fbpx
ದೇವರು

ಒಂದು ಕಾಲದಲ್ಲಿ 365 ಕ್ಕೂ ಹೆಚ್ಚು ದೇವಾಲಯ ಹಾಗೂ ಬೆಚ್ಚಿಬೀಳಿಸೋ ರಹಸ್ಯಗಳನ್ನು ಹೊಂದಿದ ಕೋಟೆ ಯಾವುದು,ಎಲ್ಲಿದೆ ಈ ಕೋಟೆ, ಈ ಕೋಟೆಯೊಳಗಿದೆಯಂತೆ ಸಂಜೀವಿನಿ ಪರ್ವತ.

ತ್ರೇತಾಯುಗದಲ್ಲಿ ಶ್ರೀ ರಾಮ ಲಕ್ಷ್ಮಣರು ಲಂಕೆಯಲ್ಲಿ ರಾವಣನ ಜೊತೆ ಯುದ್ಧ ಮಾಡುವ ಸಂದರ್ಭದಲ್ಲಿ ಮೂರ್ಚೆ ಹೋದ ಲಕ್ಷ್ಮಣನನ್ನು ಬದುಕಿಸುವುದಕ್ಕೆ ಹನುಮಂತ ಹಿಮಾಲಯದಿಂದ ಸಂಜೀವಿನಿ ಪರ್ವತವನ್ನು ಹೊತ್ತು ತಂದಿದ್ದನಂತೆ. ಕೆಲವು ಕಡೆ ಆ ಪರ್ವತದ ಅವಶೇಷಗಳು ನೆಲಕ್ಕೆ ಬೀಳುತ್ತವೆ. ಹಾಗೆ ಬಿದ್ದ ಸ್ಥಳ ಈಗ ಸಂಜೀವಿನಿ ಪರ್ವತ ಎಂದೇ ಕರೆಸಿಕೊಳ್ಳುತ್ತದೆ. ಅಲ್ಲಿ ಔಷಧಿ ಸಸ್ಯಗಳ ಭಂಡಾರವೇ ಇದೆ. ಇಷ್ಟಕ್ಕೂ ಆ ಪರ್ವತ ಇರುವುದಾದರೂ ಎಲ್ಲಿ ? ಅದರ ಇತಿಹಾಸ ಏನು ? ಬನ್ನಿ ತಿಳಿದುಕೊಳ್ಳೋಣ.

ಸಂಜೀವಿನಿ ಪರ್ವತ ಈ ಪದವನ್ನು ಕೇಳುತ್ತಿದ್ದಂತೆ, ನಾವು ನೀವೆಲ್ಲ ಒಂದು ಕ್ಷಣ ರಾಮಾಯಣವನ್ನು ನೆನಪಿಸಿಕೊಳ್ಳುತ್ತೇವೆ. ಸಂಜೀವಿನಿ ಎನ್ನುವ ಹೆಸರು ಕೇಳಿದ ಕೂಡಲೇ ನಮಗೆ ರೋಮಾಂಚನವಾಗುತ್ತದೆ. ಸಂಜೀವಿನಿ ಎನ್ನುವುದು ಸಕಲ ರೋಗಗಳನ್ನು ಗುಣಪಡಿಸುವಂತಹ ಎಲ್ಲ ರೋಗಗಳಿಗೂ ಔಷದ. ಒಂದೇ ಒಂದು ತೃಣ ಮಾತ್ರ ಸಂಜೀವಿನಿ ಸಿಕ್ಕಿಬಿಟ್ಟರೆ ಸಾಕು, ಮನುಷ್ಯ ಚಿರಂಜೀವಿಯಾಗಿ ಬಿಡುತ್ತಾನೆ. ಆದರೆ ಈ ಸಂಜೀವಿನಿ ಹೇಗಿದೆ ? ಎಂದು ಯಾರೂ ಸಹ ನೋಡಿದವರಿಲ್ಲ. ಅದು ಹೇಗಿದೆ ? ಎನ್ನುವುದನ್ನು ಊಹೆ ಮಾಡಿಕೊಳ್ಳುವುದಕ್ಕೂ ಸಾಧ್ಯವಿಲ್ಲ.ಆದರೆ ಸಂಜೀವಿನಿಯ ಬಗ್ಗೆ ನಾವು ಸಾಕಷ್ಟು ಕಥೆಗಳನ್ನು ಕೇಳಿದ್ದೇವೆ. ತ್ರೇತಾಯುಗದ ಕಾಲದಲ್ಲಿ ರಾಮ ಮತ್ತು ರಾವಣನ ಯುದ್ಧದ ಸಂದರ್ಭದಲ್ಲಿ ನಡೆದಿದೆ ಎನ್ನುವ ಆ ಕತೆ ನಿಜಕ್ಕೂ ಸಂಜೀವಿನಿಯ ಮಹತ್ವವನ್ನು ಹೆಚ್ಚಿಸಿದೆ.

ಅದು ಶ್ರೀರಾಮ ಲಕ್ಷ್ಮಣರು ಲಂಕೆಯಲ್ಲಿ ಯುದ್ಧ ಮಾಡುತ್ತಿದ್ದ ಸಮಯ. ವೀರಾಧಿ ವೀರರೆಲ್ಲ ಯುದ್ಧ ಮಾಡಿ ತತ್ತರಿಸಿ ಹೋಗಿದ್ದರು. ಆ ಸಮಯದಲ್ಲಿ ಅಲ್ಲಿಗೆ ರಾವಣನ ಮಗ ಇಂದ್ರಜಿತುವಿನ ಆಗಮನವಾಯಿತು. ಇಂದ್ರಜಿತುವಿನ ನಿಜವಾದ ಹೆಸರು ಮೇಘನಾದ. ಅವನು ತನ್ನ ಶಕ್ತಿಯಿಂದ ಇಂದ್ರನನ್ನು ಸೋಲಿಸಿದ್ದರಿಂದ ಅವನಿಗೆ ಇಂದ್ರಜಿತು ಎನ್ನುವ ಹೆಸರು ಬಂತು. ಇಂದ್ರಜಿತು ಎಂದರೆ ಇಂದ್ರನನ್ನು ಜಯಿಸಿದವನು ಎಂದರ್ಥ. ಹೀಗೆ ದೇವರಾಜ ಇಂದ್ರನನ್ನೇ ಅವನು ಗೆಲ್ಲಬೇಕಾದರೆ ಅವನಿಗೆ ಎಷ್ಟು ಶಕ್ತಿ ಇರಬಹುದು ಎಂದು ನೀವೇ ಊಹೆ ಮಾಡಿಕೊಳ್ಳಿ. ಅವನು ಅದೃಶ್ಯವಾಗಿ ಬಾಣ ಪ್ರಯೋಗ ಮಾಡುವಂತಹ ಶಕ್ತಿ ಇತ್ತು. ಅದನ್ನು ಉಪಯೋಗಿಸಿಕೊಂಡು ಇಂದ್ರನನ್ನು ಗೆದ್ದಿದ್ದ.

 

 

 

ಅಂತಹ ಇಂದ್ರಜಿತು ತನ್ನ ಅಪ್ಪನ ಮೇಲೆ ಯುದ್ಧಕ್ಕೆ ಬಂದಿದ್ದ ಲಕ್ಷ್ಮಣನನ್ನು ಎದುರಿಸುವುದಕ್ಕೆ ಸಿದ್ಧನಾಗಿದ್ದ. ರಣರಂಗಕ್ಕೆ ಬರುತ್ತಿದ್ದಂತೆ ಲಕ್ಷ್ಮಣನ ಮೇಲೆ ಬಾಣಗಳ ಸುರಿಮಳೆಗೈದನು. ಬಾಣಗಳ ಹೊಡೆತಕ್ಕೆ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದ. ಇದರಿಂದ ಶ್ರೀರಾಮ ಕಂಗಾಲಾಗಿ ಹೋಗಿದ್ದರಿಂದ. ರಾಮನ ಸೇನೆ ಸುಸ್ತಾಗಿ ಹೋಗಿತ್ತು. ಹನುಮಂತ,ಸುಗ್ರೀವ ಎಲ್ಲರೂ ಕಂಗಾಲಾಗಿ ಬಿಟ್ಟರು. ಅಷ್ಟರಲ್ಲೇ ಅಲ್ಲಿಗೆ ಆಗಮಿಸಿದ ಸುಷೇಣ ಸಂಜೀವಿನಿ ಗಿಡವನ್ನು ತಂದರೆ ಅದರಿಂದ ಲಕ್ಷ್ಮಣನನ್ನು ರಕ್ಷಿಸಬಹುದು ಜೀವ ಉಳಿಸಬಹುದು ಎಂದು ಹೇಳಿದ್ದ. ಆ ಸಂಜೀವಿನಿ ಸಿಗುತ್ತಿದ್ದದ್ದು ಹಿಮಾಲಯ ಪರ್ವತದಲ್ಲಿ ಮಾತ್ರ. ಹೀಗಾಗಿ ಲಂಕೆಯಿಂದ ಹಿಮಾಲಯಕ್ಕೆ ಹೋಗಿ ಅಲ್ಲಿದ್ದ ಸಂಜೀವಿನಿಯನ್ನು ತರುವ ಜವಾಬ್ದಾರಿ ಹನುಮಂತನ ಮೇಲೆ ಇತ್ತು. ಹೀಗಾಗಿ ಹನುಮಂತ ತನಗೆ ವಹಿಸಿದ ಜವಾಬ್ದಾರಿಯನ್ನು ಪೂರ್ಣಗೊಳಿಸುವುದಕ್ಕೆ ಅವನು ಹಿಮಾಲಯಕ್ಕೆ ಬಂದಿದ್ದ. ಅವನಿಗೆ ಏನನಿಸಿತ್ತೋ, ಗೊತ್ತಿಲ್ಲ. ಅವನು ಸಂಜೀವಿನಿ ಗಿಡವನ್ನು ಹುಡುಕುವುದರ ಬದಲಾಗಿ ಸಂಜೀವಿನಿ ಪರ್ವತದ ಒಂದು ಭಾಗವನ್ನು ಎತ್ತುಕೊಂಡು ಲಂಕೆಯ ಕಡೆಗೆ ಹಾರಿಬಿಟ್ಟ. ಲಂಕೆಯಲ್ಲಿ ಸುಷೇಣ ಸಂಜೀವಿನಿ ಗಿಡದ ಸಹಾಯದಿಂದ ಲಕ್ಷ್ಮಣನನ್ನು ಬದುಕಿಸಿದ್ದ. ಆನಂತರ ರಾಮ ರಾವಣನನ್ನು ಕೊಲ್ಲುವುದರ ಮೂಲಕ ರಾವಣ ರಾಮಾಯಣದ ಯುದ್ಧ ಅಂತ್ಯವಾಗಿತ್ತು. ಇಂಥದೊಂದು ಕತೆಯಲ್ಲಿ ಬರುವ ಆ ಸಂಜೀವಿನಿ ಪರ್ವತ ಭಾರತದ ಕೆಲವು ಭಾಗಗಳಲ್ಲಿ ಕಂಡು ಬಂದಿದೆ ಎಂದು ಹೇಳಲಾಗುತ್ತದೆ. ಪರ್ವತವನ್ನು ಹನುಮಂತ ಲಂಕೆಗೆ ತೆಗೆದುಕೊಂಡು ಹೋಗುವ ಮಾರ್ಗದಲ್ಲಿ ಅಲ್ಲೆಲ್ಲ ಇವತ್ತು ಅತ್ಯದ್ಭುತವಾಗಿ ಪರ್ವತಗಳಾಗಿವೆ ಎನ್ನುವ ನಂಬಿಕೆ ಇದೆ. ಈ ಒಂದು ಕೋಟೆ ಇರುವುದೇ ಈ ಸಂಜೀವಿನಿ ಪರ್ವತದಲ್ಲಿ ಭರತ ಭೂಮಿಯಲ್ಲಿರುವ ಕೆಲವೇ ಕಲವು ಕೋಟೆಗಳಲ್ಲಿ ಇದು ಸಹ ಒಂದು.

ಪುರಾಣದ ಜೊತೆಗೆ ಐತಿಹಾಸಿಕ ಕಥೆಯನ್ನು ಹೊಂದಿರುವ ಈ ಕೋಟೆ ಯಾವುದು ?
ಇವತ್ತು ಆಂಧ್ರ ಪ್ರದೇಶದಲ್ಲಿರುವ ನೆಲ್ಲೂರಿನಲ್ಲಿ ಈ ಕೋಟೆ ಇದೆ. ಜಿಲ್ಲಾ ಕೇಂದ್ರದಿಂದ 100 ಕಿಲೋಮೀಟರ್ ದೂರದಲ್ಲಿರುವ ಆ ಕೋಟೆ ಅಭೇದ್ಯವಾಗಿದ್ದು, ಸ್ಥಳೀಯ ಜನ ಇದನ್ನು ಸಂಜೀವಿನಿ ಪರ್ವತ ಎಂದೇ ಗುರುತಿಸುತ್ತಾರೆ. ಈ ಪ್ರದೇಶ ಪ್ರಕೃತಿ ಸೌಂದರ್ಯವನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆ. ಸುತ್ತಲೂ ಪ್ರಕೃತಿಯ ಹಸಿರು ಕಾನನ, ಅದರ ಜೊತೆಯಲ್ಲಿ ಬಳುಕುವ ಸುಂದರಿಯರ ಹಾಗೆ ಬಳುಕುವ ನದಿ ಮತ್ತು ಹರಿಯುವ ಜಲಪಾತಗಳು ಭೂಲೋಕವೇ ನಾಚುವಂತೆ ಕಾಣುವ ಸೂರ್ಯೋದಯ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.
ಈ ಪ್ರದೇಶಕ್ಕೆ ಉದಯಗಿರಿ ಎನ್ನುವ ಹೆಸರು ಬರುವುದಕ್ಕೆ ಇಲ್ಲಿನ ಸೂರ್ಯೋದಯವೇ ಕಾರಣ.ಈ ಕೋಟೆಯ ವಿಚಾರಕ್ಕೆ ಬರುವುದಾದರೆ ಭಾರತ ದೇಶದಲ್ಲಿರುವ ಉದಯಗಿರಿಯಲ್ಲಿರುವ ಕೋಟೆ ಭಾರತದಲ್ಲಿರುವ ಪ್ರಮುಖ ಕೋಟೆಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದೆ. ಇಲ್ಲಿ ಸಾರ್ವಭೌಮರು ತಮ್ಮ ಆಳ್ವಿಕೆಯನ್ನು ನಡೆಸಿಲ್ಲ. ಸಾಮ್ರಾಟರ ರಾಜಧಾನಿಯಾಗಿ ಈ ಪ್ರದೇಶ ಹೆಮ್ಮೆ ಪಟ್ಟಿಲ್ಲ, ಆದರೂ ಸಹ ಈ ಕೋಟೆಗೆ ಇತಿಹಾಸದ ಪುಟಗಳಲ್ಲಿ ಪ್ರಮುಖವಾದ ಪಾತ್ರವಿದೆ. ಅದಕ್ಕೆ ಕಾರಣವಾಗಿದ್ದು ಇಲ್ಲಿ ನಡೆದ ಅದೊಂದು ಯುದ್ಧ.ಈ ಕೋಟೆ ಸಮುದ್ರ ಮಟ್ಟಕ್ಕಿಂತಲೂ ಮೂರು ಸಾವಿರ ಅಡಿಗಳಷ್ಟು ಎತ್ತರದಲ್ಲಿ ನಿರ್ಮಾಣವಾಗಿದೆ. ಸುತ್ತಲೂ ಆಳವಾದ ಕಣಿವೆ. ಈ ಕೋಟೆಯನ್ನು ಭಯಾನಕವಾಗಿದೆ. ಅಂತಹ ಕೋಟೆಯನ್ನು ಕಷ್ಟಪಟ್ಟು ಹತ್ತಿದರೆ ಅಲ್ಲಿ ನಮಗೆ ಇತಿಹಾಸದ ಪೂರ್ವವೇ ಸಿಗುತ್ತದೆ.ಅಷ್ಟೇ ಅಲ್ಲ ಈ ಕೋಟೆಯ ಪ್ರತಿ ಕಲ್ಲು ಸಹ ಇಲ್ಲಿ ನಡೆದಿರುವ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತದೆ. ಅದರಲ್ಲೂ ಉದಯಗಿರಿ ಕೋಟೆಯಲ್ಲಿ ಓಡಾಡುತ್ತಿದ್ದರೆ, ಈ ಪ್ರದೇಶದಲ್ಲಿ ನಡೆದ ಅದೊಂದು ಯುದ್ಧ ಭಯಾನಕವಾಗಿ ಕಾಡುತ್ತದೆ. ಯಾಕೆಂದರೆ ಆ ಯುದ್ಧದಲ್ಲಿ ವಿಜಯನಗರ ಸೈನ್ಯ ಸೋಲಿನ ಅಂಚಿಗೆ ಬಂದು ನಿಂತಿತ್ತು ಎಂದರೆ ನಮಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

 

 

 

ಅದು ಕ್ರಿಸ್ತಶಕ 1512 ರಸಮಯ ಆಗ ವಿಜಯನಗರ ಸಾಮ್ರಾಜ್ಯದ ಸಾಮ್ರಾಟ ಶ್ರೀ ಕೃಷ್ಣದೇವರಾಯ ಕಳಿಂಗದ ಗಜಪತಿಗಳ ಮೇಲೆ ಯುದ್ಧ ಸಾರಿದ್ದ. ಅವತ್ತಿಗೆ ಪ್ರತಾಪ ರುದ್ರ ದೇವ ಮತ್ತು ಕಳಿಂಗದ ಆಡಳಿತದ ಚುಕ್ಕಾಣಿಯನ್ನು ಹಿಡಿದಿದ್ದ. ಅಂತಹ ಕಳಿಂಗವನ್ನು ಗೆಲ್ಲಬೇಕು ಎನ್ನುವುದು ಶ್ರೀಕೃಷ್ಣದೇವರಾಯರ ಹಂಬಲವಾಗಿತ್ತು. ಹಾಗಾಗಿ ಸರಿ ಸುಮಾರು 35 ಸಾವಿರ ವಿಜಯನಗರ ಸೈನ್ಯವನ್ನು ಕಳಿಂಗದ ಕಡೆ ಮುಖ ಮಾಡಿದ್ದು, ಸೈನ್ಯದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಅಶ್ವಗಳು ಹಾಗೂ ಸಾವಿರಾರು ಗಜಪಡೆಗಳು ಸಹ ಇದ್ದವು.ಅಷ್ಟು ದೊಡ್ಡ ಸೈನ್ಯ ಈ ಉದಯಗಿರಿ ಕೋಟೆಗೆ ಮುತ್ತಿಗೆ ಹಾಕಿತ್ತು.ಸಾಮಾನ್ಯವಾಗಿ ಕಳಿಂಗ ಎಂದರೆ ಅದು ಒರಿಸ್ಸಾ ಎಂದು ಅಂದುಕೊಳ್ಳುತ್ತೇವೆ. ಆದರೆ ಅವತ್ತಿನ ಕಳಿಂಗ ಇವತ್ತಿನ ಆಂಧ್ರ ಪ್ರದೇಶದ ಬಹುಭಾಗವನ್ನು ಹೊಂದಿತ್ತು. ಆಂಧ್ರಪ್ರದೇಶದ ಕರಾವಳಿ ಭಾಗಗಳು ವಿಶಾಖಪಟ್ಟಣಂ, ಕೊಂಡಪಲ್ಲಿ, ಕೊಂಡವೀಡು ಎಲ್ಲ ಪ್ರದೇಶಗಳ ಜೊತೆಗೆ ಉದಯಗಿರಿ ಕೋಟೆ ಸಹ ಕಳಿಂಗದ ಅರಸರ ವರ್ಷದಲ್ಲಿ ಇತ್ತು. ಹೀಗಾಗಿ ಕಳಿಂಗವನ್ನು ಗೆದ್ದುಬಿಟ್ಟರೆ ಸಾಮ್ರಾಜ್ಯ ನಮ್ಮದಾಗುತ್ತದೆ ಎನ್ನುವುದು ಕೃಷ್ಣದೇವರಾಯನಿಗೆ ಗೊತ್ತಿತ್ತು. ಈ ಕಾರಣದಿಂದಲೇ ಅವನು ಗಜಪತಿ ಪ್ರತಾಪ ರುದ್ರ ದೇವನ ಮೇಲೆ ಯುದ್ಧ ಸಾರಿದ್ದು.ಕಳಿಂಗದ ಮೇಲಿನ ಯುದ್ಧಕ್ಕೆ ಅಲ್ಲೊಂದು ಭಯಾನಕ ತಂತ್ರ ತಯಾರಾಗುತ್ತದೆ. ಸಹಸ್ರಾರು ಸೈನಿಕರು ಈ ಕೋಟೆಯನ್ನು ಮುತ್ತಿಗೆ ಹಾಕುತ್ತಾರೆ. ಆದರೆ ಕೆಲವೇ ಕೆಲವು ಸೈನಿಕರನ್ನು ಹೊಂದಿದ್ದ ಉದಯಗಿರಿ ಕೊತ್ವಾಲ ತಿರುಮಲರಾಯ ವಿಜಯನಗರ ಸಾಮ್ರಾಜ್ಯಕ್ಕೆ ಸವಾಲನ್ನು ಎಸೆಯುತ್ತಾನೆ. ಅನೇಕ ತಿಂಗಳುಗಳ ಕಾಲ ಈ ಕೋಟೆಯನ್ನು ಮುತ್ತಿಗೆ ಹಾಕಿದ್ದರು ಸಹ ವಿಜಯನಗರ ಸೈನ್ಯಕ್ಕೆ ಕೋಟೆಯನ್ನು ಬೇಧಿಸಲು ಸಾಧ್ಯವಾಗುವುದಿಲ್ಲ. ರಾಯರ ಸೈನ್ಯದಲ್ಲಿದ್ದ ಅತಿರಥ ಮಹಾರಥರೆಲ್ಲ ಪ್ರಯತ್ನಪಟ್ಟರು ಈ ಕೋಟೆಯನ್ನು ಪ್ರವೇಶಿಸುವುದಕ್ಕೆ ಆಗುವುದಿಲ್ಲ. ಅಷ್ಟು ಸುಭದ್ರವಾದ ಕೋಟೆಯಲ್ಲಿ ಗಜಪತಿಯ ಪಡೆ ಆರಾಮವಾಗಿ ಕಾಲ ಕಳೆದಿರುತ್ತದೆ.

ಆ ಸಂದರ್ಭದಲ್ಲಿ ಈ ಹಿಂದೆ ತನಗಾದ ಹಿನ್ನಡೆ, ಅವಮಾನ ತಡೆದುಕೊಳ್ಳುವುದಕ್ಕೆ ಕೃಷ್ಣದೇವರಾಯ ಸ್ವತಃ ತಾನೇ ಯುದ್ಧ ಭೂಮಿಗೆ ಬಂದು ನಿಲ್ಲುತ್ತಾನೆ. ಅವನೇ ಮುಂದೆ ನಿಂತು ವಿಜಯನಗರದ ಸೈನ್ಯವನ್ನು ಮುನ್ನಡೆಸುತ್ತಾನೆ.ಕೃಷ್ಣದೇವರಾಯ ಯುದ್ಧರಂಗಕ್ಕೆ ಬಂದ ನಂತರ ಅಲ್ಲಿ ಭಾರಿ ಬದಲಾವಣೆ ಕಂಡಿತ್ತು. ಉದಯಗಿರಿ ಕೋಟೆಯ ಗೋಡೆಗಳನ್ನು ರಾತ್ರಿ ಹೊತ್ತು ಹತ್ತುವ ತಂತ್ರವನ್ನು ಅಲ್ಲಿ ಹೆಣೆಯಲಾಗಿತ್ತು. ಅಲ್ಲಿಗೆ ಒಂದಷ್ಟು ಉಡಗಳನ್ನು ತಂದು ಅವಕ್ಕೆ ಹಗ್ಗ ಕಟ್ಟಿ ಕೋಟೆಯತ್ತ ಎಸೆಯಲಾಗಿತ್ತು. ಆನಂತರ ಅ ಹಗ್ಗಗಳ ಸಹಾಯದಿಂದ ಕೋಟೆಯನ್ನು ಹತ್ತುವುದಕ್ಕೆ ವಿಜಯನಗರ ಸೈನ್ಯ ಮುಂದಾಗಿತ್ತು. ಆದರೆ ಈ ವಿಚಾರ ತಿಳಿದ ಗಜಪತಿಯ ಸೈನಿಕರು ಮೇಲಿನಿಂದ ವಿಜಯನಗರ ಸೈನ್ಯದ ಮೇಲೆ ಆಕ್ರಮಣ ಮಾಡಿದರು. ಹೀಗಾಗಿ ಆ ತಂತ್ರ ಅಲ್ಲಿ ವಿಫಲವಾಗಿತ್ತು. ಸಾಕಷ್ಟು ಪ್ರಯತ್ನದ ನಂತರವೂ ಈ ಕೋಟೆಯನ್ನು ಗೆಲ್ಲುವುದಕ್ಕೆ ಆಗಲೇ ಇಲ್ಲ. ಹೀಗಾಗಿ ಈ ಕೋಟೆಯನ್ನು ನಾಲ್ಕು ದಿಕ್ಕುಗಳಿಂದಲೂ ಮುತ್ತಿಗೆ ಹಾಕುವುದಕ್ಕೆ ಕೃಷ್ಣದೇವರಾಯ ನಿರ್ಧರಿಸಿದ್ದ. ಈ ಮೂಲಕ ಕೋಟೆಯೊಳಗೆ ಆಹಾರ ಪದಾರ್ಥಗಳು ಎಲ್ಲಿಂದಲೂ ಹೋಗದಂತೆ ತಡೆಯಲಾಗಿತ್ತು.ಕಾಲ ಉರುಳಿದ ಹಾಗೆ ಅನ್ನವಿಲ್ಲದೆ ಗಜಪತಿಯ ಸೈನ್ಯ ವಿಜಯನಗರ ಸೈನ್ಯಕ್ಕೆ ಶರಣಾಗಿತ್ತು. ಆ ಮೂಲಕ ಕೃಷ್ಣದೇವರಾಯ ಈ ಕೋಟೆಯನ್ನು ತನ್ನ ವಶಕ್ಕೆ ತೆಗೆದುಕೊಂಡ ಜೂನ್ 9,1514ರಲ್ಲಿ ಈ ಕೋಟೆ ವಿಜಯನಗರದ ವಶವಾಗಿತ್ತು. ಈ ಕೋಟೆಯಲ್ಲಿ ಭರ್ಜರಿ ಜಯ ಸಾಧಿಸಿದ ಕೃಷ್ಣದೇವರಾಯ ಗಜಪತಿ ಪ್ರತಾಪ ರುದ್ರ ದೇವನ ಮಗಳನ್ನು ಇಲ್ಲೇ ಮದುವೆಯಾಗಿದ್ದ. ಇವತ್ತಿಗೂ ಕೃಷ್ಣದೇವರಾಯನ ಮದುವೆ ನಡೆದ ಕಲ್ಯಾಣ ಮಂಟಪವನ್ನು ನಾವು ನೋಡಬಹುದಾಗಿದೆ. ವಿಜಯನಗರದ ಅಷ್ಟ ದಿಕ್ಪಾಲಕರಲ್ಲಿ ಒಬ್ಬರಾಗಿದ್ದ ಕವಿ ಅಲ್ಲಾಸಾನಿ ಪೆದ್ದಣ್ಣ ತನ್ನ ಚರಿತ್ರೆಯಲ್ಲಿ ಉದಯಗಿರಿ ವಿಜಯವನ್ನು ಉಲ್ಲೇಖಿಸಿದ್ದಾರೆ. ತಿಮ್ಮಣ್ಣ ಮುಂದುವರೆದ “ಪಾರಿಜಾತ ಅಪಹರಣಂ” ಪುಸ್ತಕದಲ್ಲಿ ಇದನ್ನು ಉಲ್ಲೇಖಿಸಿದ್ದಾನೆ.

 

 

 

ಈ ಕೋಟೆ ವಿಜಯನಗರದ ತೆಕ್ಕೆಗೆ ಬಂದ ನಂತರ ಸಮಗ್ರ ಅಭಿವೃದ್ಧಿಯನ್ನು ಕಂಡಿತ್ತು. ದಕ್ಷಿಣದಲ್ಲಿ ಪೆನ್ನಾರ್ ನದಿ ಯಿಂದ ಉತ್ತರದಲ್ಲಿ ಕೃಷ್ಣ ನದಿಯವರೆಗೂ ಉದಯಗಿರಿಯ ಸಂಸ್ಥಾನ ಹರಡಿಕೊಂಡಿತ್ತು. ಇವತ್ತಿಗೂ ಈ ಕೋಟೆಯ ಗೋಡೆಗಳು ವರವಾಗಿ ಉಳಿದುಕೊಂಡಿವೆ. ಕೋಟೆಯನ್ನು ಹತ್ತುವವರೆಗೂ ಸವಾಲನ್ನು ಎಸೆಯುತ್ತದೆ. ಕೋಟೆಯ ಒಳಗೆ ಬಂದರೆ ಅಲ್ಲೊಂದು ಅದ್ಭುತವಾದ ವಾಸ್ತು ಶಿಲ್ಪಕಲೆ ಅನಾವರಣವಾಗುತ್ತದೆ. ಚೋಳರಿಂದ ನಿರ್ಮಾಣವಾದ ರಂಗ ನಾಯಕನ ದೇವಾಲಯ ಚೋಳರ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿ ನಿಂತಿದೆ. ಅದೇ ರೀತಿ ಇಲ್ಲಿರುವ ಬಾಲಕೃಷ್ಣ ಮಂದಿರ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ . ಈ ದೇವಾಲಯವನ್ನು ಪಲ್ಲವರು 7ನೇ ಶತಮಾನದಲ್ಲಿ ನಿರ್ಮಿಸಿದ ಬಾಲ ಕೃಷ್ಣನ ವಿಗ್ರಹವನ್ನು ಹಂಪೆಗೆ ತೆಗೆದುಕೊಂಡು ಹೋಗಲಾಗಿದೆ. ಆ ನಂತರದ ದಿನಗಳಲ್ಲಿ ಅಲ್ಲಿಂದ ಇಲ್ಲಿಗೆ ಒಂದು ಪಂಚಲೋಹದ ಕೃಷ್ಣನ ವಿಗ್ರಹವನ್ನು ತಂದು ಇಲ್ಲಿ ಸ್ಥಾಪಿಸಲಾಗಿದೆ. ಅದೇ ರೀತಿ ಇಲ್ಲಿ ಕೋಟೆಯೊಳಗಿರುವ ಕಲ್ಯಾಣಿ ಅತ್ಯಂತ ಅದ್ಭುತವಾಗಿ ನಿರ್ಮಾಣವಾಗಿದೆ. ಶ್ರೀಕೃಷ್ಣದೇವರಾಯ ನಿರ್ಮಿಸಿದ್ದ 1965 ರ ನಂತರ ಈ ಕೋಟೆಯ ಮೇಲೆ ಪರಕೀಯರ ದಾಳಿ ಸಾಕಷ್ಟು ಬಾರಿ ನಡೆದಿತ್ತು. ಗೋಲ್ಕೊಂಡದ ಋತುಬ್ಷಾ ಅಂತೂ ಈ ಕೋಟೆಯನ್ನು ಗೆಲ್ಲಬೇಕು ಎಂದು ಹರಸಾಹಸ ಪಟ್ಟನು. ಕಡೆಗೂ ಅವನ ಆಸೆ ಈಡೇರಿತ್ತು. ಅವನ ಆಡಳಿತದ ಕಾಲದಲ್ಲಿ ಈ ಕೋಟೆಯೊಳಗೆ ಸಾಕಷ್ಟು ಮಸೀದಿಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಈಗ ಈ ಕೋಟೆಯೊಳಗೆ ಕೇವಲ ಮೂರು ಮಸೀದಿಗಳ ಉಳಿದುಕೊಂಡಿವೆ ಅದರಲ್ಲೂ ಕೋಟೆಯ ಮಧ್ಯದಲ್ಲಿರುವ ಕೋಶ ಮಸೀದಿ ಮಹಿಳೆಯರಿಗೆ ಮೀಸಲಾಗಿದ್ದು ಎನ್ನುವುದು ಇಲ್ಲಿನ ವಿಶೇಷ. ಒಂದು ಕಾಲದಲ್ಲಿ ಈ ಕೋಟೆಯಲ್ಲಿ 365 ಹೆಚ್ಚು ದೇವಾಲಯಗಳು ಇದ್ದವಂತೆ ಇವತ್ತಿಗೂ ಈ ಉದಯ ಗಿರಿಯಲ್ಲಿರುವ ಇರುವ ಭೈರವ ಕೊಂಡ ಭಾರತದ ಗಮನವನ್ನು ತನ್ನೆಡೆಗೆ ಸೆಳೆಯುತ್ತದೆ. ಇಲ್ಲಿ ತ್ರಿಮೂರ್ತಿಗಳ ದೇವಾಲಯವಿದ್ದು ಬಹುಶಃ ಭಾರತದಲ್ಲಿ ಇಂತಹ ದೇವಾಲಯಗಳಿರುವ ಸ್ಥಳ ಇರಬಹುದು ಎಂದು ನಂಬಲಾಗಿದೆ. ಇಲ್ಲಿರುವ ಗುಹಾಂತರ ದೇವಾಲಯಗಳನ್ನು ಒಂದೇ ರಾತ್ರಿಯಲ್ಲಿ ಕಡೆದದ್ದು ಎಂದು ಹೇಳಲಾಗುತ್ತದೆ. ಅದೇ ರೀತಿ ಕೋಟೆಯೊಳಗೆ ರಹಮತ್ತುಲ್ಲಾ ಎನ್ನುವ ಸೂಫಿ ಸಂತನ ದರ್ಗಾ ಕೂಡ ಇರುವುದು ವಿಶೇಷ.1800 ರ ನಂತರ ಈ ಕೋಟೆ ಬ್ರಿಟಿಷರ ವಶವಾಗಿತ್ತು. ಆ ಮೂಲಕ ಇಲ್ಲಿಗೆ ಕ್ರೈಸ್ತಧರ್ಮ ಪ್ರವೇಶ ಪಡೆದಿತ್ತು. ಅದರ ಗುರುತಾಗಿ ಈ ಕೋಟೆಯ ಸುತ್ತ ಮುತ್ತಲು ನಿರ್ಮಾಣವಾಗಿರುವ ಚರ್ಚ್ ಹಾಗೂ ಆಸ್ಪತ್ರೆ ಸಾಕ್ಷಿಯಾಗಿ ನಿಂತಿವೆ. ಹೀಗೆ ಉದಯಗಿರಿ ಕೋಟೆ ಪುರಾಣ ಕತೆಯನ್ನು ಹೇಳುವುದರ ಜೊತೆಗೆ ಭಾರತದ ಇತಿಹಾಸದ ಪುಟಗಳನ್ನು ಸಹ ನಮ್ಮ ಮುಂದೆ ತೆರೆದು ಇಡುತ್ತದೆ. ಇಂತಹ ಕೋಟೆಯನ್ನು ಗೋಲ್ಕೊಂಡ ಕೋಟೆಯ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಸ್ಥಳಿಯರ ಆಶಯವಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top