ಮನೋರಂಜನೆ

ಮಾನನಷ್ಟ ಮೊಕದ್ದಮೆ- ಕೋರ್ಟ್‌ನಿಂದ ಶ್ರುತಿ ಹರಿಹರನ್‌ಗೆ ನೋಟೀಸ್ ಜಾರಿ.

ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪ ಸ್ಯಾಂಡಲ್‍ವುಡ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಶ್ರುತಿ ಪರ ಧ್ವನಿಯೆತ್ತಿದರೆ, ಕೆಲವರು ಅರ್ಜುನ್ ಬೆಂಬಲಕ್ಕೆ ನಿಂತಿದ್ದಾರೆ.. ಅರ್ಜುನ್ ಸರ್ಜಾ ಅವರನ್ನು ಸಮರ್ಥಿಸುವ ಭರದಲ್ಲಿ ಶೃತಿ ಹರಿಹರನ್ ನಡತೆ ಸರಿಯಿಲ್ಲ ಎನ್ನುವಷ್ಟರ ಮಟ್ಟಿಗೆ ಕೆಲವು ನಿರ್ಮಾಪಕರು, ನಟರು, ಜನಸಾಮಾನ್ಯರು ಮಿತಿಮೀರಿ ವರ್ತಿಸುತ್ತಿದ್ದಾರೆ. ಅಂತೆಯೇ ಶೃತಿಯನ್ನು ಸಮರ್ಥಿಸುವ ಭರದಲ್ಲಿ ಅರ್ಜುನ್ ಸರ್ಜಾ ಅವರಿಗೆ ಸ್ರೀಪೀಡಕನ ಪಟ್ಟ ಕಟ್ಟುವ ಕೆಲಸವೂ ಚಾಲ್ತಿಯಲ್ಲಿದೆ.

ಈ ಎಲ್ಲಾ ವಿಚಾರಗಳು ಚಾಲ್ತಿಯಲ್ಲಿರುವಾಗಲೇ ಮೀಟೂ ಅಭಿಯಾನದಲ್ಲಿ ನಟ ಅರ್ಜುನ್​ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಆರೋಪದ ಕುರಿತು ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆ ವಿಫಲವಾದ ಬೆನ್ನಲ್ಲೇ ಇಬ್ಬರೂ ಕಾನೂನಿನ ಮೊರೆ ಹೋಗಿದ್ದಾರೆ. ನಿನ್ನೆಯಷ್ಟೇ ಶ್ರುತಿ ಹರಿಹರನ್​ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಇದರ ಬೆನ್ನಲ್ಲೇ ಶ್ರುತಿ ಹರಿಹರನ್​ ಕೂಡ ಅರ್ಜುನ್ ಸರ್ಜಾ ಆಪ್ತ ಪ್ರಶಾಂತ್ ಸಂಬರ್ಗಿ ವಿರುದ್ಧ ದೂರು ನೀಡಿದ್ದರು.. ಇದೀಗ ಮಾನನಷ್ಟ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸದ್ಯ ಶ್ರುತಿ ಹರಿಹರನ್ ಗೆ ಕೋರ್ಟ್ ನೋಟೀಸ್ ಜಾರಿ ಮಾಡಿದೆ.

ಸಿವಿಲ್ ಕೋರ್ಟ್ ನಲ್ಲಿ ಅರ್ಜುನ್ ಸರ್ಜಾ ಪರ ವಕೀಲರು ಸಲ್ಲಿಸಿದ ಅರ್ಜಿ ವಿಚಾರಣೆ ಇಂದು ನಡೆಯಿತು. ಶ್ರುತಿ ಪರ ವಕೀಲರ ವಾದ ಆಲಿಸಿದ ಬಳಿಕ ಮಧ್ಯಂತರ ಆದೇಶ ನೀಡಲು ಕೋರ್ಟ್​ ತೀರ್ಮಾನಿಸಿದೆ. ಈ ಸಂಬಂಧ ಶ್ರುತಿ ಹರಿಹರನ್​ ಪರ ವಾದ ಮಂಡಿಸಲು ಅವಕಾಶ ಕೋರಿ ಮಧ್ಯಂತರ ಅರ್ಜಿಯ ಪ್ರತಿಯನ್ನ ಕೋರ್ಟ್​ಗೆ ನೀಡಲು ನ್ಯಾಯಾಧೀಶರು ಸೂಚಿಸಿದ್ದಾರೆ. ಪ್ರಕರಣ ಸಂಬಂಧ ಶ್ರುತಿ ಅವರ ಪ್ರತಿವಾದವನ್ನೂ ಆಲಿಸಬೇಕಿದೆ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್​, ವಿಚಾರಣೆಯನ್ನ ಅಕ್ಟೋಬರ್ 29ಕ್ಕೆ ಮುಂದೂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top