fbpx
ದೇವರು

ಆಷಾಢ ಮಾಸಕ್ಕೂ ಕರುನಾಡ ದೇವತೆ ಚಾಮುಂಡಿ ದೇವಿಗೂ ಇರುವ ಸಂಬಂಧವಾದರೂ ಏನು ? ಈ ಎರಡರ ಮಧ್ಯೆ ಇರುವ ನಂಟು ಏನು ?ನೀವೇ ನೋಡಿ ಈ ಕುತೂಹಲಕಾರಿ ಸಂಗತಿ .

ಆಷಾಢ ಮಾಸದಲ್ಲಿ 4 ಶುಕ್ರವಾರಗಳು ಬರುತ್ತವೆ. ಆಶಾಡ ಮಾಸಕ್ಕೂ ಚಾಮುಂಡಿ ದೇವಿಗೂ ನಂಟು ಇದೆಯೇ ? ಇರುವ ಸಂಬಂಧವಾದರೂ ಏನು ?ಅಗಸ್ಟ್ 3 ನೇ ತಾರೀಖು ವರ್ದಂತಿ ಮಹೋತ್ಸವ.
ನಮ್ಮ ಕರುನಾಡ ದೇವತೆ ಚಾಮುಂಡೇಶ್ವರಿ. ಇವಳ ದರ್ಶನ ನಾವು ಯಾವಾಗ ಪಡೆಯುತ್ತೇವೆ ? ಆ ದಿನ ಆ ಕ್ಷಣ ನಮಗೆ ಪರಮಪಾವನ . ಆದರೆ ಆಶಾಡ ಶುಕ್ರವಾರಗಳಲ್ಲಿ ಬೆಟ್ಟ ಹತ್ತಿ ಜಗನ್ಮಾತೆಯ ದರ್ಶನ ಮಾಡುವುದರಿಂದ ಭಕ್ತರಿಗೆ ತುಂಬಾ ಒಳ್ಳೆಯದಾಗುತ್ತದೆ. ಹೀಗಾಗಿ ಬೆಟ್ಟದ ಮೇಲಿರುವ ತಾಯಿಗೆ ಆಷಾಢ ಶುಕ್ರವಾರಗಳಂದು ವಿಶಿಷ್ಟ ಪೂಜೆ ನಡೆಯುತ್ತದೆ.

ನಾಡ ದೇವತೆಯ ಸನ್ನಿಧಿಯಲ್ಲಿ ಆಷಾಢ ಶುಕ್ರವಾರದ ಸಡಗರ.ಚಾಮುಂಡೇಶ್ವರಿಗೆ ಆಶಾಡ ಮಾಸದ ಶುಕ್ರವಾರದ ಪೂಜೆ ಅತ್ಯಂತ ಜೋರು. ಆಶಾಡ ಶುಕ್ರವಾರ ನಾಡದೇವತೆಯ ದರ್ಶನದ ಮಹತ್ವ ಏನು ?
ಮೈಸೂರು ವಿಶ್ವ ಪ್ರಸಿದ್ಧ ನಗರ. ಐತಿಹಾಸಿಕ ಪೌರಾಣಿಕ ಹಿನ್ನೆಲೆಯುಳ್ಳ ಭವ್ಯವಾದ ನಗರ ಮೈಸೂರು. ವಿಶ್ವ ಭೂಪಟದಲ್ಲಿ ಸಾಂಸ್ಕೃತಿಕ ಚರಿತ್ರೆಯಿಂದ ಗುರುತಿಸಿಕೊಂಡಿರುವ ಕೆಲವೇ ಕೆಲವು ನಗರಗಳಲ್ಲಿ ಮೈಸೂರು ಕೂಡ ಒಂದು .ಈ ಅಂದದ ನಗರವನ್ನು ಒಬ್ಬಳು ಶಕ್ತಿದೇವತೆ ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದಾಳೆ .ಈ ದೇವತೆಯನ್ನು ಕರುನಾಡಿನ ಜನರು ಕುಲದೇವತೆ ,ನಾಡ ದೇವತೆ ಎಂದು ಆರಾಧಿಸುತ್ತಾರೆ. ಅವಳೇ ಚಾಮುಂಡಿ, ಮಹಿಷಾಸುರಮರ್ದಿನಿ.

 

 

ಶಿವ ಪ್ರಳಯ ತಾಂಡವವಾಡುವ ವೇಳೆ ಸತಿಯ ಶರೀರ 18 ಭಾಗಗಳಾಗಿ ಭೂಮಿಯ ವಿವಿಧ ಸ್ಥಳಗಳಲ್ಲಿ ಬೀಳುತ್ತದೆ. ಆ ಸ್ಥಳಗಳನ್ನು 18 ಶಕ್ತಿ ಪೀಠಗಳು ಎಂದು ಕರೆಯಲಾಗುತ್ತದೆ . ಆ18 ಶಕ್ತಿ ಪೀಠಗಳಲ್ಲಿ ಒಂದು ಮೈಸೂರಿನ ಚಾಮುಂಡಿ ಬೆಟ್ಟ. ಸತಿಯ ಕೂದಲು ಬಿದ್ದ ಜಾಗವೇ ಚಾಮುಂಡಿ ಶಕ್ತಿ ಪೀಠವಾಗಿ ಪ್ರಸಿದ್ಧಿ ಪಡೆದಿದೆ.
ಸಿಂಹವಾಹಿನಿ ,ಸರ್ವಶಕ್ತಿ, ಜಗನ್ ಮಾತೆ, ಜಗದಂಬೆ, ಕಾಳಿ ,ಚಂಡಿ ಹೀಗೆ ಚಾಮುಂಡೇಶ್ವರಿಯನ್ನು ನಾನಾ ಹೆಸರುಗಳಿಂದ ಪೂಜಿಸಲಾಗುತ್ತದೆ. ಈ ಜಗನ್ಮಾತೆಯ ಚಾಮುಂಡಿಯ ದರ್ಶನಕ್ಕೆ ಆಷಾಢ ಶುಕ್ರವಾರಗಳಂದು ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸುತ್ತಾರೆ. ಆಶಾಡ ಶುಕ್ರವಾರಗಳಲ್ಲಿ ಮುಂಜಾನೆಯಿಂದ ರಾತ್ರಿಯವರೆಗೂ ಲಕ್ಷಾಂತರ ಭಕ್ತರು ಚಾಮುಂಡಿಯ ದರ್ಶನವನ್ನು ಪಡೆದು ಪುನೀತರಾಗುತ್ತಾರೆ.

ನಾಡ ದೇವತೆಗೆ ಆಷಾಢ ಮಾಸದ ನಾಲ್ಕು ಶುಕ್ರವಾರಗಳಂದು ವಿಶೇಷ ಪೂಜೆ ನಡೆಯುತ್ತದೆ.
ಬೆಳಗಿನ ಜಾವದಿಂದಲೇ ಭಕ್ತರು ಬೆಟ್ಟವನ್ನು ಹತ್ತುತ್ತಾರೆ. ಪ್ರತಿ ಮೆಟ್ಟಿಲುಗಳಿಗೂ ಸಹ ಹರಿಶಿಣ ,ಕುಂಕುಮ ಹಚ್ಚಿ ಚಾಮುಂಡಿ ಕಾಪಾಡು ತಾಯಿ ಎಂದು ಬೇಡಿಕೊಳ್ಳುತ್ತಾರೆ. ಆಷಾಢ ಶುಕ್ರವಾರಗಳಂದು ಚಾಮುಂಡೇಶ್ವರಿಗೆ ಅದ್ಭುತ ಅಲಂಕಾರವನ್ನು ಮಾಡಲಾಗುತ್ತದೆ. ಶಕ್ತಿ ದೇವತೆ ಚಾಮುಂಡಿಯನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲುವುದಿಲ್ಲ. ಆಶಾಡ ಶುಕ್ರವಾರದ ಪ್ರಯುಕ್ತ ದೇವಿಯ ಅಲಂಕಾರ ತುಂಬಾ ವಿಶೇಷವಾಗಿರುತ್ತದೆ. ಕಿರೀಟ, ಪಾಶಾಂಕುಶ ಖಡ್ಗ, ತ್ರಿಶೂಲ,ಬಂಗಾರದ ಜಡೆ ಹೀಗೆ ವಿವಿಧ ಆಭರಣಗಳಿಂದ ಚಾಮುಂಡಿ ಆಶಾಡ ಶುಕ್ರವಾರದಂದು ವಿಶಿಷ್ಟವಾಗಿ ಕಂಗೊಳಿಸುತ್ತಾಳೆ.
ಆಷಾಢ ಮಾಸದ ಶುಕ್ರವಾರಗಳು ಶಕ್ತಿದೇವತೆ ಚಾಮುಂಡಿ ದೇವಿಗೆ ಅತ್ಯಂತ ಪ್ರಿಯ. ಹೀಗಾಗಿ ಇವಳ ಸನ್ನಿಧಾನದಲ್ಲಿ ಅಂದು ವಿಶೇಷ ಪೂಜೆ ಪುನಸ್ಕಾರಗಳು ನೆರವೇರುತ್ತವೆ. ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಸಹಸ್ರನಾಮ ಸೇರಿದಂತೆ ಹಲವು ಪೂಜಾ ಕೈಂಕರ್ಯಗಳು ದೇವಿಗೆ ಈ ಸಂದರ್ಭದಲ್ಲಿ ವಿಜೃಂಭಣೆಯಿಂದ ನಡೆಯುತ್ತವೆ.ಕನ್ನಡ ನಾಡಿನ ಶಕ್ತಿದೇವತೆ ಚಂಡ-ಮುಂಡರ ರುಂಡ ಚೆಂಡಾಡಿದ ಮಹಾಮಾಯೆ ಮಹಿಷಾಸುರನನ್ನು ಮರ್ದನ ಮಾಡಿದ ಜಗತ್ ಜನನಿಯ ಸನ್ನಿಧಾನಕ್ಕೆ ಆಶಾಡ ಶುಕ್ರವಾರಗಳಲ್ಲಿ ಸಾಮಾನ್ಯ ಜನರಷ್ಟೇ ಅಲ್ಲ, ರಾಜಕೀಯರು ಸಿನಿಮಾ ನಟ ನಟಿಯರು ಸಹ ಬರುತ್ತಾರೆ .ಯಾಕೆಂದರೆ ಈ ಸಂದರ್ಭದಲ್ಲಿ ದೇವಿಯ ಶಕ್ತಿ ಪ್ರಬಲವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಜಗತ್ ಜನನಿಯಲ್ಲಿ ಬೇಡಿದರೂ ಸಹ ಅದು ಈಡೇರುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಆಷಾಢ ಶುಕ್ರವಾರಗಳಲ್ಲಿ ದೇವಿಯ ದರ್ಶನ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.

 

 

ಚಾಮುಂಡೇಶ್ವರಿಯ ಜನ್ಮದಿನ ಕೂಡ ಇದೆ ಆಷಾಢಮಾಸದಲ್ಲಿ ಬರುತ್ತದೆ .

ಆದ್ದರಿಂದ ಚಾಮುಂಡಿ ಬೆಟ್ಟದ ಮೇಲೆ ವರ್ಧಂತಿ ಮಹೋತ್ಸವ ನಡೆಯುತ್ತದೆ. ಆ ಸಂಭ್ರಮ ಹೇಗಿರುತ್ತದೆ ವಿಜೃಂಭಣೆಯ ವರ್ಧಂತಿ ಮಹೋತ್ಸವ ನಡೆಯುತ್ತದೆ ಚಿನ್ನದ ಉತ್ಸವಮೂರ್ತಿಯ ದರ್ಶನಕ್ಕೆ ಕಾದಿವೆ ಸಹಸ್ರಾರು ಕಣ್ಣುಗಳು.
“ ಐಗಿರಿ ನಂದಿನಿ ನಂದಿತ ಮೇದಿನಿ ವಿಶ್ವ ವಿನೋದಿನಿ ನಂದನುತೇ ಗಿರಿವರ ವಿಂದ್ಯ ಶಿರೋದಿ ನಿವಾಸಿನೀ ವಿಷ್ಣುವಿಲಾಸಿನೀ ಜಿಷ್ಣುನುತೇ ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯ ಕಪರ್ದಿನಿ ಶೈಲಸುತೇ”
ಚಾಮುಂಡೇಶ್ವರಿ ತಾಯಿ ಸಾವಿರಾರು ವರ್ಷಗಳಿಂದ ಬೆಟ್ಟದಮೇಲೆ ನೆಲೆಸಿ ಇಡೀ ಕರುನಾಡನ್ನು ಕಾಯುತ್ತಿದ್ದಾಳೆ .
ಈಗ ವರ್ಧಂತಿ ಮಹೋತ್ಸವದ ಸಂಭ್ರಮ.

ಆಷಾಢ ಮಾಸದ ಕೃಷ್ಣ ಪಕ್ಷದ ರೇವತಿ ನಕ್ಷತ್ರದ ದಿನದಂದು ದೇವಿಯ ವರ್ಧಂತಿ ಮಹೋತ್ಸವ ನೆರವೇರಿಸಲಾಗುತ್ತದೆ. ಅಂದರೆ ಹುಟ್ಟಿದ ದಿನ ಎಂದರ್ಥ. ಚಾಮುಂಡೇಶ್ವರಿಗೆ ವಿಜೃಂಭಣೆಯಿಂದ ನಡೆಸಲಾಗುತ್ತದೆ . ರಾಜಮಹಾರಾಜರ ಕಾಲದಿಂದಲೂ ಚಾಮುಂಡೇಶ್ವರಿಗೆ ವರ್ಧಂತಿ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತ ಬಂದಿದೆ. ಈ ಸಂದರ್ಭದಲ್ಲಿ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ , ವಿಜೃಂಭಣೆಯ ಉತ್ಸವಗಳು ನಡೆದು ಇಡೀ ಬೆಟ್ಟದಲ್ಲಿ ಹಬ್ಬದ ವಾತಾವರಣ ಇರುತ್ತದೆ .
ವರ್ಧಂತಿ ಮಹೋತ್ಸವ ದಿನ ಬೆಳಗಿನ ಜಾವ 3.30 ನಿಮಿಷದಿಂದಲೇ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ಆರಂಭವಾಗುತ್ತವೆ . ದೇವಿಯ ವಿಗ್ರಹಕ್ಕೆ ಅಭ್ಯಂಜನ ಮಾಡಲಾಗುತ್ತದೆ. ವಿವಿಧ ಮಹಾನ್ಯಾಸ ರುದ್ರಾಭಿಷೇಕ, ಪಂಚಾಮೃತಾಭಿಷೇಕ , ಸಹಸ್ರನಾಮ ಅಭಿಷೇಕ , ಸ್ವರ್ಣಾ ಅಭಿಷೇಕ ನೆರವೇರಿಸಲಾಗುತ್ತದೆ .ಚಾಮುಂಡಿ ಮಹೋತ್ಸವದ ಸಂದರ್ಭದಲ್ಲಿ ದೇವಾಲಯ ಅತ್ಯಂತ ಆಕರ್ಷಕವಾಗಿ ಸಿಂಗಾರಗೊಂಡಿರುತ್ತದೆ. ಬಣ್ಣ ಬಣ್ಣದ ಹೂಗಳಿಂದ ದೇವಾಲಯದ ಗರ್ಭಗುಡಿ ಅಲಂಕೃತವಾಗಿರುತ್ತದೆ. ತಾಯಿ ಚಾಮುಂಡಿ ಹುಟ್ಟುಹಬ್ಬದ ದಿನ ವಿಶೇಷವಾಗಿ ಕಂಗೊಳಿಸುತ್ತಾಳೆ.ಹೊಸ ರೇಶಿಮೆ ಸೀರೆಯನ್ನು ಉಟ್ಟು,ರತ್ನ ಖಚಿತ ಆಭರಣಗಳನ್ನು ಧರಿಸಿ, ಸುಂದರವಾಗಿ ಕಂಗೊಳಿಸುತ್ತಾಳೆ. ಸುಂದರವಾಗಿ ಕಂಗೊಳಿಸುವ ಈ ತಾಯಿಯನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲುವುದಿಲ್ಲ.

 

 

ವರ್ಧಂತಿ ಮಹೋತ್ಸವದ ಪ್ರಯುಕ್ತ ಚಾಮುಂಡೇಶ್ವರಿಗೆ ಚಿನ್ನದ ಪಲ್ಲಕ್ಕಿಯ ಉತ್ಸವ ನಡೆಸಲಾಗುತ್ತದೆ. ಈ ಉತ್ಸವಕ್ಕೆ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ಚಾಲನೆ ನೀಡುತ್ತಾರೆ . ಮಂಗಳ ವಾದ್ಯಗಳ ನಡುವೆ ಚಾಮುಂಡೇಶ್ವರಿ ತಾಯಿ ಪಲ್ಲಕ್ಕಿಯಲ್ಲಿ ಕುಳಿತು ದೇವಾಲಯದ ಸುತ್ತಲೂ ಪ್ರದಕ್ಷಿಣೆಯನ್ನು ಹಾಕುತ್ತಾಳೆ. ಈ ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳುವುದಕ್ಕೆ ಸಹಸ್ರಾರು ಭಕ್ತರು ಆಗಮಿಸುತ್ತಾರೆ.
ತಾಯಿಯ ವರ್ಧಂತಿ ಉತ್ಸವ ಪ್ರತಿ ವರ್ಷ ಆಷಾಢ ಮಾಸದ, ಕೃಷ್ಣ ಪಕ್ಷದ, ರೇವತಿ ನಕ್ಷತ್ರದ ದಿನ ವಿಜೃಂಭಣೆಯಿಂದ ನಡೆಯುತ್ತದೆ.ಈ ವಿಶಿಷ್ಟ ದಿನದಂದು ಚಾಮುಂಡೇಶ್ವರಿಯ ದರ್ಶನವನ್ನು ಪಡೆಯುವುದು ಅತ್ಯಂತ ಪುಣ್ಯಪ್ರದ ಎಂದು ಹೇಳಲಾಗುತ್ತದೆ. ಆದ್ದರಿಂದಲೇ ತಮಿಳುನಾಡು, ಆಂಧ್ರ ಸೇರಿದಂತೆ ಕರ್ನಾಟಕದ ಮೂಲೆ ಮೂಲೆಯಿಂದ ಚಾಮುಂಡಿ ಬೆಟ್ಟಕ್ಕೆ ಭಕ್ತರು ಆಗಮಿಸುತ್ತಾರೆ.

ಚಾಮುಂಡಿ ತಾಯಿ ಒಂದು ಕಾಲದಲ್ಲಿ ಅರಸು ಮನೆತನಕ್ಕೆ ಮನೆದೇವತೆ. ಆದರೆ ಇಂದು ಕನ್ನಡಿಗರಿಗೆ ನಾಡ ದೇವತೆಯಾಗಿದ್ದಾಳೆ.ಶಕ್ತಿ ದೇವತೆಯಾದ ಚಾಮುಂಡಿ ದೇವಿಯ ಆಶೀರ್ವಾದದಿಂದಲೇ ಈ ನಾಡು ಸುಭಿಕ್ಷವಾಗಿದೆ.ನಾಡಿನ ಪ್ರಜೆಗಳಿಗೂ ಯಶಸ್ಸು ಆಗಿದೆ ಎಂದರೆ ಅದು ಈ ಚಾಮುಂಡೇಶ್ವರಿ ದೇವಿಯಿಂದಲೇ. ಆಗಸ್ಟ್ ಮೂರನೇ ತಾರೀಕಿನಂದು ಚಾಮುಂಡೇಶ್ವರಿ ದೇವಿ , ಕರುನಾಡ ದೇವಿಯ ವರ್ಧಂತಿ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top