ಮನೋರಂಜನೆ

ಹ್ಯಾಟ್ರಿಕ್ ಹೀರೋ ಲಾಂಗ್ ರಿಲೇಷನ್‌ಶಿಪ್!

ಶಿವಣ್ಣನ ಅಭಿಮಾನಿಗಳ ಕುರಿತಾಗಿ ನೀವು ನಂಬಲೇಬೇಕಿರುವ ವಿಚಾರವೊಂದಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಯಾವುದೇ ಒಂದು ಚಿತ್ರ ಬಿಡುಗಡೆಯ ಹೊತ್ತಿಗೆ ಪಡ್ಡೆ ಅಭಿಮಾನಿಗಳಲ್ಲಿ ಒಂದು ವಿಚಿತ್ರ ಕುತೂಹಲದ ಪ್ರಶ್ನೆ ಒಳಗೊಳಗೇ ಮೂಡಿರುತ್ತದೆ. `ಶಿವಣ್ಣ ಈ ಪಿಚ್ಚರಲ್ಲಿ ಯಾವ ಸ್ಟೈಲಲ್ಲಿ ಲಾಂಗು ಹಿಡಿತಾರೋ’ ಅಂತ. ಇನ್ನು ಸಿನಿಮಾ ರಿಲೀಜಾಗಿ ಬೆಳಗಿನ ಆಟ ಮುಗಿಯೋ ಹೊತ್ತಿಗೆ ಶಿವಣ್ಣ ಲಾಂಗ್ ಹಿಡ್ದವ್ರೆ ತಾನೆ ಅಂತ ಅದೆಷ್ಟೋ ಜನ ಹುಡುಗರು ಕನ್ಫರ್ಮ್ ಮಾಡಿಕೊಳ್ಳುತ್ತಿರುತ್ತಾರೆ. ಒಂದು ವೇಳೆ ಲಾಂಗ್ ಬಳಕೆ ಕಡಿಮೆಯಿದ್ದಲ್ಲಿ, ಆ ಸಿನಿಮಾದ ಬಗ್ಗೆ ಅಪ್ಸೆಟ್ ಆಗುವ ಅಭಿಮಾನಿಗಳಿಗೇನು ಕೊರತೆಯಿಲ್ಲ. ವಯಸ್ಸು ಐವತ್ತೈದರ ಹತ್ತಿರವಾದರೂ ಅಭಿಮಾನಿಗಳ ಪಾಲಿಗೆ ಶಿವಣ್ಣ `ಲಾಂಗ್’ ಲೈಫ್ ಹೀರೋನೇ!

 

 

ಈ ಹಿಂದಿನ ಎರಡು ಸಿನಿಮಾಗಳಲ್ಲಿ ತಮ್ಮ ಅಭಿಮಾನಿಗಳಿಗೆ ಏನು ಕೊರತೆ ಇತ್ತು ಅನ್ನೋದು ಶಿವಣ್ಣನಿಗಂತೂ ಖುಲ್ಲಂಖುಲ್ಲಾ ಗೊತ್ತಿತ್ತು. ಹೀಗಾಗಿ ಅಭಿಮಾನಿಗಳಿಗೆ ಏನೇನು ಬೇಕೋ, ಅವೆಲ್ಲವೂ ಇರುವ ಸಂಪೂರ್ಣ ಸರಕಿನ ಒಂದು ಮಾಸ್ ಸಬ್ಜೆಕ್ಟಿನ ಸಿನಿಮಾ ಮಾಡಬೇಕೆನ್ನೋದು ಶಿವಣ್ಣನ ಅಭಿಲಾಷೆಯೂ ಆಗಿತ್ತು. ಸದ್ಯಕ್ಕೆ ಕ್ಲಾಸ್ ಸಿನಿಮಾಗಳನ್ನು ಪಕ್ಕಕ್ಕಿಟ್ಟುಕೊಂಡೇ, ಬ್ಯಾಕ್ ಟು ಬ್ಯಾಕ್ ಡಿಫರೆಂಟು ಕಥೆಗಳೊಂದಿಗೆ ಬಂದು, ತಮ್ಮ ಅಭಿಮಾನಿ ಸಮೂಹದ ಮನಸ್ಸಂತೋಷಗೊಳಿಸಬೇಕು ಅಂತ ಶಿವಣ್ಣ ತೀರ್ಮಾನಿಸಿರೋದು ಮೇಲ್ನೋಟಕ್ಕೇ ಗೊತ್ತಾಗುತ್ತಿದೆ. ಈಗ ತೆರೆಗೆ ಬರಬೇಕಿರುವ ಟಗರು ಸಿನಿಮಾದ ಹೆಸರು ಕೇಳಿದರೇನೆ ಗೊತ್ತಾಗುತ್ತಿದೆ. ಇನ್ನು ಸಾಲು ಸಾಲು ಶಿವಣ್ಣ ಶಕೆ ಆರಂಭವಾಗುತ್ತದೆ!

 

 

ಹೆತ್ತ ತಾಯಿಗೆ ಮಕ್ಕಳು ರಚ್ಚೆ ಹಿಡಿದಿರೋದು ಯಾಕೆ ಅಂತಾ ಅವು ಅಳೋಕೆ ಮುಂಚೇನೇ ಗೊತ್ತಾಗಿಬಿಡುತ್ತದಲ್ಲಾ? ಹಾಗೆ ಈ ಟೈಮಲ್ಲಿ ಅಭಿಮಾನಿಗಳಿಗೆ ಏನು ಬೇಕು ಅನ್ನೋದು ಶಿವಣ್ಣ ಸ್ಪಷ್ಟವಾಗಿ ಅರಿತುಬಿಡುತ್ತಾರೆ. ಶಿಳ್ಳೆ, ಕೇಕೆ, ಅಬ್ಬರ, ಕೂಗಾಟದ ನಡುವೆ, ಕುಣಿದಾಡುತ್ತಾ ಸಿನಿಮಾ ನೋಡುವ ಪ್ರೇಕ್ಷಕರ ಪಾಲಿಗೆ ಭರ್ಜರಿಯಾಗಿರೋ ಸಿನಿಮಾವೊಂದು ನೀಡಬೇಕು…. ಹೀಗಂತಾ ಶಿವಣ್ಣ ಒಳಗೊಳಗೇ ಯೋಚಿಸುತ್ತಿದ್ದ ಹೊತ್ತಿನಲ್ಲೇ ಸಣ್ಣದೊಂದು ಲೈನು ಅವರ ಕಿವಿಗೆ ಬಿದ್ದಿತ್ತು! ಅದು ದುನಿಯಾ ಸೂರಿ ಶಿವಣ್ಣನ ಕಿವಿಗೆ ಹಾಕಿದ ಸ್ಪೆಷಲ್ ಸಬ್ಜೆಕ್ಟು!

 

 

ದೊಡ್ಮನೆ ಹುಡುಗ ಸಿನಿಮಾದ ಸಂದರ್ಭದಲ್ಲಿ ಸೂರಿಗೆ ಟಗರು ಸಿನಿಮಾದ ಲೈನು ಹೊಳೆದಿತ್ತಂತೆ. ಅದೇ ಹೊತ್ತಿಗೆ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಸ್ವತಂತ್ರವಾಗಿ ಸಿನಿಮಾ ನಿರ್ಮಾಣಕ್ಕಿಳಿಯಲಿದ್ದು, ಶಿವಣ್ಣ ಆ ಚಿತ್ರದ ಹೀರೋ ಅನ್ನೋದು ನಿಕ್ಕಿಯಾಗಿತ್ತು. ಈ ಹಿಂದೆ ಇದೇ ಸೂರಿ ಶಿವಣ್ಣನಿಗಾಗಿ ಕಡ್ಡಿಪುಡಿ ಎಂಬ ನವಿರು ಕಥೆಯ, ಆಕ್ಷನ್ ಸಿನಿಮಾವನ್ನು ಕೊಟ್ಟಿದ್ದರಲ್ಲ? ಸೂರಿಯೊಟ್ಟಿಗೆ ಸಿನಿಮಾ ಮಾಡುವುದೆಂದರೆ ಯಾವುದೇ ಹೀರೋಗೂ ಕಿಕ್ ಜಾಸ್ತಿಯಿರುತ್ತದೆ. ನಮ್ಮೊಳಗೇ ಇದ್ದರೂ ಯಾರೆಂದರೆ ಯಾರೂ ಮುಟ್ಟಿರದ ಎಳೆಯೊಂದನ್ನು ಹಿಡಿದು, ಅದಕ್ಕೆ ಜೀವ ಕೊಟ್ಟು, ನೈಜವಾಗಿ ಕಟ್ಟಿಕೊಡೋದರಲ್ಲೇ ಸೂರಿಯ ಶಕ್ತಿ ಅಡಗಿದೆ. ಸೂರಿ ಕೂಡಾ ಕ್ಲಾಸು ಮತ್ತು ಮಾಸು ಎರಡೂ ವರ್ಗಕ್ಕೆ ಬೇಕಿರುವ ಸಿನಿಮಾವನ್ನು ಕಟ್ಟಿಕೊಡಬಲ್ಲ ಕನ್ನಡದ ಅತ್ಯಂತ ಕ್ರಿಯಾಶೀಲ ಮತ್ತು ಭಿನ್ನ ನಿರ್ದೇಶಕ. ಸೂರಿಗೆ `ಇಂತಿ ನಿನ್ನ ಪ್ರೀತಿಯ’, `ಕೆಂಡಸಂಪಿಗೆ’ಯಂತಾ ಕತೆ ಆಧಾರಿತ ಸಿನಿಮಾ ಮಾಡುವುದೂ ಗೊತ್ತು, ಲವ್ವು, ಲಾಂಗು, ಮಚ್ಚು, ರೌಡಿಸಂ, ಮಾಫಿಯಾಗಳನ್ನೆಲ್ಲಾ ಬೆರೆಸಿ ದುನಿಯಾ, ಜಂಗ್ಲಿ, ಜಾಕಿಯಂಥಾ ಪಕ್ಕಾ ಕಮರ್ಷಿಯಲ್ ಮಿಕ್ಸ್‌ಚರ್ ತಯಾರು ಮಾಡುವ ಛಾತಿಯೂ ಉಂಟು!

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top