ಸಮಾಚಾರ

IPL​ಗೂ ಮುನ್ನ MSLನಲ್ಲಿ ಅಬ್ಬರಿಸಲಿದ್ದಾರೆ ಎಬಿಡಿ ವಿಲಿಯರ್ಸ್- ಅಭಿಮಾನಿಗಳ ಸಂತಸ.

ಬ್ಯಾಟ್ ಹಿಡಿದು ಕಣಕ್ಕಿಳಿದರೆ ಚೆಂಡಿಗೆ ಮೈದಾನದ ಅಷ್ಟದಿಕ್ಕುಗಳನ್ನು ತೋರಿಸೋ ಖದರ್ ಹೊಂದಿರೋ ಮಿಸ್ಟರ್.360 ಖ್ಯಾತಿಯ ಸ್ಪೋಟಕ ದಾಂಡಿಗ ಎಬಿಡಿ ವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾಗ ಅಭಿಮಾನಿಗಳಲ್ಲಿ ಏನೋ ಒಂಥರದ ನೀರವ ಮೌನ, ತಡೆಯಲಾಗದ ದುಃಖ ಉಕ್ಕಿಬಂದಿದ್ದು ಸುಳ್ಳಲ್ಲ.. ಸದ್ಯದ ಪೀಳಿಗೆಯ ಆಟಗಾರರಲ್ಲಿ ಜಗತ್ತಿನಾದ್ಯಂತ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರೋ ಆಟಗಾರನೆಸಿಕೊಂಡಿರುವ ಎಬಿಡಿ ತಮ್ಮ ನಿರ್ಧಾರವನ್ನು ಬದಲಿಸಿ ಮತ್ತೆ ಬ್ಯಾಟ್ ಹಿಡಿಯಬೇಕು ಎದುರಾಳಿಗಳ ಬೇವರೀಳಿಸಬೇಕು ಎಂದು ಎಷ್ಟೋ ಮಂದಿ ಅಭಿಮಾನಿಗಳು ಹಪಾಹಪಿಸಿದ್ದರು..ಅವರ ಬ್ಯಾಟಿಂಗ್ ಅಬ್ಬರವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದರು.. ಅಂತಾವ್ರಿಗೆಲ್ಲಾ ಕುಣಿದು ಕುಪ್ಪಳಿಸುವಂತ ಸುದ್ದಿಯನ್ನು ಎಬಿಡಿ ಕೊಟ್ಟಿದ್ದಾರೆ.

ಹಾಗಂತ ಅವರೇನೂ ತಮ್ಮ ವಿದಾಯವನ್ನು ಹಿಂಪಡೆದು ಮತ್ತೆ ದಕ್ಷಿಣ ಆಫ್ರಿಕಾ ಪರವಾಗಿ ಬ್ಯಾಟ್ ಬೀಸಲಿದ್ದಾರೆ ಎಂದು ಭಾವಿಸಿದರೆ ಅದು ನಿಮ್ಮ ಆತುರದ ನಿರ್ಧಾರವಾಗುತ್ತದೆ ಏಕೆಂದರೆ ಅವರು ಮತ್ತೆ ಹಿಡಿಯುತ್ತಿರುವುದು ಅಂತಾರಾಷ್ಟ್ರೀಯ ಪಂದ್ಯಗಳಲ್ಲಲ್ಲ… ಬದಲಾಗಿ ಕ್ರಿಕೆಟ್ ಸೌತ್ ಆಫ್ರಿಕಾ ಆಶ್ರಯದಲ್ಲಿ ನಡೆಯಲಿರುವ ‘ಮಝನ್ಸಿ ಸೂಪರ್ ಲೀಗ್’ ನಲ್ಲಿ.ಅಂತರಾಷ್ಟ್ರೀಯ ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿದ ಬಳಿಕ ಎಬಿಡಿ ಆಡುತ್ತಿರುವ ಮೊದಲ ಟೂರ್ನಿ ಇದಾಗಿದೆ.

 

 

MSL​​​​ನಲ್ಲಿ ಡಿವಿಲಿಯರ್ಸ್​​ ಸ್ವಾನ್ ಸ್ಪಾರ್ಟನ್ ತಂಡದ ಪರ ಆಡಲಿದ್ದು, ಈ ಟೂರ್ನಿಯಲ್ಲಿ ಕ್ರಿಸ್ ಗೇಲ್, ಡ್ವೇನ್ ಬ್ರಾವೋ, ಫಾಫ್ ಡುಪ್ಲೆಸಿಸ್, ಡುಮಿನಿ, ಇಯಾನ್ ಮಾರ್ಗನ್, ಜಾಸನ್ ರಾಯ್, ರಶೀದ್ ಖಾನ್ ಸೇರಿದಂತೆ ಪ್ರಮುಖ ಸ್ಟಾರ್ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಈ ಟೂರ್ನಿ ನವೆಂಬರ್ 16 ರಂದು ಆರಂಭವಾಗಿ ಡಿಸೆಂಬರ್ 16ಕ್ಕೆ ಕೊನೆಗೊಳ್ಳಲಿದೆ.

ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಎಬಿಡಿ:
ಪಾಕಿಸ್ತಾನ ಸೂಪರ್ ಲೀಗ್ T-20 ಪಂದ್ಯಾವಳಿಯಲ್ಲಿ. ಹೌದು ಮಿಸ್ಟರ್ 360 ಎಬಿಡಿ ಮುಂದಿನ ವರ್ಷದ PSLಲೀಗ್’ನಲ್ಲಿ ಕಣಕ್ಕಿಳಿಯುವ ನಿರ್ಧಾರ ಮಾಡಿದ್ದು ಆದರೆ ಯಾವ ತಂಡದ ಪರವಾಗಿ ಆಡುತ್ತಾರೆ ಎನ್ನುವುದು ಮಾತ್ರ ಇನ್ನೂ ಪಕ್ಕಾ ಆಗಿಲ್ಲ. “ಪಾಕಿಸ್ತಾನ ಸೂಪರ್ ಲೀಗ್ ವಿಶ್ವದ ಟಾಪ್ ಟ್ವೆಂಟಿ 20 ಪಂದ್ಯಾವಳಿಗಳಲ್ಲಿ ಒಂದಾಗಿದೆ. ಇತ್ತೀಚೆಗೆ ನಾನು ಪಿಎಸ್ಎಲ್ ಪಂದ್ಯಗಳನ್ನು ನೋಡಿ ಸಕತ್ ಎಂಜಾಯ್ ಮಾಡಿದ್ದೇನೆ.. ಇಂಥಾ ಲೀಗ್ ನ ಮೂಲಕ ಮತ್ತೊಮ್ಮೆ ಮೈದಾನಕ್ಕೆ ಮರಳುತ್ತಿರುವುದು ತುಂಬಾ ಸಂತೋಷವಾಗುತ್ತಿದೆ” ಎಂದು ವಿಲಿಯರ್ಸ್ ಹೇಳಿದ್ದಾರೆ.

ಐಪಿಎಲ್ ನಲ್ಲೂ ಇರಲಿದೆ ಎಬಿಡಿ ಅಬ್ಬರ:
ಐಪಿಎಲ್’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡುವ ಎಬಿಡಿ ಕಳೆದ ಎಂಟು ವರ್ಷಗಳಿಂದ ಇಲ್ಲಿನ ಅಭಿಮಾನಿಗಳನ್ನು ಭರಪೂರವಾಗಿ ರಂಜಿಸಿದ್ದಾರೆ. ಯಾವಾಗ ಅವರು ವಿದಾಯ ಘೋಷಿಸಿದ್ದರೋ ಆಗ ಅವರು ಮುಂದಿನ ಭಾರಿ ಐಪಿಎಲ್’ನಲ್ಲಿ ಆಡುತ್ತಾರೋ ಇಲ್ಲವೋ ಎಂಬ ಎಂಬ ಆತಂಕದ ಗೊಂದಲ ಸಹಜವಾಗಿ ಎಲ್ಲರಲ್ಲೂ ಮೂಡಿಕೊಂಡಿತ್ತು.. ಆದರೆ ಇತ್ತೀಚಿಗೆ ಖುದ್ದು ಎಬಿಡಿ ಅವರೇ ತಾವು ಐಪಿಎಲ್ ನಲ್ಲಿ ಆಡುತ್ತೇನೆ ಎಂದು ಹೇಳಿಕೊಂಡಿರುವುದರಿಂದ RCB ಅಭಿಮಾನಿಗಳಿಗೆ ತಮ್ಮ ಹನ್ನೊಂದು ವರ್ಷಗಳ ಕನಸಾಗಿರುವ ಕಪ್ ಅನ್ನೇ ಗೆದ್ದಷ್ಟು ಖುಷಿ ಪಡುತ್ತಿದ್ದಾರೆ..

ಮೇ 23ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರಲ್ಲಾ ಅವತ್ತು ತಾವು ಮುಂದೆ ಬೇರೆ ದೇಶಗಳಲ್ಲಿ ನಡೆಯಲಿರುವ ಐಪಿಎಲ್ ಸೇರಿದಂತೆ ಇತರೆ t20 ಲೀಗ್ ಗಳಲ್ಲಿ ಆಡಬೇಕೋ ಬೇಡವೋ ಎಂಬ ಕುರಿತಾಗಿ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ಹೇಳಿದ್ದರು. ಇದೀಗ ಆ ಬಗ್ಗೆ ಎಬಿಡಿ ತಮ್ಮ ನಿರ್ಧಾರವನ್ನು ಬಹಿರಂಗಪಡಿಸಿದ್ದು ಇದರಿಂದ ಅವರ ಅಭಿಮಾನಿಗಳಿಗೆ ಅತೀವ ಸಂತಸ ಉಂಟಾಗುವುದಂತೂ ಪಕ್ಕಾ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top