ಸಮಾಚಾರ

ರಾಮುಲು ಜೊತೆಗಿನ ಗೆಳೆತನವನ್ನು ಈ ಮಹಾನ್ ದಿಗ್ಗಜರಿಗೆ ಹೋಲಿಸಿದ ಜನಾರ್ಧನ ರೆಡ್ಡಿ.

ಎಲ್ಲರಿಗೂ ಗೊತ್ತಿರೋ ಹಾಗೆ ಇಂದು ಸ್ನೇಹಿತರ ದಿನಾಚರಣೆ.. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಪ್ರೀತಿಯ ಗೆಳೆಯ-ಗೆಳತಿಯರಿಗೆ ಸಾಮಾಜಿಕ ಜಲತಾಣಗಳ ಮೂಲಕ ಭಿನ್ನ ವಿಭಿನ್ನವಾಗಿ ಈ ವಿಶೇಷ ದಿನದ ಶುಭಕಾಮನೆಗಳನ್ನು ತಿಳಿಸುತ್ತಿದ್ದಾರೆ. ಅಂತೆಯೇ ಮಾಜಿ ಸಚಿವ ಗಾಳಿ ಜನಾರ್ಧನ ರೆಡ್ಡಿ ಕೂಡ ತಮ್ಮ ಕುಚಿಕು ಗೆಳೆಯ ಶ್ರೀರಾಮುಲು ಅವರಿಗೆ ಅತ್ಯಂತ ವಿಭಿನ್ನವಾಗಿ ಸ್ನೇಹಿತರ ದಿನದ ಶುಭಕಾಮನೆಗಳನ್ನು ರವಾನಿಸಿದ್ದಾರೆ.. ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಸ್ನೇಹದ ಮತ್ತು ಸ್ನೇಹಿತರ ಮಹತ್ವವನ್ನು ಸಾರಿರುವ ಜನಾರ್ಧನ ರೆಡ್ಡಿ ಭಾರತದ ವಿವಿಧ ಕ್ಷೇತ್ರಗಳಲ್ಲಿ ಖ್ಯಾತಿಯಾಗಿರುವ ಸ್ನೇಹಿತರ ಹೆಸರನ್ನು ಉಲ್ಲೇಖಿಸಿ ಶುಭಕೋರಿದ್ದಾರೆ.. ತಾವು ಮತ್ತು ರಾಮುಲು ಜೊತೆಯಿರುವ ಫೋಟೋವೊಂದನ್ನು ಅಪ್ಲೋಡ್ ಮಾಡಿ ರೆಡ್ಡಿ ಈ ಮೂಲಕವೇ ರಾಮುಲು ಅವರಿಗೂ ವಿಶೇಷ ಸಂದೇಶ ರವಾನಿಸಿದ್ದಾರೆ..

 

 

ಜನಾರ್ಧನ ರೆಡ್ಡಿ ಅವರು ಪ್ರಕಟಿಸಿರುವ ಪೋಸ್ಟ್ ಈ ರೀತಿ ಇದೆ.
ಸ್ನೇಹವೇ ಅಮೂಲ್ಯ ಕೊಡುಗೆ….

ಇಂದು ಸ್ನೇಹಿತರ ದಿನ. ನಮ್ಮ ಬದುಕಿಗೊಂದು ಅರ್ಥ ನೀಡುವ ಸ್ನೇಹಿತರು, ಅವರ ಪ್ರೀತಿಯನ್ನು ನೆನೆಯುವ ಸುದಿನ.
ಸ್ನೇಹಕ್ಕೆ ವಿಶಾಲ ಅರ್ಥವಿದೆ. ಅನಂತ ಶಕ್ತಿ ಇದೆ. ಆತ್ಮೀಯ ಸ್ನೇಹಿತರಿಲ್ಲದ ಬದುಕೇ ಅಪೂರ್ಣ ಎನ್ನಬಹುದು.
ಪ್ರತಿ ಕ್ಷೇತ್ರದಲ್ಲೂ ಅನ್ಯೋನ್ಯ ಸ್ನೇಹಿತರು ಇರುತ್ತಾರೆ. ಭಾರತೀಯ ಕ್ರಿಕೆಟ್ ರಂಗದಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳೆ ಅವರ ನಡುವಿನ ಸ್ನೇಹ, ರಾಜಕೀಯ ಕ್ಷೇತ್ರದಲ್ಲಿ ದಿಗ್ಗಜರಾದ ಅಟಲ್‍ಬಿಹಾರಿ ವಾಜಪೇಯಿ ಹಾಗೂ ಲಾಲ್‍ಕೃಷ್ಣ ಆಡ್ವಾಣಿ ಅವರ ದೋಸ್ತಿ, ರಾಜ್ಯ ರಾಜಕೀಯದಲ್ಲಿ ರಾಮಕೃಷ್ಣ ಹೆಗಡೆ ಹಾಗೂ ವೀರೇಂದ್ರ ಪಾಟೀಲ ಅವರ ನಡುವಿನ ಸ್ನೇಹ ಹೀಗೆ ಸ್ನೇಹದ ಬಗ್ಗೆ ಮಾತನಾಡುವಾಗ ಅನೇಕ ಮಹನೀಯರು ಕಣ್ಮುಂದೆ ಬಂದು ನಿಲ್ಲುತ್ತಾರೆ. ಹೆಗಡೆ ಹಾಗೂ ಪಾಟೀಲರಂತೂ ಜನಮಾನಸದಲ್ಲಿ ಲವಕುಶ ಎಂದೇ ಗುರುತಿಸಿಕೊಂಡಿದ್ದಾರೆ.
ಇನ್ನು ಚಿತ್ರರಂಗದಲ್ಲೂ ಸ್ನೇಹದ ಘನತೆ ಸಾರುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಕವಿರತ್ನ ಕಾಳಿದಾಸ ಚಿತ್ರದಲ್ಲಿ ಕಾಳಿದಾಸನಾದ ಡಾ.ರಾಜಕುಮಾರ್ ಮತ್ತು ಭೋಜರಾಜನಾದ ಶ್ರೀನಿವಾಸ್‍ಮೂರ್ತಿ ಅವರ ಸ್ನೇಹ, ಕಳ್ಳ ಕುಳ್ಳ ಚಿತ್ರದ ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ಅವರ ಸ್ನೇಹ, ದಿಗ್ಗಜರು ಚಿತ್ರದ ಡಾ.ವಿಷ್ಣುವರ್ಧನ್ ಮತ್ತು ಅಂಬರೀಷ್ ಅವರ ಸ್ನೇಹ, ಹೀಗೆ ಬೆಳ್ಳಿ ಪರದೆ ಮೇಲೆ ಸ್ನೇಹದ ಮಹತ್ವ ಸಾರಿದ ನಾಯಕರನ್ನು ಹೆಸರಿಸುತ್ತ ಹೋದಂತೆ ಸಾಲು ಬೆಳೆಯುತ್ತದೆ.
ಕಾಲವನ್ನು ತಡೆಯೋರು ಯಾರು ಇಲ್ಲ, ಗಾಳಿಯನ್ನು ಹಿಡಿಯೋರು ಇಲ್ಲವೆ ಇಲ್ಲ, ನನ್ನಿಂದ ನಿನ್ನ, ನಿನ್ನಿಂದ ನನ್ನ ದೂರ ಮಾಡಲು ಎಂದೂ ಆಗೊಲ್ಲ….
ಕುಚ್ಚಿಕು ಕುಚ್ಚಿಕು ಕುಚ್ಚಿಕು, ನೀನು ಚಡ್ಡಿ ದೋಸ್ತು ಕಣೋ ಕುಚ್ಚಿಕು, ಜೀವಕ್ಕಿನ್ನ ಜಾಸ್ತಿ ಕಣೋ ಕುಚ್ಚಿಕು….ಎಂದು ಸ್ನೇಹವನ್ನು ವರ್ಣಿಸುವ ಹಾಡುಗಳು ಕೋಟಿ ಕೋಟಿ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ಉಳಿದಿವೆ.
ಇನ್ನು ಅಪಾರ ಜನಮೆಚ್ಚುಗೆ ಗಳಿಸಿದ ಶೋಲೆ ಚಿತ್ರದ ಅಮಿತಾಭ್ ಬಚ್ಚನ್ ಹಾಗೂ ಧರ್ಮೇಂದ್ರ ಅವರ ಸ್ನೇಹದ ಸನ್ನಿವೇಶಗಳು, ಏ ದೋಸತಿ ಹಮ್ ನಹಿ ಛೋಡೆಂಗೆ…. ಎನ್ನುವ ಅದ್ಭುತ ಹಾಡು ಸ್ನೇಹದ ಪಾವಿತ್ರ್ಯವನ್ನು ಅದ್ವಿತೀಯವಾಗಿ ಚಿತ್ರಿಸಿವೆ.
ಬಾಲ್ಯದಿಂದ ಬೆಳೆದು ದೊಡ್ಡವರಾಗುವವರೆಗೆ ಪ್ರತಿಯೊಬ್ಬರ ಬದುಕಿನಲ್ಲೂ ಆತ್ಮೀಯ ಸ್ನೇಹಿತರು ಇರುವಂತೆ ನನ್ನ ಬಾಳ ಪಯಣಕ್ಕೂ ಅನೇಕ ಸ್ನೇಹಿತರು ಸುಂದರ ಅರ್ಥ ಕಲ್ಪಿಸಿದ್ದಾರೆ.
ಬಳ್ಳಾರಿಯಲ್ಲಿ ಬಾಲ್ಯದ ಸ್ನೇಹಿತ ಪ್ರೇಮ್‍ಬಾಬು,ತಿಮ್ಮಾರೆಡ್ಡಿ ಹಾಗೂ ಇತರರೊಂದಿಗೆ ಕಳೆದ ದಿನಗಳನ್ನು ಮೆಲಕು ಹಾಕಿದಾಗ ಬದುಕು ಧನ್ಯ ಎನಿಸುತ್ತದೆ. ಇನ್ನು ನನ್ನ ಬದುಕಿನ ಕಷ್ಟ, ಸುಖ ಹೀಗೆ ಪ್ರತಿಯೊಂದು ಹೆಜ್ಜೆಯಲ್ಲೂ ನನ್ನೊಂದಿಗೆ ಇರುವ ಶಾಸಕ ಶ್ರೀರಾಮುಲು ಅವರಂಥ ಅಪರೂಪದ ಸ್ನೇಹಿತ ಸಿಕ್ಕಿದ್ದು ನನ್ನ ಭಾಗ್ಯವೇ ಎನ್ನಬಹುದು. ಅವರ ಸ್ನೇಹವನ್ನು ನಾನು ಎಂದೂ ಮರೆಯಲು ಸಾಧ್ಯವಿಲ್ಲ.
ಹೀಗೆ ನೆನೆಯುತ್ತ ಹೋದಂತೆ ಕನ್ನಡದ ನೆಲದಲ್ಲಿರುವ ಕುಲಕೋಟಿ ಬಾಂಧವರೆಲ್ಲ ನನ್ನ ಕಣ್ಮುಂದೆ ಸ್ನೇಹಿತರಾಗಿ ಬಂದು ನಿಲ್ಲುತ್ತಾರೆ.
ನನ್ನ ಬದುಕಿಗೊಂದು ಅರ್ಥ ನೀಡಿದ ಎಲ್ಲ ಗೆಳೆಯರಿಗೂ ಸ್ನೇಹಿತರ ದಿನದ ಶುಭಾಶಯಗಳು….

-ಗಾಲಿ ಜನಾರ್ದನ ರೆಡ್ಡಿ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top