ಸಮಾಚಾರ

ಕರ್ನಾಟಕ ರಾಜಕಾರಣ ಕಂಡು ದಿಗ್ಭ್ರಮೆಗೊಂಡ ಸನ್ ರೈಸರ್ಸ್ ಹೈದರಾಬಾದ್ ಆಟಗಾರರು.

ಕ್ಷಣದಿಂದ ಕ್ಷಣದಕ್ಕೆ ಚಿತ್ರ ವಿಚಿತ್ರ ತಿರುವುಗಳನ್ನ ಪಡೆದುಕೊಳ್ಳುತ್ತಿರುವ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ನೂತನ ಸರ್ಕಾರ ರಚಿಸಲು ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ನೆನ್ನೆ ನಾನಾ ರೀತಿಯ ಕಸರತ್ತು ನಡೆಸುತ್ತಿದ್ದವು. ಈ ಎಲ್ಲಾ ರಾಜಕೀಯ ದೊಂಬರಾಟಗಳನ್ನು ಹತ್ತಿರದಿಂದ ನೋಡುವ ದೌರ್ಭಗ್ಯ ಇಂಡಿಯನ್ ಪ್ರೀಮಿಯರ್ ಲೀಗ್’ನ ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರರಿಗೆ ಸಿಕ್ಕಿತ್ತು.

 

 

ಹೌದು, ಇವತ್ತು ಆರ್ಸಿಬಿ ವಿರುದ್ಧ ಸನ್ ರೈಸರ್ ಪಂದ್ಯವಿರುವುದರಿಂದ ನೆನ್ನೆ ಬೆಂಗಳೂರಿನ ಶಾಂಗ್ರಿಲಾ ಹೋಟೆಲ್’ಲ್ಲಿ ಸನ್ ರೈಸರ್ ಆಟಗಾರರು ಉಳಿದುಕೊಂಡಿದ್ದರು. ಅದೇ ಹೋಟೆಲ್’ನಲ್ಲಿ ಜೆಡಿಎಸ್ ಪಕ್ಷದ ಶಾಸಕಾಂಗ ಸಭೆ ಕೂಡ ನಡೆದು ಸಹಿ ಸಂಗ್ರಹ ಮಾಡುವ ಪ್ರಕ್ರಿಯೆ ನಡೆದಿತ್ತು. ಈ ವೇಳೆ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಪಕ್ಷದ ಎಲ್ಲಾ ಶಾಸಕರು ಉಪಸ್ಥಿತರಿದ್ದರಿಂದ ಗಲಾಟೆ ಗದ್ದಲ ಜೋರಾಗಿಯೇ ನಡೆಯುತ್ತಿತ್ತು.

ಬಿಜೆಪಿಗೆ ಬಹುಮತ ಸಾಭೀತುಪಡಿಸಲು ಅಗತ್ಯವಿರುವ ಶಾಸಕರ ಸಂಖ್ಯೆ ಕಡಿಮೆಯಿರುವುದರಿಂದ ಬಿಜೆಪಿ ಕಡೆಯಿಂದ ‘ಆಪರೇಷನ್ ಕಮಲಾ’ ಮೂಲಕ ‘ಕುದುರೆ ವ್ಯಾಪಾರ’ ನಡೆಯಬಹುದು ಎಂಬ ಅನುಮಾನದಿಂದ ಜೆಡಿಎಸ್- ಕಾಂಗ್ರೆಸ್ ಪಕ್ಷಗಳು ತಮ್ಮ ಶಾಸಕರನ್ನು ಜೋಪಾನ ಮಾಡಿಕೊಳ್ಳುವ ಸಲುವಾಗಿ ರೆಸಾರ್ಟ್ ರಾಜಕೀಯದ ಮೊರೆಹೋಗಿದ್ದಾರೆ. ಅದರಂತೆ ಜೆಡಿಎಸ್ ಶಾಸಕರು ಶಾಂಗ್ರಿಲಾ ಹೋಟೆಲ್ ನಲ್ಲಿ ಒಂದೆಡೆ ಸೇರಿಕೊಂಡಿದ್ದರು. ನೆನ್ನೆ ಬೆಳಿಗ್ಗಿನಿಂದಲೂ ಶಾಂಗ್ರಿಲಾ ಹೊಟೆಲ್‌ನಲ್ಲಿ ಜೆಡಿಎಸ್‌ ಶಾಸಕರ, ಮುಖಂಡರ, ಕಾರ್ಯಕರ್ತರ ದಂಡು ನೆರೆದಿತ್ತು,ಹಾಗಾಗಿ ಶಾಂಗ್ರಿಲಾ ಹೊಟೆಲ್‌ನಲ್ಲಿ ಜನವೋ ಜನ.

 

 

ಕ್ರಿಕೆಟ್ ಆಟಗಾರರು ಅಲ್ಲೆ ಇದ್ದರೂ ಅವರನ್ನು ಕೇಳುವವರೇ ಗತಿಯಿರಲಿಲ್ಲ. ಶಾಸಕರ ಆತಂಕ, ಒದ್ದಾಟಗಳನ್ನು ಹತ್ತಿರದಿಂದ ಕಂಡು ಸನ್ ರೈಸರ್ಸ್ ಹೈದರಾಬಾದ್ ಆಟಗಾರರು ಕಂಗಾಲಾಗಿದ್ದಾರೆ. ಹೊಟೆಲ್‌ನಲ್ಲಿ ಹಾಗೂ ಹೊಟೆಲ್ ಹೊರಭಾಗ ಸೇರಿದ್ದ ಭಾರಿ ಜನರಿಂದಾಗಿ ಅಭ್ಯಾಸಕ್ಕೆಂದು ಕ್ರೀಡಾಂಗಣಕ್ಕೆ ತೆರಳಲೂ ಆಟಗಾರರಿಗೆ ತೊಂದರೆಯಾಗಿದೆ. ಅಲ್ಲದೇ ಹೋಟೆಲ್ ನಲ್ಲಿ ನಡೆಯುತ್ತಿದ್ದ ಸದ್ದು ಗದ್ದಲದಿಂದ ಆಟಗಾರರು ಕಿರಿಕಿರಿ ಅನುಭವಿಸಿದ್ದಾರೆ ಎಂದು ವರದಿಯಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top