ಮನೋರಂಜನೆ

ಚಿತ್ರರಂಗದಲ್ಲಿ ‘ಬಾಸ್’ ಯಾರು? – ಜಗ್ಗೇಶ್ ಹೇಳಿದ್ದು ಹೀಗೆ.

ಚಿತ್ರರಂಗದಲ್ಲಿ ಸ್ಟಾರ್‌ಗಳು ತಮ್ಮ ಪಾಡಿಗೆ ತಾವು ಅನ್ಯೋನ್ಯವಾಗಿದ್ದರೂ ಅಭಿಮಾನಿಗಳ ನಡುವೆ ಆಗಾಗ ತಿಕ್ಕಾಟ ಹೊತ್ತಿಕೊಳ್ಳುತ್ತಿರುತ್ತೆ. ಸದ್ಯ ಇಂಥಾದ್ದೇ ಒಂದು ಕೋಲ್ಡ್ ವಾರ್ ಮತ್ತೆ ಶುರುವಾಗಿ ಕಳೆದೊಂದು ತಿಂಗಳಿನಿಂದ ಅಭಿಮಾನಿಗಳ ನಡುವೆ ಕಾಳಗ ನಡೆಯುತ್ತಿದೆ. ಸ್ಟಾರ್ ನಟರ ಅಭಿಮಾನಿಗಳ ನಡುವೆ ಇಂಥಾದ್ದೊಂದು ವಾರ್ ನಡೆಯಲು ಕಾರಣವಾಗಿರೋದು ‘ಬಾಸ್’ ಎಂಬ ಬಿರುದು. ಕೆಲ ದಿನಗಳಿಂದ ಸ್ಟಾರ್‌ಗಳ ಅಭಿಮಾನಿಗಳ ನಡುವೆ ಬಾಸ್ ಎಂಬ ಬಿರುದಿಗಾಗಿ ಶೀತಲ ಸಮರ ನಡೆಯುತ್ತಿರೋದು ಬಹುಷಃ ಎಲ್ಲರಿಗೂ ಗೊತ್ತಿರೋ ವಿಚಾರವೇ..

 

 

ಟಗರು ಚಿತ್ರದ ಶತದಿನದ ಪೂರೈಸಿದ ಅಂಗವಾಗಿ ನಿರ್ದೇಶಕ ಸೂರಿ ಶಿವಣ್ಣನಿಗೆ ‘ಬಾಸ್ ಆಫ್ ಸ್ಯಾಂಡಲ್ ವುಡ್’ ಎಂಬ ಬಿರುದು ನೀಡಿತ್ತು. ಇದೇ ಅಭಿಮಾನಿಗಳ ನಡುವೆ ‘ಬಾಸ್’ ವಿವಾದ ಹೊತ್ತಿಕೊಳ್ಳಲು ಕಾರಣವಾಗಿತ್ತು. ಶಿವರಾಜ್ ಕುಮಾರ್ ದರ್ಶನ್ ಮತ್ತು ಯಶ್ ಅಭಿಮಾನಿಗಳು ತಮ್ಮ ಪ್ರೀತಿಯ ನಟನನ್ನೇ ‘ಬಾಸ್’ ಅನ್ನಬೇಕು ಎಂಬ ತರೇಹವಾರಿ ವಾದ ಮಂಡಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿತ್ತಾಟದ ಜೊತೆಗೆ ದೊಡ್ಡ ಚರ್ಚೆಗಳು ನಡೆದಿದ್ದವು.

ಈ ವಿಚಾರವಾಗಿ ಸ್ವತಃ ತಾವೇ ಪ್ರತಿಕ್ರಿಯಿಸಿದ್ದ ಅಂಬರೀಷ್,ಶಿವಣ್ಣರಂಥಾ ನಟರುಗಳು “ಇಲ್ಲಿ ಯಾರಿಗೆ ಯಾರೂ ಬಾಸ್ ಇಲ್ಲ ಅವರವರ ಮನೆಗೆ ಅವರೇ ಬಾಸ್” ಎಂದು ವಾಸ್ತವದ ನೆಲೆಗಟ್ಟಿನಲ್ಲಿ ಹೇಳಿದ್ದರು. ಹೀಗಿದ್ದರೂ ಅಭಿಮಾನಿಗಳು ಮಾತ್ರ ‘ಬಾಸ್’ ತಿಕ್ಕಾಟವನ್ನು ಬಿಡುವಂತೆ ಕಾಣುತ್ತಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ಟಿವಿ ಚಾನೆಲ್ಲುಗಳಲ್ಲಿ ಚರ್ಚೆಗಳು ನಡೆಯುತ್ತಲೇ ಇವೆ.. ಈ ಎಲ್ಲಾ ವಿದ್ಯಮಾನಗಳ ನಡುವೆ ನಟ ಕಮ್ ರಾಜಕಾರಣಿ ಜಗ್ಗೇಶ್ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಟ್ವಿಟರ್ ಬಳಕೆದಾರರೊಬ್ಬರು ಪ್ರಕಟಿಸಿದ್ದ ಬಾಸ್ ಕುರಿತಾದ ಪ್ರಶ್ನೆಗೆ ಭಗವದ್ಗೀತೆಯನು ಉಲ್ಲೇಖಿಸಿ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.. “ಇಂಥ ಪ್ರಶ್ನೆಗಳಿಗೆ ಉತ್ತರ ಭಗವತ್ಗೀತೆಯಲ್ಲಿ ಇದೆ!
ಶೃಷ್ಟಿಯ ಎಲ್ಲಾ ಯಶಸ್ಸಿಗೆ ಕಾರಣ ದೇವರು..ಮನುಷ್ಯ ನೆಪಮಾತ್ರ!
ದೇವರು ಕಣ್ಣುಬಿಟ್ಟರೆ ಭಿಕ್ಷುಕ ಸುಪ್ಪತ್ತಿಗೆಯಲ್ಲಿ!ಅವನು ಕಣ್ಣುಮಚ್ಚಿದರೆ ಸಿಂಹಾಸನವೆ ಮಾಯ!
ಹಾಗಾಗಿ ಎಲ್ಲವನ್ನ ದೇವರಮೇಲೆ ಹಾಕಿ ನೆಮ್ಮದಿಯಿಂದ ಬ್ರಾತೃತ್ವದಿಂದ ಬಾಳಲು ಕಲಿಯಬೇಕು!ಹಣಯಶಸ್ಸು ನಶ್ವರ ದೇವರಮುಂದೆ!ಜೀವನತತ್ವ.” ಎಂದು ಆಧ್ಯಾತ್ಮಿಕವಾಗಿ ಹೇಳಲು ಪ್ರಯತ್ನಿಸಿದ್ದಾರೆ,. ಮಾಮೂಲಿ ಭಾಷೆಯಲ್ಲಿ ಹೇಳಿದಾಗಲೇ ಕೇಳದ ಮಂದಿ ಆಧ್ಯಾತ್ಮಿಕವಾಗಿ ಹೇಳಿದರೆ ಕೇಳುತ್ತಾರೆಯೇ? ಎಂಬ ಪ್ರಶ್ನೆ ಅಭಿಮಾನಿಗಳಲ್ಲೇ ಮೂಡಿಕೊಂಡಿರಬಹುದು.

 

 

ಒಟ್ಟಿನಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಯಾರು ಬಾಸ್ ಎಂಬ ವಿವಾದ ಯಾರೇನೇ ಹೇಳಿದರೂ ತಣ್ಣಗಾಗುವಂತೆ ಕಾಣುತ್ತಿಲ್ಲ. ಬಾಸುಗಳೆಲ್ಲ ಅವರವರ ಸಿನಿಮಾ, ಶೂಟಿಂಗು ಅಂತ ತಮ್ಮದೇ ಲೋಕದಲ್ಲಿ ಹಾಯಾಗಿದ್ದರೂ ಅವರ ಅಭಿಮಾನಿಗಳು ಎನಿಸಿಕೊಂಡವರು ಮಾತ್ರ ಇದನ್ನೊಂದು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿ ನಾನಾ ರೀತಿಯ ಆಚರಣೆಗೆ ಇಳಿದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top