ಮನೋರಂಜನೆ

ನೀಲಿತಾರೆ ಜೊತೆ ಸಿನಿಮಾ ಮಾಡಿದ ಬಳಿಕ ‘ವೈರಸ್’ ಹರಡೋಕೆ ನಿಂತ ರಾಮ್ ಗೋಪಾಲ್ ವರ್ಮಾ.

ಬಾಲಿವುಡ್‌ನ ವಿಕ್ಷಿಪ್ತ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ರಿಯಲಿಸ್ಟಿಕ್ ಅಂಡರ್‌ವರ್ಲ್ಡ್ ಕಥೆಗಳನ್ನಾಧರಿಸಿದ ಮಾಸ್ ಚಿತ್ರಗಳ ಮೂಲಕವೇ ದೇಶಾದಂತ ಹೆಸರುವಾಸಿಯಾಗಿದ್ದವರು. ಒಂದು ಕಾಲದಲ್ಲಿ ಸಾಲು ಸಾಲು ಸದಭಿರುಚಿಯ ಸಿನಿಮಾಗಳನ್ನು ನೀಡುತ್ತಿದ್ದ ವರ್ಮಾ ಇತ್ತೀಚಿಗೆ ತಮ್ಮ ಸಿನಿಮಾಗಳ ಮೂಲಕ ಸದ್ದು ಮಾಡುವ ಬದಲು ಅವರಿವರ ಮೇಲೆ ಟೀಕಾಸ್ತ್ರ ಪ್ರಯೋಗ ಮಾಡುತ್ತಾ, ವಿನಾಃ ಕಾರಣ ವಿವಾದದ ಕೇಂದ್ರ ಬಿಂದುವಾಗುತ್ತಾ ಸುದ್ದಿ ಮಾಡಿದ್ದೇ ಹೆಚ್ಚು. ಅಮೆರಿಕಾದ ನೀಲಿತಾರೆ ಮಿಯಾ ಮಲ್ಕೊವಾಳನ್ನು ಹಾಕಿಕೊಂಡು ಗಾಡ್, ಸೆಕ್ಸ್ ಅಂಡ್ ಟ್ರುಥ್ ಎಂಬ ಕಿರುಚಿತ್ರವನ್ನು ಮಾಡಿ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಂಡಿದ್ದ ವರ್ಮಾ ಅದಾದ ನಂತರ ಅಕ್ಕಿನೇನಿ ನಾಗಾರ್ಜುನನನ್ನು ಹಾಕಿಕೊಂಡು ‘ಆಫೀಸರ್’ಎನ್ನುವ ಚಿತ್ರವನ್ನು ಮಾಡಿದ್ದರು. ಆದರೆ ಅದ್ಯಾಕೋ ಈ ಚಿತ್ರವನ್ನು ನೋಡುವ ಸಾಹಸಕ್ಕೆ ಪ್ರೇಕ್ಷಕರು ಕೈ ಹಾಕಲಿಲ್ಲ, ಪರಿಣಾಮ ಆಫೀಸರ್ ಸುಲಭವಾಗಿ ದಯನೀಯ ಸೋಲು ಕಂಡಿತು.

 

 

ತನ್ನ ಹಿಂದಿನ ಆಫೀಸರ್ ಚಿತ್ರ ಗೋತಾ ಹೊಡೆದಿದ್ದರೂ ಆಸಕ್ತಿ ಕಳೆದುಕೊಳ್ಳದ ವರ್ಮಾ ಮತ್ತೊಂದು ಸಿನಿಮಾ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಅಂದಹಾಗೆ ಹೊಸ ಚಿತ್ರಕ್ಕೆ ‘ವೈರಸ್’ ಎಂದು ಹೆಸರಿಟ್ಟಿದ್ದು ಈ ಹಿಂದೆ ವರ್ಮಾ ನಿರ್ದೇಶಿಸಿದ್ದ ಸರ್ಕಾರ್‌ ಹಾಗೂ ಅಟ್ಯಾಕ್ಸ್‌ ಆಫ್‌ 26/11 ಸಿನಿಮಾಗಳನ್ನ ನಿರ್ಮಿಸಿದ್ದ ಪರವ್‌ ಸಂಘವಿ ಅವ್ರೆ ಈ ಸಿನಿಮಾವನ್ನೂ ನಿರ್ಮಾಣಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ.

ಪ್ರತಿ ಚಿತ್ರಗಳಲ್ಲೂ ವಿಭಿನ್ನತೆಯನ್ನು ಕಾಯ್ದುಕೊಂಡಿರುವ ವರ್ಮಾ ಈ ಚಿತ್ರದಲ್ಲೂ ಕೆಲವೊಂದು ಹೊಸ ಅಂಶಗಳನ್ನ ಹೇಳಲಿದ್ದರಂತೆ. ಮಧ್ಯ ಆಫ್ರಿಕಾಕ್ಕೆ ಭೇಟಿ ನೀಡುವ ಹುಡುಗನೊಬ್ಬನಿಗೆ ಮಾರಣಾಂತಿಕ ಕಾಯಿಲೆಯೊಂದು ಅಮರಿಕೊಳ್ಳುತ್ತದೆ. ಆತ ಮುಂಬೈಗೆ ವಾಪಸಾದಾಗ ಆ ಕಾಯಿಲೆ ಮುಂಬೈನ ಇತರೆ ಜನರಿಗೂ ಹರಡಿಕೊಳ್ಳೊತ್ತದೆ. ಆ ನಂತರ ಏನಾಗುತ್ತದೆ ಎಂಬುದನ್ನೇ ಆಧಾರವಾಗಿಟ್ಟುಕೊಂಡು ರಸವತ್ತಾಗಿ ಕತೆ ಹೊಸೆದಿದ್ದಾರಂತೆ ವರ್ಮಾ. ಈ ಎಲ್ಲಾ ವಿಚಾರಗಳನ್ನು ಖುದ್ದು ವರ್ಮಾ ಅವರೇ ತಮ್ಮ ಫೇಸ್ಬುಕ್ ಖಾತೆಯ ಮೂಲಕ ಬಹಿರಂಗ ಪಡಿಸಿದ್ದಾರೆ. ಇದನ್ನು ಬಿಟ್ಟರೆ ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಾರೆ? ಯಾವಾಗ ಸೆಟ್ಟೇರುತ್ತೆ ಎಂಬೆಲ್ಲಾ ಪ್ರಶ್ನೆಗಳಿಗೆ ವರ್ಮಾ ಅವರೇ ಉತ್ತರಿಸಬೇಕು.

ಅವರು ಸಿನಿಮಾಗಳನ್ನು ಘೋಷಣೆ ಮಾಡಿ ಆ ಮೂಲಕ ಭಾರೀ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ. ಅದೇನೋ ಕ್ರಾಂತಿಯಂಥಾ ಸಂಚಲನವೆಬ್ಬಿಸುತ್ತಾರೆ. ಆದರೆ ವರ್ಷಗಳೇ ಕಳೆದರೂ ಅಂಥಾ ಸಿನಿಮಾಗಳ ಪತ್ತೆಯೂ ಇರುವುದಿಲ್ಲ.ಈ ಚಿತ್ರ ಕೂಡ ಅದೇ ರೀತಿ ಆಗುತ್ತಾ? ಅಥವಾ ನಿಜವಾಗಿಯೂ ವೈರಸ್ ಹರಡುತ್ತಾ? ಎಂದು ಕಾದುನೋಡಬೇಕಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top