fbpx
ಸಮಾಚಾರ

ಕರುಣಾನಿಧಿ ಸಾವಿಗೆ ಕರ್ನಾಟಕ ಪ್ರತಿಕ್ರಿಯೆ ನೀಡಿದ್ದು ಹೀಗೆ

ತಮಿಳುನಾಡು ಮಾಜಿ ಸಿಎಂ, ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಮಂಗಳವಾರ ಸಂಜೆ ಸಾವನ್ನಪ್ಪಿದ್ದಾರೆ. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ ಸಂಜೆ 6.10ಕ್ಕೆ ಚೆನ್ನೈ ನಗರದ ಕಾವೇರಿ ಆಸ್ಪತ್ರೆಯಲ್ಲಿ ಅಸು ನೀಗಿದರು ಎಂದು ತಿಳಿದು ಬಂದಿದೆ. ನಮ್ಮ ರಾಜ್ಯದ ನಾಯಕರು ಸಂತಾಪ ಸೂಚಿಸಿದ್ದಾರೆ

 

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ:
ಹಿರಿಯ ರಾಜಕಾರಣಿ, ತಮಿಳುನಾಡಿನ ಮಾಜಿ ಸಿಎಂ ಎಂ. ಕರುಣಾನಿಧಿ ಸಾವು ಅತ್ಯಂತ ನೋವು ತಂದಿದೆ ಎಂದ ಬಿ.ಎಸ್.ಯಡಿಯೂರಪ್ಪ ಕರುಣಾನಿಧಿ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಕರುಣಾನಿಧಿ ಸಿಎಂ ಆಗಿದ್ದ ಸಂಧರ್ಭದಲ್ಲಿ ತಮಿಳುನಾಡಿನಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪನೆ ಮಾಡಲಾಯಿತು. ಇದೇ ವೇಳೆ ಕರ್ನಾಟಕದಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಮಾಡುವ ಮೂಲಕ 2 ಭಾಷಿಗರ ನಡುವೆ ಸಾಮರಸ್ಯಕ್ಕೆ ವಿಶೇಷ ಪ್ರಯತ್ನ ನಡೆಸಲಾಗಿತ್ತು. ಅವರ ನನ್ನ ಒಡನಾಟ ಎಂದೂ ಮರೆಯುವಂತಿಲ್ಲ. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲೆಂದು ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

 

 

 

ಸಿಎಂ ಕುಮಾರಸ್ವಾಮಿ:
ಜೀವಿತಾವಧಿಯಲ್ಲೇ ದಂತಕತೆ ಆಗಿದ್ದ ಕರುಣಾನಿಧಿ ನಿಧನ ದಕ್ಷಿಣ ಭಾರತದ ಬಹುದೊಡ್ಡ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಅನೇಕ ಬಾರಿ ಶ್ರೀ ಕರುಣಾನಿಧಿ ಅವರನ್ನು ಭೇಟಿ ಮಾಡಿದ್ದೆ. ಪ್ರಾದೇಶಿಕ ಪಕ್ಷಗಳ ಮಹತ್ವವನ್ನು ಪ್ರತಿ ಬಾರಿಯೂ ನನಗೆ ಮನವರಿಕೆ ಮಾಡಿಕೊಡುತ್ತಿದ್ದರು ಎಂದು ಹೇಳಿದ್ದಾರೆ.

ಸಚಿವ ಆರ್.ವಿ.ದೇಶಪಾಂಡೆ:
ಕರುಣಾನಿಧಿ ಅವರು ತಮಿಳುನಾಡು ರಾಜ್ಯದ ಸಮಕಾಲೀನ ರಾಜಕೀಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಅವರಿಂದಾಗಿ ಸಮಾಜದ ಕೆಳವರ್ಗಗಳಿಗೆ ರಾಜಕೀಯ ದನಿ ಪ್ರಾಪ್ತವಾಯಿತು. ತಮಿಳುನಾಡಿನ ಅಸ್ಮಿತೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು ರಾಷ್ಟ್ರ ರಾಜಕಾರಣದಲ್ಲಿ ಕೂಡ ಹಲವು ಸಂದರ್ಭಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು ಎಂದು ಸಚಿವ ದೇಶಪಾಂಡೆ ಸ್ಮರಿಸಿಕೊಂಡಿದ್ದಾರೆ.

ಪೇಜಾವರ ಸ್ವಾಮೀಜಿ:
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ನಿಧನಕ್ಕೆ ವಿಶ್ವೇಶತೀರ್ಥ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದರು. ‘ಕರುಣಾನಿಧಿಯವರು ದೊಡ್ಡ ಜನನಾಯಕರಾಗಿದ್ದರು. ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು. ಅವರು ದೇವರನ್ನು ಒಪ್ಪದಿದ್ದರೂ, ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಕೋರುತ್ತೇನೆ ಎಂದು ಪೇಜಾವರ ಶ್ರೀಗಳು ತಿಳಿಸಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ವಿಶ್ವನಾಥ್:
ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರ ಅಗಲಿಕೆ ದ್ರಾವಿಡ ಸಂಸ್ಕೃತಿಯ ಕಳಚಿದ ಪ್ರಮುಖ ತಳಹದಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಕಂಬನಿ ಮಿಡಿದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top