ಸಮಾಚಾರ

ಬಂಧನದ ಭೀತಿಯಲ್ಲಿ ಗಣಿಧಣಿ- ತಲೆಮರೆಸಿಕೊಂಡ ಜನಾರ್ದನ ರೆಡ್ಡಿ?

ಬಳ್ಳಾರಿ ಲೋಕಸಭಾ ಉಪ ಚುನಾವಣೆ ಮುಗಿಯುತ್ತಿದ್ದಂತೇ ಗಣಿಧಣಿ ಜನಾರ್ದನ ರೆಡ್ಡಿಗೆ ಸಂಕಟ ಶುರುವಾಗಿದೆ. ಉಪ ಚುನಾವಣೆ ಸಂದರ್ಭದಲ್ಲಿ ರಾಜಾರೋಷವಾಗಿ ಹೇಳಿಕೆ ನೀಡುತ್ತಿದ್ದ ರೆಡ್ಡಿ ಇದೀಗ ಜೈಲು ಸೇರುವ ಸಾಧ್ಯತೆ ಅಧಿಕವಾಗಿದೆ. ಹಳೆಯ ಡೀಲ್ ಪ್ರಕರಣವೊಂದು ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಉರುಳಾಗುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ರೆಡ್ಡಿಯನ್ನು ಬಂಧಿಸಲು ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.

ನಾಪತ್ತೆಯಾದರೆ ರೆಡ್ಡಿ?
ಸಿಸಿಬಿ ಪೊಲೀಸರು ವಶಕ್ಕೆ ಪಡೆಯಬಹುದೆಂಬ ಹಿನ್ನೆಲೆಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ, ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆಂದು ಹೇಳಲಾಗಿದೆ. ಜನಾರ್ಧನ ರೆಡ್ಡಿ ಆಪ್ತನ ವಿಚಾರಣೆ ವೇಳೆ ಪೊಲೀಸರಿಗೆ ಈ ಮಾಹಿತಿ ಸಿಕ್ಕಿದ್ದು, ಹೀಗಾಗಿ ಜನಾರ್ದನ ರೆಡ್ಡಿ ಅವರ ಪಾರಿಜಾತ ನಿವಾಸ ಸೇರಿದಂತೆ ಹಲವು ಕಡೆ ಅವರಿಗಾಗಿ ಹುಡುಕಾಟ ನಡೆಸಿದ್ದಾರೆನ್ನಲಾಗಿದೆ.ಇದರ ಮಾಹಿತಿ ಮೊದಲೇ ಪಡೆದಿದ್ದ ಜನಾರ್ದನ ರೆಡ್ಡಿ, ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆನ್ನಲಾಗಿದೆ.

ಏನಿದು ಪ್ರಕರಣ?
ನೋಟ್‌ ಬ್ಯಾನ್‌ ವೇಳೆ ಬಹುಕೋಟಿ ರೂಪಾಯಿ ವಹಿವಾಟು ಮಾಡಿರುವ ಆರೋಪ ಜನಾರ್ದನ ರೆಡ್ಡಿ ಮೇಲಿದೆ. ಆಪ್ತ ಸಹಾಯಕ ಆಲಿಖಾನ್‌ ಮೂಲಕ ಬ್ಯಾನ್ ಆಗಿದ್ದ ನೋಟುಗಳನ್ನ ಬದಲಾವಣೆ ಮಾಡಿರುವ ಆರೋಪವಿದು. ಆಂಬಿಡೆಂಟ್‌ ಗ್ರೂಪ್ ಮೂಲಕ ಅಕ್ರಮ ಹಣ ಬದಲಾವಣೆ ಮಾಡಿಕೊಂಡಿರುವ ಆರೋಪ ಮಾಜಿ ಸಚಿವ ಜನಾರ್ದನ ರೆಡ್ಡಿಯ ಮೇಲಿದೆ… ಸಾರ್ವಜನಿಕರಿಗೆ ವಂಚಿಸಿದ್ದ ಕಂಪೆನಿ ಜೊತೆಗೂಡಿ ಜನಾರ್ದನ ರೆಡ್ಡಿ ಅಮಾನ್ಯಗೊಂಡ ನೋಟುಗಳನ್ನು ವರ್ಗಾವಣೆ ಮಾಡಿಕೊಂಡಿದ್ದರು.

ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಲ್ಲದೆ, ಕಳೆದ ವಿಧಾನಸಭೆ ಚುನಾವಣೆಗೆ ಸುಮಾರು 20 ಕೋಟಿ ರೂ. ಹಣವನ್ನು ಖರ್ಚು ಮಾಡಿದ್ದಾರೆಂಬ ಗಂಭೀರ ಆರೋಪಗಳ ಹಿನ್ನಲೆಯಲ್ಲಿ ಜನಾರ್ಧನ ರೆಡ್ಡಿ ಬಂಧನಕ್ಕೆ ಸಿಸಿಬಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ನಡೆಸ್ತಿರುವ ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ನೇತೃತ್ವದ ಟೀಂ, ಜನಾರ್ದನ್​​ ರೆಡ್ಡಿಯನ್ನ ಅರೆಸ್ಟ್​ ಮಾಡಲಿದ್ದಾರೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top