fbpx
ದೇವರು

ಆದಿಶಕ್ತಿ ಚಿಂಚಲಿ ಮಾಯಕ್ಕಾ ದೇವಿ ಮಹಿಮೆ.ಈ ತಾಯಿಯ ಶಾಪಕ್ಕೆ ಕುರಿಗಳೇ ಕಲ್ಲಾದವಂತೆ,ಹಳ್ಳದಲ್ಲಿ ಹರಿಯುತ್ತಿದ್ದ ನೀರೆ ಹಾಲಾಗಿ ಹರಿಯಿತ್ತಂತೆ.

ಈ ದೇವಿ ಆದಿಶಕ್ತಿಯ ಪ್ರತಿ ರೂಪ,ಈ ದೇವಿಯ ಮುಂದೆ ದೀಪ ಹಚ್ಚಿದರೆ ಪಾಪಗಳು ಪರಿಹಾರವಾಗುತ್ತವೆ. ಈ ದೇವಸ್ಥಾನದಲ್ಲಿ ಎಲ್ಲಿ ನೋಡಿದರೂ ಜನವೋ ಜನ, ದೀಪ ಹಚ್ಚುವ ಮೂಲಕ ಹರಕೆ ತೀರಿಸುತ್ತಿರುವ ಭಕ್ತರು, ಸರ್ವಾಲಂಕಾರ ಗೊಂಡಿರುವ ದೇವಿಯ ದರ್ಶನಕ್ಕಾಗಿ ಮುಗಿಬಿದ್ದಿರುವ ಜನ ಸಾಗರ. ಇದು ಚಿಂಚಲಿ ಮಾಯಕ್ಕ ದೇವಿಯ ಪೂಜಾ ವೈಭವ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿಯಲ್ಲಿದೆ ಶಕ್ತಿದೇವತೆಯ ದೇಗುಲ. ಇದನ್ನು ಮಹಾಕಾಳಿ ಮಾಯಕ್ಕ ದೇವಿ ದೇವಸ್ಥಾನ ಎನ್ನಲಾಗುತ್ತದೆ. ಇವಳ ಭಕ್ತರು ಇವಳನ್ನು ಚಿಂಚಲಿ ಮಾಯಕ್ಕ ಮಾಯವ್ವ ,ಮಾಯಮ್ಮ, ಮಾಯಗಾರತಿ, ಮಹಾಮಾಯಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಶಕ್ತಿ ದೇವತೆ ನೆಲೆಸಿರುವ ಈ ದೇವಾಲಯದಲ್ಲಿ ನವರಾತ್ರಿ ಬಂತು ಎಂದರೆ ಎಲ್ಲಿಲ್ಲದ ಸಡಗರ ಮನೆ ಮಾಡುತ್ತದೆ.

ಮಾಯಕ್ಕ ದೇವಿಯ ಸನ್ನಿಧಾನದಲ್ಲಿ ನವರಾತ್ರಿಯಲ್ಲಿ ಅತ್ಯಂತ ಜೋರಾಗಿ ಪೂಜೆ ನಡೆಯುತ್ತದೆ. ದಸರಾದ ಮೊದಲ ದಿನ ಇಲ್ಲಿ ಘಟಸ್ಥಾಪನೆ ಮಾಡಲಾಗುತ್ತದೆ. ಇದಾದ ನಂತರ ನವರಾತ್ರಿಯ ಒಂಬತ್ತು ದಿನಗಳು ದೇವಿಗೆ ಬೆಳಗ್ಗೆ ಹಾಗೂ ಸಂಜೆ ಅಭಿಷೇಕ, ಅಲಂಕಾರ ಪೂಜೆ ಪುನಸ್ಕಾರಗಳು ನೆರವೇರುತ್ತವೆ. ಮಾಯಕ್ಕದೇವಿ ಕುದುರೆ, ನವಿಲು, ಸಿಂಹ, ಆನೆ ಹೀಗೆ ನವರಾತ್ರಿಯ ಒಂಬತ್ತು ದಿನಗಳಂದು ಒಂಬತ್ತು ವಾಹನಗಳನ್ನು ರಾಕ್ಷಸರನ್ನು ಸಂಹರಿಸುವ ಆಕಾರದಲ್ಲಿ ಕಂಗೊಳಿಸುತ್ತಾಳೆ. 9 ಅಲಂಕಾರಗಳಲ್ಲಿ ದೇವಿಯ ರೂಪ ವರ್ಣಿಸಲು ಅಸಾಧ್ಯ. ಚಿಂಚಲಿ ಮಾಯಕ್ಕಾ ದೇವಿ ಭಕ್ತರ ಪಾಲಿನ ಕಾಮಧೇನು. ಇವಳ ಬಳಿ ಭಕ್ತಿಯಿಂದ ಏನೇ ಬೇಡಿದರು ಈಡೇರುತ್ತದೆ. ಹೀಗಾಗಿ ಹರಕೆ ಈಡೇರಿದ ಭಕ್ತರು ನವರಾತ್ರಿಯ ವೇಳೆ ಇಲ್ಲಿ ಬಂದು ದೀಪ ಹಚ್ಚುವ ಮೂಲಕ ತಮ್ಮ ಹರಕೆಯನ್ನು ತೀರಿಸುತ್ತಾರೆ. ನವರಾತ್ರಿಯಲ್ಲಿ ಸಾಕ್ಷಾತ್ ಮಹಾಕಾಳಿ ಸ್ವರೂಪಿಣಿಯಾದ ಮಾಯಕ್ಕ ದೇವಿಯ ದರ್ಶನ ಮಾಡುವುದು ಅತ್ಯಂತ ಪುಣ್ಯಪ್ರದ. ಹೀಗಾಗಿ ಈ ದೇವಿಯ ದರ್ಶನಕ್ಕಾಗಿ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಸೇರಿದಂತೆ ಹಲವು ಭಾಗಗಳಿಂದ ಜನಸಾಗರವೇ ಹರಿದು ಬರುತ್ತದೆ.

 

 

 

ಮಾಯಕ್ಕ ದೇವಿ ಚಿಂಚಲಿಯಲ್ಲಿ ನೆಲೆಗೊಂಡಿದ್ದು ಹೇಗೆ ?ಮಾಯಕ್ಕಳಿಗೆ ಪೂಜೆ ಸಲ್ಲುವ ಮೊದಲು ಹಿರಿ ದೇವಿಗೆ ಪೂಜೆ ಮಾಡುವುದೇಕೆ ?
ಈಕೆ ಶಕ್ತಿ ದೇವತೆಯ ಸಾಕ್ಷಾತ್ ಆದಿಶಕ್ತಿಯ ಸ್ವರೂಪ, ಪರಮೇಶ್ವರನ ಪ್ರಿಯ ಪತ್ನಿ, ಉತ್ತರ ಕರ್ನಾಟಕದ ಜನರ ಆರಾಧ್ಯ ದೇವಿ, ಬೇಡಿದ ವರಗಳನ್ನು ಕರುಣಿಸುವ ಕರುಣಾಮಯಿ, ಇವಳೇ ಚಿಂಚಲಿ ಮಾಯಕ್ಕ ದೇವಿ.ಮಾಯಕ್ಕ ದೇವಿಯ ಮೂರ್ತಿ ಅತ್ಯಾಕರ್ಷಕವಾಗಿದೆ. ಐದು ಹೆಡೆಗಳ ಸರ್ಪದ ಆಶ್ರಯದಲ್ಲಿರುವ ,ದೇವಿಯ ತಲೆಯ ಮೇಲೆ ಕಿರೀಟವಿದೆ. ಚತುರ್ಬುಜ ದಾರಿಯಾಗಿರುವ ದೇವಿ ಮುಂಗೈಯಲ್ಲಿ ಸದಾ ಬಳೆಗಳನ್ನು ತೊಟ್ಟಿರುತ್ತಾಳೆ, ಕೈಯಲ್ಲಿ ಖಡ್ಗ, ಒಂದು ಕೈಯಲ್ಲಿ ತ್ರಿಶೂಲ, ಎಡಗೈಯಲ್ಲಿ ಹಾವಿದೆ, ಮೈತುಂಬಾ ಬಂಗಾರದ ಒಡವೆಗಳನ್ನು ಧರಿಸಿ ಸರ್ವಾಲಂಕಾರ ಭೂಷಿತಳಾಗಿ ಭಕ್ತರಿಗೆ ವಿಶೇಷವಾಗಿ ದರ್ಶನ ನೀಡುತ್ತಾಳೆ.

ಚಿಂಚಲಿ ಮಾಯಕ್ಕ ದೇವಿಯ ಸುತ್ತ ಹತ್ತು ಹಲವು ಪೌರಾಣಿಕ ಕಥೆಗಳು ಸುತ್ತಿಕೊಂಡಿವೆ. ರಾಕ್ಷಸರ ವಂಶವನ್ನು ಸಂಹರಿಸಲು ಬ್ರಹ್ಮ, ವಿಷ್ಣು, ಮಹೇಶ್ವರರು ಸೇರಿದಂತೆ ದೇವಾನುದೇವತೆಗಳು ಮಾಯಕ್ಕ ದೇವಿಯನ್ನು ಸೃಷ್ಟಿಸಿದರಂತೆ. ಮಾಯಕ್ಕ ದೇವಿಯದ್ದು ಸಾಕ್ಷಾತ್ ಪಾರ್ವತಿ ದೇವಿಯ ಅವತಾರ ಎಂದೇ ಇಲ್ಲಿನ ಜನ ನಂಬಿದ್ದಾರೆ. ಯಾಕೆಂದರೆ ಸಾವಿರಾರು ವರ್ಷಗಳ ಹಿಂದೆ ಇಲ್ಲಿ ಕೀಲ ಹಾಗೂ ಕೀಟ ಎಂಬ ರಾಕ್ಷಸರಿದ್ದರು. ಇಬ್ಬರು ರಾಕ್ಷಸರು ತಮಗೆ ಗಂಡು, ಹೆಣ್ಣು ಯಾವ ಪ್ರಾಣಿ, ಪಕ್ಷಿಗಳಿಂದ ಮರಣ ಬಾರದಂತೆ ಬ್ರಹ್ಮನಿಂದ ವರ ಪಡೆದಿದ್ದರಂತೆ. ಆ ವಿಶೇಷ ವರವನ್ನು ಪಡೆದ ಅಸುರರು ಜನರನ್ನು ಬಹಳವಾಗಿ ಹಿಂಸಿಸುತ್ತಾ ಇದ್ದರಂತೆ. ಈ ಸಂದರ್ಭದಲ್ಲಿ ಆದಿಶಕ್ತಿ ರಾಕ್ಷಸರ ಅಟ್ಟಹಾಸವನ್ನು ಕಡಿಮೆಗೊಳಿಸಲು ಅರ್ಧನಾರೀಶ್ವರ ರೂಪದಲ್ಲಿ ಪ್ರತ್ಯಕ್ಷಳಾಗುತ್ತಾಳೆ. ದೇವಿಯ ರೂಪವನ್ನು ಕಂಡ ರಾಕ್ಷಸರು ಅವಳ ರೂಪವನ್ನು ಕಂಡು ಹೆದರಿ ಅವಳಿಗೆ ಶರಣಾಗುತ್ತಾರೆ. ಜೀವ ಬಿಡುವುದಾಗಿ ಹೇಳುತ್ತಾರೆ. ದೇವಿ ಏನು ಬೇಕೆಂದು ಕೇಳುತ್ತಾಳೆ. ಆಗ ರಾಕ್ಷಸರು ಪ್ರತಿ ಮೂರು ವರ್ಷಕ್ಕೊಮ್ಮೆ ಇಲ್ಲಿ ಅಡುಗೆ ಮಾಡಿ ನಮ್ಮ ಹೆಸರಿನಲ್ಲಿ ಜನರಿಗೆ ಊಟ ಹಾಕಬೇಕು ಎಂದು ಹೇಳುತ್ತಾರೆ. ರಾಕ್ಷಸರಿಗೆ ಅವರ ವಚನ ಈಡೇರುವಂತೆ ಹೇಳಿ ಆ ರಾಕ್ಷಸರನ್ನು ಸಂಹರಿಸಿತ್ತಾಳೆ. ನಂತರ ದೇವಿ ಇಲ್ಲಿ ನೆಲೆಸಿದ್ದಳು ಎನ್ನಲಾಗುತ್ತದೆ.

ಚಿಂಚಲಿಯ ಮೂಲ ಗ್ರಾಮದೇವತೆ ಹಿರಿದೇವಿ. ಮಾಯಕ್ಕ ಹಿರಿದೇವಿಯ ಆಶ್ರಯ ಪಡೆದು ಇಲ್ಲಿ ನೆಲೆಸಿದ್ದಳು ಎನ್ನಲಾಗುತ್ತದೆ. ಹೀಗಾಗಿಯೇ ಇಲ್ಲಿ ಮೊದಲ ಪ್ರಾಶಸ್ತ್ಯ ಹಿರಿದೇವಿಗೆ ನೀಡಲಾಗುತ್ತದೆ. ಮೊದಲು ಹಿರಿ ದೇವಿಗೆ ಪೂಜೆ ಸಲ್ಲಿಸಿದ ನಂತರ, ಮಾಯಕ್ಕ ದೇವಿಗೆ ಪೂಜೆ ಸಲ್ಲಿಸುವುದು ಸಂಪ್ರದಾಯ. ಚಿಂಚಲಿ ಮಾಯಕ್ಕಾ ದೇವಿಯ ಮಹಿಮೆ ಅಪಾರ. ಹಳ್ಳದಲ್ಲಿ ಹಾಲು ಹರಿಸಿದ ಶಕ್ತಿದೇವತೆ ಇವಳು. ಕುರುಬರಿಗೂ ಮಾಯಕ್ಕಳಿಗೂ ಇದೇ ಅವಿನಾಭಾವ ನಂಟು.ಚಿಂಚಲಿ ಮಾಯಕ್ಕಳ ದೇಗುಲ ಹಲವು ವಿಶೇಷತೆಗಳ ದಿವ್ಯ ತಾಣ .ಇಲ್ಲಿನ ಕೆಲವು ವಿಶೇಷತೆಗಳ ಬಗ್ಗೆ ಗೊತ್ತಾದರೆ ನೀವು ನಿಜಕ್ಕೂ ಒಂದು ಕ್ಷಣ ಆಶ್ಚರ್ಯ ಚಕಿತರಾಗುತ್ತೀರ, ಚಿಂಚಲಿ ಮಾಯಕ್ಕ ನೆಲೆಸಿರುವ ಈ ದೇವಾಲಯದ ಮಹಾದ್ವಾರ ಪೂರ್ವಾಭಿಮುಖವಾಗಿದೆ, ಆದರೆ ಇಲ್ಲಿ ಪಶ್ಚಿಮ ದಿಕ್ಕಿಗೆ ಮಾಯಕ್ಕ ದೇವಿ ನೆಲೆಸಿದ್ದಾಳೆ, ಇಲ್ಲಿ ಪೂರ್ವಾಭಿಮುಖವಾಗಿ ಹಿರಿದೇವಿ ಇದ್ದಾಳೆ. ಈ ದೇವಾಲಯದಲ್ಲಿ ಮೊದಲು ನೆಲೆಗೊಂಡಿದ್ದು ಗ್ರಾಮದೇವತೆ ಹಿರಿದೇವಿ, ನಂತರ ರಾಕ್ಷಸರನ್ನು ಸಂಹರಿಸಿ ನೆಲೆ ನಿಂತವಳು ಹಿರಿದೇವಿ. ಹೀಗಾಗಿಯೇ ಇಲ್ಲಿ ಮೊದಲ ಪೂಜೆ ಪ್ರಾಶಸ್ತ್ಯ ಎಲ್ಲವೂ ಹಿರಿದೇವಿಗೆ ಸಲ್ಲುತ್ತದೆ.

 

 

 

ಶಕ್ತಿ ದೇವತೆ ಮಕ್ಕಳ ಸನ್ನಿಧಿಯಲ್ಲಿ ಅಮಾವಾಸ್ಯೆ ಹುಣ್ಣಿಮೆಗಳು ಅತ್ಯಂತ ವಿಶೇಷ. ಈ ತಾಯಿಗೆ ಪ್ರತಿವರ್ಷ ಬನದ ಹುಣ್ಣಿಮೆ ನಂತರ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆ ಸರಿ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ಆಗಮಿಸುತ್ತಾರೆ. ಜಾತ್ರೆಯ ವೇಳೆ ಇಲ್ಲಿ ಭಕ್ತರ ಮೈಮೇಲೆ ದೇವಿ ಬರುತ್ತಾಳೆ. ಈ ಸಂದರ್ಭದಲ್ಲಿ ಭಕ್ತರು ವೀರಾವೇಶದಿಂದ ಕುಣಿಯುತ್ತಾರೆ. ಇದೇ ವೇಳೆ ಭಕ್ತರ ಜಾತಿ ಭೇದವಿಲ್ಲದೆ ಡೊಳ್ಳಿನ ನಾದಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸುತ್ತಾರೆ. ಚಿಂಚಲಿ ಮಾಯಕ್ಕ ದೇವಿಯ ಮಹಿಮೆ ಅಪಾರ. ಅದಕ್ಕೆ ಇಲ್ಲಿ ನಿದರ್ಶನಗಳು ಸಹ ಇವೆ.

ಹಾಲಹಳ್ಳಿ ಚಿಂಚಲಿ ಗ್ರಾಮದಿಂದ ಅರ್ಧ ಕಿಲೋಮೀಟರ್ ದೂರದಲ್ಲಿದೆ. ಈ ಹಳ್ಳ ಪಶ್ಚಿಮಕ್ಕೆ ಹರಿದು ಕೃಷ್ಣ ನದಿ ಸೇರಿಕೊಳ್ಳುತ್ತದೆ .ಈ ಹಳ್ಳಕ್ಕೆ ಹಾಲಹಳ್ಳ ಎಂಬ ಹೆಸರು ಬರಲು ಒಂದು ಕಾರಣವಿದೆ. ಒಮ್ಮೆ ಮಾಯಕ್ಕ ಊರ ಹೊರಭಾಗದ ಪಕ್ಕದ ಹಳ್ಳದ ಬಳಿ ಹೋದಳಂತೆ. ಅಲ್ಲಿ ಊರ ಕುರುಬರು ಕುರಿ ಕಾಯುತ್ತಿದ್ದರಂತೆ. ತನಗೆ ಹಾಲು ಬೇಕು ಎಂದು ಕೇಳಿದಾಗ ಅವರು ಕೊಡಲಿಲ್ಲವಂತೆ. ಆಗ ಈ ತಾಯಿ ತನ್ನ ಶಕ್ತಿಯಿಂದ ಹಳ್ಳವೆಲ್ಲವೂ ಹಾಲಾಗಿ ಹರಿಯಲಿ ಎಂದಳಂತೆ. ಆಗ ಹಳ್ಳವೆಲ್ಲಾ ಹಾಲಾಗಿ ಹರಿದಿತ್ತಂತೆ. ಹಾಗಾಗಿ ಈ ಹಳ್ಳಕ್ಕೆ ಹಾಲ ಹಳ್ಳ ಎಂಬ ಹೆಸರು ಬಂದಿದೆ. ಪ್ರತಿದಿನ ಮಾಯಕ್ಕನ ಅಭಿಷೇಕಕ್ಕೆ ಹಾಲ ಹಳ್ಳದಿಂದಲೇ ನೀರನ್ನು ತರಲಾಗುತ್ತದೆ. ಇದಿಷ್ಟೇ ಅಲ್ಲದೆ ಇಂದಿಗೂ ಕಾರ ಹುಣ್ಣಿಮೆ, ನೂಲು ಹುಣ್ಣಿಮೆಗಳಲ್ಲಿ ಮಾಯಕ್ಕ ದೇವಿ ಹಾಲ ಹಳ್ಳದಲ್ಲಿ ಸ್ನಾನ ಮಾಡುತ್ತಾಳೆ ಎನ್ನುವ ನಂಬಿಕೆ ಇದೆ.ಹಾಲ ಹಳ್ಳದ ದಂಡೆಯ ಮೇಲೆ ಉಣ್ಣೆಯ ಕಲ್ಲುಗಳಿವೆ. ಈ ಕಲ್ಲುಗಳ ಹಿಂದೆಯೂ ಒಂದು ಕಥೆಯಿದೆ. ಒಮ್ಮೆ ಈ ಹಳ್ಳದ ದಡದಲ್ಲಿ ಕುರಿ ಕಾಯುತ್ತಿದ್ದ ಕುರುಬರ ಬಳಿ ಬಂದ ಮಾಯಕ್ಕ, ಆದರೆ ಕುರುಬರು ಉಣ್ಣೆ ನೀಡಲು ನಿರಾಕರಿಸಿದ್ದ ರಂತೆ. ಆಗ ಸಿಟ್ಟಿನಿಂದ ಮಾಯಕ್ಕ ಕುರಿಗಳೆಲ್ಲಾ ಕಲ್ಲಾಗಲಿ ಎಂದು ಶಾಪ ನೀಡಿದ ತಕ್ಷಣ ಆ ಕುರಿಗಳೆಲ್ಲಾ ಕಲ್ಲಾದವಂತೆ. ಆಗ ಕುರುಬರು ಮಾಡಿದ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿ ಕುರುಬರು ದೇವಿಗೆ ಉಣ್ಣೆಯನ್ನು ಒಪ್ಪಿಸುವ ಸಂಪ್ರದಾಯ ಈಗಲೂ ಬೆಳೆದುಕೊಂಡು ಬಂದಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top