ಮನೋರಂಜನೆ

ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಹಿಮಾ ದಾಸ್- ಪ್ರಧಾನಿ, ರಾಷ್ಟಪತಿಗಳಿಂದ ಅಭಿನಂದನೆ

ಐಎಎಎಫ್‌ 20ರ ವಯೋಮಿತಿಯ ವಿಶ್ವ ಜೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ 400 ಮೀ. ಓಟದಲ್ಲಿ ಭಾರತದ ಹಿಮಾ ದಾಸ್ ಚಿನ್ನ ಗೆದ್ದು ದಾಖಲೆ ಬರೆದಿದ್ದಾರೆ. 51.46 ಸೆಕೆಂಡ್ಸ್ ನಲ್ಲಿ 400 ಮೀಟರ್ ಓಟ ಪೂರ್ಣಗೊಳಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ 18 ಹರೆಯದ ಹಿಮಾ, ಈ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

 

 

ಫಿನ್‍ಲೆಂಡ್‍ನಲ್ಲಿ ನಡೆಯುತ್ತಿರುವ ಐಎಎಎಫ್ ಅಂಡರ್ 20 ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನಲ್ಲಿ 18ರ ಹರೆಯದ ಹಿಮಾ 51.46 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು. ಇದೇ ವಿಭಾಗದಲ್ಲಿ ಸ್ಪರ್ಧಿಸಿದ ರೊಮನಿಯಾದ ಆಂಡ್ರಿಯಾ ಮಿಕ್ಲೋಸ್ (52.07 ಸೆಕೆಂಡು) ಬೆಳ್ಳಿ ಹಾಗೂ ಅಮೆರಿಕದ ಟೇಲರ್ ಮ್ಯಾನ್ಸನ್ (52.28 ಸೆಕೆಂಡು) ಕಂಚಿನ ಪದಕಕ್ಕೆ ಅರ್ಹವಾದರು.

 

ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ ತಂದುಕೊಟ್ಟ ಹಿಮಾ ದಾಸ್ ಅವರಿಗೆ ದೇಶಾದ್ಯಂತ ಅನೇಕ ಗಣ್ಯರೂ ಸೇರಿದಂತೆ ಜನಸಾಮಾನ್ಯರೂ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.. ಮುಖ್ಯವಾಗಿ ದೇಶದ ರಾಷ್ಟ್ರಪತಿ ರಮಾನಾಥ್ ಕೊವಿಂದ್ ಮತ್ತು ಪ್ರಧಾನಿ ಮೋದಿ ಹಿಮಾ ದಾಸ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

“20 ವರ್ಷದೊಳಗಿನ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್’ನ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದ ನಮ್ಮ ಸೆನ್ಸಾಷನಲ್ ಸ್ಪಿರಿಟ್ ಹಿಮಾ ದಾಸ್ ಅವರಿಗೆ ಅಭಿನಂದನೆಗಳು. ಇದು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಟ್ರ್ಯಾಕ್ ವಿಭಾಗದ ಮೊಟ್ಟಮೊದಲ ಭಾರತದ ಚಿನ್ನವಾಗಿದೆ. ಅಸ್ಸಾಂ ಮತ್ತು ಭಾರತ ಹೆಮ್ಮೆ ಪಡುವ ಸಂಗತಿಯಾಗಿದ್ದು ಈಗ ಹಿಮಾ ಒಲಿಂಪಿಕ್ ವೇದಿಕೆಯ ಆಕರ್ಷಣೆ ಆಗಿದ್ದಾರೆ” ಎಂದು ಕೋವಿಂದ್ ಅವರು ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ.

“ವಿಶ್ವ ಯು20 ಚಾಂಪಿಯನ್ ಶಿಪ್ ನಲ್ಲಿ 400 ಮೀಟರ್ ನಲ್ಲಿ ಐತಿಹಾಸಿಕ ಚಿನ್ನವನ್ನು ಗೆದ್ದ ಕ್ರೀಡಾಪಟು ಹಿಮಾ ದಾಸ್ ಅವರಿಂದ ಭಾರತವು ಹೆಮ್ಮೆಯಿಂದ ಸಂತಸಪಟ್ಟಿದೆ. ಹಿಮಾ ದಾಸ್ ಅವರ ಈ ಸಾಧನೆಯು ಮುಂದಿನ ವರ್ಷಗಳಲ್ಲಿ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಲಿದೆ. ಹಿಮಾ ದಾಸ್’ಗೆ ಅಭಿನಂದನೆಗಳು” ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ,.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top