ದೇವರು

ವರ್ಷಕ್ಕೆ ಒಮ್ಮೆ ಅಷ್ಟೇ ದರ್ಶನ ನೀಡಿ ಪವಾಡಗಳನ್ನೂ ಮಾಡುವ ದೇವಿ,ಈ ದೇವಿಗೆ ವರ್ಷದ ಹಿಂದೆ ಹಚ್ಚಿದ ದೀಪ ಅರುವುದಿಲ್ಲ,ಹೂವು ಬಾಡುವುದಿಲ್ಲ ಹಾಗೂ ನೈವೇದ್ಯ ಹಾಳಾಗುವುದಿಲ್ಲವಂತೆ

ನವೆಂಬರ್ 1 ನೇ ತಾರೀಖಿನಿಂದ ಹಾಸನದ ಹಾಸನಾನೆಂಬೆಯ ಬಾಗಿಲು ತೆರೆಯುತ್ತದೆ.ಈ ವರ್ಷ 7 ದಿನ ದೇವಿ ಭಕ್ತರಿಗೆ ದರ್ಶನ ನೀಡುತ್ತಾಳೆ.
ಹಾಸನದ ಶಕ್ತಿ ದೇವತೆಯ ದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ. ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬೆಯ ದರ್ಶನ ಭಾಗ್ಯ. ಈ ಬಾರಿ ಆರು ದಿನಗಳು ಮಾತ್ರ ಹಾಸನಾಂಬೆಯ ದರ್ಶನ.ಬಣ್ಣ ಬಣ್ಣದ ಹೂವು, ತಳಿರು ತೋರಣಗಳಿಂದ ಮದುವಣಗಿತ್ತಿಯಂತೆ ಅಲಂಕೃತವಾಗಿರುವ ದೇಗುಲ, ಎಲ್ಲಿ ನೋಡಿದರೂ ಜನವೋ ಜನ, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಾರೆ, ಈ ದೃಶ್ಯ ಕಂಡು ಬರುವುದು ಹಾಸನಾಂಬೆ ದೇಗುಲದಲ್ಲಿ. ಇದು ಶಕ್ತಿದೇವತೆ ಹಾಸನದ ಅಧಿ ದೇವತೆ ಹಾಸನಾಂಬೆ ನೆಲೆಸಿರುವ ಶಕ್ತಿಯುತ ಕ್ಷೇತ್ರ. ವಿಶೇಷ ಎಂದರೆ ಈ ಹಾಸನಾಂಬೆ ದರ್ಶನ ವರ್ಷದಲ್ಲಿ ಕೆಲವೇ ದಿನಗಳು ಮಾತ್ರ. ಹೀಗಾಗಿಯೇ ಹಾಸನಾಂಬೆ ದರ್ಶನಕ್ಕೆ ಭಕ್ತರು ಮುಗಿಬೀಳುತ್ತಾರೆ.ಇವಳೇ ಹಾಸನದ ಹಾಸನಾಂಬೆ. ಹಾಸನದ ಶಕ್ತಿ ದೇವತೆ ಕಲ್ಲಿನ ರೂಪದಲ್ಲಿ ಇರುವ ಈ ದೇವಿ ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾ ಸರಸ್ವತಿಯ ಪ್ರತಿರೂಪ.ಸಾಮಾನ್ಯವಾಗಿ ವಿಜಯದಶಮಿ ಕಳೆದ ಹನ್ನೊಂದು ದಿನಗಳ ನಂತರ ಹಾಸನಾಂಬೆಯ ದರ್ಶನ ಶುರುವಾಗುತ್ತದೆ.

ಹಾಸನಾಂಬೆಯ ದರ್ಶನ ಆರಂಭ ಮತ್ತು ಮುಕ್ತಾಯ ಯಾವಾಗ ?
ಮುಹೂರ್ತವನ್ನು ಆಧರಿಸಿ ಹಾಸನಾಂಬೆಯ ದರ್ಶನಕ್ಕೆ ಇಂತಿಷ್ಟು ದಿನಗಳು ಎಂದು ನಿಗದಿಯಾಗುತ್ತವೆ. ಈ ಬಾರಿ ನವೆಂಬರ್ ಒಂದನೇ ತಾರೀಖಿನಂದು ಹಾಸನಾಂಬೆಯ ದೇಗುಲದ ಬಾಗಿಲು ತೆರೆಯುತ್ತದೆ. ಮೊದಲ ದಿನ ಹಲವು ರೀತಿಯ ಪೂಜೆಗಳು, ಧಾರ್ಮಿಕ ಆಚರಣೆಗಳು ಜರುಗುತ್ತವೆ. ಹೀಗಾಗಿ ಮೊದಲ ದಿನ ತಾಯಿಯ ದರ್ಶನ ಭಾಗ್ಯ ಭಕ್ತರಿಗೆ ಇರುವುದಿಲ್ಲ. ನವೆಂಬರ್ ಎರಡನೇ ತಾರೀಖಿನಂದು ಭಕ್ತರಿಗೆ ಹಾಸನಾಂಬೆಯ ದರ್ಶನ ಆರಂಭ ವಾಗುತ್ತದೆ. ನವೆಂಬರ್ 8 ನೇ ತಾರೀಖಿನಂದು ಸಾರ್ವಜನಿಕರಿಗೆ ಹಾಸನಾಂಬೆ ದರ್ಶನ ಮುಕ್ತಾಯವಾಗುತ್ತದೆ.ನವೆಂಬರ್ 9ನೇ ತಾರೀಖಿನಂದು ಹಲವು ಧಾರ್ಮಿಕ ಆಚರಣೆಗಳನ್ನು ಅನುಸರಿಸಿ ದೇಗುಲದ ಬಾಗಿಲು ಮುಚ್ಚಲಾಗುತ್ತದೆ.ಈ ವರ್ಷ 7 ದಿನಗಳ ಕಾಲ ಮಾತ್ರ ಹಾಸನಾಂಬೆಯ ದರ್ಶನ ಭಾಗ್ಯ ಸಾಧ್ಯವಿದೆ .

 

 

 

ಈ ಹಾಸನಾಂಬೆಯ ದೇವಿಯ ದೇವಸ್ಥಾನದ ಹಿಂದೆ ಹಲವು ಪೌರಾಣಿಕ ಮತ್ತು ಧಾರ್ಮಿಕ ಕಥೆಗಳಿವೆ.
ಪಾಳೇಗಾರ ಕೃಷ್ಣಪ್ಪ ನಾಯಕನ ನಂತರ ಬಂದ ಸಂಜೀವ ನಾಯಕ ಯುದ್ಧಕ್ಕೆಂದು ಹೊರಟಿದ್ದ ವೇಳೆ ಒಂದು ಮೊಲ ದಾರಿಗೆ ಅಡ್ಡ ಬರುತ್ತದೆ. ಅದು ಅಪಶಕುನವೆಂದು ಭಾವಿಸುವ ಸಂಜೀವ ನಾಯಕ ನಿರಾಶರಾಗಿ ಕುಳಿತು ಬಿಡುತ್ತಾರೆ. ಆಗ ಆತನ ಮುಂದೆ ಆದಿಶಕ್ತಿ ಸ್ವರೂಪಿಣಿ ಹಾಸನಾಂಬೆ ಪ್ರತ್ಯಕ್ಷಳಾಗಿ, ಈ ಸ್ಥಳದಲ್ಲಿ ನನಗೆ ಒಂದು ದೇವಾಲಯವನ್ನು ನಿರ್ಮಿಸು,ನಾನು ಇಲ್ಲಿ ಹಾಸನಾಂಬೆ ಎಂದೆ ಹೆಸರಾಗಿರುವೆ ಎಂದು ಹೇಳುತ್ತಾಳೆ. ದೇವಿಯ ಇಚ್ಛೆಯಂತೆ ಈ ದೇಗುಲ ನಿರ್ಮಾಣವಾಗುತ್ತದೆ. ಈ ಬಾರಿ ಏಳು ದಿನಗಳ ಕಾಲ ಹಾಸನಾಂಬೆಗೆ ಭರ್ಜರಿ ಪೂಜೆ ನಡೆಯುತ್ತದೆ.ಪೌರಾಣಿಕ ಹಿನ್ನೆಲೆಯ ಪ್ರಕಾರ ವಾರಣಾಸಿಯಿಂದ ವಾಯುವಿಹಾರಕ್ಕೆ ಬಂದ ಸಪ್ತ ಮಾತೃಕೆಯರಾದ ಬ್ರಾಹ್ಮಿ ದೇವಿ, ಮಹೇಶ್ವರಿ, ಕೌಮಾರಿ ,ವೈಷ್ಣವಿ, ವಾರಾಹಿ, ಇಂದ್ರಾಣಿ, ಚಾಮುಂಡಿ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಇಲ್ಲೇ ನೆಲೆಸಿದ್ದರು ಎನ್ನಲಾಗುತ್ತದೆ. ಹಾಸನಕ್ಕೆ ಹಿಂದೆ ಸಿಂಹಾಸನಪುರಿ ಎಂಬ ಹೆಸರಿತ್ತು. ನಗುಮೊಗದ ತಾಯಿ ಇಲ್ಲಿ ನೆಲೆಸಿದ ನಂತರ ಸಿಂಹಾಸನಪುರಿ ಹಾಸನವಾಯಿತು ಎನ್ನಲಾಗುತ್ತದೆ.
ಸಪ್ತ ಮಾತೃಕೆಯರು ಹಾಸನದಲ್ಲಿ ಮೂರು ಕಡೆ ನೆಲೆಗೊಂಡರಂತೆ. ಬ್ರಾಹ್ಮಿ ದೇವಿ, ಮಹೇಶ್ವರಿ ಕೌಮಾರಿಯರು ಹಾಸನಾಂಬ ದೇಗುಲದಲ್ಲಿ ಮತ್ತು ಮಹಾಕಾಳಿ, ಮಹಾಲಕ್ಷ್ಮಿ, ಮಹಾ ಸರಸ್ವತಿ ಹುತ್ತದಲ್ಲಿ ನೆಲೆಗೊಂಡರಂತೆ. ವೈಷ್ಣವಿ, ವಾರಾಹಿ ,ಇಂದ್ರಾಣಿ ದೇವಗಿರಿಯಲ್ಲಿ ನೆಲೆಸಿದ್ದರಂತೆ. ಆನಂತರ ಚಾಮುಂಡಿ ಕೆಂಚಮ್ಮನ ಹೊಸಕೋಟೆಯಲ್ಲಿ ನೆಲೆಸಿದಳು ಎನ್ನಲಾಗುತ್ತದೆ.

ಈ ಹಾಸನಾಂಬೆ ತಾಯಿಯ ದರ್ಶನ ವರ್ಷಕ್ಕೆ ಒಮ್ಮೆ ಮಾತ್ರ ಯಾಕೆ ?ಎನ್ನುವ ಪ್ರಶ್ನೆಗೆ ಪೌರಾಣಿಕ ಹಿನ್ನೆಲೆಯು ಒಂದು ಉತ್ತರ ನೀಡುತ್ತದೆ.
ಹಾಸನಾಂಬ ದೇಗುಲದಲ್ಲಿ ಸಿದ್ದೇಶ್ವರ ದೇಗುಲವಿದೆ. ಸಿದ್ದೇಶ್ವರ ಸಪ್ತ ಮಾತೃಕೆಯರ ಹಿರಿಯ ಸಹೋದರ.ಹಿರಿಯ ಸಹೋದರನ ಜೊತೆಗೆ ಒಂದು ಬಾರಿ ಸಪ್ತ ಮಾತೃಕೆಯರು ವಾಯು ವಿಹಾರಕ್ಕೆ ತೆರಳಿದ್ದರಂತೆ. ಹೀಗೆ ಸುತ್ತಾಟದ ಸಮಯದಲ್ಲಿ ಸಿದ್ದೇಶ್ವರನಿಗೆ ಬಾಯಾರಿಕೆಯಾಗಿ ಸಮೀಪದಲ್ಲಿದ್ದ ಯಾರದೋ ಮನೆಯಲ್ಲಿ ನೀರು ಕುಡಿದನಂತೆ.ಇದು ಸಪ್ತ ಮಾತೃಕೆಯರು ಕೋಪಕ್ಕೆ ಕಾರಣವಾಯಿತು. ಇದೇ ಕೋಪದಲ್ಲಿ ನೀನು ಯಾರದೋ ಮನೆಯಲ್ಲಿ ನೀರು ಕುಡಿದು ಪ್ರಮಾದ ಮಾಡಿದ್ದೀಯ, ಹೀಗಾಗಿ ನೀನು ನಮ್ಮ ಮುಂದೆಯೇ ನೆಲೆಗೊಂಡರು ವರ್ಷಕ್ಕೆ ಒಮ್ಮೆ ಮಾತ್ರ ನಮ್ಮ ದರ್ಶನ ಮಾಡಬೇಕು ಎಂದು ಕಟ್ಟಪ್ಪಣೆ ಮಾಡಿದ್ದರಂತೆ. ದೇವಿಯರು ಅಂದು ಹೇಳಿದ ಮಾತು ಇಂದಿಗೂ ನಡೆಯುತ್ತಾ ಬಂದಿದೆ.

 

 

 

ಹಲವು ಕೌತುಕಗಳನ್ನು ಹೊಂದಿರುವ ಹಾಸನಾಂಬೆಯ ಮಹಿಮೆ ಅಪಾರ.
ಹಿಂದೆ ಇದೇ ಊರಿನಲ್ಲಿ ದೇವಿಯ ಭಕ್ತೆಯೂಬ್ಬಳು ಇದ್ದಳಂತೆ. ಹಿಂದೆ ಮನೆ ಕೆಲಸಕ್ಕಿಂತ ದೇವಿಯ ದರ್ಶನ ಮತ್ತು ದೇವಿಯ ಜಪವೇ ಹೆಚ್ಚಾಯಿತು ಎಂದು ಒಂದು ಬಟ್ಟಲಿನಿಂದ ಸೊಸೆಯನ್ನು ತಲೆ ಕುಕ್ಕಿದಳಂತೆ ಅತ್ತೆ. ಅಗ ಹಾಸನಾಂಬೆ ಪ್ರತ್ಯಕ್ಷವಾಗಿ ಅವಳ ಭಕ್ತಿಗೆ ಮೆಚ್ಚಿದ ದೇವಿ ನೀನು ಇಲ್ಲಿ ಕಷ್ಟ ಪಡುವುದು ಬೇಡ ನನ್ನ ಸನ್ನಿಧಿಯಲ್ಲಿ ಶಾಶ್ವತವಾಗಿರು ಎಂದು ಹರಸಿದ್ದಳಂತೆ.ದೇವಿಯ ಎದುರು ಕಲ್ಲಾಗಿ ನೆಲೆಸಿದ್ದಾಳೆ ಎನ್ನಲಾಗುತ್ತದೆ. ಗರ್ಭ ಗುಡಿಯ ಎದುರಿಗೆ ಇರುವ ಈ ಕಲ್ಲಿಗೆ ಶಾಸ್ತ್ರೋಕ್ತವಾಗಿ ಪೂಜೆ ನಡೆಯುತ್ತದೆ. ಪ್ರತಿವರ್ಷ ಒಂದು ಭತ್ತದ ಕಾಳಿನಷ್ಟು ಮುಂದೆ ಚಲಿಸುತ್ತಿದೆ ಈ ಕಲ್ಲು. ಇದು ದೇವಿಯ ಪಾದದ ಬಳಿ ತಲುಪಿದಾಗ ಕಲಿಯುಗ ಅಂತ್ಯವಾಗಲಿದೆ ಎನ್ನುವ ನಂಬಿಕೆ ಇದೆ.
ಒಂದು ವರ್ಷದವರೆಗೆ ದೀಪ ಅರುವುದಿಲ್ಲ,ಹೂವು ಬಾಡುವುದಿಲ್ಲ, ನೈವೇದ್ಯ ಹಾಳಾಗುವುದಿಲ್ಲ. ಇದು ಹಾಸನಾಂಬೆಯ ಮಹಾನ್ ಪವಾಡ. ಹಾಸನಾಂಬೆಯ ಸನ್ನಿಧಿಯಲ್ಲಿ ಈ ವರ್ಷ ಹಚ್ಚುವ ದೀಪ ಅವಳಿಗೆ ಮುಡಿಸುವ ಹೂವು ತಾಯಿಗೆ ನೈವೇದ್ಯವಾಗಿ ಅರ್ಪಿಸುವ ನೈವೇದ್ಯ ಒಂದು ವರ್ಷದವರೆಗೂ ಹಾಳಾಗುವುದಿಲ್ಲ ಎನ್ನಲಾಗುತ್ತದೆ. ಇದೆಲ್ಲ ಏನೇ ಇರಲಿ ಎಲ್ಲವೂ ಅವರವರ ಭಾವಕ್ಕೆ ಭಕ್ತಿಗೆ ಬಿಟ್ಟ ವಿಚಾರ, ನಂಬಿಕೆಗಿಂತ ಮಿಗಿಲಾದದ್ದು ಬೇರೆ ಇನ್ಯಾವುದು ಇದೆ, ಹಾಸನಾಂಬೆಯ ದರ್ಶನ ಮಾಡಿ ಅ ದೇವಿಯ ಆಶೀರ್ವಾದ ಪಡೆಯುವುದೇ ಒಂದು ಸೌಭಾಗ್ಯ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top