ಮನೋರಂಜನೆ

ಸಿನಿಮಾ ಅವಕಾಶಗಳ ನಿರೀಕ್ಷೆಯಲ್ಲಿ ಕನಸುಗಣ್ಣಿನ ಮಯೂರಿ ಲೈಫ್ ಸ್ಟೋರಿ!

ಇತ್ತೀಚೆಗೆ ಬಿಡುಗಡೆಯಾಗಿದ್ದ `ಕಾಟೇರಿ’ ಎಂಬ ಕಿರುಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಹರಿದಾಡಿತ್ತು. ಅದರಲ್ಲಿನ ಗೃಹಿಣಿಯ ಪಾತ್ರವೂ ಕೂಡಾ ಗಮನ ಸೆಳೆದಿತ್ತು. ಆ ಪಾತ್ರವನ್ನು ಒಳಗಿಳಿಸಿಕೊಂಡಂತೆ ಅಭಿನಯಿಸಿದ್ದ ಹುಡುಗಿ ಮಯೂರಿ. ಬಹುಶಃ ವರ್ಷಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬಂದಿದ್ದ `ಆಕ್ಷನ್ ಸ್ಟಾರ್’ ಎಂಬ ರಿಯಾಲಿಟಿ ಶೋನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಈ ಹುಡುಗಿಯನ್ನು ಪ್ರೇಕ್ಷಕರು ಮರೆತಿರಲು ಸಾಧ್ಯವಿಲ್ಲ. ಕರ್ನಾಟಕದ ಬಹುಮುಖ್ಯ ನಿರೂಪಕಿಯಾಗಿ ಹೆಸರು ಮಾಡುತ್ತಲೇ ಮಾಡೆಲಿಂಗ್ ಲೋಕದಲ್ಲಿಯೂ ಮಿಂಚಿರುವ ಮಯೂರಿ, ಇದೀಗ ಕಾಟೇರಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುವ ದಿನಗಳು ಹತ್ತಿರದಲ್ಲಿದ್ದಂತಿವೆ!

 

 

ದೊಡ್ಡ ದೊಡ್ಡ ಕಂಪೆನಿಗಳ ಇವೆಂಟ್‌ಗಳು, ಏರ್‌ಟೆಲ್, ವಿವೋದಂಥಾ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಪ್ರಸಿದ್ಧಿ ಪಡೆದಿರುವವರು ಮಯೂರಿ. ಈ ಕ್ಷೇತ್ರಕ್ಕೆ ಬಂದು ಅತ್ಯಂತ ಕಡಿಮೆ ಅವಧಿಯಲ್ಲಿಯೇ ದೊಡ್ಡ ಮಟ್ಟದ ಯಶಸ್ಸಿನ ರೂವಾರಿಯಾಗಿರುವ, ಬಿಡುವೆಂಬುದು ಮರೀಚಿಕೆ ಅನ್ನಿಸುವಷ್ಟು ಬ್ಯುಸಿಯಾಗಿರುವ ಮಯೂರಿ ಅದ್ಯಾವುದೋ ಬಂಗಲೆಯಿಂದ ಬಂದಿಳಿದಿದ್ದರೆ ಬಹುಶಃ ಈ ಗೆಲುವು ಮುಖ್ಯವಾಗುತ್ತಿರಲಿಲ್ಲ. ಆದರೆ ಆಕೆ ಸಣ್ಣ ಸಣ್ಣ ಕನಸುಗಳನ್ನೆ ಶ್ರಮದ ಮೂಲಕವೇ ಸಾಕಾರಗೊಳಿಸಿಕೊಳ್ಳುತ್ತಾ, ಹಾರ್ಡ್‌ವರ್ಕ್ ಮೂಲಕವೇ ಬದುಕನ್ನು ಶೃಂಗರಿಸಿಕೊಂಡ ಕನಸುಗಣ್ಣಿನ ಹುಡುಗಿಯಾಗಿ ಗಮನ ಸೆಳೆಯುತ್ತಾರೆ. ಅವರ ಈ ಹಾದಿ ಜೀವನದ ಬಗ್ಗೆ ರಂಗು ರಂಗಾದ ಕನಸು ಕಟ್ಟಿಕೊಂಡ ಎಲ್ಲ ಹೆಣ್ಣು ಮಕ್ಕಳ ಪಾಲಿಗೂ ಸ್ಫೂರ್ತಿ ತುಂಬುವಂತಿದೆ.

 

 

ಕೆಜಿಎಫ್‌ನವರಾದ ಮಯೂರಿ ಅಲ್ಲಿಯೇ ಬಿಸಿಎಂಇ ಮುಗಿಸಿಕೊಂಡು ಆನಿಮೇಷನ್‌ನಲ್ಲಿ ಬಿಎಸ್‌ಸಿ ಪದವಿಗಾಗಿ ಬಂದಿದ್ದು ಬೆಂಗಳೂರಿಗೆ. ಕೌಟುಂಬಿಕವಾಗಿ ಹೇಳಿಕೊಳ್ಳುವಂಥಾ ಯಾವ ಹಿನ್ನೆಲೆಯೂ ಇಲ್ಲದ ಇವರು ಮಾಮೂಲಿ ಹುಡುಗಿಯಂತೆಯೇ ಸಣ್ಣ ಪಿಜಿ ರೂಮೊಂದರಲ್ಲಿ ಬದುಕುತ್ತಾ, ಓದಿನ ನಡುವೆಯೇ ಸ್ವಾವಲಂಬನೆಯ ತುಡಿತದಿಂದ ಆಂಕರಿಂಗ್ ಜಗತ್ತಿಗೆ ಅಡಿಯಿರಿಸಿದ್ದರು. ಆರಂಭದಲ್ಲಿ ಖಾಸಗಿ ಕಂಪೆನಿಯೊಂದರ ಪ್ರಮೋಷನ್ ಕಾರ್ಯಕ್ರಮಕ್ಕೆ ಆಂಕರಿಂಗ್ ಮಾಡಿದ್ದ ಮಯೂರಿ ಪ್ರತೀ ವಾರ ಶನಿವಾರ ಮತ್ತು ಭಾನುವಾರದಂದು ಆ ಕೆಲಸವನ್ನು ಓದಿನ ನಡುವೆಯೂ ಮಾಡಲಾರಂಭಿಸಿದ್ದರು. ಆಗ ಅದಕ್ಕೆ ಸಿಗುತ್ತಿದ್ದದ್ದು ಎಂಟು ನೂರು ರೂಪಾಯಿ ಮಾತ್ರ. ಅಲ್ಲಿಂದಲೇ ಓದಿನ ಜೊತೆ ಜೊತೆಗೇ ಮಾಡೆಲಿಂಗ್ ಕ್ಷೇತ್ರಕ್ಕೂ ಅಡಿಯಿರಿಸಿದ ಮಯೂರಿ ತೂಕವನ್ನೆಲ್ಲ ಇಳಿಸಿಕೊಂಡು ಸಜ್ಜಾಗಿದ್ದರು.

 

 

ಹಾಗೆ ಮಾಡೆಲಿಂಗ್ ಕ್ಷೇತ್ರದಿಂದ ನೇರವಾಗಿ ಮಿಸ್ ಕರ್ನಾಟಕ ಸ್ಪರ್ಧೆಯ ಕಣಕ್ಕಿಳಿದ ಖ್ಯಾತಿ ಮಯೂರಿ ಅವರದ್ದು. ಹೀಗೆ ಓದಿನ ನಡುವೆಯೇ ವೃತ್ತಿ ಬದುಕಿನ ಹಾದಿಯನ್ನು ಗಟ್ಟಿಗೊಳಿಸಿಕೊಳ್ಳುತ್ತಾ ಸಾಗಿದ ಮಯೂರಿ ಬಿಎಸ್‌ಸಿ ನಾಲಕ್ಕನೇ ಸೆಮಿಸ್ಟರ್ ಆಗುವ ಹೊತ್ತಿಗೆಲ್ಲಾ ವೃತ್ತಿಯಲ್ಲಿಯೂ ಸ್ವಾವಲಂಬನೆ ಸಾಧಿಸಿದ್ದರು. ಲೀಲಾಜಾಲವಾದ ಸ್ಪಷ್ಟ ಮಾತುಗಾರಿಕೆ, ಚುರುಕುತನದಿಂದ ಗಮನ ಸೆಳೆದು ಬೇಡಿಕೆ ಹೆಚ್ಚಿಸಿಕೊಂಡಿದ್ದರು. ಒಂದು ಶೋಗೆ ಎಂಟು ನೂರು ರೂಪಾಯಿಯಿಂದ ವೃತ್ತಿ ಜೀವನ ಆರಂಭಿಸಿದ್ದ ಮಯೂರಿ ನಂತರ ಐದು ಸಾವಿರಕ್ಕೇರಿ ಇದೀಗ ಒಂದು ಕಾರ್ಯಕ್ರಮಕ್ಕೆ ಇಪ್ಪತೈದು ಸಾವಿರ ಗಳಿಸುವ ಹಂತ ತಲುಪಿಕೊಂಡಿದ್ದಾರೆ.

ಇದರ ನಡುವೆಯೇ ಒಲಿದು ಬಂದಿದ್ದ ಸ್ಟಾರ್ ಸುವರ್ಣ ವಾಹಿನಿಯ ಆಕ್ಷನ್ ಸ್ಟಾರ್ ಶೋ ಮೂಲಕ ಕರ್ನಾಟಕದ ತುಂಬಾ ಚಿರಪರಿಚಿತವಾದ ಮಯೂರಿ ಆ ನಂತರ ಜೀ ಕನ್ನಡ ವಾಹಿನಿಯ ಒಗ್ಗರಣೆ ಡಬ್ಬಿ ಎಂಬ ಅಡುಗೆ ಕಾರ್ಯಕ್ರಮವನ್ನೂ ಒಂದಷ್ಟು ಕಾಲ ನಡೆಸಿಕೊಟ್ಟಿದ್ದರು. ತಾನು ಆಂಕರ್ ಆಗಿ ಒಂದಷ್ಟು ಸಂಪಾದನೆ ಮಾಡಿದರೂ ಪಿಜಿಯ ಕಿಷ್ಕಿಂಧೆಯಂಥಾ ರೂಮಿನಲ್ಲಿ ಕಷ್ಟಪಟ್ಟು ಬದುಕುತ್ತಲೇ ಮೊದಲಿಗೆ ದ್ವಿಚಕ್ರ ವಾಹನದ ಕನಸು ಕೈಗೂಡಿಸಿಕೊಂಡ ಮಯೂರಿ ಹಂತ ಹಂತವಾಗಿ ಕಾರು, ಸ್ವಂತದ ಸೂರನ್ನೆಲ್ಲ ಮಾಡಿಕೊಂಡಿರೋದು ಸಾಧನೆಯ ಹಸಿವಿರುವ ಎಲ್ಲರಿಗೂ ಸ್ಫೂರ್ತಿಯಂಥಾ ವಿಚಾರ.

 

 

ಇದೀಗ ಮಯೂರಿ ಕರ್ನಾಟಕದ ಟಾಪ್ ಎಂಸಿಯಾಗಿ ಗುರುತಿಸಿಕೊಂಡಿದ್ದಾರೆ. ದೊಡ್ಡ ಮಟ್ಟದ ಕಾಂಟ್ಯಾಂಕ್ಟುಗಳನ್ನು ಹೊಂದಿರುವ, ಅದೆಂಥಾದ್ದೇ ಕಾರ್ಯಕ್ರಮವಾದರೂ ನಿಭಾಯಿಸುವ ಛಾತಿ ಹೊಂದಿರುವ ಮಯೂರಿ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟವಾದ ನಟಿಯಾಗಿ ನೆಲೆ ನಿಲ್ಲುವ ಕನಸು ಹೊಂದಿದ್ದಾರೆ. ನಿರೂಪಕಿ ವೃತ್ತಿಯೊಂದಿಗೆ ಸಿನಿಮಾಗಳಲ್ಲಿ ಉತ್ತಮ ಅವಕಾಶ ಪಡೆದು ನಟನಾವೃತ್ತಿಯಲ್ಲಿ ಹೆಚ್ಚು ಗುರುತಿಸಿಕೊಳ್ಳಬೇಕು ಅನ್ನೋದು ಇವರ ಹೆಬ್ಬಯಕೆ. ಈಗಾಗಲೇ ಸ್ವಚ್ಚ ಭಾರತ ಅಭಿಯಾನದಂಥಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾ ಸಾಮಾಜಿಕ ಕಾಳಜಿ ಹೊಂದಿರುವ ಮಯೂರಿ ಪಾಲಿಗೆ ಸಿನಿಮಾ ಕೂಡಾ ಬದಲಾವಣೆಯ ಅಸ್ತ್ರ. ತಮ್ಮ ಪಾತ್ರ ಒಂದಷ್ಟು ಬದಲಾವಣೆಗೆ, ಸಕಾರಾತ್ಮಕ ಸ್ಫೂರ್ತಿಗೆ ಕಾರಣವಾಗಬೇಕೆಂಬ ಹಂಬಲ ಹೊಂದಿರೋ ಮಯೂರಿ ಕಾಟೇರಿ ಚಿತ್ರದ ಮೂಲಕ ನಟನೆಯಲ್ಲಿಯೂ ಬ್ಯುಸಿಯಾಗೋ ಲಕ್ಷಣಗಳಿದ್ದಾವೆ!

ಮಾರ್ವಾಡಿ ಹುಡುಗಿಯ ಸ್ಪಷ್ಟ ಕನ್ನಡ!
ಮಯೂರಿ ಮೂಲತಃ ಮಾರ್ವಾಡಿ ಹುಡುಗಿ. ತೀರಾ ಹಿಂದೆಯೇ ಇವರ ಕುಟುಂಬ ಬಂದು ನೆಲೆಸಿರೋದು ಕೆ.ಜಿ.ಎಫ್.ನಲ್ಲಿ. ಸಾಮಾನ್ಯಕ್ಕೆ ಮಾರ್ವಾಡಿ ಹೆಣ್ಣುಮಕ್ಕಳ ಕನ್ನಡ ವಿಚಿತ್ರವಾಗಿರುತ್ತದೆ. ಹುಟ್ಟಿಬೆಳೆದ ನಾಡಿನ ಭಾಷೆಯನ್ನು ಕಲಿಯಬೇಕೆನ್ನುವ ಸೆಂಟಿಮೆಂಟೇ ಅವಕ್ಕಿರುವುದಿಲ್ಲ. ಆದರೆ ಮಯೂರಿ ಬೇರೆ ಥರ ಮನಸ್ಥಿತಿಯ ಹೆಣ್ಣುಮಗಳು. ಸಕಲವನ್ನೂ ಕೊಟ್ಟಿರುವ ಕನ್ನಡ ನೆಲವನ್ನು ಗೌರವಿಸುತ್ತಲೇ ಸ್ಪಷ್ಟವಾದ ಕನ್ನಡವನ್ನೂ ಕಲಿತವರು. ಬಹುಶಃ ಭವಿಷ್ಯದಲ್ಲಿ ಮಯೂರಿ ಸಿನಿಮಾ ನಟಿಯಾಗಿ ಹೆಚ್ಚು ಹೆಸರು ಮಾಡಿದರೆ ಕಂಠದಾನ ಕಲಾವಿದೆಯರಿಂದ ಡಬ್ಬಿಂಗ್ ಮಾಡಿಸುವ ಅಗತ್ಯವೂ ಬರೋದಿಲ್ಲ. ಯಾಕೆಂದರೆ ಮಯೂರಿಯ ಕನ್ನಡ ಅಷ್ಟು ಶುದ್ಧ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top