ಸಿನಿಮಾ

ಪ್ರೀತಿಯ ಸುತ್ತ್ತಾ ದಳಪತಿಯ ದಂಡಯಾತ್ರೆ

ಪ್ರೀತಿಯ್ನನಾಧರಿಸಿದ ಕಥೆಗೆ ಬಹುಶಃ ಯಾವತ್ತಿಗೂ ಮುಪ್ಪಿಲ್ಲ. ಅದನ್ನು ಸಾವಿರ ಬಾರಿ ಹೇಳಿಯಾದ ಬಳಿಕವೂ ಅದೇನೋ ಹೊಸತನವೊಂದು ಉಳಿದಿರುತ್ತದೆ. ಅಂಥಾದ್ದೊಂದು ಹೊಳಹನ್ನು ಎತ್ತಿಕೊಂಡು ತಯಾರಾಗಿರುವ ಚಿತ್ರ ಪ್ರಶಾಂತ್ ರಾಜ್ ನಿರ್ದೇಶನದ ದಳಪತಿ.

 

ಈ ಚಿತ್ರದ ಮೊದಲಾರ್ಧವನ್ನು ನಾಯಕ ಮತ್ತು ನಾಯಕಿಯ ನಡುವಿನ ಪ್ರೇಮ ಸಲ್ಲಾಪಕ್ಕೇ ಸಮರ್ಪಣೆ ಮಾಡಲಾಗಿದೆ. ಇಲ್ಲಿ ನಾಯಕನಿಗೆ ಮುದ್ದು ಮುದ್ದಾಗಿರೋ ನಾಯಕಿಯ ಮೇಲೆ ವಿಪರೀತ ಲವ್ವಾಗುತ್ತೆ. ಮಾಮೂಲಿಯಂತೆ ಲೈಟಾಗೊಂದು ಸುಳ್ಳು ಹೇಳಿ ಪಟಾಯಿಸಿಕೊಳ್ಳುತ್ತಾನೆ. ಆದರೆ ಆ ನಂತರ ನಾಯಕನ ಸುಳ್ಳಿನ ಅರಿವಾಗುತ್ತೆ. ನಾಯಕಿಯ ಸಿಟ್ಟು, ನಾಯಕನ ಒಳ್ಳೆತನ ನೋಡಿ ಕರಗಿ ಜೊತೆಗಿರೋ ನಿರ್ಧಾರ… ಆದರೆ ಕಥೆ ಹೀಗೆ ಸಾಗುತ್ತಲೇ ಅನಿರೀಕ್ಷೆತವಾದೊಂದು ತಿರುವು ಎದುರಾಗುತ್ತದೆ. ಅದೇನು? ಅದು ಚಿತ್ರದ ಕಥೆಯನ್ನು ಯಾವ ದಿಕ್ಕಿನತ್ತ ಕೊಂಡೊಯ್ಯುತ್ತದೆ? ಈ ಪ್ರೀತಿಯಲ್ಲೂ ನಾಯಕನ ನಿಗೂಢ ಇದೆಯಾ ಎಂಬೆಲ್ಲ ಪ್ರಶ್ನೆಗಳಿಗೆ ಥೇಟರಿನಲ್ಲಿಯೇ ಉತ್ತರ ಹುಡುಕಿದರೆ ಉತ್ತಮ!

 

 

ಈ ಹಿಂದೆಯೇ ಅಖಂಡ ಮೂರು ವರ್ಷಗಳಿಂದ ಈ ಚಿತ್ರಕ್ಕಾಗಿ ತಯಾರಾಗಿದ್ದಾಗಿ ನೆನಪಿರಲಿ ಪ್ರೇಮ್ ಹೇಳಿಕೊಂಡಿದ್ದರು. ಅವರಿಲ್ಲಿ ಎರಡು ಶೇಡ್‌ಗಳಲ್ಲಿ ನಟಿಸಿ ಆ ಎರಡರಲ್ಲಿಯೂ ಗಮನ ಸೆಳೆಯುವಂತೆ ನಟಿಸಿದ್ದಾರೆ. ಅಷ್ಟರ ಮಟ್ಟಿಗೆ ಮೂರು ವರ್ಷಗಳ ಶ್ರಮ ಸಾರ್ಥಕವಾಗಿದೆ. ನಿರ್ದೇಶಕ ಪ್ರಶಾಂತ್ ರಾಜ್ ಅಲ್ಲಲ್ಲಿ ಎಚ್ಚರ ತಪ್ಪಿದಂತೆ ಕಂಡರೂ ಎತ್ತೆತ್ತಲೋ ಹೊಯ್ದಾಡುವ ಕಥೆಯನ್ನು ಕನ್‌ಪ್ಯೂಸ್ ಇಲ್ಲದಂತೆ ಕಟ್ಟಿ ಕೊಡುವಲ್ಲಿ ಯಶ ಕಂಡಿದ್ದಾರೆ. ನಾಯಕಿ ಕೃತಿ ಕರಬಂಧ ಪಾತ್ರ ಮತ್ತು ನಟನೆ ಮೆಚ್ಚುವಂತಿದೆ.

 

 

ಮೊದಲಾರ್ಧವೂ ಸೇರಿದಂತೆ ಇಡೀ ಚಿತ್ರದ ಅಲ್ಲಲ್ಲಿ ಕೆಲ ತೊಡಕುಗಳಿವೆ. ಅದನ್ನು ಸಂತೋಷ್ ರೈ ಪಾತಾಜೆ ಅವರ ಕ್ಯಾಮೆರಾ ಕುಸುರಿ ಮತ್ತು ಚರಣ್ ರಾಜ್ ಅವರ ಮಾಂತ್ರಿಕ ಸ್ಪರ್ಶದ ಸಂಗೀತ ಕೊಂಚ ಮರೆಸುತ್ತದೆ. ಇನ್ನುಳಿದಂತೆ ಹಾಸ್ಯಕ್ಕಾಗಿ ಚಿಕ್ಕಣ್ಣನನ್ನು ಬಳಸಿಕೊಳ್ಳಲಾಗಿದೆ. ಆದರೆ ಚಿಕ್ಕಣ್ಣ ಆ ಅವಕಾಶವನ್ನು ಬಳಸಿಕೊಂಡಿಲ್ಲ. ಅಷ್ಟಕ್ಕೂ ಈ ಪಾತ್ರದ ದರ್ದಾದರೂ ಏನೆಂದು ಪ್ರೇಕ್ಷಕರು ತಲೆ ಕೆರೆದುಕೊಳ್ಳುವಾಗಲೇ ಇನ್ನೊಂದಷ್ಟು ಸೀನುಗಳು ಸರಿದು ಹೋಗಿರುತ್ತವೆ.

ಅಂತೂ ಪ್ರೇಮ್ ಅವರ ಆಶಯದಂತೆಯೇ ಈ ಚಿತ್ರ ಅಭಿಮಾನಿಗಳನ್ನು ರಂಜಿಸಿದೆ. ಈ ದಳಪತಿಯದ್ದು ಪ್ರೀತಿಯನ್ನು ಕಾಯೋದಷ್ಟೇ ಕೆಲಸವಾ? ಕಥೆಯಲ್ಲಿ ಬೇರೇನು ಮಜವಿದೆ ಎಂಬುದನ್ನು ತಿಳಿಯಲು ಒಂದು ಸಲ ಚಿತ್ರ ನೋಡಲಡ್ಡಿ ಇಲ್ಲ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top