ಸಮಾಚಾರ

ಅರ್ಜುನ್‌ ಸರ್ಜಾ ವಿರುದ್ಧ #MeToo ಆರೋಪ ಮಾಡಿದ ಶೃತಿ ಹರಿಹರನ್‌ ವಿರುದ್ಧ ಮಾನನಷ್ಟ ಮೊಕದ್ದಮೆ?

ಬಾಲಿವುಡ್‌ನಲ್ಲಿ ಹುಟ್ಟಿಕೊಂಡ ಮೀ ಟೂ ಅಭಿಯಾನ ಸ್ಯಾಂಡಲ್‌ವುಡ್‌ನತ್ತಲೂ ಬಂದಿದೆ. ನಟಿಯರನೇಕರು ತಮಗಾದ ಲೈಂಗಿಕ ಕಿರುಕುಳಗಳ ಬಗ್ಗೆ ಹೇಳಿಕೊಂಡಿದ್ದಾರೆ. ಮತ್ತೆ ಕೆಲವರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ ನೊಂದವರ ಬೆನ್ನಿಗೆ ನಿಂತಿದ್ದಾರೆ. ಇದೀಗ ನಟ ಅರ್ಜುನ್‌ ಸರ್ಜಾ ವಿರುದ್ಧ ಯುವ ನಟಿ ಶೃತಿ ಹರಿಹರನ್‌ ಕಿರುಕುಳ ನೀಡಿದ್ದ ಆಪಾದನೆ ಮಾಡಿದ್ದಾರೆ.

ಗಾಯಕ ರಘು ದೀಕ್ಷಿತ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದ ನಂತರ,ಇದೀಗ ನಟಿ ಶ್ರುತಿ ಹರಿಹರನ್​ ಸಹ ಖ್ಯಾತ ನಟ ಅರ್ಜುನ್ ಸರ್ಜಾ ಅವರಿದ ತಮಗಾದ ಅನುಭವದ ಕುರಿತು ಹೇಳಿಕೊಂಡಿದ್ದಾರೆ. ತಮಿಳಿನ ವಿಸ್ಮಯ ಸಿನಿಮಾದಲ್ಲಿ ಶೃತಿಹರಿಹರನ್​​ ಹಾಗೂ ಅರ್ಜುನ್​​ ಸರ್ಜಾ ಒಂದೇ ಸಿನಿಮಾದಲ್ಲಿ ನಟಿಸಿದ್ರು. ಈ ಸಿನಿಮಾ ಶೂಟಿಂಗ್​​ ವೇಳೆಯಲ್ಲಿ ಅರ್ಜುನ್​​ ಸರ್ಜಾ ನನ್ನೊಂದಿಗೆ ಅಸಹಜವಾಗಿ ವರ್ತಿಸುತ್ತಿದ್ರು” ಎಂದು ಹೇಳಿಕೆ ನೀಡಿದ್ದಾರೆ.

ವಾರಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಶ್ರುತಿ ಹರಿಹರನ್‌ ಅವರು ನಟ ಅರ್ಜುನ್ ಸರ್ಜಾ ವಿರುದ್ಧ ಮೀ ಟೂ ಆರೋಪ ಹೊರಿಸಿದ್ದಾರೆ. ಅರ್ಜುನ್‌ ಸರ್ಜಾ ಅವರ ಜತೆ ವಿಸ್ಮಯ ಸಿನಿಮಾದಲ್ಲಿ ನಟಿಸುವಾಗ ತನಗಾದ ಕೆಟ್ಟ ಅನುಭವಗಳ ಕುರಿತು ಹೇಳಿಕೊಂಡಿರುವ ಅವರು, ಸರ್ಜಾ ಅವರ ಜತೆ ನಟಿಸುವಾಗ ಕೆಟ್ಟ ಅನುಭವವಾಗಿತ್ತು. ತಮ್ಮ ಗಡಿರೇಖೆಯನ್ನೂ ದಾಟಿ ನನ್ನ ಜತೆ ವರ್ತಿಸಿದ್ದರು. ತಬ್ಬಿಕೊಳ್ಳುವ ದೃಶ್ಯದ ರಿಹರ್ಸಲ್‌ ವೇಳೆ ಅನ್​​ಕಂಫರ್ಟಬಲ್​ ಆಗುವ ರೀತಿ ವರ್ತಿಸಿದ್ದರು. ಆಗ ನಾನೇ ಒಂದು ಕ್ಷಣ ತಬ್ಬಿಬ್ಬಾಗಿದ್ದೆ ಎಂದು ಹೇಳಿಕೊಂಡಿದ್ದಾರೆ.

ಪತಿ – ಪತ್ನಿ ಪಾತ್ರದಲ್ಲಿ ಅಭಿನಯಿಸಿದರೆ ಗಡಿರೇಖೆ ಇರುತ್ತದೆ. ಆದರೆ ಅರ್ಜುನ್ ಸರ್ಜಾ ಆ ಗಡಿ ರೇಖೆಯನ್ನು ಸರ್ಜಾ ಮೀರಿದ್ದರು,, ಚಿತ್ರದಲ್ಲಿ ನಾನು ಅವರ ಹೆಂಡತಿಯಾಗಿ ನಟಿಸುತ್ತಿದ್ದೆ, ಅದರ ಪ್ರ್ಯಾಕ್ಟೀಸ್ ಮಾಡುತ್ತಿದ್ದೆವು. ಆಗ ಸರ್ಜಾ ‘ಇನ್ನೊಂಚೂರು ಹೀಗೆ ಪ್ರಾಕ್ಟೀಸ್ ಮಾಡಬಹುದಲ್ವಾ?’ ಅಂತ ಹೇಳಿ ಅವರು ನನ್ನನ್ನು ಜೋರಾಗಿ ತಬ್ಬಿಕೊಂಡರು. ಅವರ ವರ್ತನೆ ತುಂಬಾನೇ ಅಸಹ್ಯವಾಗಿತ್ತು. ಇದರಿಂದ ನನಗೆ ಇರಿಸು ಮುರುಸು ಉಂಟಾಗಿತ್ತು ಎಂದು ಶ್ರುತಿ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರ್ಜುನ್‌ ಸರ್ಜಾರ ಮಾವ ರಾಜೇಶ್‌ “ಅರ್ಜುನ್‌ ಸರ್ಜಾ ಸಭ್ಯ ವ್ಯಕ್ತಿ, ಅವ್ರು ಏನೆಂಬುದು ನಮಗೆ ಚೆನ್ನಾಗಿ ತಿಳಿದಿದೆ. ಆಧಾರವಿಲ್ಲದ ಈ ರೀತಿಯ ಆಪಾದನೆಗಳಿಂದ ಸಭ್ಯ ವ್ಯಕ್ತಿಯ ಪ್ರತಿಷ್ಠೆಗೆ ಧಕ್ಕೆಯಾಗಿದೆ. ಈ ಕುರಿತಂತೆ ಮಾನ ನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸಿದ್ದೇವೆ” ಎಂದಿದ್ದಾರೆ. ನಿರ್ಮಾಪಕ ಮುನಿರತ್ನ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು “ಮಾನನಷ್ಟ ಮೊಕದ್ದಮ್ಮೆ ಹೂಡಲು ಅರ್ಜುನ್ ಸರ್ಜಾಗೆ ಹೇಳುತ್ತೇನೆ” ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top