ಸಮಾಚಾರ

ತಮಿಳುನಾಡಿನ ಮಾಜಿ ಸಿಎಂ, ತಲೈವಾ ‘ಕಲೈಗ್ನಾರ್’, ಕರುಣಾನಿಧಿ ಇನ್ನಿಲ್ಲ

ತಮಿಳುನಾಡು ಮಾಜಿ ಸಿಎಂ, ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ  ಮಂಗಳವಾರ ಸಂಜೆ ಸಾವನ್ನಪ್ಪಿದ್ದಾರೆ. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ ಸಂಜೆ 6.10ಕ್ಕೆ ಚೆನ್ನೈ ನಗರದ ಕಾವೇರಿ ಆಸ್ಪತ್ರೆಯಲ್ಲಿ ಅಸು ನೀಗಿದರು ಎಂದು ತಿಳಿದು ಬಂದಿದೆ.

ಚೆನ್ನೈ ನಲ್ಲಿರುವ ಕಾವೇರಿ ಆಸ್ಪತ್ರೆ ಮುಂದೆ ಅಪಾರ ಅಭಿಮಾನಿಗಳು ಸೇರಿದ್ದಾರೆ. ಪೊಲೀಸ್ ಅಧಿಕಾರಿಗಳು ತುರ್ತು ಸಭೆಯನ್ನು ನಡೆಸುತ್ತಿದ್ದಾರೆ, ಆಸ್ಪತ್ರೆಯ ಸುತ್ತಲೂ 1,000ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಿದ್ದಾರೆ. ಜಿಲ್ಲೆಗಳ ಪೊಲೀಸ್ ಠಾಣೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಇಂದು ಸಂಜೆ 6 ಗಂಟೆಯಿಂದಲೇ ಸರ್ಕಾರಿ ಸ್ವಾಮ್ಯದ ಮದ್ಯ ಮಾರಾಟ ಮಾಡುತ್ತಿದ್ದ ಮಳಿಗೆಗಳು ಬಂದ್ ಆಗಿವೆ. ಆಸ್ಪತ್ರೆ ಹಾಗು ಗೋಪಾಲಪುರಂ ನಿವಾಸದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅಣ್ಣಾ ವಿವಿ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.

 

 

3 ಜೂನ್ 1924 ರಲ್ಲಿ ತಮಿಳುನಾಡು ರಾಜ್ಯದ ನಾಗಪಟ್ಟಣಂ ಜಿಲ್ಲೆಯ ತಿರುಕುವಲೈಯಲ್ಲಿ ಮುತ್ತುವೇಲು ಹಾಗು ಅಂಜು ದಂಪತಿ ಮಗನಾಗಿ ಹುಟ್ಟಿದ ಕರುಣಾನಿಧಿ ಸಿನಿಮಾ ಕಥೆ, ಸಂಭಾಷಣೆಕಾರ ಆಗಿ ವೃತ್ತಿಜೀವನವ ಶುರು ಮಾಡಿದರು. ನಂತರದ ದಿನಗಳಲ್ಲಿ ಹಿಂದಿ ಭಾಷೆ ವಿರೋಧಿ, ದ್ರಾವಿಡ ಹೋರಾಟದ ಮೂಲಕ ರಾಜಕೀಯ ಪ್ರವೇಶ ಮಾಡಿದರು.

1957 ರಿಂದ ನಿರಂತರವಾಗಿ ಇಲ್ಲಿಯವರೆಗೂ ಅವರು ಶಾಸಕರಾಗಿದ್ದಾರೆ. ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿದ್ದರು. ಇನ್ನು 5 ಬಾರಿ ಮುಖ್ಯಮಂತ್ರಿಯಾದ ಹೆಗ್ಗಳಿಕೆ ಅವರಿಗೆ ಇದೆ. 1969-71, 1971-76, 1989-91, 1996-2001 ಮತ್ತು 2006- 2011ರವರೆಗೂ ಮುಖ್ಯಮಂತ್ರಿ ಆಗಿ ತಮಿಳುನಾಡಿನಲ್ಲಿ ಆಡಳಿತ ನಡೆಸಿದ್ದಾರೆ. 2004ರ ಲೋಕಸಭೆ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದಲ್ಲಿ ಮಿತ್ರಪಕ್ಷಗಳು ಎಲ್ಲ 39 ಸ್ಥಾನಗಳನ್ನೂ ಗೆಲ್ಲುವ ಮೂಲಕ ಯುಪಿಎ ಮೈತ್ರಿಕೂಟಕ್ಕೆ ಬಲ ನೀಡಿದ ಹಿರಿಮೆ ಕರುಣಾನಿಧಿ ಅವರಿಗೆ ಸಲ್ಲುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top