fbpx
ದೇವರು

ಶೃಂಗೇರಿ ದಸರಾ ದರ್ಬಾರು ,ಈ ದಸರಾ ಹಿಂದೆ ಇದೆ ಭವ್ಯವಾದ ಇತಿಹಾಸ ಮತ್ತು ಪರಂಪರೆ ಅದರ ಬಗ್ಗೆ ನಿಮಗೆಷ್ಟು ಗೊತ್ತು,ಗೊತ್ತಿಲ್ಲ ಅಂದ್ರೆ ತಿಳ್ಕೊಳ್ಳಿ

ಶೃಂಗೇರಿ ಶಾರದಾಂಬೆ ಕ್ಷೇತ್ರದಲ್ಲಿಯೂ ಕೂಡ ದಸರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ ಈ ದಸರಾಕ್ಕೆ ಭವ್ಯವಾದ ಇತಿಹಾಸ ಮತ್ತು ಪರಂಪರೆ ಬಗ್ಗೆ ನಿಮಗೆಷ್ಟು ಗೊತ್ತು.
ಇದು ಮಲೆನಾಡಿನ ಮಡಿಲಲ್ಲಿ ಮೈದಳೆದ ಪುಣ್ಯಕ್ಷೇತ್ರ. ಆದಿಗುರು ಶಂಕರಾಚಾರ್ಯರು ಸ್ಥಾಪಿಸಿದ ಮೊದಲನೇ ಮಠ ಇಲ್ಲಿ ನಡೆಯುವ ದಸರಾ ದರ್ಬಾರ್ ನಯನ ಮನೋಹರ .ಸುತ್ತಲೂ ಪಶ್ಚಿಮ ಘಟ್ಟಗಳ ಸಾಲು. ನಿರ್ಮಲವಾಗಿ ಬಳುಕುತ್ತಾ ಶಾಂತವಾಗಿ ಬಳುಕುತ್ತಿರುವ ತುಂಗೆ, ಸುಂದರ ಪರಿಸರದಲ್ಲಿ ನಿಸರ್ಗ ದೇವತೆಯ ದರ್ಶನ . ಈ ಮಲೆನಾಡ ಮಡಿಲು ಶಾರದಾ ದೇವಿಯ ನೆಲೆಬೀಡು, ಇಂತಹ ಮಲೆನಾಡ ಮಡಿಲಲ್ಲಿ ಬೆಳೆದು ನಿಂತ ಕ್ಷೇತ್ರವೇ ಶೃಂಗೇರಿ.

ಶೃಂಗೇರಿ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಇದನ್ನು ದೇವಾಲಯಗಳ ನಗರ ಎಂದೇ ಕರೆಯುತ್ತಾರೆ. ಹಿಂದೆ ಈ ಪಟ್ಟಣವನ್ನು ಶೃಂಗಗಿರಿ ಎಂದೇ ಕರೆಯಲಾಗುತ್ತಿತ್ತು. ಯಾಕೆಂದರೆ ಈ ಪವಿತ್ರ ಸ್ಥಳದಲ್ಲಿ ಶೃಂಗೇರಿಯ ತುಂಗಾ ತೀರದಲ್ಲಿ, ಆಶ್ರಮವನ್ನು ನಿರ್ಮಿಸಿ , ಜಪವನ್ನು ಮಾಡಿದ್ದರಂತೆ. ತುಂಗೆಯ ಎಡದಂಡೆಯ ಮೇಲೆ ರಥದ ಸ್ವರೂಪದಲ್ಲಿರುವ ತುಂಗಾ ದೇವಾಲಯ ಅತ್ಯಾಕರ್ಷಕವಾಗಿದೆ. ಕ್ರಿಸ್ತಶಕ 1338 ರಲ್ಲಿ ವಿಜಯನಗರದ ಸಾಮ್ರಾಜ್ಯ ಸಂಸ್ಥಾಪಕ ಗುರುಗಳಾದ ಸ್ವಂತ ವಿದ್ಯಾರಣ್ಯರು ಈ ದೇವಾಲಯವನ್ನು ಕಟ್ಟಿದರು ಎನ್ನಲಾಗುತ್ತದೆ. ಈ ದೇವಾಲಯ ಹೊಯ್ಸಳ ,ದ್ರಾವಿಡ ಹಾಗೂ ಚಾಲುಕ್ಯ, ವಿಜಯನಗರ ಸಾಮ್ರಾಜ್ಯದ ಶಿಲ್ಪಕಲಾ ಚಾತುರ್ಯದ ಸಂಗಮ ಇದು. ಆದಿಗುರು ಶಂಕರಾಚಾರ್ಯರು ಸ್ಥಾಪಿಸಿದ ಮೊದಲನೇ ಮಠ ಇದು. ಕೆಲವೇ ದಿನಗಳಲ್ಲಿ ನವರಾತ್ರಿ ಶುರುವಾಗಲಿದೆ. ನವರಾತ್ರಿಯ ಒಂಭತ್ತು ದಿನಗಳ ಕಾಲ ನವದುರ್ಗಾ ಎಲ್ಲೆಡೆಯಲ್ಲೂ ಶ್ರದ್ಧಾ, ಭಕ್ತಿಯಿಂದ ಪೂಜಿಸಲಾಗುತ್ತದೆ. ಅದರಲ್ಲೂ ಶೃಂಗೇರಿಯಲ್ಲಿ ನಡೆಯುವ ದಸರಾ ಪ್ರಸಿದ್ಧಿ ಪಡೆದಿದೆ. ನವರಾತ್ರಿ ವೇಳೆ ಈ ದೇವಿಯ ಪ್ರಸಿದ್ಧ ಕ್ಷೇತ್ರವನ್ನು ದರ್ಶನ ಮಾಡಿದರೆ ಸಂಕಷ್ಟಗಳು ನಿವಾರಣೆಯಾಗುತ್ತವೆ ಎನ್ನುವ ನಂಬಿಕೆ ಇದೆ.

 

 

 

ಕನ್ನಡಿಗರ ನಾಡ ಹಬ್ಬವಾದ ದಸರಾ, ಕೇವಲ ಮೈಸೂರಿಗಷ್ಟೇ ಸೀಮಿತವಲ್ಲ, ಮಂಗಳೂರಿನ ಕುದ್ರೋಳಿ ದಸರಾ, ಮಡಿಕೇರಿಯ ದಸರಾ, ಶೃಂಗೇರಿಯ ದಸರಾ ಮಹೋತ್ಸವಗಳು ಈ ನಾಡಿನಲ್ಲಿ ನಡೆಯುತ್ತವೆ. ರಾಜ್ಯದಲ್ಲಿರುವ ಬಹುತೇಕ ಎಲ್ಲ ಶಕ್ತಿದೇವತೆಯ ದೇವಾಲಯಗಳಲ್ಲಿ ನವರಾತ್ರಿ ಉತ್ಸವ ಶ್ರದ್ಧಾ ಭಕ್ತಿಯಿಂದ ಜರುಗುತ್ತದೆ. ಆದಿ ಶಂಕರಾಚಾರ್ಯರು ಪ್ರತಿಷ್ಠಾಪಿಸಿದ ಶಾರದಾಂಬೆ ಮಾತೆಯ ಕ್ಷೇತ್ರ, ಶೃಂಗೇರಿಯ ದಸರಾ ಪರಂಪರೆಯ ವೈಭವ ಇತಿಹಾಸವಿದೆ. ವಿಜಯನಗರ ಅರಸರ ಕಾಲದಿಂದ “ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ” ಎನ್ನುವ ಬಿರುದು ಶೃಂಗೇರಿಯ ಜಗದ್ಗುರುಗಳಿಗೆ ಲಭಿಸಿದೆ. ವಿಜಯನಗರದ ಅರಸರು ದಸರಾ ಮಹೋತ್ಸವವನ್ನು ಅನುದಾನವಾಗಿ ನಡೆಸಿಕೊಂಡು ಬರಲಾಗಿದೆ.
ಶೃಂಗೇರಿಯ ದಸರಾ ಮಹೋತ್ಸವ, ಶರನ್ನವರಾತ್ರಿ ಎಂದೇ ಖ್ಯಾತಿ ಪಡೆದಿದೆ. ಈ ಆಧುನಿಕ ಯುಗದಲ್ಲೂ ಶಾಸ್ತ್ರ, ಸಂಪ್ರದಾಯ ಸೂತ್ರ ಆಚರಣೆಗೆ ಚ್ಯುತಿ ಬಾರದಂತೆ, ಪ್ರತಿವರ್ಷ ಇಲ್ಲಿ ವಿಜೃಂಭಣೆಯಿಂದ ನವರಾತ್ರಿಯ ಉತ್ಸವ ಜರುಗುತ್ತದೆ. ಅಸುರ ಶಕ್ತಿಯನ್ನು ಮೆಟ್ಟಿನಿಂತ ದೈವೀ ಶಕ್ತಿಯ ಸಂಕೇತವಾದ ದಸರಾ ಅಪೂರ್ವ ಮಹೋತ್ಸವವಾಗಿ ಮೈದಳೆಯುತ್ತದೆ. ಮೈಸೂರಿನಲ್ಲಿ ಮಹಿಷಾಸುರನನ್ನು ಸಂಹರಿಸಿದ ರುದ್ರ ರೂಪಿಣಿಯಾದ ಚಾಮುಂಡೇಶ್ವರಿಯ ಪೂಜೆಯೊಂದಿಗೆ ಆರಂಭವಾಗುವ ನವರಾತ್ರಿಯ ಮೈಸೂರ ದಸರಾ ಪ್ರಾರಂಭವಾದರೆ, ಶೃಂಗೇರಿಯಲ್ಲಿ ಶಾಂತ ಸ್ವರೂಪಿಣಿಯಾದ ಶಾರದೆಯ ಪೂಜೆಯೊಂದಿಗೆ ಶರನ್ನವರಾತ್ರಿಗೆ ಚಾಲನೆ ದೊರೆಯುತ್ತದೆ.

ಶೃಂಗೇರಿ ದಸರಾ ಆಚರಣೆಗೆ ಇದೇ ಶ್ರೀಮಂತ ಹಿನ್ನೆಲೆ.
ದಸರಾ ಸಂದರ್ಭದಲ್ಲಿ ದೇವಿಯು ವಿವಿಧ ಅಲಂಕಾರಗಳಲ್ಲಿ ಕಂಗೊಳಿಸುತ್ತಾಳೆ ಶಾರದ ಮಾತೆ. ಜೀವನದಲ್ಲೊಮ್ಮೆ ದಸರಾ ದರ್ಬಾರ್ ನೋಡಲೇಬೇಕು.ನವ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ, ಬೀದಿಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಶಾರದೆಯ ತಾಣ , ಎಲ್ಲಿ ನೋಡಿದರೂ ಜನಸಾಗರ, ಶರನ್ನವರಾತ್ರಿಗಾಗಿ ಶೃಂಗೇರಿ ತಯಾರಾಗಿ ನಿಂತಿರುವ ಸುಂದರ ದೃಶ್ಯಗಳು ನಮ್ಮ ಕಣ್ಣಿಗೆ ನೋಡಲು ಸುಂದರವಾಗಿ ಕಾಣಿಸುತ್ತವೆ.
ಶೃಂಗೇರಿಯಲ್ಲಿ ದಸರಾ ಆಚರಣೆ ಶುರುವಾಗಿದ್ದೇ ಒಂದು ರೋಚಕ ಕಥೆ .
14ನೇ ಶತಮಾನದಲ್ಲಿ ವಿದ್ಯಾರಣ್ಯರು ದಸರಾ ಆಚರಣೆಗೆ ಮುನ್ನುಡಿ ಬರೆದಿದ್ದರು. ಶಾಂತ ಸ್ವರೂಪಿಣಿಯಾದ ಶಾರದೆ ಮಹಿಷಾಸುರ ರಕ್ತ ಬೀಜಾಸುರ ಸೇರಿದಂತೆ ಮೊದಲಾದ ಅಸುರರನ್ನು ಸಂಹರಿಸಲು ರುದ್ರ ರೂಪ ತಾಳಿದಳು. ವಿಜಯದಶಮಿಯಂದು ದೇವಿ ಅಸುರನನ್ನು ಸಂಹರಿಸಿ ವಿಜಯೋತ್ಸವ ಆಚರಿಸಿದ ಸಂಕೇತವಾಗಿ, ಇಲ್ಲಿ ವಿದ್ಯಾರಣ್ಯರು ದಸರಾ ಮಹೋತ್ಸವ ಆರಂಭಿಸಿದರು. ಶೃಂಗೇರಿಯಲ್ಲಿ ಆಶ್ವಯುಜ ಶುದ್ಧ ಪಾಡ್ಯದಿಂದ ನವಮಿಯವರೆಗೆ ಶಾರದೆಗೆ ವಿಶೇಷ ಪೂಜೆ, ಪುನಸ್ಕಾರಗಳು ಜರುಗುತ್ತವೆ ಈ ಸಂದರ್ಭದಲ್ಲಿ ಶಾರದೆ, ದುರ್ಗೆ , ಸರಸ್ವತಿ ಮತ್ತು ಲಕ್ಷ್ಮಿ ದೇವಿಯ ರೂಪದಲ್ಲಿ ವಿಜೃಂಭಣೆಯಿಂದ ಪೂಜಿಸಲ್ಪಡುತ್ತಾಳೆ ಶಾರದಾ ಮಾತೆ. ಆದಿಶಂಕರಾಚಾರ್ಯರು ಶಾರದೆಯ ಗಂಧದ ಮೂರ್ತಿಯನ್ನು ಸ್ಥಾಪಿಸಿದರು.
ಹದಿನಾಲ್ಕನೆಯ ಶತಮಾನದಲ್ಲಿ ವಿದ್ಯಾರಣ್ಯರು ಚಿನ್ನದಿಂದ ಮಾಡಲ್ಪಟ್ಟ ಶಾರದಾ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಿದ್ದಾರೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ಈ ದೇವಿಗೆ ವಿಶೇಷ ಪೂಜೆ ಅಲಂಕಾರಗಳು ನಡೆಯುತ್ತವೆ. ಜಗನ್ಮಾತೆಯಾದ ಶಾರದಾಂಬೆಗೆ ಹಂಸ ವಾಹನ ,ವೃಷಭ ವಾಹನ, ಮಯೂರ ವಾಹನ, ಗರುಡ ವಾಹನ , ಇಂದ್ರಾಣಿ, ವೀಣಾಶಾರದಾ ವಾಹಿನಿ, ರಾಜರಾಜೇಶ್ವರಿ, ಸಿಂಹವಾಹಿನಿ, ಗಜಲಕ್ಷ್ಮಿ ಹೀಗೆ ದಿನಕ್ಕೊಂದು ಅಲಂಕಾರ ಮಾಡಲಾಗುತ್ತದೆ. ದಸರಾ ಸಂದರ್ಭದಲ್ಲಿ ಖಜಾನೆಯಲ್ಲಿರುವ ಎಲ್ಲಾ ನವರತ್ನ ಖಚಿತ ಆಭರಣಗಳನ್ನು ತಾಯಿ ಶಾರದೆಗೆ ತೊಡಿಸಲಾಗುತ್ತದೆ. ಮೈಸೂರು ಮಹಾರಾಜರು, ಟಿಪ್ಪು ಸುಲ್ತಾನ್ , ಜಮಖಂಡಿಯ ದೊರೆಗಳು ಮೊದಲಾದವರು ತಾಯಿಗೆ ನೀಡಿರುವ ಆಭರಣಗಳನ್ನು ದೇವಿ ನವರಾತ್ರಿಯ ವೇಳೆ ಧರಿಸುತ್ತಾಳೆ.
ಗಂಡಬೇರುಂಡ ಪದಕ, ಕಂಠೀಹಾರ, ಪದಕದ ಮಾಲೆ ಮೊದಲಾದ ಅತ್ಯಮೂಲ್ಯ ಆಭರಣಗಳನ್ನು ನೋಡುವ ಅವಕಾಶ ಸಾರ್ವಜನಿಕರಿಗೆ ಲಭಿಸುವುದು. ಶರನ್ನವರಾತ್ರಿಯ ಕಾಲದಲ್ಲಿ ಮಾತ್ರ ಹೀಗೆ ನವರಾತ್ರಿಯ ಸಮಯದಲ್ಲಿ ವಿವಿಧ ಅಲಂಕಾರ ವಸ್ತ್ರಾಭರಣಗಳನ್ನು ಕಾಣಲು ಎಷ್ಟು ನೋಡಿದರೂ ಸಾಲುವುದಿಲ್ಲ.

 

 

 

ಶೃಂಗೇರಿಯಲ್ಲಿ ನಡೆಯುವ ದಸರಾ ದರ್ಬಾರು ಹೆಸರುವಾಸಿ.
ಶೃಂಗೇರಿಯ ಜಗದ್ಗುರುಗಳು ತುಂಗಾ ಸ್ನಾನದ ಬಳಿಕ, ತಾಯಿ ಶಾರದೆ ಹಾಗೂ ಚಂದ್ರಮೌಳೇಶ್ವರನ ಪೂಜೆ ಮಾಡುತ್ತಾರೆ. ನಂತರ ಗುರುಗಳು ವರ್ಣರಂಜಿತ ಪಚ್ಚೆ,ಪೀತಾಂಬರದ ದರ್ಬಾರು ಉಡುಗೆ ತೊಟ್ಟು, ಹೈದರಾಬಾದ್ ನಿಜಾಮರು ನೀಡಿರುವ ವಜ್ರಖಚಿತ ಕಿರೀಟ, ರತ್ನಕಚಿತ ಕಂಠೀಹಾರಗಳನ್ನು ಧರಿಸುತ್ತಾರೆ. ಜೊತೆಗೆ ಶಾರದಾ ದೇಗುಲಕ್ಕೆ ಬಂದು ಪ್ರದಕ್ಷಿಣೆ ನಮಸ್ಕಾರ ಹಾಕುತ್ತಾರೆ. ಇದಾದ ನಂತರ ಗರ್ಭ ಗೃಹದಲ್ಲಿರುವ ಶಾರದಾ ಮಾತೆಯ ವಿಗ್ರಹಕ್ಕೆ ಮುಖ ಮಾಡಿ ಸಿಂಹಾಸನವೇರಿ ಕುಳಿತುಕೊಳ್ಳುತ್ತಾರೆ. ಶ್ರೀಗಳು ಸಿಂಹಾಸರೂಢರಾಗುವ ಆ ಕ್ಷಣವನ್ನು ನೋಡುವುದೇ ಕಣ್ಣಿಗೆ ಸೊಗಸು.
ಸರಿಸುಮಾರು ಒಂದು ಗಂಟೆಗಳ ಕಾಲ ದರ್ಬಾರು ನಡೆಯುತ್ತದೆ. ಈ ವೇಳೆ ದೇವಿ ಸಪ್ತಶತಿ ಪಾರಾಯಣ, ಅಷ್ಟಾವಧಾನ, ಶತಾವಧಾನ, ಪಂಡಿತರು ಕಲಾವಿದರಿಗೆ ಸನ್ಮಾನ, ಬಿರುದುಗಳ ಸಮರ್ಪಣೆ, ಹೀಗೆ ಮೊದಲಾದ ಹತ್ತು ಹಲವು ವಿಧಗಳು ಇಲ್ಲಿ ಜರುಗುತ್ತವೆ. ಮೈಸೂರು ದಸರಾದಂತೆ ಇಲ್ಲಿಯೂ ಕೂಡ ವೈಭವೋಪ್ರೇರಿತ ನವರಾತ್ರಿ ಉತ್ಸವ ಜನಾಕರ್ಷಣೆಯನ್ನು ಮಾಡುವ ಕೇಂದ್ರವಾಗಿದೆ. ಶೃಂಗೇರಿಯಲ್ಲಿ ನಡೆಯುವ ಸಾಂಪ್ರದಾಯಿಕ ದರ್ಬಾರನ್ನು ನೋಡಲು ದೇಶ ವಿದೇಶಗಳಿಂದ ಅಸಂಖ್ಯಾತ ಭಕ್ತರು ಬರುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top