ವಿಶೇಷ

ನಿಜವಾದ ಚಾಲೆಂಜಿಂಗ್ ಸ್ಟಾರ್ ಮೀನಾ ತೂಗುದೀಪ್: ಗಟ್ಟಿಗಿತ್ತಿಯನ್ನೂ ಕಣ್ಣೀರಾಗಿಸಿತ್ತು ಬದುಕು! ದರ್ಶನ್ ತಾಯಿಯ ಹೋರಾಟದ ಬದುಕು ಭಾಗ-1

ಆಕೆ ಆತ್ಮಬಲದ ಹೆಣ್ಣುಮಗಳು. ಹೌದು, ಆ ಜೀವ ತನ್ನ ಗಂಡನನ್ನ ಉಳಿಸಿಕೊಳ್ಳಲು ಪಟ್ಟ ಪಾಡಿದೆಯಲ್ಲ, ಅದನ್ನ ಬಹುಶಃ ಅಕ್ಷರಗಳ ಮೂಲಕ ಜೋಡಿಸಿ ಹೇಳೋದು ಕಷ್ಟವೇ…
ಮನುಷ್ಯ ಮನಸ್ಸು ಮಾಡಿದರೆ ಎಂತೆಂಥ ಕಷ್ಟಗಳನ್ನೇ ಮೆಟ್ಟಿ ನಿಲ್ಲಬಹುದು ಎನ್ನುವುದಕ್ಕೆ ಜೀವಂತ ಹಾಗೂ ಜ್ವಲಂತ ಉದಾಹರಣೆ-ಮೀನಾ ತೂಗುದೀಪ ಶ್ರೀನಿವಾಸ!
ಕೊಡವ ಹೆಣ್ಣುಮಕ್ಕಳ ರಕ್ತಗುಣವೇ ಹಾಗೇನೋ… ಮೀನಾ ಮೂಲತಃ ಆ ಕಡೆಯವರು. ಕೊಡಗಿನ ಹೃದಯಭಾಗ ಪೊನ್ನಂಪೇಟೆಯವರು. ತನ್ನದೇ ಜೀವಕ್ಕೆ ತನ್ನದೇ ಕಿಡ್ನಿ ಕಸಿ ಮಾಡಲು ಕಸಿವಿಸಿಯೇಕೆ? ಬದುಕಲು ಒಂದು ಸಾಕಲ್ಲವಾ?

 

 

ಹೌದು, ತನ್ನ ಗಂಡ ಕಣ್ಮುಂದೆ ಲವಲವಿಕೆಯಿಂದ ಇರುತ್ತಾರೆ ಎಂದಾದರೆ ಇರೋ ಎರಡು ಕಿಡ್ನಿಯಲ್ಲಿ ಒಂದೇನು? ಅವರಿಗೋಸ್ಕರ ಎರಡನ್ನೂ ಕೊಡ್ತೀನಿ ಎಂದಿದ್ದ ಎದೆಗಾರಿಕೆಯದು. ಭಗವಂತ ಕಷ್ಟಗಳನ್ನ ಕಂತುಕಂತಾಗಿ ಕೊಟ್ಟಿದ್ದರೆ ಅದು ಮೀನಾ ತೂಗುದೀಪ ಎಂಬ ಗಟ್ಟಿಗಿತ್ತಿಗೆ! ಒಂದು ಕಡೆ ತೂಗುದೀಪ ಶ್ರೀನಿವಾಸರ ಆರೋಗ್ಯ ಕೈ ಕೊಟ್ಟಿದೆ. ಇನ್ನೊಂದು ಕಡೆ ಸಿಂಗಲ್ ಕಿಡ್ನಿಯಲ್ಲೇ ಎಲ್ಲವನ್ನೂ ನಿಭಾಯಿಸಬೇಕು. ಮನೆಯಲ್ಲಿ ಎದೆಯೆತ್ತರಕ್ಕೆ ಬೆಳೆದುನಿಂತ ಮೂರು ಮಕ್ಕಳು-ದಿವ್ಯಾ, ದರ್ಶನ್, ದಿನಕರ್. ಕಲಾವಿದರ ಮಕ್ಕಳಿಗೇನು ಕಮ್ಮಿ? ಅಪ್ಪ ಮನೆತುಂಬಾ ಮಾಡಿರುತ್ತಾರೆ ಎಂದುಕೊಳ್ಳುವವರೇ ಇರುವ ಕಾಲಘಟ್ಟದಲ್ಲಿ ಗಂಡನ ದುಡಿಮೆಯಲ್ಲಿ ಹತ್ತು ಹತ್ತು ರುಪಾಯಿ ಸಾಸಿವೆ ಡಬ್ಬದಲ್ಲಿ ಸೇರಿಸಿಟ್ಟು, ಸೇರಿಸಿಟ್ಟು ಮೈಸೂರಿನಲ್ಲಿ ಮನೆ ಅಂತ ಮಾಡಿಟ್ಟುಕೊಂಡಿದ್ದನ್ನು ಬಿಟ್ಟರೆ ಅಲ್ಲಿ ತುತ್ತು ಊಟಕ್ಕೂ ಕಷ್ಟವಿತ್ತು. ಹಾಗಂತ ಮೀನಾ ಅದನ್ನ ಊರುತುಂಬಾ ಹೇಳಿಕೊಂಡು ಬದುಕಿದವರೇ ಅಲ್ಲ.

 

 

ಒಂದರ ಹಿಂದೊಂದರಂತೆ ಕಷ್ಟ, ಆಘಾತಗಳು ಬಂದೆರಗಿದಾಗ ಎಷ್ಟೋ ದಿನ ಮೀನಾ ಮೂವರು ಮಕ್ಕಳನ್ನ ಗಟ್ಟಿಯಾಗಿ ಹಿಡಿದು ನಾಲ್ಕು ಗೋಡೆಗಳ ಮಧ್ಯೆ ಉಸಿರು ಬಿಗಿ ಹಿಡಿದು ಅತ್ತಿದ್ದಿದೆ. ನಂದಾದೀಪದಂತಿದ್ದ ಆ ಮನೆಯಲ್ಲಿ ತೂಗುದೀಪ ಶ್ರೀನಿವಾಸ ಅವರ ಆತ್ಮಬೆಳಕು ಆರಿಹೋದಾಗ ಆ ತಾಯಿ ಹೃದಯ ಒಮ್ಮೆ ಕಂಪಿಸಿತ್ತು. ತನಗೆ ಮೂರು ಮಕ್ಕಳಲ್ಲ, ನಾಲ್ಕು ಎಂದು ಆರೈಕೆ ಮಾಡಿದ್ದ ಅದೇ ಕೈಗಳಿಗೆ ನಾಳೆಯಿಂದ ನಾಲ್ಕನೇ ತುತ್ತು ತಿನ್ನುವ ಜೀವವೇ ಇಲ್ಲ ಎಂದಾಗ ಹೇಗಾಗಬೇಡ?

 

ನಿಜ, ತೂಗುದೀಪ ಅವರು ದುಡಿಯುತ್ತಿದ್ದ ಟೈಮಲ್ಲಿ ಪರಿಸ್ಥಿತಿ ಹಾಗಿತ್ತು. ಲಕ್ಷದ ಲೆಕ್ಕದಲ್ಲೇ ಸಿನೆಮಾ ತಯಾರಾಗೋದು. ಕಲಾವಿದನಿಗೆ ಸಂಭಾವನೆಯ ಮಟ್ಟ ಸಾವಿರ ದಾಟಿದರೆ ಅದನ್ನ ಪಾಲಿಗೆ ಬಂದ ಪ್ರಸಾದ ಎಂದು ಕಣ್ಣಿಗೊತ್ತಿಕೊಳ್ಳಬೇಕಿತ್ತು. ಅಂಥದ್ದರಲ್ಲಿ ತೂಗುದೀಪ ಶ್ರೀನಿವಾಸ್ ಮನೆಗೆ ಎಂದೇ ಒಂದು ಭಾಗ ತೆಗೆದಿಡುತ್ತಿದ್ದರು. ತಿಂಗಳುಪೂರ್ತಿ ದುಡಿದು ತಂದು ಮೀನಾ ಮಡಿಲಿಗೆ ಹಾಕುತ್ತಿದ್ದರು. ಅದರಲ್ಲೇ ಪೈಸಾಪೈಸಾ ಜೋಡಿಸಿ ಎಂಟು ಸಾವಿರ ಮಾಡಿ ಮೈಸೂರಿನ ಸಿದ್ದಾರ್ಥ ಲೇಔಟ್‌ನಲ್ಲಿ ಒಂದು ಸೈಟ್ ತೆಗೆದುಕೊಂಡರು.

 

 

ಸೈಟ್ ಇದ್ದರೆ ಅಲ್ಲೇನು ಗುಡಿಸಲು ಕಟ್ಟಿಕೊಂಡು ಇರಲು ಸಾಧ್ಯವಾ? ಅದೂ ತೂಗುದೀಪ ಶ್ರೀನಿವಾಸ್ ಅವರ ಕುಟುಂಬ ಎಂಬ ಸೀಲ್ ಬೇರೆ ಬಿದ್ದು ವರ್ಷಗಳೇ ಕಳೆದುಹೋಗಿತ್ತು. ಕೊಂಡ ಆ ಜಾಗದಲ್ಲಿ ಮನೆ ಕಟ್ಟಿ ನಿಲ್ಲಿಸಿಯೇ ನಿಲ್ಲಿಸುತ್ತೇನೆ ಎಂದು ಹಠ ಕಟ್ಟಿದ ಮೀನಮ್ಮ ಮತ್ತು ತೂಗುದೀಪ ಶ್ರೀನಿವಾಸ್, ಬಾಗಲಕೋಟೆ ಸುತ್ತಮುತ್ತ ನಿರಂತರ ನಾಟಕ ಆಡಿ ಅದರಲ್ಲಿ ಬಂದ ಮೂರೂವರೆ ಲಕ್ಷದಲ್ಲಿ ಮನೆ ಕಟ್ಟಿ ನಿಲ್ಲಿಸಿದರು. ಪತಿಯನ್ನು ರಂಗವೇರಲು ಸಜ್ಜುಗೊಳಿಸಿ ಉಪವಾಸ ಕುಂತ ದಿನಗಳೆಷ್ಟೋ. ಆ ದುಡ್ಡಿನಲ್ಲಿ ಒಂದೇ ಒಂದು ರುಪಾಯಿ ಕೂಡ ಆಚೀಚೆ ಆಗದಂತೇ ಜತನ ಮಾಡಿದ್ದು, ಜೋಪಾನ ಮಾಡಿದ್ದು ಇದೇ ಮೀನಾ ತೂಗುದೀಪ ಶ್ರೀನಿವಾಸ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

  1. SatishRaj

    May 6, 2018 at 9:16 pm

    ಉತ್ತಮವಾದ ಲೇಖನ , ನಿಮ್ಮ ಅಂತರ್ಜಾಲ ಪುಟದಲ್ಲಿ ಮನಕ್ಕೆ ಹತ್ತಿರವಾಗುವ ಹಲವು ಲೇಖನಗಳು , ನನಗೆ ಈ ಕಾಮೆಂಟ್ ಬರೆಯುವಂತೆ ಮಾಡಿದೆ. ತುಂಬಾ ಚೆನ್ನಾಗಿ ಮೂಡಿ ಬರಿತ್ತಿದೆ, ಸ್ನೇಹಿತರೆ ಇನ್ನಷ್ಟು ಕನ್ನಡ ಸುದ್ದಿಗಳಿಗಾಗಿ ಬೇಟಿ ನೀಡಿ .

Leave a Reply

Your email address will not be published. Required fields are marked *

To Top