ಮನೋರಂಜನೆ

ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ನಿರ್ಮಿಸಿದ ಕೆಜಿಎಫ್.

ಪ್ರೇಕ್ಷಕರ ವಲಯದಲ್ಲಿ ವಿಪರೀತ ಕುತೂಹಲ ಹುಟ್ಟುಹಾಕಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಬಗ್ಗೆ ಯಶ್ ಅಭಿಮಾನಿಗಳು ಸೇರಿದಂತೆ ಸಿನಿರಸಿಕರೆಲ್ಲರಲ್ಲೂ ತಲೆಕೆಡಿಸಿಕೊಂಡು ಕೂತಿದ್ದಾರೆ. ಅದ್ಧೂರಿ ಮೇಕಿಂಗ್, ಪೋಸ್ಟರ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವಂತಹ ಸ್ಟಿಲ್ಲುಗಳ ಮೂಲಕವೇ ಭಾರಿ ಸಂಚಲನ ಸೃಷ್ಟಿಸಿರುವ ಈ ಚಿತ್ರ ಎಬ್ಬಿಸಿರೋ ಅಲೆ ಕಂಡು ಬಹುತೇಕರು ಅಚ್ಚರಿಗೊಂಡಿದ್ದಾರೆ. ಯಶ್ ಅಭಿಮಾನಿಗಳ ಕುತೂಹಲವಂತೂ ಯಶ್ ಕೆಜಿಎಫ್‌ಗಾಗೇ ಬಿಟ್ಟಿರೋ ಉದ್ದ ಗಡ್ಡದ ಕೂದಲಂತೆಯೇ ದಿನೇ ದಿನೆ ಬೆಳೆದುಕೊಳ್ಳಲಾರಂಭಿಸಿದೆ!

 

 

ಇಂಥಾ ಕೆಜಿಎಫ್ ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ಮೈಲಿಗಲ್ಲೊಂದನ್ನು ನೆಟ್ಟಿದೆ.. ಕಳೆದ ಆರು ತಿಂಗಳ ಹಿಂದೆ(ಜನವರಿ 2018) ಚಿತ್ರದ ಟೀಸರ್ ರಿಲೀ ಆಗಿತ್ತಲ್ಲಾ, ಅದು ಯೂಟ್ಯೂಬ್ ನಲ್ಲಿ ಐವತ್ತು ಲಕ್ಷ ವೀಕ್ಷಣೆಗಳನ್ನು ಗಿಟ್ಟಿಸಿಕೊಂಡಿದೆ. ಈ ಮೂಲಕ ಯೂಟ್ಯೂಬ್ ನಲ್ಲಿ ಐವತ್ತು ಲಕ್ಷ ವೀಕ್ಷಣೆ ಪಡೆದ ಕನ್ನಡ ಚಿತ್ರವೊಂದರ ಟೀಸರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೆಜಿಎಫ್ ಟೀಸರ್ ಅನ್ನು ಹೊರತುಪಡಿಸಿದರೆ, ಕಳೆದವಾರ ಬಿಡುಗಡೆಯಾಗಿದ್ದ ‘ದಿ ವಿಲನ್’ ಚಿತ್ರದ ಟೀಸರ್ ಅದಾಗಲೇ ನಲವತ್ತು ಲಕ್ಷ ವೀಕ್ಷಣೆ ಪಡೆದುಕೊಂಡಿದ್ದು ಇಷ್ಟರಲ್ಲೇ ಕೆಜಿಎಫ್ ಅನ್ನು ಹಿಂದಿಕ್ಕಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅಂದಹಾಗೆ ಈಗಾಗಲೇ ಚಿತ್ರೀಕರಣವನ್ನು ಬಹುತೇಕ ಮುಗಿಸಿಕೊಂಡಿರುವ ಚಿತ್ರತಂಡ ಚೆನ್ನೈನಲ್ಲಿ ಪ್ಯಾಚ್ ವರ್ಕ್ ಕೆಲಸಗಳನ್ನು ಮಾಡುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಸೆಪ್ಟೆಂಬರ್ ವೇಳೆಗೆ ಚಿತ್ರ ತೆರೆಗೆ ಬರಲಿದೆ. ಹೊಂಬಾಳೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೂ ಕೂಡಾ ಈ ಚಿತ್ರದ ಆಕರ್ಷಣೆಗಳಲ್ಲೊಂದು. ಇನ್ನುಳಿದಂತೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡುತ್ತಿದ್ದು ಭುವನ್ ಗೌಡ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿರಲಿದೆ. ಶ್ರೀನಿಧಿ ಶೆಟ್ಟಿ ಯಶ್’ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top