ಸಮಾಚಾರ

ಮತ್ತೆ ಪೋಸ್ಟ್‌ಫೋನ್ ಆಯ್ತು ಅಂಬಿ ನಿಂಗ್ ವಯಸ್ಸಾಯ್ತೋ ಆಡಿಯೋ ರಿಲೀಸ್ ಡೇಟ್- ಕಾರಣವೇನು ಗೊತ್ತಾ?

ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಕಿಚ್ಚ ಸುದೀಪ್ ಮುಖ್ಯಭೂಮಿಕೆಯಲ್ಲಿರುವ ಕಾರಣಕ್ಕೆ ಆರಂಭಕ್ಕೂ ಮುಂಚೆಯೇ ಸಾಕಷ್ಟು ಹೆಸರು ಮಾಡಿದ್ದ ಚಿತ್ರ `ಅಂಬಿ ನಿಂಗ್ ವಯಸ್ಸಾಯ್ತೋ’. ಬಹು ವರ್ಷಗಳ ನಂತರ ರೆಬೆಲ್ ಸ್ಟಾರ್ ಅಂಬರೀಷ್ ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರುವುದರಿಂದ ಚಿತ್ರದ ಮೇಲೆ ಒಂದಷ್ಟು ಕುತೂಹಲಗಳು ಮನೆ ಮಾಡಿವೆ. ಈಗಾಗಲೇ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಇಂಥಾ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಮತ್ತೊಮ್ಮೆ ಮುಂದಕ್ಕೆ ಹೋಗಿದೆ.

 

 

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚಿತ್ರದ ಧ್ವನಿಸುರುಳಿ ಸಮಾರಂಭ ಇಂದು(ಆಗಸ್ಟ್ 10) ನಗರದ ಅರಮನೆ ಮೈದಾನದಲ್ಲಿ ನಡೆಯಬೇಕಿತ್ತು. ಆದರೆ ಕಾರಣಾಂತರಗಳಿಂದ ಇದು ಮುಂದೂಡಲ್ಪಟ್ಟಿದೆ. ಸಮಾರಂಭಕ್ಕೆ ಕನ್ನಡ ಒಳಗೊಂಡಂತೆ ದಕ್ಷಿಣ ಭಾರತದ ದಿಗ್ಗಜ ನಟರುಗಳು ಕೂಡಾ ಬರಲಿದ್ದಾರೆ ಎಂದು ಹೇಳಲಾಗಿತ್ತು. ಹಾಗಾಗಿ ಎಲ್ಲಾ ನಟರ ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಇಂದು ಆಡಿಯೋ ಬಿಡುಗಡೆ ಸಮಾರಂಭ ನಡೆಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.. ಸದ್ಯ ಪೋಸ್ಟ್ ಫೋನ್ ಆಗಿರುವ ಆಡಿಯೋ ರಿಲೀಸ್ ಸಮಾರಂಭ ಯಾವತ್ತು ನಡೆಯಲಿದೆ ಎಂದು ನಿಖರವಾಗಿ ತಿಳಿದಿಲ್ಲ. ಎಲ್ಲ ನಟರ ಡೇಟ್ಸ್ ಹೊಂದಿಸಿಕೊಂಡು, ಆ ನಂತರವೇ ಸಮಾರಂಭದ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ ಎಂದು ಚಿತ್ರತಂಡದ ಆಪ್ತವಲಯಗಳು ತಿಳಿಸಿವೆ.

ಅಂದಹಾಗೆ ಕಿಚ್ಚ ಕ್ರಿಯೇಶನ್ಸ್ ಅರ್ಪಿಸಿ, ಕೆ.ಎಸ್.ಕೆ. ಶೋ ರೀಲ್ ಪ್ರೊಡಕ್ಷನ್ ಅಡಿಯಲ್ಲಿ ತಯಾರಾಗುತ್ತಿರುವ `ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರವನ್ನು ಕಿಚ್ಚನ ಶಿಷ್ಯ ಗುರುದತ್ ಗಾಣಿಗ ಎಂಬ 26ರ ಪೋರ ನಿರ್ದೇಶಿಸುತ್ತಿದ್ದಾನೆ. ಈ ಚಿತ್ರವನ್ನು ಕಿಚ್ಚ ಸುದೀಪ್ ಮತ್ತು ಮಂಜುನಾಥ್ ಗೌಡ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಬರುವ ಅಂಬಿಯವರ ಪ್ಲಾಶ್ ಬ್ಯಾಕ್ ಸನ್ನಿವೇಶದಲ್ಲಿ ಸುದೀಪ್ ಗೆ ಜೋಡಿಯಾಗಿ ಅಂದ್ರೆ ಸುಹಾಸಿನಿಯವರ ಯವ್ವನದ ಪಾತ್ರದಲ್ಲಿ ಶ್ರುತಿ ಹರಿಹರನ್ ನಟಿಸುತ್ತಿದ್ದಾರೆ. ಈ ಚಿತ್ರ ತಮಿಳಿನಲ್ಲಿ ಸೂಪರ್ ಹಿಟ್ಟಾಗಿದ್ದ ಪವರ್ ಪಾಂಡಿ ಚಿತ್ರದ ರೀಮೇಕ್. ಆದರೆ ಒಟ್ಟಾರೆ ಕಥೆ ಮತ್ತು ಸನ್ನಿವೇಷಗಳನ್ನು ಇಲ್ಲಿನ ನೇಟಿವಿಟಿಗೆ ಒಗ್ಗಿಸಿಕೊಂಡು ಗುರುದತ್ ದೃಷ್ಯ ಕಟ್ಟಿದ್ದಾರಂತೆ. ಆರಂಭದಿಂದಲೂ ಸಾಕಷ್ಟು ವಿಶೇಷತೆಗಳನ್ನು ಹೊತ್ತು ತರುತ್ತಿರುವ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರವು ಆಗಸ್ಟ್ ಕೊನೆಯ ವಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಿದ್ದವಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top