ಮನೋರಂಜನೆ

ವಿವಾದ ಹುಟ್ಟುಹಾಕಿರುವ ಕಣ್ಣೋಟದ ಹಾಡಿನ ಕನ್ನಡ ಅರ್ಥವೇನು ಗೊತ್ತಾ?

ವಿವಾದ ಹುಟ್ಟುಹಾಕಿರುವ ಕಣ್ಣೋಟದ ಹಾಡಿನ ಕನ್ನಡ ಅರ್ಥವೇನು ಗೊತ್ತಾ?

 

 

ಇದು ಆನ್‌ಲೈನ್ ಯುಗದ ಅಸಲೀ ಚಮತ್ಕಾರ. ಬಹುಶಃ ಈಗಷ್ಟೇ ಒಂದು ಚಿತ್ರದ ಮೂಲಕ ಮಲೆಯಾಳಂ ಚಿತ್ರರಂಗಕ್ಕೆ ಅಡಿಯಿರಿಸಿರುವ ಪ್ರಿಯಾ ವಾರಿಯರ್ ಎಂಬ ಹುಡುಗಿ ಇಪ್ಪತೈದು ಚಿತ್ರಗಳಲ್ಲಿ ನಟಿಸಿದರೂ ಸಿಗಲಾರದ ಪ್ರಚಾರವನ್ನು ಇಪ್ಪತ್ತು ಸೆಕೆಂಡುಗದ್ದೊಂದು ವೀಡಿಯೋ ಮೂಲಕವೇ ಪಡೆದುಕೊಂಡಿದ್ದಾಳೆ. ಒಂದು ಹಗಲು ಮತ್ತು ರಾತ್ರಿ ಸರಿಯುವಷ್ಟರಲ್ಲೇ ಈ ಹುಡುಗಿ ಪಡೆದ ಪಬ್ಲಿಸಿಟಿ ಕಂಡು ಎಲ್ಲರೂ ದಂಗೆದ್ದು ಹೋಗಿರೋದಂತೂ ಸತ್ಯ! ಒಂದೆರಡು ದಿನಗಳಿಂದ ಪ್ರತಿಯೊಬ್ಬರ ಫೇಸ್‌ಬುಕ್, ವಾಟ್ಸಾಪ್‌ಗಳಲ್ಲೂ ಪ್ರಿಯಾ ವಾರಿಯರ್‌ಳದ್ದೇ ಸದ್ದು.

ಈಕೆಯ ಅಬ್ಬರ ಹೆಚ್ಚಾಗುತ್ತಿದ್ದಂತೆ ವಿವಾದ ಕೂಡ ಜನ್ಮ ತಳೆದಿದೆ. ಈ ಹಾಡಿನಲ್ಲಿರುವ ಸಾಲುಗಳು ಮುಸ್ಲಿಂ ಧರ್ಮದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು, ಕೆಲವು ಮೂಲಭೂತವಾದಿಗಳು ವಿರೋಧ ವ್ಯಕ್ತಪಡಿಸಿದ್ದು, ನಟಿ, ನಿರ್ದೇಶಕರ ವಿರುದ್ಧ ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

 

ಮಾಪಿಳ ಹಾಡುಗಳ ಕವಿ ಪಿಎಂಎ ಜಬ್ಬಾರ್ ‘ಮಾಣಿಕ್ಯ ಮಲರಾಯ ಪೂವಿ’ ಕವನವನ್ನು ಬರೆದಿದ್ದಾರೆ. ಜಬ್ಬಾರ್ ಬರೆದಿರುವ ಸುಮಾರು 500ಕ್ಕೂ ಹೆಚ್ಚು ಮಾಪಿಳ ಹಾಡುಗಳಲ್ಲಿ ಮಾಣಿಕ್ಯ ಮಲರ್ ಅತ್ಯಂತ ಜನಪ್ರಿಯವಾದದ್ದು 1978ರಲ್ಲಿಯೇ ಬರೆದ ಈ ಕವನಕ್ಕೆ ರಫೀಕ್ ತಲಶೇರಿ ಎಂಬ ಇನ್ನೊಬ್ಬ ಮಾಪಿಳ ಕವಿ ಸಂಗೀತ ಸಂಯೋಜಿಸಿದ್ದಾರೆ. ಆ ಕಾಲದಲ್ಲಿ ರೇಡಿಯೋ ಮೂಲಕ ಜನಮನ ಗೆದ್ದಿದ್ದ ಈ ಹಾಡು ಈ ಸುಂದರಿಯ ಹುಬ್ಬಿನ ನೋಟದಿಂದಲೇ ವೈರಲ್ ಆಗಿದ್ದು ಸುಮಾರು ನಲವತ್ತು ವರ್ಷಗಳ ಹಿಂದೆ ಬರೆದ ಹಾಡು ಈಗಲೂ ಮೆಚ್ಚುಗೆಗೆ ಪಾತ್ರವಾಗಿದೆ.

ಪಿ.ಎಂ.ಎ ಜಬ್ಬಾರ್ ಕರುಪಡನ್ನ ಬರೆದಿರುವ ಈ ಕವನವನ್ನು ಕನ್ನಡದ ಯುವ ಕವಿ ಸುನೈಫ್ ಎಂಬುವವರು ಕನ್ನಡಕ್ಕೆ ಅನುವಾದ ಮಾಡಿದ್ದು ಆ ಹಾಡಿನ ಕನ್ನಡ ಭಾವಾನುವಾದ ಈ ಕೆಳಗಿನಂತಿದೆ.

ಹೂವಾದಳು ಮುತ್ತರಳಿ
ಮಹನೀಯಳು ಖದೀಜಾ ಬೀವಿ

ಪಾವನ ಭೂಮಿ ಮಕ್ಕದಲ್ಲಿ
ಬಾಳಿದಳು ರಾಣಿಯಂತೆ

ಅಂತ್ಯ ದೂತರನ್ನು ಕರೆದು
ವ್ಯಾಪಾರ ಒಪ್ಪಿಸುವ ಭರದಲ್ಲಿ
ಪ್ರೇಮಾಂಕುರವಾಯಿತು
ಮೊದಲ ನೋಟದಲ್ಲಿ

ಮಾರಾಟದ ವಹಿವಾಟು ಮುಗಿಸಿ
ಪ್ರಿಯ ಪ್ರವಾದಿ ಮರಳುವ ಹೊತ್ತು
ಕಾತರಳಾಗಿರುವಳು ಬೀವಿ
ಮದುವೆಯ ಹಂಬಲ ಹೊತ್ತು

ಕರೆದಳು ತನ್ನ ಗೆಳತಿಯನ್ನು
ಅರುಹಿದಳು ಮನದಿಚ್ಚೆಯನ್ನು
ಕಳಿಸಿದಳು ಅಬೂತಾಲಿಬರನ್ನು ಬಳಿಗೆ

ಮದುವೆಯ ಸಂಗತಿಯಿದು
ಪಾರವಿಲ್ಲದ ಸಂತೋಷವಿದು
ಅಬೂತಾಲಿಬರಿಗೆ ಒಪ್ಪಿತವಿದು

ಬೀವಿ ಖದೀಜಾ ಮದುಮಗಳು
ಮದುಮಗನ ಗತ್ತಿನಲ್ಲಿ ಅಂತ್ಯ ದೂತರು

ಅವನಿಚ್ಚೆಯಂತೆ ಸೂರ್ಯನುದಿಸಿದನು
ಮಾದರಿ ದಂಪತಿಗೆ ಮಂಗಳ ಕೋರಿದನು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top