fbpx
ದೇವರು

ನಂಬಿ ಬಂದವರ ಕಷ್ಟ ದೂರಮಾಡುವ ಶಕ್ತಿಯುತ ದೇವಿರಮ್ಮ ತಾಯಿ ಮಹಿಮೆ ಬಗ್ಗೆ ಗೊತ್ತಾದ್ರೆ ಈ ತಾಯಿ ಮೇಲೆ ನಿಮ್ ಭಕ್ತಿ ಜಾಸ್ತಿಯಾಗುತ್ತೆ

ದೇವಿರಮ್ಮ ದೇವಾಲಯದ ಪೌರಾಣಿಕ ಇತಿಹಾಸ ಮತ್ತು ಇಲ್ಲಿ ದೇವಿ ನೆಲೆಸಿದ ಹಿನ್ನೆಲೆ ಕುರಿತಾದ ಕಥೆ.
ಅದು ಚಳಿಗಾಲದ ಮುಂಜಾನೆ, ಮೈ ಕೊರೆಯುವ ಚಳಿಯಲ್ಲಿ ಇರುವೆಯ ಸಾಲಿನಂತೆ, ಬೆಟ್ಟವನ್ನು ಹತ್ತಿ ,ಇಷ್ಟಾರ್ಥ ಸಿದ್ದಿಗಾಗಿ ದೇವರ ಮೊರೆ ಹೋಗುತ್ತಾರೆ. ದೇವರನ್ನು ಒಲಿಸಿಕೊಳ್ಳಲು ದೇಹವನ್ನು ದಂಡಿಸಿ ಭಕ್ತಿಯನ್ನು ಸಮರ್ಪಿಸುತ್ತಾರೆ. ಬರಿಗಾಲಲ್ಲೇ ಬೆಟ್ಟವನ್ನು ಏರುವ ಜನರು ವರ್ಷದಲ್ಲಿ ಒಮ್ಮೆ ಮಾತ್ರ ವಿಶೇಷ ದರ್ಶನ ಕೊಡುವ ದೇವಿರಮ್ಮನನ್ನು ಕಾಣಲು ಭಕ್ತ ಸಾಗರವೇ ಹರಿದು ಬರುತ್ತದೆ.

ಚಿಕ್ಕಮಗಳೂರು ಜಿಲ್ಲೆಯಿಂದ 20 ಕಿಲೋಮೀಟರ್ ದೂರದಲ್ಲಿರುವ ಮಲ್ಲೇನಹಳ್ಳಿಯಲ್ಲಿರುವ ದಿಂಡಿಗ ಗ್ರಾಮದಲ್ಲಿ ಸುಮಾರು ಮೂರು ಸಾವಿರ ಅಡಿಗಳಷ್ಟು ಎತ್ತರವಿರುವ, ಪಶ್ಚಿಮ ಘಟ್ಟದ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ದೇವಿರಮ್ಮನ ಬೆಟ್ಟ ಎಂದು ಹೆಸರುವಾಸಿಯಾಗಿದೆ. ಇದು ರಾಜ್ಯದ ಅತಿ ಎತ್ತರದ ಶಿಖರಗಳಲ್ಲಿ ಒಂದು. ರಾಜ್ಯದ ಅತಿ ಎತ್ತರದ ಶಿಖರವೆಂದೇ ಪಾತ್ರವಾಗಿರುವ ಮುಳ್ಳಯ್ಯನಗಿರಿ ಪರ್ವತ ಶ್ರೇಣಿಗೆ ಈ ದೇವಿರಮ್ಮ ಚಂದ್ರದ್ರೋಣದ ಪರ್ವತಕ್ಕೆ ಹೊಂದಿಕೊಂಡಿದೆ.
ಕಣ್ಣು ಹಾಯಿಸಿದಲ್ಲೆಲ್ಲಾ ಕಂಡುಬರುವ ಹಚ್ಚ ಹಸಿರಿನ ವನಸಿರಿ, ಸದಾ ಪ್ರಶಾಂತತೆಯಿಂದ ಕೂಡಿರುವ ಆಹ್ಲಾದಕರ ವಾತಾವರಣ, ಎತ್ತರದಿಂದ ಧುಮ್ಮಿಕ್ಕುವ ಜಲಧಾರೆ, ಇಂತಹ ನಿಸರ್ಗದ ಸೌಂದರ್ಯದಲ್ಲಿರುವ ಬೆಟ್ಟದಲ್ಲಿ ಚಿಕ್ಕಮಗಳೂರಿನ ನೆಲೆಸಿದ್ದಾಳೆ ದೇವಿರಮ್ಮ. ಈ ಬೆಟ್ಟದಲ್ಲಿ ನೆಲೆಸಿರುವ ದೇವಿರಮ್ಮ ಭಕ್ತರ ಪಾಲಿಗೆ ಇಷ್ಟಾರ್ಥ ಸಿದ್ದಿಸುವ ದೇವಿಯಾಗಿದ್ದಾಳೆ. ಪ್ರತಿವರ್ಷ ನರಕ ಚತುರ್ದಶಿಯಂದು ದೇವಿರಮ್ಮನ ಸನ್ನಿಧಿಯಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ.
ಇಲ್ಲಿನ ವಿಶೇಷತೆ ಏನೆಂದರೆ ಹಬ್ಬದ ಮಾರನೇ ದಿನ ದೇವಸ್ಥಾನದ ಬಾಗಿಲು ತಂತಾನೇ ತೆರೆದುಕೊಳ್ಳುತ್ತದೆ. ಅದರಿಂದ ಭಕ್ತರು ದೇಗುಲದಲ್ಲಿ ವಿಶೇಷ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ. ಈ ಜಾತ್ರೆಯಲ್ಲಿ ಪಾಲ್ಗೊಂಡು ಭಕ್ತರ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಹೀಗಾಗಿ ಜಾತ್ರೆಯಂದು ದೇಹವನ್ನು ದಂಡಿಸಿಕೊಂಡು, ಅಂದರೆ ಬರಿಗಾಲಲ್ಲೇ ಕೊರೆವ ಚಳಿಯಲ್ಲೂ ನಡೆದುಕೊಂಡು ಬಂದು ಭಕ್ತಿಯನ್ನು ಸಮರ್ಪಿಸುತ್ತಾರೆ.

 

 

 

ಸುಮಾರು 800 ವರ್ಷಗಳ ಹಿಂದೆ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಐದು ಜನ ತಪಸ್ವಿಗಳು ನೆಲೆಸಿದ್ದರಂತೆ. ರುದ್ರಮುನಿ, ಸೀತಯ್ಯ, ಮುಳ್ಳಯ್ಯ, ದತ್ತಾತ್ರೇಯ ಮತ್ತು ಗಾಳಿ ಅಜ್ಜಯ್ಯ. ಈ ಐದು ಜನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ನೆಲೆಸಿರುವ ಮಹಾನ್ ತಪಸ್ವಿಗಳು. ಆ ಸಂದರ್ಭದಲ್ಲಿ ದೇವಿರಮ್ಮ ಇಲ್ಲಿಗೆ ಬಂದು ನೆಲೆಸಲು ಜಾಗ ಕೇಳಿದಳಂತೆ. ಆಗ ಚಂದ್ರದ್ರೋಣ ಶ್ರೇಣಿಯಲ್ಲಿ ನೆಲೆಸಿರುವ ಅಷ್ಟು ಜನ ತಪಸ್ವಿಗಳು, ಗಂಡಸರಾದ್ದರಿಂದ ನಮ್ಮಿಂದ ಅಣತಿ ದೂರದಲ್ಲಿ ನೆಲೆಸು ಎಂದು ಈ ಬೆಟ್ಟವನ್ನು ತೋರಿಸಿದ್ದರಂತೆ. ಅದೇ ಜಾಗದಲ್ಲಿ ದೇವಿರಮ್ಮ ನೆಲೆಸಿದ್ದಳು. ಅಂದಿನಿಂದ ಈ ಬೆಟ್ಟ ದೇವಿರಮ್ಮ ಬೆಟ್ಟ ಎಂದೇ ಹೆಸರಾಯಿತು.

ಮಹಾನ್ ತಪಸ್ವಿಗಳು ತೋರಿಸಿದ ಜಾಗದಲ್ಲಿ ನೆಲೆಸಿದ ದೇವಿರಮ್ಮ ಅಲ್ಲಿಯೇ ಜಪತಪಗಳನ್ನು ಮಾಡುತ್ತಾ, ಐಕ್ಯವಾದಳು ಎಂದು ಹೇಳಲಾಗುತ್ತದೆ. ಚಂದ್ರದ್ರೋಣದಲ್ಲಿ ನೆಲೆಸಿರುವ ಈ ದೇವಿರಮ್ಮ ಮೇಲಿನಿಂದ ಕುಳಿತು ಊರ ಜನರನ್ನು ನೋಡುತ್ತಾ ಅವರ ಕಷ್ಟಗಳನ್ನು ಕೂತಲ್ಲಿಯೇ ನಿವಾರಿಸುತ್ತಿದ್ದಾಳೆ ಎನ್ನುವ ಪ್ರತೀತಿ ಇದೆ. ಆದ್ದರಿಂದ ದಿಂಡಿಗ ಗ್ರಾಮಸ್ಥರಲ್ಲಿ ದೇವಿರಮ್ಮನ ದೇವಾಲಯದ ಮೂಲ ಸ್ಥಾನದಲ್ಲಿ ದರ್ಶನ ಪಡೆಯುತ್ತಾರೆ.
ದೇವಿರಮ್ಮನ ಮೂಲಸ್ಥಾನ ಇದಾಗಿರುವುದರಿಂದ ಇಲ್ಲಿ ವಿಶೇಷವಾಗಿ ದಿಂಡಿಗ ಗ್ರಾಮದವರೇ ಜಾತ್ರೆಯನ್ನು ಆಚರಿಸುತ್ತಾರೆ. ವರ್ಷಕ್ಕೆ ಒಮ್ಮೆ ನಡೆಯುವ ದಿಂಡಿಗ ಜಾತ್ರೆಯ ಮೊದಲ ದಿನ ದೇವಿ ತನ್ನ ಮೂಲ ಸ್ಥಾನದಲ್ಲಿ ದರ್ಶನ ನೀಡುತ್ತಾಳೆ. ಅದಕ್ಕಾಗಿ ಭಕ್ತರ ದಂಡು ಅಲ್ಲಿಗೆ ಅಗಮಿಸುತ್ತದೆ. ಈ ಪ್ರದೇಶಕ್ಕೆ ತೆರಳುವುದರೊಂದಿಗೆ ಸೇವೆ ಸಲ್ಲಿಸುತ್ತಾರೆ . ಇಷ್ಟೇ ಅಲ್ಲ ಬೆಟ್ಟ ಏರುವಾಗ ಯಾವುದೇ ಆಹಾರವನ್ನು ಸೇವಿಸದೆ ಭಕ್ತರು ಉಪವಾಸ ವ್ರತವನ್ನು ಕೈಗೊಳ್ಳುತ್ತಾರಂತೆ. ಇದಕ್ಕಾಗಿಯೇ ಭಕ್ತರು ನೀರನ್ನು ಸೇವಿಸದೇ ಬೆಟ್ಟವನ್ನು ಹತ್ತುತ್ತಾರೆ. ದೇವೀರಮ್ಮನಿಗೆ ಪೂಜೆಯನ್ನು ಸಲ್ಲಿಸಿದ ತರುವಾಯವೇ ಮನೆಗೆ ತೆರಳಿ ಭಕ್ತರು ಉಪಹಾರ ಸೇವಿಸುತ್ತಾರೆ.

 

ಸಾವಿರಾರು ಅಡಿ ಎತ್ತರದ ಪ್ರದೇಶದಲ್ಲಿ ದೇವಿ ನೆಲೆಸಿರುವುದರಿಂದ ಭಕ್ತರು ದೇವಿಯ ಸನ್ನಿಧಿಗೆ ಬರಬೇಕಾದರೆ ಕಡ್ಡಾಯವಾಗಿ ಬೆಟ್ಟಗುಡ್ಡಗಳನ್ನು ಹತ್ತಿಕೊಂಡೇ ಬರಬೇಕು. ಆದರೆ ಈ ದೇವಿಯ ಕೃಪೆಗೆ ಪುನೀತ ರಾಗಬೇಕು ಎಂದರೆ ಕಾಲಿಗೆ ಚಪ್ಪಲಿ ಧರಿಸುವುದು ನಿಷಿದ್ಧ, ಕಲ್ಲುಮುಳ್ಳಿನ ಕಡಿದಾದ ದಾರಿಯಲ್ಲಿ ಬರಿಗಾಲಲ್ಲೇ ನಡೆಯುವುದೆಂದರೆ ಅದೊಂದು ಸಾಹಸವೇ ಸರಿ. ಚಳಿಗಾಲದ ಸಂದರ್ಭದಲ್ಲಿ ಮೈಕೊರೆಯುವ ಚಳಿಯಲ್ಲಿ , ಕಾಲುಗಳು ಜಾರುತ್ತಿರುತ್ತವೆ , ಸ್ವಲ್ಪ ಆಯ ತಪ್ಪಿದರೂ ಅನಾಹುತ ನಡೆದು ಹೋಗುತ್ತದೆ.
ಚಿಕ್ಕ ಮಗಳೂರಿನಿಂದ ತರೀಕೆರೆಗೆ ಸಾಗುವ ಮಾರ್ಗದಲ್ಲಿ ದೇವಿರಮ್ಮನ ದೇವಾಲಯ ಸಿಗುತ್ತದೆ. ದೇವಿರಮ್ಮನ ಬೆಟ್ಟ ಚಿಕ್ಕ ಮಗಳೂರು ನಗರದಿಂದ ಸುಮಾರು 30 ಕಿಲೋ ಮೀಟರ್ ದೂರದಲ್ಲಿದೆ. ಇದರಲ್ಲಿ ಸುಮಾರು 22 ಕಿಲೋಮೀಟರ್ ವಾಹನಗಳ ಸಹಾಯದಿಂದ ಸಾಗಬಹುದು. ನಂತರ ಉಳಿಯುವ ಎಂಟು ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲೇ ಸಾಗಬೇಕು. ಅಷ್ಟೇ ಮಾತ್ರವಲ್ಲ ಎಂಟು ಕಿಲೋಮೀಟರ್ ದೂರದವರೆಗೂ ಯಾವುದೇ ರಸ್ತೆಗಳಿಲ್ಲ ಹೀಗಾಗಿ ದುರ್ಗಮ ಹಾದಿಯನ್ನು ಬಳಸಿಕೊಂಡೇ ಸಾಗಬೇಕು. ಇನ್ನು ಬಾಬಾ ಬುಡನ್ಗಿರಿ, ಮಾಣಿಕ್ಯದಾರ, ಅರಿಶಿಣ ಗುಪ್ಪೆ, ಮಲ್ಲೇನಹಳ್ಳಿ ಮಾರ್ಗದ ಮೂಲಕವೋ ಈ ಬೆಟ್ಟಕ್ಕೆ ಸಾಗಬಹುದಾಗಿದೆ.

 

 

 

ನರಕ ಚತುರ್ದಶಿಯಂದು ದೇವಿರಮ್ಮನ ಬೆಟ್ಟದಲ್ಲಿ ಬೆಳಗಿನ ವೇಳೆಯಲ್ಲಿ ಪೂಜೆ , ಜಾತ್ರೆ ನಡೆದರೆ , ರಾತ್ರಿಯ ಹೊತ್ತಿನಲ್ಲಿ ದೀಪೋತ್ಸವ ನಡೆಯುತ್ತದೆ. ದೇವಿರಮ್ಮನ ಬೆಟ್ಟದಲ್ಲಿರುವ ದೇವಿರಮ್ಮನ ಸನ್ನಿಧಿಯಲ್ಲಿ ಭಕ್ತರು ತರುವ ಕಟ್ಟಿಗೆ, ತುಪ್ಪ, ಸೀರೆಯನ್ನು ಬಳಸಿ ದೀಪವನ್ನು ಬೆಳಗಿಸಲಾಗುತ್ತದೆ. ಬೆಟ್ಟದಲ್ಲಿ ಹತ್ತಿ ಉರಿಯುವ ಬೆಳಕನ್ನು ನೋಡಿದ ನಂತರವೇ ಊರವರು ಮನೆಗಳಲ್ಲಿ ದೀಪಾವಳಿಯನ್ನು ಆಚರಿಸುತ್ತಾರೆ. ದೇವಿರಮ್ಮನ ಬಾಗಿಲು ತನ್ನಿಂದ ತಾನೇ ತೆರೆದುಕೊಳ್ಳುವ ಆ ದೃಶ್ಯವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾಯುತ್ತ ಇರುತ್ತಾರೆ. ಮಾತ್ರವಲ್ಲ ಈ ದೇವಿರಮ್ಮನ ಬೆಟ್ಟಕ್ಕೂ ಮೈಸೂರಿನ ಚಾಮುಂಡೇಶ್ವರಿಗೂ ತುಂಬಾನೇ ಅವಿನಾಭಾವ ಸಂಬಂಧವಿದೆಯಂತೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top