ಸಮಾಚಾರ

ಜೆಡಿಎಸ್ ಬಿಜೆಪಿಯನ್ನು ನಾಯಿಗೆ ಹೋಲಿಸಿದ ವಿವಾದಕ್ಕೆ ತೆರೆ ಎಳೆದ ಮುಖ್ಯಮಂತ್ರಿ ಚಂದ್ರು.

ಈ ಕಲಾವಿದರು ರಾಜಕೀಯ ಪ್ರವೇಶ ಮಾಡೋದರಿಂದ ಅದ್ಯಾವ ಕ್ರಾಂತಿಯಾಗುತ್ತೋ ಗೊತ್ತಿಲ್ಲ. ಆದರೆ ಖುದ್ದು ಅಂಥವರ ಅಭಿಮಾನಿಗಳೇ ಬೇಸರಗೊಳ್ಳುವ ಕೆಲಸ ಮಾತ್ರ ಆಗೇ ಆಗುತ್ತದೆ. ಇದೀಗ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುವ ಭರಾಟೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ನಾಯಿಗೆ ಹೋಲಿಸುವ ಮೂಲಕ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಅವರೀಗ ತಮ್ಮ ಮಾತಿಗೆ ಕ್ಷಮೆಯನ್ನೂ ಕೋರಿದ್ದಾರೆ.

 

 

ಮುಖ್ಯಮಂತ್ರಿ ಚಂದ್ರು ಅವರು ಮೈಸೂರಿನ ಸಮಾರಂಭವೊಂದರಲ್ಲಿ ಮಾತಾಡುವಾಗ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ನಾಯಿಗಳಿದ್ದಂತೆ, ಕಾಂಗ್ರೆಸ್‌ಗೇ ಓಟು ಹಾಕಿ ಎಂಬರ್ಥದಲ್ಲಿ ಮಾತಾಡಿದ್ದರು. ಇದರ ವಿರುದ್ಧ ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷರಾದ ಆರ್ ಪ್ರಕಾಶ್ ಪತ್ರಿಕಾ ಗೋಷ್ಠಿ ನಡೆಸಿ ಹೋರಾಟಕ್ಕೆ ಮುಂದಾಗಿದ್ದರು. ಇನ್ನು ಶಾಂತಿನಗರ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಡಿ.ಸಿ. ಪ್ರಕಾಶ್ ಮುಖ್ಯಮಂತ್ರಿ ಚಂದ್ರು ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗೆ ಮುಂದಾಗಿದ್ದರು. ಇದರಿಂದ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರೋದನ್ನು ಗಮನಿಸಿದ ಚಂದ್ರು ಅವರು ಲಿಖಿತ ರೂಪದಲ್ಲಿ ಕ್ಷೆಮೆ ಕೇಳಿದ್ದಾರೆ.

 

 

`ನಾನೊಬ್ಬ ಕಲಾವಿದ. ನೂರಾರು ಚಲನಚಿತ್ರ ಮತ್ತು ಧಾರಾವಾಹಿಗಳಲ್ಲಿ ರಂಜಕವಾಗಿ ಮಾತಾಡುವುದೇ ನನ್ನ ಕಸುಬು. ಮನರಂಜನೆಯನ್ನೇ ಪ್ರಧಾನವಾಗಿಟ್ಟುಕೊಂಡು ಮಾತಾಡಿದಾಗ ಯಾರ ಮನ ನೋಯಿಸುವ ಪ್ರಮೇಯವೇ ಇಲ್ಲ. ಮೈಸೂರಿನ ಸಭೆಯಲ್ಲಿ ಎಲ್ಲರೂ ನನ್ನ ಮಾತುಗಳನ್ನು ಕೇಳಿ ನಕ್ಕರೇ ಹೊರತು ಅದನ್ನು ಗಂಭೀರ ಆರೋಪವೆಂದು ಯಾರೂ ಭಾವಿಸಲಿಲ್ಲ. ಆದರೆ ಅದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ. ನಾಲ್ಕು ದಿನದ ಈ ಬಾಳಿನಲ್ಲಿ ನಕ್ಕು ನಲಿಯುತ್ತಿರಬೇಕೆಂಬುದೇ ನನ್ನ ಆಶಯ..’ ಇದು ಮುಖ್ಯಮಂತ್ರಿ ಚಂದ್ರು ಅವರ ಲಿಖಿತ ಕ್ಷಮಾಪಣಾ ಪತ್ರದ ಸಾರಾಂಶ.

ಈ ಮೂಲಕ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಕಡೆಯಿಂದ ಬರ ಬಹುದಾಗಿದ್ದ ಭಾರೀ ವಿರೋಧ ಮತ್ತು ವಿನಾ ಕಾರಣ ರಂಪಾಟವಾಗೋದನ್ನು ಚಂದ್ರು ತಡೆದಿದ್ದಾರೆ. ಈ ಕ್ಷಮಾಪಣಾ ಪತ್ರದೊಂದಿಗೆ ವಿವಾದಕ್ಕೂ ತೆರೆ ಬಿದ್ದಂತಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top