fbpx
ಸಮಾಚಾರ

ಅನಿತಾ ಕುಮಾರಸ್ವಾಮಿ ಬೆನ್ನಿಗೆ ನಿಂತ ಡಿಕೆ ಸುರೇಶ್- ರಾಮನಗರದಲ್ಲಿ ಬಿರುಸಿನ ಪ್ರಚಾರ.

2019ರ ಲೋಕಸಭಾ ಚುನಾವಣೆಗೂ ಮುನ್ನವೇ ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದೆ.. ನವೆಂಬರ್ 3ರಂದು ನಡೆಯುವ ಉಪ ಚುನಾವಣೆಗೆ ಮುಖ್ಯಮಂತ್ರಿ HD ಕುಮಾರಸ್ವಾಮಿಯವರ ರಾಜೀನಾಮೆಯಿಂದಾಗಿ ತೆರವಾಗಿರುವ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರು ಸ್ಪರ್ಧಿಸಿದ್ದರೇ ಬಿಜೆಪಿಯಿಂದ ಎಲ್.ಚಂದ್ರಶೇಖರ್ ಅವರು ಕಣಕ್ಕಿಳಿದಿದ್ದಾರೆ.. ಇನ್ನು ರಾಮನಗರದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಇರುವುದರಿಂದ ಕಾಂಗ್ರೆಸ್ ಪಕ್ಷದಿಂದ ಯಾರೊಬ್ಬರೂ ಕಣಕ್ಕಿಳಿಯುತ್ತಿಲ್ಲ. ಹೀಗಾಗಿ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಮತ್ತು ಎಲ್.ಚಂದ್ರಶೇಖರ್ ನಡುವೆ ನೇರ ಹಣಾಹಣಿ ಏರ್ಪಡಲಿದೆ..

 

 

 

ಮತದಾನಕ್ಕೆ ಕೇವಲ 10 ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಕ್ಷೇತ್ರದಾದ್ಯಂತ ಭರ್ಜರಿ ಪ್ರಚಾರ ನಡೆಯುತ್ತಿದ್ದು ಅನಿತಾ ಕುಮಾರಸ್ವಾಮಿಯವರ ಜೊತೆ ಕಾಂಗ್ರೆಸ್ ಮುಖಂಡ ಸಂಸದ ಡಿಕೆ ಸುರೇಶ್ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.. ವಿವಿಧ ಗ್ರಾಮಗಳಲ್ಲಿ ಡಿಕೆ ಸುರೇಶ್ ರೋಡ್ ಷೋ ಮಾಡುವ ಮೂಲಕ ಮತದಾರರ ಮನವೊಲಿಸುವ ಕಸರತ್ತು ನಡೆಸುತ್ತಿದ್ದಾರೆ. ಪಾಲಬೋವಿದೊಡ್ಡಿ, ಸಣ್ಣಬಸವನದೊಡ್ಡಿ ಕಾಲೋನಿ, ಅಣ್ಣಹಳ್ಳಿ,ಕೇತೋಹಳ್ಳಿ, ಬೈಲು ಗ್ರಾಮ ಸೇರಿ ಇನ್ನೂ ಅನೇಕ ಗ್ರಾಮಗಳಲ್ಲಿ ಡಿಕೆ ಸುರೇಶ್ ರೋಡ್ ಷೋ ಮಾಡಿದರು.

“ನಾವು ರಾಮನಗರ ಜಿಲ್ಲೆಯ ಅಭಿವೃದ್ಧಿಗಾಗಿ ತತ್ವ, ಸಿದ್ಧಾಂತದೊಂದಿಗೆ ಹೋರಾಡಿದ್ದೇವೆ. ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳು, ರಸ್ತೆಗಳು ಸೇರಿದಂತೆ ವಿವಿಧ ಕಾಮಗಾರಿಗಳನ್ನು ಮಾಡಬೇಕಾಗಿದೆ. ಹಿಂದಿನ ಕಾಂಗ್ರೆಸ್ ಸರ್ಕಾರವು ರಾಮನಗರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಆದ್ದರಿಂದ ಇನ್ನು ಮುಂದೆಯೂ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು, ನಾವೆಲ್ಲರೂ ಒಗ್ಗಟ್ಟಾಗಿ ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರದ ಕೈ ಬಲಪಡಿಸುವುದು ಮುಖ್ಯ. ಈ ಹಿನ್ನೆಲೆಯಲ್ಲಿ ರಾಮನಗರ ಉಪಚುನಾವಣೆಯಲ್ಲಿ ಸ್ಪರ್ಧಿಸಲಿರುವ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿ ಶ್ರೀಮತಿ ಅನಿತಾ ಕುಮಾರಸ್ವಾಮಿಯವರನ್ನು ಗೆಲ್ಲಿಸಲು ನಾವೆಲ್ಲರೂ ಬೆಂಬಲ ನೀಡೋಣ.” ಎಂದು ಡಿಕೆ ಸುರೇಶ್ ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರದ ಅಭ್ಯರ್ಥಿ ಅನಿತಾ ಕುಮಾರಸ್ವಾಮಿಯೊಂದಿಗೆ ಜಂಟಿ ಪ್ರಚಾರದಲ್ಲಿ ಸಂಸದ ಡಿಕೆ ಸುರೇಶ್‌ ಮಾತ್ರವಲ್ಲದೇ ಮಾಗಡಿ ಶಾಸಕ ಎ.ಮಂಜುನಾಥ್‌, ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಸೇರಿ ಮುಂತಾದವರು ಸಾಥ್‌ ನೀಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top