ಮನೋರಂಜನೆ

ಪ್ರೇಕ್ಷಕರಿಗೆ ವಿಶೇಷ ಪತ್ರ ಬರೆದ ‘ದಿ ವಿಲನ್’ ಚಿತ್ರತಂಡ- ಒಮ್ಮೆ ಓದಿ.

ಕನ್ನಡ ಚಿತ್ರರಂಗದಲ್ಲಿ ವಿಪರೀತ ಕ್ರೆಜ್ ಹುಟ್ಟುಹಾಕಿರುವ ‘ದಿ ವಿಲನ್’ ಚಿತ್ರ ನಾಳೆ ಪ್ರಪಂಚದಾದ್ಯಂತ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಸೆಟ್ಟೇರಿ ಎರಡು ವರ್ಷಗಳೇ ಕಳೆಯುತ್ತಾ ಬಂದಿದ್ದರೂ ಪ್ರೇಕ್ಷಕರ ವಲಯದಲ್ಲಿ ವಿಪರೀತ ಕುತೂಹಲ ಕ್ರಿಯೇಟ್ ಮೆಂಟೇನ್ ಮಾಡಿಕೊಂಡು ಬಂದಿರೋ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ, ಸುದೀಪ್ ಮತ್ತು ಶಿವಣ್ಣ ಒಟ್ಟಾಗಿ ನಟಿಸಿರುವುದರಿಂದ ಈ ಪಾಟಿ ಸಂಚಲನ ಸೃಷ್ಟಿಸುತ್ತಿದೆ.. ಈಗಾಗಲೇ ಬಿಡುಗಡೆಯಾಗಿರೋ ಟೀಸರ್ ಮತ್ತು ಹಾಡುಗಳ ಅಬ್ಬರವನ್ನು ಕಂಡು ಇಡೀ ಗಾಂಧಿನಗರವೇ ಬೆಚ್ಚಿಬಿದಿದೆ.

ಇಂಥಾ ಬಹುನಿರೀಕ್ಷಿತ ‘ದಿ ವಿಲನ್’ ಸಿನಿಮಾ ತಂಡದ ವತಿಯಿಂದ ಸೋಷಿಯಲ್ ಮೀಡಿಯಾ ಪ್ರೇಕ್ಷಕರಿಗೆ ವಿಶೇಷ ಪತ್ರವನ್ನು ಬರೆದಿದ್ದಾರೆ.. ಈ ಮೂಲಕ ಕೆಲವೊಂದು ವಿಚಾರಗಳ ಬಗ್ಗೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

 

 

ದಿ ವಿಲನ್ ಟೀಮ್ ಬರೆದಿರುವ ಪತ್ರ ಹೀಗಿದೆ:

ದಿ ವಿಲ್ಲನ್, ಇದು ಕೇವಲ ಶಿವಣ್ಣ, ಸುದೀಪ್, ಪ್ರೇಮ್ ಅಭಿಮಾನಿಗಳ ಸಿನಿಮಾವಲ್ಲ. ಇದು ಸಮಸ್ತ ಕನ್ನಡಿಗರ ಸಿನಿಮಾ. ಮನೋರಂಜನೆಯ ದೃಷ್ಟಿಯಲ್ಲಿ ಪರಭಾಷಾ ಚಿತ್ರಗಳಿಗೆ ಸೆಡ್ಡು ಹೊಡೆಯಲೆಂದೇ ಮೂಡಿಬಂದ ಚಿತ್ರ . ಸತತ ಎರಡು ವರ್ಷಗಳ ಕಾಲ ಪ್ರೇಮ್ ಕಲಾ ಕುಸುರಿಯಲ್ಲಿ ಜೋಪಾನ ಮಾಡಿದ ಕೂಸು. ನಾಳೆಯಿಂದ ಅಭಿಮಾನಿಗಳ ಮಡಿಲು ಸೇರುತ್ತಿದೆ. ಇನ್ಮುಂದೆ ಸಿನಿಮಾದ ಜವಾಬ್ದಾರಿ ಸಮಸ್ತ ಕನ್ನಡಿಗರದ್ದು. ಇದರ ಲಾಲನೆ ಪಾಲನೆ ಮಾಡಿ ಪ್ರೀತಿಯಿಂದ ಕೈ ಹಿಡಿದು ಮುನ್ನಡೆಸಬೇಕಾಗಿ ನಿಮ್ಮೆಲ್ಲರಲ್ಲಿ ವಿನಂತಿ .

ಈ ನಡುವೆ ಕೆಲವು ಕಿಡಿಗೇಡಿಗಳು ಶಿವಣ್ಣ ಮತ್ತು ಸುದೀಪ್ ಅಭಿಮಾನಿಗಳ ನಡುವೆ ವೈಮನಸ್ಸು ಮೂಡಿಸಿ ಚಿತ್ರದ ಕುರಿತು ಅಪಪ್ರಚಾರ ಮಾಡುತ್ತಿರುವುದು ಮತ್ತು ಮುಂದೆ ಮಾಡಲೆತ್ನಿಸುವುದು ಖಂಡನಾರ್ಹ. ಕನ್ನಡ ಚಿತ್ರರಂಗದ ಬೆಳವಣಿಗೆಯ ದೃಷ್ಟಿಯಿಂದ ಇದು ಮಾರಕ. ಆದ ಕಾರಣ ಸಮಸ್ತ ಅಭಿಮಾನಿಗಳು ಒಗ್ಗೂಡಿ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಪ್ರೀತಿಯಿಂದ ಸಹಕರಿಸಿ, ಈ ಚಿತ್ರವನ್ನು ಸ್ವೀಕರಿಬೇಕಾಗಿ ವಿನಂತಿ.

ವಿಶೇಷ ಸೂಚನೆ:
ದಯಮಾಡಿ ಯಾರು ಕೂಡ ಈ ಸಿನಿಮಾ ದೃಶ್ಯಗಳನ್ನು ಸೆರೆ ಹಿಡಿದು ಯೂಟ್ಯೂಬ್ ಅಥವಾ ಇನ್ಯಾವುದೇ ಮಾಧ್ಯಮಗಳಲ್ಲಿ ಪ್ರಸಾರ ಮಾಡಬಾರದು, ಮಾಡಿದಲ್ಲಿ ಗೂಂಡಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆದ ಕಾರಣ ಅಭಿಮಾನಿಗಳು ಪೈರಸಿ ತಡೆಗೆ ಸಹಕರಿಸಬೇಕಾಗಿ ವಿನಂತಿ.

-‘ದಿ ವಿಲನ್​’ ಚಿತ್ರತಂಡ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top