರ ಹಿಡಿಯುವ, ಒಂದಷ್ಟು ಹೊಸಾ ಬದಲಾವಣೆಗೆ ನಾಂದಿ ಹಾಡುವ ಮಹಾ ಕನಸಿನೊಂದಿಗೇ ತಲೈವಾ ರಾಜಕೀಯಕ್ಕೆ ಅಡಿಯಿರಿಸಿದ್ದಾರೆ. ಅದಿಲ್ಲದೇ ಹೋಗಿದ್ದರೆ ಇಷ್ಟೊಂದು ಸಮಯ ತೆಗೆದುಕೊಂಡು ರಾಜಕೀಯಕ್ಕೆ ಪಾದಾರ್ಪಣೆ ಮಾಡೋ ಅವಶ್ಯಕತೆಯೇ ಇಲ್ಲ ಎಂಬ ಸತ್ಯಕ್ಕೆ ಹತ್ತಿರವಾದ ತರ್ಕವೊಂದು ರಾಜಕೀಯ ಮತ್ತು ಸಿನಿಮಾ ರಂಗದಲ್ಲಿ ಹರಿದಾಡುತ್ತಿದೆ.

 

 

ಈ ರಾಷ್ಟ್ರ ರಾಜಕಾರಣ ಸಾಧ್ಯವಾಗಬೇಕೆಂದರೆ ಕರ್ನಾಟಕವೂ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ರಜನಿ ಪಕ್ಷ ಅಸ್ತಿತ್ವ ಸಾಧಿಸಬೇಕು. ಆ ನಿಟ್ಟಿನಲ್ಲಿ ಅವರಿಗೆ ಕರ್ನಾಟಕದಲ್ಲಿ ಆಪ್ಯಾಯವಾಗಿ ಕಂಡಿರೋದು ರಿಯಲ್ ಸ್ಟಾರ್ ಉಪೇಂದ್ರ. ಆದ್ದರಿಂದಲೇ ರಜನಿ ಉಪೇಂದ್ರ ಪ್ರಜಾಕೀಯ ಪಕ್ಷ ಘೋಷಣೆ ಮಾಡಿದ ದಿನವೇ ಉಪೇಂದ್ರರಿಗೆ ಕರೆ ಮಾಡಿ ಶುಭ ಕೋರಿದ್ದಾರಂತೆ. ಇದೀಗ ರಜನೀಕಾಂತ್ ರಾಜಕೀಯ ಪ್ರವೇಶ ಖಚಿತಪಡಿಸಿದಾಗ ಉಪೇಂದ್ರ ರಜನಿಗೆ ಕರೆ ಮಾಡಿ ಶುಭ ಕೋರಿದ ನಂತರ ಅವರಿಬ್ಬರ ನಡುವೆ ಸಂಭಾವ್ಯ ರಾಜಕೀಯ ನಡೆಗಳ ಬಗ್ಗೆ ಮಾತುಕತೆ ನಡೆದಿದೆಯಂತೆ!
ಉಪೇಂದ್ರ ಯಾವತ್ತಾದರೂ ಯಾವುದಾದರೊಂದು ಪಕ್ಷದ ಜೊತೆ ತಮ್ಮ ಪಕ್ಷವನ್ನು ವಿಲೀನ ಮಾಡುತ್ತಾರೆಂಬ ಮಾತು ಆರಂಭದಲ್ಲಿಯೇ ಕೇಳಿ ಬಂದಿತ್ತು. ಆದರೀಗ ಈ ಹೊಸಾ ವಿಚಾರ ನೋಡಿದರೆ ಅವರ ಪಕ್ಷ ರಜನೀ ಪಕ್ಷದೊಂದಿಗೆ ವಿಲೀನವಾಗಲಿದೆಯಾ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. ಇದೆಲ್ಲ ನಿಜವಾದರೆ ಇಷ್ಟರಲ್ಲಿಯೇ ಮಹಾ ರಾಜಕೀಯ ಧೃವೀಕರಣವೊಂದಕ್ಕೆ ಮುಹೂರ್ತ ಕೂಡಿ ಬರಲಿದೆ.

 

 

ರಜನಿ ಅಲ್ಲಿ ಸೂಪರ್ ಸ್ಟಾರ್ ಆದರೆ ಉಪೇಂದ್ರ ಕನ್ನಡದ ರಿಯಲ್ ಸ್ಟಾರ್. ಹಿಂದೆ ಕಾರಂಜಿ ಶ್ರೀಧರ್ ಇಬ್ಬರನ್ನೂ ಸೇರಿಸಿ `ಅಪೂರ್ವ ಸಂಗಮ’ ಅನ್ನೋ ಸಿನಿಮಾವೊಂದನ್ನು ಮಾಡುವ ಪ್ಲಾನು ಮಾಡಿದ್ದರು. ಆದರದು ವರ್ಕ್‌ಔಟ್ ಆಗಿರಲಿಲ್ಲ. ನಂತರ ಸತ್ಯನಾರಾಯಣ ಮೇಯರ್ ಆಗಿದ್ದಾಗ ಬೆಂಗಳೂರಿನ ಜನರನ್ನು ಜಾಗೃತಗೊಳಿಸುವ ಕಾರ್ಯಕ್ರಮದಲ್ಲಿ ಒಂದು ಸೇರಿಸುವ ಪ್ರಯತ್ನ ಮಾಡಿದ್ದರು. ಅದೂ ಕೂಡಾ ಕೈಗೂಡಿರಲಿಲ್ಲ. ಇವರಿಬ್ಬರೂ ಕನ್ನಡಿಗರೇ ಆದ್ದರಿಂದ ಪರಸ್ಪರ ಕೂಡಿಕೊಂಡೇ ರಾಜಕೀಯ ಕ್ರಾಂತಿಯೊಂದಕ್ಕೆ ಕಾರಣವಾಗುತ್ತಾರಾ ಎಂಬ ಪ್ರಶ್ನೆಗೆ ಖಚಿತ ಉತ್ತರ ಸಿಗಲು ಹೆಚ್ಚು ದಿನವೇನೂ ಕಾಯಬೇಕಿಲ್ಲ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top