ಸಮಾಚಾರ

ವಿವಾದಿತ ಶಾಂತಿನಗರ ಕ್ಷೇತ್ರದಿಂದ ಹ್ಯಾರಿಸ್ ಬದಲಾಗಿ ಸಿದ್ದರಾಮಯ್ಯನವರೇ ಸ್ಪರ್ಧೆ?

ವಿಧಾನ ಸಭಾ ಚುನಾವಣೆಗೆ ಇನ್ನು ಕೆಲವೇ ಕೆಲವು ದಿನಗಳು ಮಾತ್ರ ಉಳಿದುಕೊಂಡಿದ್ದು ಸದ್ಯ ಇಡೀ ಕರ್ನಾಟಕದ ತುಂಬೆಲ್ಲಾ ಚುನಾವಣಾ ಬಿಸಿಗಾಳಿ ಜೋರಾಗಿಯೇ ಬೀಸತೊಡಗಿದೆ.. ಈಗಾಗಲೇ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕಸರತ್ತಿನಲ್ಲಿ ತೊಡಗಿಕೊಂಡಿದ್ದು ಆಗಲೇ ಒಂದೆರಡು ಸುತ್ತಿನಲ್ಲಿ ಕೆಲವು ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿದೆ. ಅದರಂತೆ ಕಾಂಗ್ರೆಸ್ ಪಕ್ಷವು ಕೂಡ 224 ಕ್ಷೇತ್ರಗಳಲ್ಲಿ 218 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದ್ದು ಉಳಿದ ಆರು ಕ್ಷೇತ್ರಗಳಿಗೆ ಟಿಕೆಟ್ ಇನ್ನಷ್ಟೇ ಘೋಷಿಸಬೇಕಿದೆ. ಉಳಿದುಕೊಂಡಿರುವ ಆರು ಕ್ಷೇತ್ರಗಳ ಪೈಕಿ ಎಲ್ಲರ ಗಮನ ಕೇಂದ್ರೀಕೃತವಾಗಿರುವುದು ಬೆಂಗಳೂರು ನಗರದ ಶಾಂತಿನಗರ ವಿಧಾನ ಸಭಾ ಕ್ಷೇತ್ರ.

 

 

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಕ್ಷೇತ್ರದ ಶಾಸಕನಾಗಿರುವ ಎನ್.ಎ ಹ್ಯಾರಿಸ್ ಅವರಿಗೆ ಟಿಕೆಟ್ ಸಿಗಬೇಕಾಗಿತ್ತು ಆದರೆ ವಿದ್ವತ್ ಎಂಬಾತನ ಮೇಲೆ ತಮ್ಮ ಮಗ ಮೊಹಮ್ಮದ್ ನಲಪಾಡ್ ನಡೆಸಿದ ಹಲ್ಲೆ ಪ್ರಕರಣದಿಂದಾಗಿ ಪಕ್ಷದ ವರ್ಚಿಸ್ಸಿಗೆ ಧಕ್ಕೆಯುಂಟಾದ ಹಿನ್ನೆಲೆಯಲ್ಲಿ ಹ್ಯಾರಿಸ್ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಹಿಂದೇಟು ಹಾಕುತ್ತಿದೆ.. ಏನೇ ಆದರೂ ಸರಿ ಟಿಕೆಟ್ ಪಡೆದುಕೊಳ್ಳಬೇಕು ಎಂದು ಹ್ಯಾರಿಸ್ ಕೂಡ ದಿನಕ್ಕೊಂದು ಹರಸಾಹಸ ಪಡುತ್ತಿದ್ದಾರೆ. ಆದರೆ ಇದೀಗ ರಾಜಕೀಯ ವಲಯದ ಒಂದು ವರ್ಗದ ಮೂಲಗಳ ಪ್ರಕಾರ ಈ ಕ್ಷೇತ್ರದಲ್ಲಿ ಹ್ಯಾರಿಸ್ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಸ್ಪರ್ಧಿಸಲಿದ್ದಾರಂತೆ.. ಇದು ಗಾಳಿಸುದ್ದಿಯಾದರು ಇದರೊಳಗೆ ಅಡಗಿರುವ ಮಾರ್ಮಿಕ ಅಂಶಗಳನ್ನು ಕಡೆಗಣಿಸುವಂತಿಲ್ಲ.

ಮೊದಲಿನಿಂದಲೂ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಇರಾದೆಯನ್ನು ಇಟ್ಟುಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಬಿಡುಗಡೆಯಾಗಿರುವ ಕಾಂಗ್ರೆಸ್ ಟಿಕೆಟ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇವಲ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮಾತ್ರ ಕಾಣಿಸ್ಕೊಂಡಿದ್ದು ಅಲ್ಲದೇ ಕಾಂಗ್ರೆಸ್ ಪಾಲಿಗೆ ಅತ್ಯಂತ ಸುಭದ್ರ ಕ್ಷೇತ್ರವೆನಿಸಿಕೊಂಡಿರುವ ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರಕ್ಕೆ ಯಾವುದೇ ಅಭ್ಯರ್ಥಿಯ ಹೆಸರನ್ನು ಇನ್ನೂ ಅಂತಿಮಗೊಳಿಸದಿರುವುದು ಇಂತಹ ಪ್ರಶ್ನೆಗಳ ಹುಟ್ಟಿಗೆ ಕಾರಣವಾಗಿ ಪರಿಣಮಿಸಿವೆ,.

 

 

ರಾಜಕೀಯ ವಲಯದ ಒಂದು ವರ್ಗದ ಮೂಲಗಳ ಪ್ರಕಾರ ಸಿಎಂ ಸಿದ್ದರಾಮಯ್ಯ ಅವರು ಶಾಂತಿನಗರ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧಾರ ಮಾಡಿದ್ದಾರೆ ಎಂದು ಅನೇಕ ಲೆಕ್ಕಾಚಾರಗಳನ್ನು ಹಾಕುತ್ತಿದ್ದಾರೆ. ಲೆಕ್ಕಾಚಾರದ ಅಂಶಗಳು ಅದೇನೇ ಇದ್ದರೂ ಈ ಎಲ್ಲಾ ಊಹಾ ಪೋಹಗಳಿಗೆ ಸ್ವಲ್ಪ ದಿನಗಳಲ್ಲೇ ನಿಖರ ಉತ್ತರ ಸಿಗಲಿದೆ. ರಾಜಕೀಯ ವಲಯದಿಂದ ತೂರಿಬರುತ್ತಿರುವ ಲೆಕ್ಕಾಚಾರದ ಸಾಧ್ಯತೆಗಳು ಈ ಕೆಳಗಿನಂತಿವೆ.

 

1. ಶಾಂತಿನಗರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಕಾಂಗ್ರೆಸ್ ಪಾಲಿಗೆ ಇದು ಅತ್ಯಂತ ಸುಭದ್ರ ಕ್ಷೇತ್ರ. ಆದರೆ, ಹ್ಯಾರೀಸ್ ಅವರನ್ನು ಹೊರತುಪಡಿಸಿದರೆ ಟಿಕೆಟ್ ಪಡೆದುಕೊಳ್ಳಲು ಕಾಂಗ್ರೆಸ್ ಪಕ್ಷದಿಂದ ಅಂತಹ ಪ್ರಬಲ ಅಭ್ಯರ್ಥಿಗಳು ಮತ್ಯಾರು ಇಲ್ಲ..

2. ಈ ಕ್ಷೇತ್ರದಲ್ಲಿ ಹ್ಯಾರಿಸ್ ಅವರ ವಯಕ್ತಿಕ ವರ್ಚಸ್ಸು ಕೂಡ ಪರಿಣಾಮಕಾರಿಯಾಗಿದ್ದು ಹ್ಯಾರೀಸ್ ಎದುರು ಗೆಲುವು ಸಾಧಿಸಬಲ್ಲ ಪ್ರಬಲ ಅಭ್ಯರ್ಥಿಗಳು ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳಲ್ಲೂ ಇಲ್ಲ.

3.ಒಂದು ವೇಳೆ ಹ್ಯಾರಿಸ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡದೆ ಬೇರೆಯರಿಗೆ ನೀಡಿದರೆ ಅವರ ವಿರುದ್ಧ ಹ್ಯಾರಿಸ್ ಬಂಡಾಯವೇಳುವ ಸಾಧ್ಯತೆ ಇದೆ. ಆದರೆ ಒಂದುವೇಳೆ ಸಿಎಂ ಸಿದ್ದು ಅವರೇ ಸ್ಪರ್ಧಿಸುತ್ತೇನೆ ಎಂದು ಬಂದರೆ ತಮ್ಮ ಕ್ಷೇತ್ರವನ್ನು ಹ್ಯಾರಿಸ್ ಬಿಟ್ಟುಕೊಡಬಹುದು.

4. ಒಂದುವೇಳೆ ಸಿಎಂ ಸಿದ್ದು ಶಾಂತಿನಗರದಿಂದ ಸ್ಪರ್ಧಿಸಿ ಅವರಿಗೆ ಹ್ಯಾರಿಸ್ ಬೆಂಬಲ ನೀಡಿದರೆ ಇಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ.

5.ಒಂದುವೇಳೆ ಸಿಎಂ ಸಿದ್ದರಾಮಯ್ಯ ಅವ್ರು ಚಾಮುಂಡೇಶ್ವರಿ ಮತ್ತು ಶಾಂತಿನಗರ ಎರಡೂ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿದರೆ, ಆ ಬಳಿಕ ಶಾಂತಿನಗರ ಕ್ಷೇತ್ರವನ್ನು ಹ್ಯಾರೀಸ್‌ ಅವರಿಗೇ ಪುನಃ ಬಿಟ್ಟುಕೊಡಬಹುದು.

6.ಒಂದು ವೇಳೆ ಚಾಮುಂಡೇಶ್ವರಿಯಲ್ಲಿ ಸೋಲುಕಂಡು, ಶಾಂತಿನಗರದಲ್ಲಿ ಮಾತ್ರ ಗೆದ್ದರೆ, ಆಗ ಶಾಂತಿನಗರ ಕ್ಷೇತ್ರವನ್ನು ಸಿದ್ದರಾಮಯ್ಯ ಅವರೇ ಇಟ್ಟುಕೊಂಡು ಹ್ಯಾರೀಸ್‌ಗೆ ಪಕ್ಷದಲ್ಲಿ ಬೇರೆ ಯಾವುದಾದರೂ ದೊಡ್ಡ ಸ್ಥಾನಮಾನ ನೀಡಬಹುದು.

7. ಹಾಗೇನಾದರೂ ಶಾಂತಿನಗರ ಕ್ಷೇತ್ರವನ್ನು ಸಿಎಂ ಸಿದ್ದು ಅವರೇ ಇಟ್ಟುಕೊಂಡರೆ ಐದು ವರ್ಷಗಳ ಅವಧಿ ಮುಕ್ತಾಯವಾದ ನಂತರ ಮುಂದಿನ ಚುನಾವಣೆಯಲ್ಲಿ ಶಾಂತಿನಗರ ಕ್ಷೇತ್ರವನ್ನು ಹ್ಯಾರೀಸ್‌ಗೆ ಪುನಃ ಬಿಟ್ಟುಕೊಡಬಹುದು. ಅಲ್ಲಿಯತನಕ ಹ್ಯಾರೀಸ್ ಅವರ ಸುಪರ್ದಿಗೇ ಶಾಂತಿನಗರ ಕ್ಷೇತ್ರವನ್ನು ಒಪ್ಪಿಸಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top