ಮನೋರಂಜನೆ

ನಿವೇದಿತಾ ಮೇಡಮ್ಮು ಬ್ಯುಸಿಯಾಗವ್ರಂತೆ!

ಈ ಬಿಗ್‌ಬಾಸ್ ಎಂಬ ಶೋ ಎಂತೆಂಥಾ ಭ್ರಮೆಗಳನ್ನು, ಬರಗೆಟ್ಟ ಮನಸ್ಥಿತಿಗಳನ್ನು ಹುಟ್ಟಿಸುತ್ತವೆಂಬುದಕ್ಕೆ ಈ ಐದೂ ಸೀಜನ್ನುಗಳಲ್ಲಿ ದಂಡಿ ದಂಡಿ ಉದಾಹರಣೆಗಳು ಸಿಗುತ್ತವೆ. ಇಂಥಾ ಭ್ರಮೆಯ ಫ್ಯಾಕ್ಟರಿಯಲ್ಲಿ ಉತ್ಪಾದನೆಯಾಗಿರೋ ಹೊಸಾ ಎಲಿಮೆಂಟು ಮೈಸೂರಿನ ನಿವೇದಿತಾ ಗೌಡ್ಡಾ ಉರ್ಫ್ ಬೊಂಬೆ!

 


ಅಷ್ಟಕ್ಕೂ ಮೈಸೂರಿನಲ್ಲಿ ಕಾಲೇಜು ವ್ಯಾಸಂಗ ಮಾಡುತ್ತಿದ್ದ ಈ ಹುಡುಗಿ ಬಿಗ್‌ಬಾಸ್ ಮನೆ ಸೇರಿಕೊಂಡಾಗ ಎಲ್ಲರಿಗೂ ಅಯೋಮಯವಾಗಿತ್ತು. ಬ್ರಿಟನ್ ಸಾಮ್ರಾಜ್ಯದಿಂದ ಸೀದಾ ಬಂದು ಬಿಗ್‌ಬಾಸ್ ಮನೆಗಿಳಿದವಳಂತೆ ವಿಚಿತ್ರ ಕನ್ನಡದಲ್ಲಿ ಮಾತಾಡಲಾರಂಭಿಸಿದ್ದ ಈ ಹುಡುಗಿಯನ್ನು ಕಂಡು ನಕ್ಕವರೇ ಹೆಚ್ಚು. ಆದರೆ ಆ ನಂತರ ತುಂಬಿದ ಮನೆಯಲ್ಲಿ ಪುಟ್ಟ ಮಗುವೊಂದರಂತೆ ಮನೆ ತುಂಬಾ ಓಡಾಡಿಕೊಂಡಿದ್ದ ನಿವೇದಿತಾ ಮೆಲ್ಲಗೆ ಬಿಗ್‌ಬಾಸ್ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದೊಂದು ಅಚ್ಚರಿ. ನಿಖರವಾಗಿ ಹೇಳ ಬೇಕೆಂದರೆ, ಆಕೆಯನ್ನು ಕಡೇ ಕ್ಷಣದವರೆಗೂ ಬಿಗ್‌ಬಾಸ್ ಮನೆಯೊಳಗೆ ಇರುವಂತೆ ಮಾಡಿದ್ದು ನಿವೇದಿತಾಳ ಸ್ಪರ್ಧಾ ಗುಣ ಖಂಡಿತಾ ಅಲ್ಲ. ಅದಕ್ಕೆ ಕಾರಣ ಕನ್ನಡಿಗರ ಸೆಂಟಿಮೆಂಟು!

 


ಹೀಗೆ ಕಡೇ ದಿನದವರೆಗೂ ಬಿಗ್‌ಬಾಸ್ ಮನೆಯೊಳಗಿದ್ದ ನಿವೇದಿತಾ ಗೌಡಳನ್ನು ಆಕೆಯ ಹೆತ್ತವರೇ ಮತ್ತೆ ಭ್ರಮೆಯ ಮಡುವಿಗೆ ತಳ್ಳುತ್ತಿದ್ದಾರಾ? ಸದ್ಯ ಅವರ ವರ್ತನೆ ಕಂಡರೆ ಯಾರಿಗಾದರೂ ಹಾಗನ್ನಿಸದಿರಲು ಸಾಧ್ಯವಿಲ್ಲ. ಯಾಕೆಂದರೆ ಈ ಹುಡುಗಿಯನ್ನು ಮಾತಾಡಿಸಲು ತೀರಾ ಮಾಧ್ಯಮದವರೇ ಫೋನು ಮಾಡಿದಾಗಲೂ ಆಕೆಯ ಅಮ್ಮ “ಮೇಡಮ್ ಬ್ಯುಸಿಯಾಗಿದಾರೆ, ಅವ್ರು ಹೊರಗೆ ಹೋಗಿದಾರೆ” ಅಂತೆಲ್ಲ ಬಿಲ್ಡಪ್ಪು ಕೊಡಲಾರಂಭಿಸಿದ್ದಾರಂತೆ.

ಇದು ನಿಜಕ್ಕೂ ಒಳ್ಳೆ ಬೆಳವಣಿಗೆಯಲ್ಲ. ಹೆತ್ತವರ ಇಂಥಾ ಒಣ ಅಹಮ್ಮು ಆ ಹುಡುಗಿಯ ಬದುಕಿನೊಂದಿಗೇ ಆಟವಾಡಿದರೂ ಅಚ್ಚರಿಯೇನಲ್ಲ. ಅಷ್ಟಕ್ಕೂ ಅತ್ಯಂತ ಅನಿರೀಕ್ಷಿತವಾಗಿ ಒಂದಷ್ಟು ಪ್ರಸಿದ್ಧಿ ಪಡೆದ ನಿವೇದಿತಾಗೆ ಹೆತ್ತವರೇ ತಿಳಿ ಹೇಳುತ್ತಾ ಭ್ರಮೆ ಆವರಿಸಿಕೊಳ್ಳದಂತೆ ಕಾಪಾಡಬೇಕು. ಆದರೆ ಹೆತ್ತವರೇ ತಮ್ಮ ಮಗಳು ಮಹಾನ್ ಸಾಧನೆ ಮಾಡಿದ್ದಾಳೆ, ಆಕೆ ಸೆಲೆಬ್ರಿಟಿ ಎಂಬ ಭ್ರಮೆ ಹೊಂದಿರೋದು ನಿಜಕ್ಕೂ ಆಘಾತಕಾರಿ ಬೆಳವಣಿಗೆ!

 

 

ನಿವೇದಿತಾ ಚಿಕ್ಕವಳಾಗಿದ್ದರೂ ಆಲೋಚಿಸಿ ಕೈಗೊಳ್ಳುವ ನಿರ್ಧಾರಗಳು ಮತ್ತು ಚಾಲಾಕಿತನ ಅನ್ನಿಸಿದರೂ ಆಕೆಯ ಮುಗ್ಧತೆ ಎಲ್ಲರ ಗಮನ ಸೆಳೆದಿದೆ. ಆದರೆ ಬಿಗ್‌ಬಾಸ್ ಮನೆಯೊಳಗೆ ಸ್ಪರ್ಧೆ ಮಾತ್ರವೇ ಪ್ರಮುಖ ಮಾನದಂಡವಾಗಿದ್ದರೆ ಈಕೆ ಒಂದು ವಾರವೂ ಅಲ್ಲಿರಲಾಗುತ್ತಿರಲಿಲ್ಲ. ಇಲ್ಲಿ ಈ ಬಾರಿ ಸ್ಪರ್ಧಿಗಳಾಗಿದ್ದವರಿಗೇ ನಿವೇದಿತಾ ತಮ್ಮೆಲ್ಲರನ್ನು ಬೀಟ್ ಮಾಡಿ ಕಡೇ ವರೆಗೂ ಉಳಿದುಕೊಂಡಿದ್ದರ ಬಗ್ಗೆ ಅಸಹನೆ ಇದೆ. ಈ ನಿಟ್ಟಿನಲ್ಲಿ ಎಲಿಮಿನೇಟ್ ಆಗಿ ಹೊರ ಬಂದಿದ್ದ ಅನುಪಮಾ ಗೌಡ ಹೇಳಿದ್ದೊಂದು ಮಾತು ಮುಖ್ಯವಾಗುತ್ತದೆ. ಸುದೀಪ್ ಎದುರಲ್ಲಿಯೇ ಅನುಪಮಾ ನಿವೇದಿತಾಳ ಹೆಸರು ಬಂದಾಗ `ಆಕೆ ಸ್ಪರ್ಧಿಯಲ್ಲ’ ಅಂದಿದ್ದರು. ಅದರರ್ಥ ಬೇರೆಯದ್ದೇ ಮನರಂಜನಾ ಮಾನದಂಡ ಮಾತ್ರವೇ ನಿವೇದಿತಾಳನ್ನು ಕಾಯ್ದಿತ್ತು.

ಈಗ ಸಿಕ್ಕಿರೋ ಪಬ್ಲಿಸಿಟಿಯನ್ನು ತಮ್ಮ ಮಗಳ ಭವಿಷ್ಯ ಮುಕ್ಕಾಗದಂತೆ ಬಳಸಿಕೊಳ್ಳ ಬೇಕಿರುವುದು ಆಕೆಯ ಹೆತ್ತವರ ಜವಾಬ್ದಾರಿ. ಅದು ಬಿಟ್ಟು ತಮ್ಮ ಮಗಳು ದೊಡ್ಡ ಸೆಲೆಬ್ರಿಟಿ ಎಂಬಂಥಾ ಸುಳ್ಳನ್ನು ತಲೆಗೇರಿಸಿಕೊಂಡರೆ ಬೇರೆಯದ್ದೇ ಪರಿಣಾಮ ಬೀರುವ ಎಲ್ಲ ಸಾಧ್ಯತೆಗಳೂ ಇವೆ. ನಿವೇದಿತಾಳ ಹೆತ್ತವರು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕಿದೆ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top