fbpx
ದೇವರು

ಟಿಪ್ಪುವಿನ ಮನಸ್ಸನ್ನು ಗೆದ್ದಿದ್ದ ಈ ದೇವಾಲಯದ ಮಹತ್ವ ತಿಳ್ಕೊಂಡ್ರೆ ಭಕ್ತಿ ಹೆಚ್ಚಾಗಿ ಒಮ್ಮೆಯಾದ್ರು ಈ ದೇವರ ದರ್ಶನ ಮಾಡ್ತೀರಾ .

ಟಿಪ್ಪುವಿನ ಮನಸ್ಸನ್ನು ಗೆದ್ದ ಆ ದೇವಾಲಯದ ಯಾವುದು ? ಆ ದೇವಾಲಯದ ಪುರಾಣ ಕಥೆ ಇತಿಹಾಸ ನಿಮಗೆ ಗೊತ್ತೇ ?

ಕೆಲವು ದೇವಸ್ಥಾನಗಳಿಗೆ ಹೋದರೆ ಮನಸ್ಸಿಗೆ ಅದೇನೋ ಒಂದು ರೀತಿಯ ಚೈತನ್ಯ ಲಭಿಸುತ್ತದೆ .ನಮ್ಮ ಕರ್ನಾಟಕದಲ್ಲಿಯೂ ಸಹ ಅಂತಹ ಅನೇಕ ದೇವಾಲಯಗಳು ಇವೆ. ನೋಡುವುದಕ್ಕೆ ಅತ್ಯಂತ ಸುಂದರವಾಗಿರುವ ದೇವಾಲಯಗಳು ಮಾತ್ರವಲ್ಲದೆ ಮೈನವಿರೇಳಿಸುವ ಇತಿಹಾಸವನ್ನು ಸಹ ಅವು ಹೊಂದಿವೆ . ಅಂತಹ ಸಾಕಷ್ಟು ದೇವಸ್ಥಾನಗಳ ಪೈಕಿ ನಂಜನಗೂಡು ಸಹ ಒಂದು. ಇಂದು ನಾವು ಈ ದೇವಾಲಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

 

 

ನಂಜನಗೂಡು ಇದನ್ನು ನಾವು ಅದೆಷ್ಟೋ ಬಾರಿ ನೋಡಿದ್ದೇವೆ. ಅದರಲ್ಲೇನು ವಿಶೇಷ ? ಇದೆ ಎಂದು ಹೇಳುತ್ತೀರಾ ? ಅಲ್ಲೇ ಇರುವುದು ಕುತೂಹಲಕಾರಿ ವಿಚಾರ.. ನೀವು ನಂಜನಗೂಡಿನ ದೇವಾಲಯಕ್ಕೆ ಹೋಗಿ ಆ ನಂಜುಂಡೇಶ್ವರನ ದರ್ಶನ ಮಾಡಿರುತ್ತೀರ. ಅದಾದ ನಂತರ ಆ ಬೃಹತ್ ದೇವಾಲಯವನ್ನು ಸುತ್ತು ಹಾಕಿಯೇ ಇರುತ್ತೀರ. ನಿಮಗೆ ಈ ದೇವಾಲಯದ ಹೊರಾಂಗಣದಲ್ಲಿ ಕೆಡವಿರುವ ವಿಗ್ರಹಗಳು ಕಾಣಿಸುತ್ತವೆ. ಹಾಗಾದರೆ ಆ ವಿಗ್ರಹಗಳನ್ನು ಹಾಳುಗೆಡವಿದ್ದು ಯಾರು ? ನಂಜನಗೂಡಿನ ದೇವಾಲಯಕ್ಕೆ ಈ ದುರ್ಗತಿ ಬಂದಿರುವುದರ ಹಿಂದೆ ಟಿಪ್ಪುಸುಲ್ತಾನನ ಕೈವಾಡವಿದೆಯೇ ? ಅಥವಾ ಅವನಿಗೂ ಮೊದಲು ದಕ್ಷಿಣ ಭಾರತದ ಮೇಲೆ ದಾಳಿ ಮಾಡಿದ ದೆಹಲಿಯ ಸುಲ್ತಾನರ ಕೈವಾಡವಿದೆಯೇ ? ಎನ್ನುವ ಅನುಮಾನ ನಮ್ಮನ್ನು ಕಾಡುತ್ತದೆ. ಅಲ್ಲೇ ಇರುವುದು ನಂಜನಗೂಡಿನ ಅಚ್ಚರಿ !ಈ ದೇವಾಲಯವನ್ನು ಹಾಳು ಮಾಡಿದ್ದು ಯಾರು ?

ಈ ನಂಜನಗೂಡಿನ ನಂಜುಂಡೇಶ್ವರ, ಶ್ರೀಕಂಠೇಶ್ವರನ ಬಗ್ಗೆ ಒಂದು ರೋಚಕವಾದ ಮಹಿಮಾನ್ವಿತ ಕಥೆ ಇದೆ. ಆ ಕಥೆಯನ್ನು ತಿಳಿದರೆ ನಿಮಗೆ ಈ ದೇವಾಲಯದ ಸಂಪೂರ್ಣ ಚಿತ್ರಣವೂ ತಿಳಿಯುತ್ತದೆ.
ನಂಜನಗೂಡು ಪರಮ ಪಾವನಿಯಾದ ಕಪಿಲಾ ನದಿಯ ತಟದಲ್ಲಿ ಸ್ಥಾಪಿತವಾಗಿರುವ ಒಂದು ಸುಂದರವಾದ ಪ್ರದೇಶ. ಒಮ್ಮೆ ಪಾರ್ವತಿ ಪರಮೇಶ್ವರರು ಲೋಕ ಸಂಚಾರ ಮಾಡುವಾಗ ಪಾರ್ವತಿ ದೇವಿ ಜಗತ್ತಿನ ಪರಮ ಪವಿತ್ರ ಮತ್ತು ಪರಮ ಉತ್ಕೃಷ್ಟ ಜಾಗ ಯಾವುದು ? ಎಂದು ಕೇಳಲಾಗುತ್ತದೆ. ಆಗ ಶಿವನು ಕಪಿಲಾ ಮತ್ತು ಕೌಂಡಿನಿ ನದಿಗಳ ಸಂಗಮ ಸ್ಥಳ ಎಂದು ಹೇಳುತ್ತಾನೆ. ಆ ಪ್ರದೇಶಕ್ಕೆ ಅಂದಿನ ಕಾಲದಲ್ಲಿ ಗರಳಪುರಿ ಎಂದು ಕರೆಯುತ್ತಿದ್ದರು. ಆ ಕಾಲದಲ್ಲಿ ತ್ರ್ಯಂಬಕ ಎನ್ನುವ ರಾಕ್ಷಸನಿದ್ದ ಅವನಿಗೆ ಕೇಶಿ ಎಂಬ ಮಗನಿದ್ದ .

ಅವನು ರಕ್ಕಸ ಗುಣಗಳನ್ನು ಮೈಗೂಡಿಸಿಕೊಂಡಿದ್ದ. ಅವನು ಮಹಾಗರ್ವಿ ಕೂಡ. ಋಷಿಮುನಿಗಳ ಯಜ್ಞ ಯಾಗಾದಿಗಳಿಗೆ ವಿಘ್ನ ಉಂಟು ಮಾಡುತ್ತಾ, ಅವುಗಳ ನಾಶ ಮಾಡಿ ಆನಂದವನ್ನು ಉಂಟು ಮಾಡುತ್ತಿದ್ದ. ಹೀಗಿರುವಾಗ ಋಷಿ ಮುನಿವರ್ಯರೆಲ್ಲಾ ಕೇಷಿಯ ಬಗ್ಗೆ ಪರಮಶಿವನ ಬಳಿ ಅಳಲು ತೋಡಿಕೊಂಡರು. ಆಗ ಶಿವನು ಕಪಿಲೆಯ ತಟದಲ್ಲಿದ್ದು ಯಜ್ಞಯಾಗಾದಿಗಳನ್ನು ಮಾಡುವಂತೆ ಋಷಿಗಳಿಗೆ ಸಲಹೆ ಕೊಟ್ಟನು.
ಹೋಮ ಶುರುವಾದಾಗ ಹವಿಸ್ಸನ್ನು ತಿನ್ನಲು ಬಂದಾಗ ರಕ್ಕಸನನ್ನು ಪರಮೇಶ್ವರನು ಸಂಹಾರ ಮಾಡುತ್ತಾನೆ . ಆದರೆ ಈ ಕೇಶಿ ಶ್ರೀಮನ್ನಾರಾಯಣನ ಪರಮಭಕ್ತನಾಗಿದ್ದ ಕಾರಣ ಪರಮಶಿವನ ನಂತರ ಕಪಿಲಾ ತೀರದಲ್ಲಿ ಭೂಗರ್ಭದಲ್ಲಿ ಧ್ಯಾನಕ್ಕೆ ಕುಳಿತನು. ಹೀಗಿರುವಾಗ ಕೃತಯುಗದ ಕೊನೆ ದಿನಗಳಲ್ಲಿ ಇಲ್ಲಿಗೆ ಪರಶುರಾಮನು ಬಂದಿದ್ದನು. ಅವನ ಕೊಡಲಿ ಈ ಭೂಮಿಯನ್ನು ಸ್ಪರ್ಶಿಸಿತ್ತು.

ಆಗ ಆ ಕೊಡಲಿ ಏಟು ಭೂಗರ್ಭದಲ್ಲಿ ಅಡಗಿದ್ದ ಲಿಂಗ ರೂಪಿಯಾಗಿದ್ದ ಶಿವನ ಹಣೆಯನ್ನು ತಗುಲಿ ಗಾಯಗೊಂಡಿತ್ತು. ಆಗ ತಪ್ಪಿನ ಅರಿವಾಗಿ ಕ್ಷಮೆಕೋರಿದ ಪರಶುರಾಮ ಶಿವನಲ್ಲಿ ಕ್ಷಮೆ ಕೋರಿದ್ದರಂತೆ .ಆಗ ಶ್ರೀಕಂಟೇಶ್ವರ ಇದು ಕಾಲವೇ ನಿರ್ಣಯಿಸಿರುವ ಘಟನೆ ನೀನು ಇಲ್ಲಿ ಪಾತ್ರಧಾರಿ ಅಷ್ಟೇ .ಇದು ನಾನು ನೆಲೆಸಿರುವ ಪರಮ ಪವಿತ್ರವಾದ ಜಾಗ.ಇಲ್ಲಿ ನನಗಾಗಿ ಒಂದು ಲಿಂಗವನ್ನು ಸ್ಥಾಪಿಸಿ ನನಗೋಸ್ಕರ ಕೆಲವು ದಿನಗಳ ಕಾಲ ತಪಸ್ಸನ್ನು ಆಚರಿಸು ಎಂದು ಪರಶುರಾಮನಿಗೆ ಸಲಹೆಯನ್ನು ಕೊಟ್ಟರು. ಪರಶಿವನ ಮಾತಿಗೆ ತಲೆಯಾಡಿಸಿದ ಪರಶುರಾಮರು ನಂಜನಗೂಡಿನಿಂದ ಕೆಲವೇ ಕೆಲವು ದೂರದಲ್ಲಿ ಧ್ಯಾನಕ್ಕೆ ಜಾರಿದ್ದರಂತೆ. ಇವತ್ತು ಆ ಸ್ಥಳವನ್ನು “ಪರಶುರಾಮಕ್ಷೇತ್ರ” ಎಂದು ಕರೆಯುತ್ತಾರೆ. ನಂಜನಗೂಡಿಗೆ ಹೋದವರು ಪರಶುರಾಮನ ಕ್ಷೇತ್ರಕ್ಕೆ ಭೇಟಿ ಕೊಟ್ಟರೆ ಅವರ ಸಂಕಲ ಸಂಕಷ್ಟಗಳು ನಿವಾರಣೆಯಾಗಿ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಇಂತಹ ನೆಲ ಯುಗಯುಗಗಳಿಂದಲೂ ತನ್ನ ಮಹಿಮೆಯನ್ನು ಸಾರುತ್ತಾ ಬಂದಿದೆ.

ಹೀಗಿರುವಾಗ ಹದಿನಾಲ್ಕನೇ ಶತಮಾನದಲ್ಲಿ ಮೈಸೂರಿನ ಮೊದಲ ಅರಸ ಯದುರಾಯರಿಂದ ಈ ದೇವಾಲಯ ನಿರ್ಮಾಣವಾಯಿತು ಎಂದು ಹೇಳಲಾಗುತ್ತದೆ. ಅಂದಿಗೆ ದಕ್ಷಿಣದಲ್ಲಿ ವಿಜಯನಗರ ಸಾಮ್ರಾಜ್ಯದ ಆಳ್ವಿಕೆ ಶುರುವಾಗಿತ್ತು. ಆ ಹಂತದಲ್ಲಿ ನಿರ್ಮಾಣಗೊಂಡ ಈ ದೇವಾಲಯದ ವಾಸ್ತು ಶಿಲ್ಪ ವಿಜಯನಗರ ಹಾಗೂ ದ್ರಾವಿಡ ವಾಸ್ತುಶಿಲ್ಪ ಶೈಲಿಯನ್ನು ಒಳಗೊಂಡಿದೆ .ಮೊದಲಿಗೆ ಈ ದೇವಾಲಯ ಮೂರು ಹಂತಗಳನ್ನು ಅಷ್ಟೇ ಹೊಂದಿತ್ತು. ನೀವು ದೇವಸ್ಥಾನದ ಒಳಗೆ ಹೋದಾಗ ಒಂದು ಗರುಡ ಗಂಬ ಮತ್ತು ಅದರ ನಂತರ ಇರುವ ಗೋಪುರ ಅಷ್ಟೇ ಈ ದೇವಾಲಯ ಇದ್ದಿದ್ದು. ಸುಮಾರು ಐದು ಶತಮಾನಗಳ ಹಿಂದೆ ನಂಜುಂಡೇಶ್ವರನಿಗೆ ಇಲ್ಲೇ ಪೂಜೆ-ಪುನಸ್ಕಾರ ನಡೆಯುತ್ತಿತ್ತು .

 

 

ಟಿಪ್ಪು ಸುಲ್ತಾನನ ಆಳ್ವಿಕೆಯ ಕಾಲದಲ್ಲೂ ದೇವಾಲಯ ಇತ್ತು. ಇಲ್ಲಿಯವರೆಗೆ ಮಾತ್ರ ಟಿಪ್ಪುವಿನ ಕಾಲದಲ್ಲಿ ಸಾಕಷ್ಟು ಹಿಂದೂ ದೇವಾಲಯಗಳು ನಾಶ ಆದರೂ ಕೂಡ ನಂಜನಗೂಡು ದೇವಾಲಯಕ್ಕೆ ಯಾವ ಹಾನಿಯನ್ನು ಸಹ ಉಂಟು ಮಾಡಲಿಲ್ಲ. ಬದಲಿಗೆ ತನ್ನ ಪಟ್ಟದ ಆನೆಯ ಕಣ್ಣನ್ನು ಸರಿ ಮಾಡಿ ಕೊಟ್ಟ ಎಂಬ ಕೃತಜ್ಞತೆಯಿಂದ ಟಿಪ್ಪು ಈ ದೇವಾಲಯಕ್ಕೆ ಪಚ್ಚೆ ಲಿಂಗ ಮತ್ತು ಪಚ್ಚೆ ಹಾರವನ್ನು ಕಾಣಿಕೆಯಾಗಿ ಸಮರ್ಪಿಸಿದ ಎಂದು ಹೇಳಲಾಗುತ್ತದೆ. ಅವತ್ತಿಗೆ ಪಟ್ಟದ ಆನೆಯ ಚಿಕಿತ್ಸೆಯ ಹೆಸರಲ್ಲಿ ಈ ದೇವಾಲಯವನ್ನು ದಿವಾನರಾಗಿದ್ದ ಪೂಣಯ್ಯನವರು ಉಳಿಸಿದ್ದರು ಎಂದು ಜನರು ನಂಬುತ್ತಾರೆ.
ಟಿಪ್ಪು ಕಾಲಾವಧಿಯ ನಂತರ ಈ ದೇವಾಲಯದ ಹೊರ ಪ್ರಾಂಗಣ ನಿರ್ಮಾಣವಾಗಿತ್ತಂತೆ. ತಮಿಳುನಾಡಿನಿಂದ ನೂರಾರು ಶಿಲ್ಪಿಗಳನ್ನು ಕರೆಸಿ ಈ ದೇವಾಲಯದ ಹೊರ ಪ್ರಾಂಗಣ, ಈ ದೇವಾಲಯದ ಬೃಹತ ಗೋಪುರ ಮತ್ತು ದೇವಾಲಯದ ಹೊರ ಗೋಡೆಗಳನ್ನು ನಿರ್ಮಿಸಿದರು.ಅಲ್ಲದೆ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲಕ್ಕಾಗಲೇ ಮೈಸೂರು ಸಂಸ್ಥಾನದಲ್ಲಿ ಬ್ರಿಟಿಷರ ಆಳ್ವಿಕೆ ಪ್ರಾರಂಭವಾಗಿತ್ತು. ಹಾಗಾಗಿ ಈ ದೇವಾಲಯ ಯಾವುದೇ ಹೆಚ್ಚಿನ ಅಪಾಯಗಳಿಲ್ಲದೆ ಉಳಿದುಕೊಂಡಿರುವುದು .

ಇನ್ನು ಈ ದೇವಾಲಯದ ಹೊರ ಪ್ರಾಂಗಣದಲ್ಲಿ ನೋಡುವುದಾದರೆ ಭಗ್ನವಾಗಿರುವ ವಿಗ್ರಹಗಳು ನಮ್ಮದೇ ಜನರ ಕೊಡುಗೆ ಎಂದು ಇಲ್ಲಿನ ಜನರು ಬೇಸರ ವ್ಯಕ್ತಪಡಿಸುತ್ತಾರೆ . ನಮ್ಮ ದೇವಾಲಯಗಳನ್ನು ನಾವೇ ಉಳಿಸಿಕೊಳ್ಳಲಿಲ್ಲ ಎಂದರೆ ಹೇಗೆ ? ಎಂದು ಸ್ಥಳೀಯರ ಹೇಳುತ್ತಾರೆ. ಈಗ ತಿಳಿಯಿತಲ್ಲವೇ ನಂಜನಗೂಡಿನಲ್ಲಿರುವ ಭಗ್ನವಾಗಿರುವ ದೇವಾಲಯದ ವಿಗ್ರಹಗಳು ಯಾವುದೇ ? ಯುದ್ಧದಿಂದ ಅಲ್ಲ.ನಮ್ಮವರ ಕುಚೇಷ್ಟೆಯಿಂದ. ಇನ್ನು ಮುಂದಾದರೂ ಈ ದೇವಾಲಯದ ಒಂದೇ ಒಂದು ಸಹ ಹಾಳಾಗದಂತೆ ಎಚ್ಚರ ವಹಿಸಬೇಕಾಗಿದೆ.

ದೇಗುಲಕ್ಕೆ ಪ್ರವೇಶ ನೀಡುತ್ತಿದ್ದ ಹಾಗೆ ಶಿವನ ಬೃಹತ್ ಮೂರ್ತಿ ಕಣ್ಣಿಗೆ ಬೀಳುತ್ತದೆ. ವಿಶಾಲವಾದ ರಸ್ತೆ ದೇಗುಲಕ್ಕೆ ನಿಮ್ಮನ್ನು ಬರಮಾಡಿಕೊಳ್ಳುತ್ತದೆ . ದೇಗುಲದಲ್ಲಿ ವಿಶಾಲವಾದ ಹೊರಾಂಗಣ ಮತ್ತು ಪೂಜೆ ಸಾಮಾನುಗಳನ್ನು ಇಟ್ಟು ಗ್ರಾಹಕರಿಗೆ ಕಾಯೋ, ನಿರೀಕ್ಷೆ ಮಾಡುವ ವರ್ತಕರು ಸಿಗುತ್ತಾರೆ. ಒಳಗೆ ಹೋಗುತ್ತಿದ್ದ ಹಾಗೆ ಮೂರ್ತಿಗಳು ಕಾಣುತ್ತವೆ,ಒಂದೊಂದು ಮೂರ್ತಿಗೂ ಒಂದೊಂದು ಹೆಸರುಗಳು ಆಶ್ಚರ್ಯಚಕಿತರನ್ನಾಗಿ ಮಾಡಿಸುತ್ತವೆ. ದೇವರ ಮುಖದ ಕಳೆಯಂತೂ ಹೇಳ ತೀರದು.ಅವನೆದುರು ನಿಂತರೆ ಎಲ್ಲಾ ಕಷ್ಟಗಳು ಪರಿಹಾರವಾಗಿ ಬಿಟ್ಟವು ಎನ್ನುವ ಭಾವನೆ ಮೂಡುತ್ತದೆ. ದೇವಸ್ಥಾನದ ಕಟ್ಟಡ ಅದ್ಭುತವಾಗಿದೆ ಸುತ್ತಲೂ ಬೇರೆ ಬೇರೆ ದೇವರುಗಳ ಶಿಲ್ಪಕಲೆ ಇದೆ.ಹಾಗೆ ದೇವಸ್ಥಾನಕ್ಕೆ ಸಂಬಂಧಪಟ್ಟ ದೊಡ್ಡ ರಥಗಳು ನಿಮ್ಮನ್ನು ಮನಸೆಳೆಯುತ್ತವೆ.
ಕಪಿಲಾ ನದಿಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ನದಿಯಲ್ಲಿ ಮಿಂದು ಎದ್ದರೆ ಅಂದರೆ ಸ್ನಾನ ಮಾಡಿದರೆ ಶುದ್ಧವಾಗುತ್ತವೆ ಎನ್ನುವ ನಂಬಿಕೆ ಇಂದು ನೆನ್ನೆಯದಲ್ಲ . ಆದರೆ ಅಲ್ಲಿ ಬರುವ ಭಕ್ತರು ಮತ್ತು ಸ್ಥಳೀಯರು ಕಪಿಲೆಯನ್ನು ತುಂಬಾನೇ ಗಲೀಜು ಮಾಡಿಬಿಟ್ಟಿದ್ದಾರೆ .ಇತ್ತೀಚೆಗೆ ನೀವು ನೋಡುವುದಾದರೆ ನದಿಯ ತೀರದುದ್ದಕ್ಕೂ ಕಾಲಿಡುವುದಕ್ಕೂ ಹೇಸಿಗೆ ಉಂಟಾಗುತ್ತದೆ. ಆ ರೀತಿ ಪರಿಸ್ಥಿತಿ ನಿರ್ಮಾಣವಾಗಿದೆ. ಮೇಲಿರುವ ಕಸಕಡ್ಡಿಗಳು ಬಟ್ಟೆಗಳು ಇವೆಲ್ಲವೂ ಮನಸ್ಸಿಗೆ ಸ್ವಲ್ಪ ಬೇಸರವನ್ನುಂಟು ಮಾಡುತ್ತವೆ. ಇಲ್ಲಿನ ನೀರು ಅದೇಷ್ಟು ಕಲುಷಿತವಾಗಿದೆ ಎಂದರೆ ಇಲ್ಲಿನ ಮೀನುಗಳು ಸಾಯುವ ಹಂತಕ್ಕೆ ಬಂದಿವೆ. ನಿಮಗೆ ಗೊತ್ತಿರಲಿ ಈ ದೇವಾಲಯದಲ್ಲಿ ಇರುವ ಶಿವನಂತೆಯೇ ಇಲ್ಲಿ ಹರಿಯುವ ಗಂಗೆಯೂ ಪವಿತ್ರವಾಗಿರಬೇಕು, ಶುದ್ಧವಾಗಿರಬೇಕು, ಸ್ವಚ್ಛವಾಗಿಟ್ಟರೆ ಅದೇ ನಾವು ಆ ಶಿವನಿಗೆ ನೀಡುವ ಕಾಣಿಕೆಯಾಗಬಹುದು. ಪರಶಿವನ ಪವಾಡ ನಡೆದಿರುವ ಈ ಕ್ಷೇತ್ರಕ್ಕೆ ನೀವು ಒಮ್ಮೆ ಭೇಟಿ ನೀಡಿ ದರ್ಶನ ಮಾಡಿ ಪುನೀತರಾಗಿ .

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top