ಸಮಾಚಾರ

ಬನಶಂಕರಿ ಅಮ್ಮನ ಹುಂಡಿಯಲ್ಲಿ ಪತ್ತೆಯಾಯ್ತು ಆಪ್‌ ಪಕ್ಷದ ಅಭ್ಯರ್ಥಿ ಬೇಡಿಕೆಯ ಪತ್ರ !

ಚುನಾವಣೆಯಲ್ಲಿ ಗೆಲುವು ಸಾಧಿಸುವ ಸಲುವಾಗಿ ದೇವರ ಮೊರೆ ಹೋಗುವುದು ಇಂದು ನೆನ್ನೆಯ ಪದ್ದತಿಯಲ್ಲ ಅದಕ್ಕೆ ತನ್ನದೇ ಆದ ಪರಂಪರೆಯಿದೆ. ಚುನಾವಣಾ ಅಖಾಡದಲ್ಲಿರುವ ವಿವಿಧ ಸ್ಪರ್ಧಿಗಳು ತಮ್ಮ ನಂಬಿಕೆಯ ದೇವರ ಬಳಿ ತಮ್ಮ ಗೆಲುವಿಗಾಗಿ ಪ್ರಾರ್ಥಿಸಿ, ಸಾಕ್ಷಾತ್ ದೇವರಿಗೆ ಆಮಿಷವೊಡ್ಡಿ ಹರಕೆ ಕಟ್ಟಿಕೊಳ್ಳುವುದು ತುಂಬಾ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಇದೀಗ ಬೆಳಕಿಗೆ ಬಂದಿರುವ ಸುದ್ದಿ ಕೂಡ ಇಂಥಾದ್ದೇ ಆಗಿದ್ದರೂ ಎಲ್ಲದಕ್ಕಿಂತ ಕೊಂಚ ವಿಚಿತ್ರವಾಗಿ ಗೋಚರಿಸುತ್ತದೆ.

 

 

ಹೌದು ಬೆಂಗಳೂರಿನ ಬನಶಂಕರಿಯಲ್ಲಿರುವ ಶಕ್ತಿ ದೇವತೆ ಬನಶಂಕರಿ ಅಮ್ಮನ ದೇವಾಲಯದ ಹುಂಡಿಯನ್ನು ಸೋಮವಾರ ತೆಗೆದಿದ್ದು ಈ ವೇಳೆ ನಗದು, ಚಿನ್ನ, ಬೆಳ್ಳಿ ಜತೆಗೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಆಪ್‌ ಪಕ್ಷದ ಅಭ್ಯರ್ಥಿಯೊಬ್ಬರ ಪ್ರಚಾರ ಕರ ಪತ್ರ ಮತ್ತು ಪ್ರಾರ್ಥನಾ ಪತ್ರ ಕಾಣಿಸಿಕೊಂಡಿದೆ. ಈ ಕರಪತ್ರದಲ್ಲಿ ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸಬೇಕು ಎಂದು ಅಬ್ಯರ್ಥಿಯೊಬ್ಬರು ಸಾಕ್ಷಾತ್ ಬನಶಂಕರಿ ಅಮ್ಮನ ಬಳಿ ಪ್ರಾರ್ಥಿಸಿಕೊಳ್ಳಲಾಗಿದೆ.

ಬೆಂಗಳೂರು ಸೆಂಟ್ರಲ್ ನ ಶಾಂತಿನಗರ ವಿಧಾನ ಸಭಾ ಕ್ಷೇತ್ರದ ಆಪ್ ಪಕ್ಷದ ಅಭ್ಯರ್ಥಿ ರೇಣುಕಾ ವಿಶ್ವನಾಥ್‌ ಅವರು ಈ ಪ್ರಾರ್ಥನಾ ಪಾತ್ರವನ್ನು ಹುಂಡಿಗೆ ಹಾಕಿದ್ದಾರೆ ಎಂದು ಹೇಳಲಾಗಿದ್ದು ‘ಭ್ರಷ್ಟಾಚಾರ ಆಡಳಿತ ಸಾಕು, ಲಂಚ ತೆಗೆದುಕೊಳ್ಳುವುದಿಲ್ಲ, ಲಂಚ ಕೊಡುವುದಿಲ್ಲ ಎಂದು ಪ್ರಮಾಣ ಮಾಡುತ್ತೇನೆ. ಈ ಚುನಾವಣೆಯಲ್ಲಿ ನಮಗೆ ಒಂದು ಅವಕಾಶ ಕೊಡಿ ನಂತರ ವ್ಯತ್ಯಾಸ ನೋಡಿ’ ಎಂದು ಬೇಡಿಕೊಂಡಿದ್ದು ‘ಪೊರಕೆ ಗುರುತಿಗೆ ನಿಮ್ಮ ಮತ’ ಎಂದು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top