ಸಮಾಚಾರ

ಇತಿಹಾಸದಲ್ಲೇ ದಾಖಲೆ ಮಟ್ಟದಲ್ಲಿ ಡಾಲರ್​ ಎದುರು 75ರ ಹತ್ತಿರಕ್ಕೆ ಕುಸಿದ ರೂಪಾಯಿ ಮೌಲ್ಯ.

ಅಮೆರಿಕದ ಡಾಲರ್‌ ವಿರುದ್ಧ ರೂಪಾಯಿ ಮೌಲ್ಯ ನೆನ್ನೆ ಭಾರೀ ಕುಸಿತ ಕಂಡಿದ್ದು, ರೂಪಾಯಿಯ ಮೌಲ್ಯ ಡಾಲರ್‌ ಎದುರು ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ನಿನ್ನೆ ವಹಿವಾಟಿನ ಅಂತ್ಯದ ವೇಳೆಗೆ ಡಾಲರ್​ ಎದುರು ರೂಪಾಯಿ ಮೌಲ್ಯ 74.56ರೂ.ಗೆ ಕುಸಿತಗೊಂಡಿದೆ. ಈ ಮೂಲಕ ಡಾಲರ್ ಎದುರು ರೂಪಾಯಿ ಮೌಲ್ಯ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ..

 

 

ಇದು ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಮೌಲ್ಯವಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ತಜ್ಞರ ಪ್ರಕಾರ ಇಂದು ಅಥವಾ ನಾಳೆಯೊಳಗೆ 75ರ ಗಡಿಯನ್ನೂ ದಾಟುತ್ತದೆ. 2018ರಲ್ಲಿ ರೂಪಾಯಿ ಮೌಲ್ಯ ಒಟ್ಟು ಶೇಕಡ 13.5ರಷ್ಟು ಕುಸಿತ ಕಂಡಿದೆ. ಇದರ ಜತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯೂ ಹೆಚ್ಚಳವಾಗಿರುವುದು ರೂಪಾಯಿ ಮೌಲ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿದ್ದರಿಂದ ಶುಕ್ರವಾರ ಡಾಲರ್ ಎದುರು ರೂಪಾಯಿ ಮೌಲ್ಯ ಭಾರೀ ಕುಸಿತ ಕಂಡಿದೆ.. ವಿದೇಶಿ ವಿನಿಮಯ ಡೀಲರ್ ಗಳು, ಆಮದುದಾರರ ಖರೀದಿ, ಕಚ್ಚಾ ತೈಲ ಬೆಲೆ, ಮತ್ತು ಬಂಡವಾಳದ ಹೊರಹರಿವು ಹೆಚ್ಚಳದಿಂದಾಗಿ ದೇಶೀಯ ಹಣದ ಮಾರುಕಟ್ಟೆಯಲ್ಲಿ ಏರಿಳತವಾಗಿದೆ. ಕೇವಲ ಡಾಲರ್ ಎದುರು ಮಾತ್ರವಲ್ಲದೇ ಯೂರೋ, ಪೌಂಡ್‌, ದಿರಹಂ ಹಾಗೂ ಯೆನ್‌ ಎದುರೂ ಗಮನಾರ್ಹವಾಗಿ ರೂಪಾಯಿ ಕುಸಿತ ಕಂಡಿದೆ.

ರೂಪಾಯಿ ಮೌಲ್ಯ ಪಾತಾಳ ತಲುಪಿರುವುದರಿಂದ ಪೆಟ್ರೋಲ್ ಡೀಸೆಲ್ ತೈಲಬೆಲೆಗಳು ಮತ್ತಷ್ಟು ತುಟ್ಟಿಯಾಗುತ್ತವೆ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಒಂದು ವೇಳೆ ಡಾಲರ್ ಎದುರು ರೂಪಾಯಿ ಮೌಲ್ಯವು ರೂ.75ನ್ನು ದಾಟಿದರೆ ಐದಾರು ತಿಂಗಳಲ್ಲಿ 80ಕ್ಕೆ ಕುಸಿಯುವ ಮಹಾ ಅಪಾಯವಿದೆ ಎಂದು ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top