fbpx
ಮನೋರಂಜನೆ

ಧ್ವನಿಯೆತ್ತಿದ ಹೆಣ್ಣಿನ ಬಾಯಿ ಮುಚ್ಚಿಸಲು ವೀರರು, ಪರಾಕ್ರಮಿಗಳು ಒಟ್ಟಾಗಿದ್ದಾರೆ: ಕೌರವರು-ಪಾಂಡವರ ಮಧ್ಯೆ ನ್ಯಾಯಕ್ಕಾಗಿ ನಿಂತ ದ್ರೌಪದಿಯಂತೆ ಶ್ರುತಿ.

ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪ ಸ್ಯಾಂಡಲ್‍ವುಡ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಶ್ರುತಿ ಪರ ಧ್ವನಿಯೆತ್ತಿದರೆ, ಕೆಲವರು ಅರ್ಜುನ್ ಬೆಂಬಲಕ್ಕೆ ನಿಂತಿದ್ದಾರೆ.. ಇನ್ನೂ ಕೆಲವರು ಈ ವಿಚಾರಕ್ಕೆ ರಾಜಕೀಯ ಎಳೆದು ಧರ್ಮದ ಬಣ್ಣ ಕತ್ತೆ ಗಬ್ಬೆಬ್ಬಿಸಿದ್ದಾರೆ.. ಶ್ರುತಿ ಹರಿಹರನ್ ಮಾಡಿರುವ ಆರೋಪ ಈಗ ಯಾವ್ಯಾವುದೋ ತಿರುವುಗಳನ್ನ ಪಡೆದುಕೊಂಡಿದೆ. ಅರ್ಜುನ್ ಸರ್ಜಾ ಅವರನ್ನು ಸಮರ್ಥಿಸುವ ಭರದಲ್ಲಿ ಶೃತಿ ಹರಿಹರನ್ ನಡತೆ ಸರಿಯಿಲ್ಲ ಎನ್ನುವಷ್ಟರ ಮಟ್ಟಿಗೆ ಕೆಲವು ನಿರ್ಮಾಪಕರು, ನಟರು, ಜನಸಾಮಾನ್ಯರು ಮಿತಿಮೀರಿ ವರ್ತಿಸುತ್ತಿದ್ದಾರೆ. ಅಂತೆಯೇ ಶೃತಿಯನ್ನು ಸಮರ್ಥಿಸುವ ಭರದಲ್ಲಿ ಅರ್ಜುನ್ ಸರ್ಜಾ ಅವರಿಗೆ ಸ್ರೀಪೀಡಕನ ಪಟ್ಟ ಕಟ್ಟುವ ಕೆಲಸವೂ ಚಾಲ್ತಿಯಲ್ಲಿದೆ . ಈ ಎಲ್ಲಾ ವಿಚಾರಗಳ ಬಗ್ಗೆ ಇದೀಗ ಬಹುಭಾಷಾ ನಟ ಪ್ರಕಾಶ್ ರೈ ತಮ್ಮ ಫೇಸ್ಬುಕ್ ನಲ್ಲಿ ಸವಿಸ್ತಾರವಾಗಿ ಬರೆದುಕೊಂಡಿದ್ದಾರೆ.

ನಟಿ ಶ್ರುತಿ ಹರಿಹರನ್ ಮಾಡಿರುವ #MeToo ಆರೋಪಕ್ಕೆ ಬೆಂಬಲ ವ್ಯಕ್ತಪಡಿಸುತ್ತಾ ಬಂದಿರುವ ನಟ ಪ್ರಕಾಶ್ ರೈ, ಇದೀಗ ಇನ್ನೊಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.. ಕೌರವರು ಮತ್ತು ಅವರಿಗೆ ತಮ್ಮನ್ನು ಮಾರಿಕೊಂಡ ಪಾಂಡವರ ನಡುವೆ ನ್ಯಾಯ ಕೇಳಲು ನಿಂತ ದ್ರೌಪದಿಯ ಕತೆಗೂ, ಇಲ್ಲಿ ನಡೆಯುತ್ತಿರುವುದಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎಂದು ಬರೆದುಕೊಂಡಿದ್ದಾರೆ.

ಪ್ರಕಾಶ್ ರೈ ಅವ್ರ ಬರಹ ಈ ರೀತಿ ಇದೆ..

“ನಿನ್ನಿಂದ ನನಗೆ ನೋವಾಗಿದೆ. ನೀನು ತಪ್ಪಾಗಿ ನಡೆದುಕೊಂಡಿರುವೆ. ಅದರಿಂದ ನಾನು ಕೆಲವು ದಿನಗಳ ಮಟ್ಟಿಗೆ ತಲ್ಲಣಿಸಿಹೋಗಿದ್ದೆ!” ಹಾಗಂತ ಒಬ್ಬ ಹೆಣ್ಣುಮಗಳು ಹೇಳಿದ ತಕ್ಷಣವೇ ಇಡೀ ಜಗತ್ತು ಎದ್ದು ಕೂರುತ್ತದೆ. ಹಾಗೆ ಹೇಳುವುದಕ್ಕೆ ನೀನು ಯಾರು? ನಿನ್ನ ಬಳಿ ಸಾಕ್ಷಿ ಏನಿದೆ? ಯಾಕೆ ನೀನಿದನ್ನು ಹೇಳುತ್ತಿರುವೆ? ನಿನಗೆ ಇದನ್ನು ಹೇಳಿಕೊಟ್ಟವರು ಯಾರು? ಯಾವ ರಾಜಕೀಯ ಪ್ರೇರಣೆಯಿಂದ ಹೀಗೆ ಪ್ರಶ್ನಿಸುತ್ತಿದ್ದೀಯಾ?

ಎಂದು ಪುಂಖಾನುಪುಂಖ ಪ್ರಶ್ನೆಗಳನ್ನು ಕೇಳುತ್ತಾ, ಆ ಹೆಣ್ಣುಮಗಳ ಬಾಯಿ ಮುಚ್ಚಿಸುವುದಕ್ಕೆ ನೋಡುತ್ತದೆ. ಆಮೇಲೆ ಅವಳೊಬ್ಬಳೇ ಅಲ್ಲ, ಯಾವ ಹೆಣ್ಣುಮಗಳೂ ಬಾಯಿ ತೆರೆಯಬಾರದು. ಯಾವತ್ತೂ ತನಗೆ ಅನ್ಯಾಯ ಆಗಿದೆ ಎಂದು ಹೇಳಿಕೊಳ್ಳಬಾರದು. ಒಂದು ಕೆಟ್ಟ ಸ್ಪರ್ಶವನ್ನು ಕೂಡ ಅದು ಸಹಜ ಎಂಬಂತೆ ಸ್ವೀಕರಿಸಬೇಕು ಎಂಬಂತೆ ಮಾಡುತ್ತದೆ.

ಇಂಥದ್ದನ್ನು ನಾನು ನೋಡುತ್ತಲೇ ಬಂದಿದ್ದೇನೆ. ಹೀಗಾಗಿ ಇದನ್ನೆಲ್ಲ ಕೇಳಿದಾಗ ನನಗೆ ಅಷ್ಟೇನೂ ಆಶ್ಚರ್ಯ ಆಗುವುದಿಲ್ಲ. ಇಂಥದ್ದನ್ನು ನಾನು ಸಾಕಷ್ಟು ನೋಡಿಕೊಂಡೇ ಬಂದಿದ್ದೇನೆ. ಹೆಣ್ಣು ತನಗೆ ಅನ್ಯಾಯ ಆಗಿದೆ ಎಂದಾಗ ಗಂಡು ಬಿಡಿ, ಹೆಣ್ಣು ಕೂಡ ಅದನ್ನು ಎಷ್ಟೋ ಸಲ ನಂಬುವುದಿಲ್ಲ. ಮತ್ತೊಬ್ಬ ಹೆಣ್ಣುಮಗಳು ಅದನ್ನು ವಿರೋಧಿಸುತ್ತಾಳೆ. ಅರೇ, ನನ್ನ ಜೊತೆ ಎಷ್ಟು ಚೆನ್ನಾಗಿ ಸಂಭಾವಿತರಂತೆ ನಡೆದುಕೊಂಡಿದ್ದಾರೆ. ಅಂಥವರು ಹೀಗೆ ಮಾಡಲು ಸಾಧ್ಯವೇ ಇಲ್ಲ ಎಂದು ತೀರ್ಪು ಕೊಟ್ಟುಬಿಡುತ್ತಾರೆ. ಅಲ್ಲಿಗೆ ಆ ಹೆಣ್ಣು ಖಳನಾಯಕಿಯಂತೆ ಕಾಣಿಸುತ್ತಾಳೆ.

ಶ್ರುತಿ ಹರಿಹರನ್​​ ಪ್ರಸಂಗ ಎಬ್ಬಿಸಿರುವ ಅಲೆಗಳನ್ನ ನೋಡಿದರೆ ಗಾಬರಿಯಾಗುತ್ತದೆ. ಒಂದು ಹೆಣ್ಣಿನ ಬಾಯಿ ಮುಚ್ಚಿಸಲು ಅದೆಷ್ಟು ಶೂರರು, ವೀರರು, ಪರಾಕ್ರಮಿಗಳು ಒಟ್ಟಾಗಿದ್ದಾರೆ. ಎಷ್ಟೊಂದು ಕತೆಗಳನ್ನ ಹೆಣೆಯುತ್ತಿದ್ದಾರೆ. ಎಷ್ಟೊಂದು ಲೆಕ್ಕಾಚಾರಗಳನ್ನ ಹಾಕುತ್ತಿದ್ದಾರೆ. ಇದನ್ನ ಎಡಪಂಥಿಯರ ಪಿತೂರಿ ಅಂತ ಯಾರೋ ಕರೆದರಂತೆ. ಎಲ್ಲವನ್ನೂ ತಂದು ರಾಜಕೀಯದ ಕೊಂಬಿಗೆ ಕಟ್ಟಿ ಪಾರಾಗುವುದು ಈ ಕಾಲದ ಜಾಯಮಾನ. ಅದು ರಾಜಕೀಯ ಕಣ್ರೀ ಅಂದುಬಿಟ್ಟರೆ ಅಲ್ಲಿಗೆ ಮುಗಿದುಹೋಯಿತು. ಹೆಣ್ಣಿನ ಮೇಲೆ ನಡೆದ ದೌರ್ಜನ್ಯದಿಂದ ಬೇಕಿದ್ದರೂ ಪಾರಾಗಬಹುದು. ರಾಜಕೀಯ ಅಂದುಬಿಟ್ಟರೆ ಲೈಂಗಿಕ ದೌರ್ಜನ್ಯ ಕೂಡ ತಪ್ಪೇನಲ್ಲ ಇವರ ಪಾಲಿಗೆ.

ಅರ್ಜುನ್ ಸರ್ಜಾರನ್ನು ಸಮರ್ಥಿಸಿಕೊಳ್ಳಲು ಇವರೆಲ್ಲ ಎದ್ದು ಕೂತಿದ್ದಾರೆ ಅಂತ ನನಗೆ ಅನ್ನಿಸಿಲ್ಲ. ಅವರ ಉದ್ದೇಶ ಹೆಣ್ಣು ಮಾತಾಡುವುದನ್ನು ಹೇಗಾದರೂ ಮಾಡಿ ತಡೆಯಬೇಕು ಅನ್ನುವುದು. ಯಾಕೆಂದರೆ ಸಿನಿಮಾ ಕ್ಷೇತ್ರದಲ್ಲಿರುವ ಮಹಿಳೆ ಮಾತಾಡಲು ಆರಂಭಿಸಿದರೆ ಯಾರ್ಯಾರ ಬಂಡವಾಳ ಹೊರಬೀಳುತ್ತದೋ ಹೇಳುವವರು ಯಾರು? ತನಗೆ ಸಂಬಂಧವೇ ಇಲ್ಲದೆ ಹೋದರೂ ನಿರ್ಮಾಪಕರ ಸಂಘ ಕಹಳೆ ಊದಿತು. ತನಗೆ ಸಂಬಂಧ ಇದ್ದರೂ ಕಲಾವಿದರ ಸಂಘ ಸುಮ್ಮನೆ ಕೂತುಬಿಟ್ಟಿತು. ವಾಣಿಜ್ಯ ಮಂಡಳಿಯೇ ದೇವಾಲಯ, ವಾಣಿಜ್ಯ ಮಂಡಳಿಯೇ ನ್ಯಾಯಾಲಯ ಅಂತ ಮತ್ತೊಬ್ಬರು ಇಡೀ ಪ್ರಸಂಗವನ್ನ ವಾಣಿಜ್ಯ ಮಂಡಳಿಯಲ್ಲೇ ತೀರ್ಮಾನಿಸಲು ಇಚ್ಛಿಸಿದರು. ಕೌರವರು ಮತ್ತು ಅವರಿಗೆ ತಮ್ಮನ್ನು ಮಾರಿಕೊಂಡ ಪಾಂಡವರ ನಡುವೆ ನ್ಯಾಯ ಕೇಳಲು ನಿಂತ ದ್ರೌಪದಿಯ ಕತೆಗೂ, ಇಲ್ಲಿ ನಡೆಯುತ್ತಿರುವುದಕ್ಕೂ ಯಾವುದೇ ವ್ಯತ್ಯಾಸವೇ ಇಲ್ಲವಲ್ಲ.

ಅರ್ಜುನ್ ಸರ್ಜಾ ಕ್ಷಮೆ ಕೇಳಬಹುದಾಗಿತ್ತು ಅಂತ ನಾನು ಹೇಳಿದಾಗ ಜಗತ್ತು ನನ್ನ ಮೇಲೆ ತಿರುಗಿಬಿದ್ದಿತು. ಅರ್ಜುನ್ ಸರ್ಜಾ ತಪ್ಪು ಮಾಡಿದ್ದಾರೆ ಅಂತ ನಾನೆಂದೂ ಹೇಳಿರಲಿಲ್ಲ. ನಾನು ತಪ್ಪಾಗಿ ನಡೆದುಕೊಂಡಿದ್ದೇನೆ ಎಂಬ ಭಾವವನ್ನು ನಿನ್ನಲ್ಲಿ ಹುಟ್ಟಿಸಿದ್ದರೆ ಕ್ಷಮಿಸಿ ಅಂತ ಒಂದು ಕ್ಷಮಾಪಣೆಯನ್ನು ಮುಂದಿಡುವುದು ಆರೋಗ್ಯವಂಥ ಜೀವದ ಮೊದಲ ಲಕ್ಷಣ. ಸಿನಿಮಾದಲ್ಲಿ ಯಾವ ಕಾರಣಕ್ಕೋ ಯಾವ ಹೊತ್ತಿನಲ್ಲೋ ಯಾವುದೋ ಒಂದು ಸ್ಪರ್ಶ ಕೆಟ್ಟದ್ದು ಅಂತ ನಾಯಕಿಗೂ ಅನಿಸಿರಬಹುದು. ನಾಯಕನಿಗೂ ಅನಿಸಿರಬಹುದು. ಅದನ್ನು ಒಬ್ಬಾಕೆ ಹೇಳಿದಾಗ, ಹೌದೇ, ಹಾಗೇನಾದರೂ ಆಗಿದ್ದರೆ ಅದು ಉದೇಶಪೂರ್ವಕ ಅಲ್ಲ, ನನಗದು ಗೊತ್ತೂ ಆಗಲಿಲ್ಲ ಎಂದುಬಿಡುವುದಕ್ಕೆ ಅಹಂಕಾರ ಯಾಕೆ ಅಡ್ಡಿಬರಬೇಕು?” ಎಂದು ಪ್ರಶ್ನಿಸಿದ್ದಾರೆ ಪ್ರಕಾಶ್ ರೈ.

ಆದರೆ ಇಂಥ ಸಂಗತಿಗಳನ್ನು ಬೇರೆ ಬೇರೆ ವಿಚಾರಗಳನ್ನು ಎಳೆದು ತಂದು ತೆಳುವಾಗಿಸುವುದರಲ್ಲೇ ನಮ್ಮ ಸೋಲು ಅಡಗಿದೆ. ಇವತ್ತು ಶ್ರುತಿಗೆ ಆದದ್ದು ನಾಳೆ ನಮಗೂ ಆಗಬಹುದು. ನಾವು ನ್ಯಾಯದ ಪರ ನಿಲ್ಲುತ್ತೇವೆ ಅನ್ನುವ ನಂಬಿಕೆ ನಮಗಾದರೂ ಇರಬೇಕು. ಧೈರ್ಯವಾಗಿ ಮಾತಾಡುವುದಕ್ಕೆ ಶಕ್ತಿಯಿಲ್ಲದೇ ಹೋದರೆ ಮೌನವಾಗಿದ್ದೇ ಪ್ರತಿಭಟಿಸಬೇಕು. ಅದುಬಿಟ್ಟು ಅನ್ಯಾಯದ ಪರವಾಗಿ ನಿಂತು ಆ ಕ್ಷಣದಲ್ಲಿ ಪಾರಾಗಲು ನೋಡುವುದು ಮಾತ್ರ ಅನೈತಿಕತೆ ಎಂದು ಹೇಳಬಲ್ಲೆ.

ತಾನೇ ಕೆತ್ತುತ್ತಿರುವ ಪುರುಷೋತ್ತಮನ ಮೂರ್ತಿಯಾದ ಶ್ರೀರಾಮನನ್ನೂ ಅಗ್ನಿದಿವ್ಯಕ್ಕೆ ಒಡ್ಡಿದವನು ವಾಲ್ಮೀಕಿ. ವಾಲಿಯನ್ನು ಕೊಲ್ಲುವ ವಿಚಾರದಲ್ಲಿ ರಾಮ ಮರೆಯಲ್ಲಿ ನಿಂತು ಬಾಣ ಬಿಟ್ಟ ಅನ್ನುವುದನ್ನು ವಾಲ್ಮೀಕಿ ಮುಚ್ಚಿಡುವುದಕ್ಕೆ ಹೋಗುವುದಿಲ್ಲ. ಅದನ್ನು ಹೇಳಿದ್ದರಿಂದ ರಾಮನ ಘನತೆ ಕುಗ್ಗಲೂ ಇಲ್ಲ. ಮನುಷ್ಯನಾದವನು ತನ್ನ ದೌರ್ಬಲ್ಯಗಳ ಜೊತೆಗೇ ದೊಡ್ಡವನಾಗುತ್ತಾನೆ ಅನ್ನುವುದು ಗೊತ್ತಿದ್ದರೆ, ಇವತ್ತು ಶ್ರುತಿಯ ಪ್ರಸಂಗ ಅಹಂಕಾರದ ಪ್ರಶ್ನೆಯಾಗಿ ನಿಂತು, ವಂಶ ಪ್ರತಿಷ್ಠೆಯಾಗುವ ಬದಲು, ಒಂದು ಮಾನವೀಯ ಪ್ರಶ್ನೆಯಾಗುತ್ತಿತ್ತು.

ಹಾಗಾಗಲಿಲ್ಲ ಅನ್ನುವುದೇ ನನ್ನನ್ನು ಮಾತಾಡುವಂತೆ ಪ್ರೇರೇಪಿಸಿದೆ. -ಪ್ರಕಾಶ್ ರೈ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top