ಮನೋರಂಜನೆ

ಉಪೇಂದ್ರರ ಕೆಪಿಜೆಪಿಯಿಂದ ಗೆದ್ದಿರುವ ಶಂಕರ್ ಅಸಾಮಾನ್ಯ ಕೋಟಿ ಕುಳ

ಕರ್ನಾಟಕದ ರಾಜಕಾರಣದ ದಿಕ್ಕುದೆಸೆಗಳನ್ನೇ ಬದಲಿಸಿ ಬಿಡುವಂತೆ ಥೇಟು ತಮ್ಮ ಜಿಂಗ್-ಚಾಕ್ ಸಿನಿಮಾ ಸ್ಕ್ರಿಫ್ಟ್‌ನಂಥಾದ್ದೇ ಬತ್ತಳಿಕೆ ಹಿಡಿದು ಕುಣಿದಾಡಿದ್ದವರು ರಿಯಲ್ ಸ್ಟಾರ್ ಉಪೇಂದ್ರ. ಇಂಥಾ ಉಪ್ಪಿ ತಮ್ಮದೇ ಕೆಪಿಜೆಪಿ ಪಕ್ಷದಿಂದ ತಮ್ಮನ್ನೇ ಹೊರ ಹಾಕಿದ್ದಾರೆ ಎಂಬಂತೆ ಆರ್ಥನಾದ ಹೊರಡಿಸುವಲ್ಲಿಗೆ ಹಠಾತ್ ಕ್ರಾಂತಿಯ ಭ್ರಮೆಯೊಂದು ಬೂದಿಯಾಗಿತ್ತು. ಆದರೀಗ ಆ ಬೂದಿಯಿಂದಲೇ ಕರ್ನಾಟಕ ಪ್ರಜ್ಞಾವಂತ ಪಕ್ಷದ ಅಭ್ಯರ್ಥಿಯೊಬ್ಬರು ಗೆದ್ದು ಶಾಸಕರಾಗಿದ್ದಾರೆ. ಈ ಮೂಲಕ ಕಾಸಿಲ್ಲದೆ ಚುನಾವಣೆ ಗೆಲ್ಲುವ ಬೂಸಿ ಬಿಟ್ಟಿದ್ದ ಉಪೇಂದ್ರನ ಪಕ್ಷದಿಂದ ಕೋಟಿ ಕುಳವೊಂದು ವಿಧಾನಸೌಧಕ್ಕೆ ತೂರಿಕೊಂಡಿದೆ!

 

 

ಉಪೇಂದ್ರ ಕೆಜೆಪಿ ಪಕ್ಷ ಘೋಷಣೆ ಮಾಡಿದಾಗ ಕರ್ನಾಟಕದಲ್ಲೊಂದು ನಿರೀಕ್ಷೆ ಮೂಡಿಕೊಂಡಿದ್ದು ಸುಳ್ಳಲ್ಲ. ಕಾಸು ಚೆಲ್ಲಾಡದೆ ಚುನಾವಣೆ ಸಾಧ್ಯವಾಗಬೇಕೆಂಬುದು ಹಳೇಯ ಕನಸು. ಅದನ್ನು ಏಕಾಏಕಿ ಕೈಗೆತ್ತಿಕೊಂಡ ಉಪೇಂದ್ರ ಧೂಳು ಕೊಡವಿ ತಲೆ ಮೇಲೆ ಹೊತ್ತು ಸುತ್ತಾಡಿದರೆ ಮತ್ತೆ ಆಸೆ ಮೊಳೆಯದಿರುತ್ತಾ? ಅದೆಷ್ಟೋ ಜನ ಬೆಂಬಲ ಘೋಷಿಸಿದರು. ಅದೆಷ್ಟೋ ಮಂದಿ ಉಪೇಂದ್ರ ಪರ ವಹಿಸಿಕೊಂಡರು. ಸಿದ್ಧಸೂತ್ರದ ಚುನಾವಣಾ ರಾಜಕೀಯದ ಸೆಳೆಮಿಂಚೊಂದು ಹೊಳೆದಂತೆ ಒಂದಷ್ಟು ಮಂದಿ ಥ್ರಿಲ್ ಆಗಿದ್ದರು. ಉಪೇಂದ್ರ ಏನೋ ಮ್ಯಾಜಿಕ್ಕು ಮಾಡುತ್ತಾನೆಂಬ ನಿರೀಕ್ಷೆ ಹೊಂದಿದ್ದವರೂ ಇದ್ದರು. ಆದರೆ ಅಂಥಾ ಎಲ್ಲ ನಂಬಿಕೆಗಳು ಉಪೇಂದ್ರ ಕೆಜೆಪಿಯಿಂದ ನಿರ್ಗಮಿಸುವ ಮೂಲಕ ಮಣ್ಣುಪಾಲಾಗಿದ್ದವು.

 

 

ಆದರೆ ಉಪೇಂದ್ರ ಕೆಜೆಪಿ ತೊರೆದು ಎಲ್ಲವೂ ಅತಂತ್ರವಾಗಿದ್ದರೂ ಅದೇ ಪಕ್ಷದಲ್ಲಿ ಅಂಟಿಕೊಂಡು ಕೂತಿದ್ದಾತ ರಾಣೆಬೆನ್ನೂರಿನ ಕೋಟಿ ಕುಳ ಶಂಕರ್. ಕಳೆದ ಬಾರಿ ರಾಣೇಬೆನ್ನೂರು ಕ್ಷೇತ್ರದಿಂದ ಪಕ್ಷೇತರನಾಗಿ ನಿಂತು ಸೋತಿದ್ದ ಶಂಕರ್ ದೊಡ್ಡ ಪಕ್ಷಗಳಿಂದ ಟಿಕೆಟು ಗಿಟ್ಟಿಸುವ ಸರ್ಕಸ್ಸು ಮಾಡಿಯೂ ಸೋತಿದ್ದರು. ಇಂಥಾ ಶಂಕರ್‌ಗೆ ಈ ಬಾರಿ ಅಂಥಾ ಯಾವ ರಿಸ್ಕೂ ಇರಲಿಲ್ಲ. ತಮಗೆ ತಾವೇ ಟಿಕೆಟು ಕೊಟ್ಟುಕೊಂಡು ಕೆಪಿಜೆಪಿಯಿಂದ ಕಣಕ್ಕಿಳಿದಿದ್ದ ಆತ ಬಹುಮತಗಳಿಂದಲೇ ಕೋಳಿವಾಡರನ್ನು ಮಣಿಸಿ ಗೆದ್ದಿದ್ದಾರೆ.

ಅಷ್ಟಕ್ಕೂ ಉಪೇಂದ್ರ ಕಾಸೇ ಇಲ್ಲದೆ ಚುನಾವಣೆ ಗೆಲ್ಲುವ ಭಳಾಂಗು ಬಿಡುವ ಹೊತ್ತಿಗೆಲ್ಲ ಈ ಶಂಕರ್ ಕೆಜೆಪಿಯಲ್ಲಿದ್ದರು. ಈತ ಉಪೇಂದ್ರ ಹೇಳಿಕೊಂಡಿದ್ದ ಆದರ್ಶಗಳಿಗೆ ಪಕ್ಕಾ ತದ್ವಿರುದ್ಧ ಆಸಾಮಿ. ನೂರಾರು ಕೋಟಿ ಆಸ್ತಿಯ ಒಡೆಯನಾದ ಶಂಕರ್ ಈ ಬಾರಿ ಕೋಟಿಯ ಬಲದಿಂದಲೇ ಗೆದ್ದಿದ್ದಾರೆಂಬ ಆರೋಪಗಳೂ ಇವೆ. ಅಂತೂ ಚುನಾವಣೆ ಗೆಲ್ಲೋಕೆ ಕಾಸು ಬ್ಯಾಡ ಅಂದಿದ್ದ ಉಪೇಂದ್ರನ ಮಾಜಿ ಪಕ್ಷದಿಂದ ಕಾಸಿನ ಬಲದಿಂದಲೇ ಒಬ್ಬ ಆಸಾಮಿ ಗೆದ್ದಿದ್ದು ನಿಜಕ್ಕೂ ಮಹಾ ವ್ಯಂಗ್ಯ ಅಂತಲೇ ಜನ ಮಾತಾಡಿಕೊಳ್ಳುತ್ತಿದ್ದಾರೆ. ಕರ್ನಾಟಕದ ೨೨೪ ಕ್ಷೇತ್ರಗಳಿಂದಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಉತ್ಸಾಹ ಹೊಂದಿದ್ದ ಉಪೇಂದ್ರ ಚುನಾವಣೆ ಹತ್ತಿರಾದಾಗ ಕಣದಿಂದಲೇ ಎಸ್ಕೇಪಾಗಿದ್ದರು. ಅಂತೂ ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೇ ರಿಯಲ್ಲಾಗಿಯೂ ಭ್ರಮೆ ಬಿತ್ತುವ ಉಪೇಂದ್ರ ನಿಜಕ್ಕೂ ರಿಯಲ್ ಸ್ಟಾರ್!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top