fbpx
ದೇವರು

ಈ ಪವಿತ್ರ ಪುಣ್ಯ ಕ್ಷೇತ್ರದಲ್ಲಿ ಮದುವೆ ಆದ್ರೆ ದಾಂಪತ್ಯ ನೂರು ಕಾಲ ಉಳಿಯುತ್ತಂತೆ .ಈ ದೇವಸ್ಥಾನಕ್ಕೂ ಪುರಾಣ ಕಥೆಗೂ ಇದೆ ನಂಟು ,ಏನ್ ಆ ನಂಟು ನೀವೇ ನೋಡಿ

ಇಲ್ಲಿ ಭಾರತದಲ್ಲಿ ಅತಿ ಹೆಚ್ಚು ವಿವಾಹವಾಗುವ ದೇವಾಲಯ ಇಲ್ಲಿ ವಿವಾಹವಾದರೆ ದಾಂಪತ್ಯ ಹೆಚ್ಚು ಸುಖಕರವಾಗಿರುತ್ತದೆ.
ಮದುವೆ ಎನ್ನುವುದು ಒಂದು ಪವಿತ್ರವಾದ ಬಂದ. ಗಂಡು-ಹೆಣ್ಣು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ಪರ್ಯಂತ ಜೊತೆಗಿದ್ದರೆ ಮದುವೆಗೆ ಒಂದು ಅರ್ಥ ಬರುತ್ತದೆ. ಆದರೆ ಇತ್ತೀಚೆಗೆ ಚಿಕ್ಕ ಚಿಕ್ಕ ಕಾರಣಗಳಿಗೆ ವಿವಾಹ ವಿಚ್ಛೇದನವನ್ನು ಕೊಡುತ್ತಿದ್ದಾರೆ. ಆದರೆ ಈ ದೇವಾಲಯದಲ್ಲಿ ಮದುವೆಯಾದರೆ ಹಾಲು-ಜೇನಿನಂತೆ ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಹೀಗಾಗಿಯೇ ಸೆಲೆಬ್ರಿಟಿಗಳು ಕೂಡ ಇಲ್ಲಿ ಮದುವೆಯಾಗುತ್ತಾರೆ.ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಮದುವೆ.ಮದುವೆ ಒಂದು ಸುಂದರ ಬಂದ. ಉತ್ತಮ ಹೊಂದಾಣಿಕೆ ಇರುವ ಗಂಡು ಹೆಣ್ಣನ್ನು ಒಂದಾಗಿಸುವ ಪ್ರಕ್ರಿಯೆ ವಿವಾಹ ಎನಿಸುತ್ತದೆ.ಜನನದಿಂದ ಸಾವಿನವರೆಗೆ ಮನುಷ್ಯ ಶೋಡಶ ಸಂಸ್ಕಾರಗಳಿಗೆ ಒಳಪಡುತ್ತಾನೆ. ಷೋಡಶ ಸಂಸ್ಕಾರಗಳಲ್ಲಿ ವಿವಾಹ ಅತ್ಯಂತ ಮಹತ್ವದ್ದು.ವಿವಾಹ ಗಂಡು-ಹೆಣ್ಣು ಮಾಡಿಕೊಳ್ಳುವ ಕರಾರತ್ತಲ್ಲ. ಇದೊಂದು ಮಂಗಳಕಾರ್ಯ. ದೈವದತ್ತವಾದ ಆತ್ಮ ಸಂಬಂಧ. ವಂಶ ಅಭಿವೃದ್ಧಿಗೆ ನೆರವಾಗುವ ಶುಭ ಸಂಸ್ಕಾರ. ವ್ಯಕ್ತಿ ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಮಹಾದ್ವಾರವೇ ಮದುವೆ.
ವಿವಾಹ ಭಾಗ್ಯ ಗಂಡು-ಹೆಣ್ಣನ್ನು ಕೂಡಿಸುವ ಪವಿತ್ರ ಬಂದ. ಪ್ರತಿ ಮನುಷ್ಯನ ಬಾಳಿಗೆ ಮದುವೆ ಮಹತ್ವದ ತಿರುವು ಕೊಡುತ್ತದೆ. ಮದುವೆಯಾದ ಬಳಿಕ ದಂಪತಿ ಹೊಸ ಸಂಸಾರಕ್ಕೆ ಕಾಲಿಡುತ್ತಾರೆ. ಮದುವೆಯಾದ ನಂತರ ಗಂಡು ಹೆಣ್ಣು ಜೀವನ ಪರ್ಯಂತ ಕೂಡಿ ಬಾಳಬೇಕು. ಅನ್ಯೋನ್ಯವಾಗಿ ಜೀವನ ಮಾಡಬೇಕು ಎನ್ನುವ ಕಾರಣಕ್ಕಾಗಿ ಶಾಸ್ತ್ರಗಳ ಪ್ರಕಾರ ಸೂಕ್ತ ಘಳಿಗೆ , ಮುಹೂರ್ತ ನೋಡಿ ವಿವಾಹ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಗುತ್ತದೆ.

 

ಈ ಒಂದು ದೇವಸ್ಥಾನಕ್ಕೂ ಸುಂದರ ದಾಂಪತ್ಯಕ್ಕೆ ನಂಟು ಇದೆ.
ನಿಮಗೆ ಒಳ್ಳೆಯ ಜೀವನ ಸಂಗಾತಿ ಬೇಕಾ ? ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಹ ಸಂಸಾರ ನಿಮ್ಮದಾಗಬೇಕೇ ? ಇದೆಲ್ಲಾ ಆಗಬೇಕು ಎಂದರೆ ನೀವು ಈ ದೇವಾಲಯದಲ್ಲಿ ಮದುವೆಯಾಗಬೇಕು. ಇದು ಕೇರಳ ರಾಜ್ಯದಲ್ಲಿರುವ ಗುರುವಾಯುರುನಲ್ಲಿರುವ ಗುರುವಾಯೂರಪ್ಪನ ದೇವಾಲಯ. ಮದುವೆಗೆ ಅತ್ಯಂತ ಶುಭಪ್ರದ ಎನ್ನಲಾಗುತ್ತದೆ. ಇದು ಭಾರತದ ಅತಿ ಹೆಚ್ಚು ವಿವಾಹಗಳಾಗುವ ದೇಗುಲವಿದು. ಶ್ರೀಕೃಷ್ಣನ ಸಮ್ಮುಖದಲ್ಲಿ ಕಂಕಣಭಾಗ್ಯ, ಇಲ್ಲಿ ವಿವಾಹವಾದರೆ ದಾಂಪತ್ಯ ಜೀವನ ಸುಖಕರ . ಇಲ್ಲಿರುವ ಪುಟ್ಟ ಕೃಷ್ಣನ ಗುರುವಾಯೂರಪ್ಪ. ಗುರುವಾಯೂರಪ್ಪನ ಮಹಿಮೆ ಅಪಾರ. ಕೃಷ್ಣನ ಸಮ್ಮುಖದಲ್ಲಿ ಮದುವೆಯಾದರೆ ಸುಖೀ ದಾಂಪತ್ಯ ಜೀವನ ಪ್ರಾಪ್ತಿಯಾಗುತ್ತದೆ. ಹೀಗಾಗಿ ಭಾರತದಲ್ಲಿರುವ ದೇವಾಲಯಗಳ ಪೈಕಿ ಹೆಚ್ಚು ಮದುವೆಗಳಾಗುವುದು ಇಲ್ಲೇ ಎಂಬ ಖ್ಯಾತಿಗೆ ಗುರುವಾಯೂರಪ್ಪನ ಸನ್ನಿಧಿ ಪ್ರಖ್ಯಾತಿಯಾಗಿದೆ. ಗುರುವಾಯೂರಪ್ಪನ ಸನ್ನಿಧಿ ಸರಳ ಮದುವೆಗೆ ಪ್ರಖ್ಯಾತಿಯಾಗಿದೆ. ಗಂಡು ಹೆಣ್ಣು ಪುರೋಹಿತರ ಮುಂದೆ ನಿಂತು ಹಾರ ಬದಲಾಯಿಸುವ ಮೂಲಕ ಮದುವೆ ಕಾರ್ಯ ಮುಗಿಯುತ್ತದೆ. ವಿಶೇಷ ಎಂದರೆ ಇಲ್ಲಿ ಈ ಹೂವಿನ ಮಾಲೆಯ ಬದಲಿಗೆ ತುಳಸಿ ಮಾಲೆಯನ್ನು ಗಂಡು ಹೆಣ್ಣು ಪರಸ್ಪರ ಬದಲಾಯಿಸಿಕೊಳ್ಳುತ್ತಾರೆ. ಈ ದೇವಸ್ಥಾನದಲ್ಲಿ ಸಾಮಾನ್ಯ ಜನರಷ್ಟೇ ಅಲ್ಲ .ಸೆಲೆಬ್ರಿಟಿಗಳು ಕೂಡ ಮದುವೆಯಾಗುತ್ತಾರೆ. ಈಗಾಗಲೇ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಕೇರಳದ ನಟ-ನಟಿಯರು ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಮದುವೆಯಾಗಿದ್ದಾರೆ.

 

 

 

ಚಂದದೂರಿನಲ್ಲಿ ಇದ್ದಾನೆ ಗುರುವಾಯೂರಪ್ಪ.ಶ್ರೀ ಕೃಷ್ಣನೇ ಇಲ್ಲಿ ಗುರುವಾಯೂರಪ್ಪ. ಗುರುವಾಯೂರಪ್ಪ ದ್ವಾರಕೆಯಿಂದ ಬಂದವನು. ಭಾರತದಲ್ಲಿರುವ ಐದು ಪ್ರಮುಖ ಮಹಾವಿಷ್ಣುವಿನ ದೇವಾಲಯಗಳಲ್ಲಿ ಕೇರಳದ ಅತ್ಯಂತ ಪ್ರಮುಖ ಪ್ರಸಿದ್ಧವಾದ ಈ ದೇಗುಲ ಕೇರಳದ ತ್ರಿಶೂರ್ ನಿಂದ ಕೇವಲ 29 ಕಿಲೋಮೀಟರ್ ದೂರದಲ್ಲಿದೆ. ಗುರುವಾಯೂರಪ್ಪನ ಮಹಿಮೆಯಿಂದ ಈ ಕ್ಷೇತ್ರ ಭರತ ಖಂಡದಲ್ಲಿ ಪ್ರಜ್ವಲಿಸುತ್ತಿದೆ. ಸುಮಾರು ಒಂದು ಸಾವಿರ ವರ್ಷಕ್ಕೂ ಹಳೆಯದಾದ ಗುರುವಾಯೂರು ದೇವಾಲಯವನ್ನು ಸಾಂಪ್ರದಾಯಿಕ ಕೇರಳ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ದೇಗುಲವನ್ನು ಭೂಲೋಕದ ವೈಕುಂಠ, ದಕ್ಷಿಣದ ದ್ವಾರಕ ಎಂದು ಕರೆಯಲಾಗುತ್ತದೆ. ಗುರುವಾಯೂರನಲ್ಲಿರುವ ಶ್ರೀ ಕೃಷ್ಣನ ಮೂರ್ತಿ ಸರಿ ಸುಮಾರು ಐದು ಸಾವಿರ ವರ್ಷಗಳಷ್ಟು ಪ್ರಾಚೀನವಾದದ್ದು. ಪಾತಾಳ ಶಿಲೆಗಳಿಂದ ಕೆತ್ತಲಾಗಿರುವ ಕೃಷ್ಣಮೂರ್ತಿ ಅತ್ಯಂತ ಸುಂದರವಾಗಿದೆ. ಚತುರ್ಭುಜನಾಗಿರುವ ಗುರುವಾಯೂರಪ್ಪ ಪಂಚಜನ್ಯ ಸುದರ್ಶನ ಚಕ್ರರಾಜದಂಡವನ್ನು ಹಿಡಿದಿದ್ದಾನೆ.

ಶ್ರೀ ಕೃಷ್ಣ ಗುರುವಾಯೂರಪ್ಪನು ಇಲ್ಲಿ ನೆಲೆಸಿರುವುದರ ಹಿಂದೆ ಒಂದು ಪೌರಾಣಿಕ ಕಥೆಯು ಇದೆ.
ಸೃಷ್ಟಿಕರ್ತ ಬ್ರಹ್ಮ ದ್ವಾರಕೆಯಲ್ಲಿ ಶ್ರೀಕೃಷ್ಣನನ್ನು ಪೂಜಿಸುತ್ತಿದ್ದನು. ಬ್ರಹ್ಮ ಸ್ವರ್ಗ ಲೋಕಕ್ಕೆ ಮರಳಿದಾಗ ದ್ವಾರಕೆ ಸಮುದ್ರದ ನೀರಿನಲ್ಲಿ ಮುಳುಗುವ ಸಂದರ್ಭ ಎದುರಾಯಿತು. ಆಗ ದ್ವಾರಕೆಯಲ್ಲಿದ್ದ ಶ್ರೀಕೃಷ್ಣನ ಮೂರ್ತಿಯನ್ನು ಬೇರೆಡೆ ಪ್ರತಿಷ್ಠಾಪಿಸುವ ನಿರ್ಧಾರವನ್ನು ಕೈಗೊಂಡ. ಇದಕ್ಕಾಗಿ ಒಂದು ಪವಿತ್ರ ಕ್ಷೇತ್ರವನ್ನು ಹುಡುಕಿಕೊಡುವಂತೆ ದೇವಾನು ದೇವತೆಗಳಲ್ಲಿ ಬ್ರಹ್ಮನು ಕೇಳಿಕೊಂಡನು. ಪವಿತ್ರ ಕ್ಷೇತ್ರದ ಹುಡುಕಾಟಕ್ಕಾಗಿ ದೇವಗುರು ಬೃಹಸ್ಪತಿ ಮತ್ತು ವಾಯುದೇವ ಹೊರಟು ನಿಂತರು. ಪುಣ್ಯ ಭೂಮಿಯ ಹುಡುಕಾಟದಲ್ಲಿದ್ದಾಗ ಕೇರಳದಲ್ಲಿ ಅವರಿಗೆ ಪರಶುರಾಮನ ಭೇಟಿಯಾಯಿತು. ಪರಶುರಾಮ, ಬೃಹಸ್ಪತಿ ಮತ್ತು ವಾಯುವು ಜೊತೆಗೆ ಸಮೀಪದಲ್ಲಿದ್ದ ರುದ್ರ ತೀರ್ಥದ ಬಳಿ ಕರೆದುಕೊಂಡು ಹೋದರು. ಈ ರುದ್ರ ತೀರ್ಥ ಎಂತಹ ಪುಣ್ಯ ಸ್ಥಳವಾಗಿತ್ತು ಎಂದರೆ ಇಲ್ಲಿ ಶಿವನು ಕುಟುಂಬ ಸಮೇತನಾಗಿ ಮಹಾವಿಷ್ಣುವನ್ನು ಆರಾಧಿಸುತ್ತಿದ್ದ. ಇಂತಹ ಪವಿತ್ರ ರುದ್ರ ತೀರ್ಥದ ಬಳಿ ಶಿವ ಪಾರ್ವತಿ ಸಮೇತ ವಾಯು ಮತ್ತು ಗುರುವನ್ನು ಸ್ವಾಗತಿಸಲಾಯಿತು. ನಂತರ ಇಲ್ಲಿಯೇ ಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಗುರು ಮತ್ತು ವಾಯು ಇಲ್ಲಿ ಜೊತೆಯಲ್ಲಿ ಇದ್ದುದರಿಂದ ಈ ಕೃಷ್ಣನಿಗೆ ಗುರುವಾಯೂರಪ್ಪನಾದ. ಗುರುವಾಯೂರಪ್ಪನನ್ನು ಇಂದು ಪೂಜಿಸಲ್ಪಡುವ ಶ್ರೀಕೃಷ್ಣನಿಗೆ ಅಪಾರ ಭಕ್ತ ಸಮೂಹವಿದೆ. ಈ ಸ್ವಾಮಿಯನ್ನು ತ್ರಿಮೂರ್ತಿಗಳಾದ ಬ್ರಹ್ಮ ,ವಿಷ್ಣು, ಮಹೇಶ್ವರರು ಸಹ ಪೂಜಿಸಿದ್ದಾರೆ ಎನ್ನುವ ಪ್ರತೀತಿ ಇದೆ. ಈ ಮಹಿಮಾನ್ವಿತ ಕೃಷ್ಣನ ಬಾಲಕೃಷ್ಣ ಹೀಗೆ ಹಲವಾರು ಹೆಸರುಗಳಿಂದ ಭಕ್ತರು ಪೂಜಿಸಿ ಆರಾಧಿಸುತ್ತಾರೆ.

 

 

 

ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪುಣ್ಯಕ್ಷೇತ್ರವಿದೆ. ಈ ದೇಗುಲದಲ್ಲಿ ವಸ್ತ್ರ ಸಂಹಿತೆ ಪಾಲನೆ ಕಡ್ಡಾಯ. ಶಬರಿಮಲೆಗೂ ಗುರುವಾಯೂರಿಗೂ ಇದೆ ಅವಿನಾಭಾವ ನಂಟು. ಗುರುವಾಯೂರ್ ಶ್ರೀಕೃಷ್ಣನ ದರ್ಶನಕ್ಕೆ ಪ್ರತಿ ನಿತ್ಯ ಅಸಂಖ್ಯಾತ ಭಕ್ತರು ಬರುತ್ತಾರೆ. ಹಾಗಾಗಿ ಈ ದೇಗುಲವನ್ನು ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಭಾರತದ ನಾಲ್ಕನೇ ದೇವಾಲಯ ಎಂದು ವಿಂಗಡಿಸಲಾಗಿದೆ. ಈ ದೇವಾಲಯದ ವಿಶೇಷತೆ ಏನೆಂದರೆ ಇಲ್ಲಿನ ವಸ್ತ್ರಸಂಹಿತೆ. ಈ ದೇಗುಲಕ್ಕೆ ಬರುವ ಭಕ್ತರೆಲ್ಲ ಇಲ್ಲಿ ಕಡ್ಡಾಯವಾಗಿ ವಸ್ತ್ರಸಂಹಿತೆಯನ್ನು ಪಾಲಿಸಬೇಕು. ಮಹಿಳೆಯರು ಸೀರೆ, ಲಂಗ ,ದಾವಣಿಯಂತಹ ದಕ್ಷಿಣ ಭಾರತದ ಉಡುಪನ್ನು ಧರಿಸಿಕೊಂಡು ದೇವಾಲಯಕ್ಕೆ ಬರಬೇಕು. ಪುರುಷರು ಬಿಳಿ ಅಥವಾ ಗೋಧಿ ಬಣ್ಣದ ಪಂಚೆಯನ್ನು ಧರಿಸಬೇಕು. ಮೇಲಂಗಿ ಧರಿಸುವಂತಿಲ್ಲ. ಇತ್ತೀಚೆಗೆ ಉತ್ತರ ಭಾರತದ ಚೂಡಿದಾರ್ ಧರಿಸಿದವರಿಗೂ ಇಲ್ಲಿ ಪ್ರವೇಶ ನೀಡಲಾಗುತ್ತಿದೆ.
ನಾರದ ಪುರಾಣದ ಪ್ರಕಾರ ಪಾಂಡವ ರಾಜನಾದ ಜನಮೇಜಯನು ಗುರುವಾಯೂರಿಗೆ ಬಂದು ತನ್ನ ರೋಗವನ್ನು ವಾಸಿ ಮಾಡಿಕೊಂಡಿದ್ದನಂತೆ. ಹೀಗಾಗಿ ಇಲ್ಲಿಗೆ ಬಂದರೆ ಸಕಲ ರೋಗ ನಿವಾರಣೆಯಾಗುತ್ತದೆ ಎನ್ನುವುದು ಭಕ್ತರ ಅಚಲವಾದ ನಂಬಿಕೆ.
ಶಬರಿಮಲೆಗೂ ಗುರುವಾಯೂರಿಗೆ ಅವಿನಾಭಾವ ನಂಟು ಇದೆ. ಶಬರಿಮಲೆಗೆ ಹೋಗುವ ಭಕ್ತರು ಇಲ್ಲಿಗೆ ಭೇಟಿ ನೀಡುವ ವಾಡಿಕೆ ಇದೆ. ಇಲ್ಲಿ ಇಡುಮುಡಿ ಕಟ್ಟಿಕೊಂಡು ಯಾತ್ರೆಗೆ ಹೋಗುವ ಪರಿಪಾಠವಿದೆ.ಈ ದೇವಾಲಯದಲ್ಲಿ ಮಂಜಾಡಿ ಗುರು ಅಂದರೆ ಗುಲಗಂಜಿ ಬೀಜಗಳಿಗೆ ವಿಶೇಷ ಸ್ಥಾನವಿದೆ. ಗುಲಗಂಜಿಯನ್ನು ಅದೃಷ್ಟದ ಬೀಜ ಎನ್ನಲಾಗುತ್ತದೆ. ಬಡ ಭಕ್ತೆಯೊಬ್ಬಳು ಕೃಷ್ಣನಿಗೆ ಈ ಬೀಜಗಳ ಮೂಲಕವೇ ತನ್ನ ಭಕ್ತಿ ಸಮರ್ಪಿಸಿದ್ದಳು. ಈ ದೇವಾಲಯದಲ್ಲಿ ಇಂದಿಗೂ ಈ ಪದ್ಧತಿಯನ್ನು ಮುಂದುವರೆಸಿಕೊಂಡು ಬರಲಾಗಿದೆ.

ಇಲ್ಲಿ ತುಲಾಭಾರ ಸೇವೆ ನಡೆಯುತ್ತದೆ.
ಕೃಷ್ಣನ ಬಳಿ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತ ಭಕ್ತರು ತಮ್ಮ ತೂಕಕ್ಕೆ ಸಮನಾಗಿ ಬೆಲ್ಲ, ಸಕ್ಕರೆ, ತೆಂಗಿನಕಾಯಿ ಮತ್ತು ಬಾಳೆಹಣ್ಣಿನ ತುಲಾಭಾರ ಸೇವೆಯನ್ನು ನಡೆಸುತ್ತಾರೆ. ಅಷ್ಟೇ ಅಲ್ಲದೆ ಮಕ್ಕಳಿಗೆ ಇಲ್ಲಿ ಅನ್ನ ಪ್ರಾಶನವನ್ನು ಮಾಡಿಸಲಾಗುತ್ತದೆ.
ಗುರುವಾಯೂರಿನ ಮತ್ತೊಂದು ಆಕರ್ಷಣೆ ಎಂದರೆ ಅದು ಆನೆಯ ಓಟ. ದೇವಾಲಯದಲ್ಲಿ ಆನೆಗಳ ನಡುವೆ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ. ಯಾವ ಆನೆ ದೇವಾಲಯದ ಸುತ್ತ ದೇವಾಲಯದ ಎದುರಿಗೆ ಇರುವ ಕಂಬವನ್ನು ಮೊದಲು ಮುಟ್ಟುತ್ತದೆಯೋ ಆ ಆನೆಯನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.ಆ ಆನೆಗಳ ಓಟ ನಿಜಕ್ಕೂ ಮೈನವಿರೇಳಿಸುತ್ತದೆ.ಗುರುವಾಯೂರಪ್ಪನ ಸನ್ನಿಧಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ.ಈ ಸಂದರ್ಭದಲ್ಲಿ ಇಲ್ಲಿ ವಿಶೇಷ ಉತ್ಸವಗಳು ನಡೆಯುತ್ತವೆ.ಈ ಉತ್ಸವಗಳ ವೇಳೆ ಅಲಂಕೃತ ಆನೆಗಳು ಪಂಚವಾದ್ಯಗಳು ಭಕ್ತಿ ಪರವಶರಾದ ಜನತೆಯನ್ನು ನೋಡುವುದು ಒಂದು ಕಣ್ಣಿಗೆ ಹಬ್ಬದಂತೆ ಇರುತ್ತದೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top