fbpx
ದೇವರು

ಶಿರಡಿ ಸಾಯಿಬಾಬಾ ಮಹಿಮೆ,ಸಾಯಿಬಾಬಾ ಮಾಡಿರೋ ಪವಾಡಗಳ ಬಗ್ಗೆ ಗೊತ್ತಾದ್ರೆ ಖಂಡಿತಾ ನಿಮಗೆ ಅವರ ಮೇಲಿನ ಭಕ್ತಿ ಇನ್ನೂ ಜಾಸ್ತಿಯಾಗುತ್ತೆ

ಶಿರಡಿ ಸಾಯಿಬಾಬಾ “ಸಬ್ ಕಾ ಮಾಲಿಕ್ ಏಕ್ ಹೇ” ಎಂದು ಸಾರಿ ಹೇಳಿದ ಮಾನವತಾವಾದಿ ಅವರ ಮಹಿಮೆ ಅಪಾರ.
ನಮ್ಮ ದೇಶ ವಿಶಿಷ್ಟ ಆಚರಣೆಗಳು ವಿಭಿನ್ನ ವೈಶಿಷ್ಟ್ಯಗಳು ಇರುವ ತವರೂರು. ಇಲ್ಲಿ ವಿಶ್ವಾಸ, ನಂಬಿಕೆ ಇಟ್ಟವರಿಗೆ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಭಕ್ತಿಯಿಂದ ಬೇಡಿ ಕೊಂಡವರಿಗೆ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಈ ದೇವರ ಮೊರೆ ಹೋದರೆ ಕೈ ಬಿಡುವ ಮಾತೇ ಇಲ್ಲ ಎನ್ನುವುದು ನಂಬಿದವರ ಅಚಲ ನಂಬಿಕೆಯಾಗಿದೆ. ಈ ಕಾರಣಕ್ಕೆ ಈ ನೆಲದ ಮೇಲೆ ಜನ್ಮತಾಳಿದ ಸಾಧಕರುಗಳು, ಲೆಕ್ಕವೇ ಇಲ್ಲ.ಈ ದೈವಜ್ಞ ತೋರಿದ ಮಹಿಮೆಯನ್ನು ಅಲ್ಲಗಳೆಯುವುದಿಲ್ಲ. ದೇವರ ಅಸ್ತಿತ್ವವನ್ನು ಸಾರಿ ಹೇಳುವುದಕ್ಕೆ ಭೂಮಿಗೆ ಬಂದು ಪವಾಡಗಳ ಮೂಲಕ ಜನರನ್ನು ಉದ್ದಾರ ಮಾಡಿದ ಮಹಿಮಾನ್ವಿತ ಅವತಾರ ಪುರುಷ ಶಿರಡಿ ಸಾಯಿಬಾಬಾ.
ಮಹಾರಾಷ್ಟ್ರ ರಾಜ್ಯದ ಅಹಮದ್ ನಗರ ಜಿಲ್ಲೆಯಲ್ಲಿದೆ ಈ ಪರಮ ಪುಣ್ಯ ತಾಣವಾದ ಶಿರಡಿ ಮಹಾಮಹಿಮ ಸಾಯಿಬಾಬಾ ನಡೆದಾಡಿದ ನೆಲ. ಶಿರಡಿ ಇಂದಿಗೂ ಭಕ್ತ ಕೋಟಿಯನ್ನು ಸಲಹುತ್ತಿರುವ ಪವಾಡ ಕ್ಷೇತ್ರ. ನಾನಿರುವವರೆಗೆ ನಿಮಗೆ ಭಯವೇಕೆ ಎಂದು ಹೇಳುತ್ತಿದ್ದ ಸಾಯಿಬಾಬಾ ಇಂದು ದೈಹಿಕವಾಗಿ ಇಲ್ಲದೆ ಇದ್ದರೂ ತಾನು ಕೊಟ್ಟ ಭರವಸೆಯನ್ನು ಮಾತ್ರ ಮರೆತಿಲ್ಲ. ಈ ಕಾರಣಕ್ಕೆ ಶಿರಡಿಯ ಕ್ಷೇತ್ರ ಭಕ್ತರ ಪಾಲಿನ ಆಶಾಕಿರಣವಾಗಿದ್ದ ಸ್ವಾಮಿಯು ಶ್ರದ್ಧಾ ಭಕ್ತಿಗಳು ಸಂಗಮವಾಗಿದೆ. ಇಲ್ಲಿಗೆ ಲಕ್ಷೋಪಾದಿಯಲ್ಲಿ ಸಾಯಿಬಾಬನ ಭಕ್ತರು ಹರಿದು ಬರುವ ದಿವ್ಯ ಕ್ಷೇತ್ರವಾಗಿ ಶೋಭಿಸುತ್ತಿದೆ ಶಿರಡಿ. ಸಾಯಿಬಾಬಾ ಕಣ್ಮರೆಯಾಗಿ ಹತ್ತಿರ ಬಂದು ಒಂದು ಶತಮಾನವಾಯಿತು. ಆದರೆ ಭಕ್ತರ ಪಾಲಿಗೆ ಆ ಪುಣ್ಯ ಪುರುಷ ಯಾವತ್ತೂ ಕಣ್ಮರೆಯಾಗಿ ನಂಬಿದವರ ಕೂಗಿ ಕರೆದವರ ಜೊತೆಗೆ ಸಾಯಿ ಬಾಬಾ ಸದಾ ಇರುತ್ತಾನೆ ಎನ್ನುತ್ತಲೇ ಆತನ ಭಕ್ತರ ಅಚಲ ವಿಶ್ವಾಸವಾಗಿದೆ.

 

 

 

ಸಾಯಿ ಎಂದು ಶುದ್ಧ ಮನಸ್ಸಿನಿಂದ ಧ್ಯಾನಿಸಿ, ಯಾವುದೇ ಕಾರ್ಯ ಆರಂಭಿಸಿದರು ಅದು ಯಶಸ್ಸಿನತ್ತ ಸಾಗುತ್ತಿದೆ. ಭಕ್ತರು ಎಷ್ಟೇ ದೂರದಲ್ಲಿದ್ದರೂ ಸಾಯಿಬಾಬಾರ ನಾಮಸ್ಮರಣೆಯೊಂದಿಗೆ ಎಲ್ಲವನ್ನು ಅನಾಯಾಸವಾಗಿಸುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿ ಅಚ್ಚಳಿಯದೆ ಉಳಿದಿದೆ.ಎಲ್ಲಾ ಭವ ಬಂಧನಗಳನ್ನು ಮೀರಿದ್ದು ಎಲ್ಲಾ ಜಾತಿ ಧರ್ಮದವರು ಇಲ್ಲಿಗೆ ಯಾವುದೇ ಬೇಧ ಭಾವವಿಲ್ಲದೆ ಬರುತ್ತಾರೆ. ನಾವೆಲ್ಲರೂ ಒಂದೇ ಎನ್ನುವ ಐಕ್ಯತೆಯನ್ನು ಕಲಿಸಿದ ಅಪ್ರತಿಮ ಗುರು. ಆಧ್ಯಾತ್ಮ ಲೋಕದ ಮಹಾಚೇತನ ಸಾಯಿಬಾಬಾ. ಆ ಭಗವಂತನ ಸ್ವರೂಪಿಯಾದ ಸಾಕ್ಷಾತ್ ಸಾಯಿಬಾಬಾ ತಮ್ಮ ಪವಾಡಗಳ ಮೂಲಕ ತಪಃಶಕ್ತಿಯನ್ನು ಸಾರಿದರು.ಆ ತೇಜೋಮಯ ಶಕ್ತಿ ಇಂದಿಗೂ ಶಿರಡಿ ಸಾಯಿ ಮಂದಿರದಲ್ಲಿ ನೆಲೆಸಿದೆ ಎನ್ನುವ ನಂಬಿಕೆ ಇದೆ. ಮುಗುಳು ನಗೆಯ ಭಂಗಿಯಲ್ಲಿ ಕುಳಿತಿರುವ ಆ ಬಾಬಾ ನಗುವಿನ ಮುಖವನ್ನು ಕಣ್ತುಂಬಿಕೊಂಡರು. ಎಲ್ಲಾ ಸಂಕಷ್ಟಗಳು ಕ್ಷಣ ಮಾತ್ರದಲ್ಲಿ ದೂರವಾಗುತ್ತವೆ ಎನ್ನುವ ವಿಶ್ವಾಸವಿದೆ. “ಸಬ್ ಕಾ ಮಾಲಿಕ್ ಏಕ್” ಎನ್ನುವ ಸಾಯಿ ತತ್ವ ಅಕ್ಷರಶಹ ನಿಜವಾಗಿದೆ. ಇಂದು ಶಿರಡಿ ಕ್ಷೇತ್ರದಲ್ಲಿ ಇದನ್ನು ನೀವೆಲ್ಲರೂ ಕಾಣಬಹುದಾಗಿದೆ. ಜಾತಿ ಧರ್ಮ ಎನ್ನುವುದು ಯಾವುದೇ ಹಂಗಿಲ್ಲದೆ ಎಲ್ಲಾ ಧರ್ಮದವರು ಆತನ ದರ್ಶನ ಭಾಗ್ಯಕ್ಕೆ ದೇಶದ ಎಲ್ಲಾ ಭಾಗಗಳಿಂದ ಹರಿದು ಬರುತ್ತಾರೆ.

ಅದೊಂದು ದಿನ ನಿಜಕ್ಕೂ ಆ ಊರಿನ ಪಾಲಿಗೆ ಕೊನೆಯಾಗದ ಸೌಭಾಗ್ಯ.
ಬೆಳಗಿನ ಸೂರ್ಯ ಹುಟ್ಟುವುದಕ್ಕಿಂತ ಮೊದಲೇ ಅಪರೂಪದ ಅಚ್ಚರಿಯೊಂದು ಜರುಗಿತ್ತು. ಬೆಳಗ್ಗೆ ಕಣ್ಣುಜ್ಜುತ್ತಾ ಮನೆಯಿಂದ ಆಚೆ ಬಂದ ಜನಕ್ಕೆ ಪರಮಾಶ್ಚರ್ಯ. ಅದು ಅಹಮದ್ ನಗರ ಜಿಲ್ಲೆಯ ವ್ಯಾಪ್ತಿಗೆ ಬರುವ ಶಿರಡಿ ಎನ್ನುವ ಪುಟ್ಟ ಗ್ರಾಮದ ಹಳ್ಳಿಯ ಒಂದು ಮಗ್ಗುಲಲ್ಲಿ ಒಂದು ಹಳೆಯದಾದ ಮಸೀದಿಗೆ ಒಂದು ವಿಶಾಲವಾದ ಬೇವಿನ ಮರವೊಂದು ಮೈ ಚಾಚಿ ನಿಂತು ಕೊಂಡಿತು. ಮರದ ಕೆಳಗೆ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತಿದ್ದ 16ನೇ ವಯಸ್ಸಿನ ಒಬ್ಬ ಮಹಾನ್ ತೇಜಸ್ವಿ ಬಾಲಕ.ಆ ಸುರದ್ರೂಪಿ ಬಾಲಕನನ್ನು ಕಂಡು ಇಡೀ ಊರೇ ಬೆಕ್ಕಸ ಬೆರಗಾಗಿತ್ತು. ಅದೆಷ್ಟೇ ದಿನಗಳು ಉರುಳಿದರೂ ಆ ಬಾಲಕ ಅಲ್ಲಿಂದ ಮೇಲೇಳಲಿಲ್ಲ. ಕೊನೆಗೆ ದೇವರಾಗಿ ಕಂಡು ಆತನ ಮೊರೆ ಹೊಕ್ಕಾಗ ಬಾಲಕ ಕುಳಿತ ಸ್ಥಳದಲ್ಲಿಯೇ ಕಾದಿತ್ತು ಅಚ್ಚರಿ. ಅದನ್ನು ನೋಡುವುದಕ್ಕೆ ಅಲ್ಲಿ ಆ ಬಾಲಕ ಕುಳಿತ ಸ್ಥಳದಲ್ಲಿ ನೆಲ ಅಗೆದು ಚಪ್ಪಡಿ ಕಲ್ಲು ಸರಿಸಿ ನೋಡಿದಾಗ ಅದೊಂದು ಪುರಾತನ ಸಮಾಧಿ ಕಣ್ಣಿಗೆ ಬಿದ್ದಿತ್ತು.ಅಲ್ಲೊಂದು ಚೊಕ್ಕಟವಾಗಿದ್ದ ನೆಲಮನೆ, ಧ್ಯಾನಪೀಠ, ಗೋವಿನ ಮುಖ, ಒಂದು ಜಪಮಣಿ ಹಾಗೂ ಅದೆಷ್ಟೋ ದಶಕಗಳಿಂದ ಪ್ರಶಾಂತವಾಗಿ ಉರಿಯುತ್ತಿದ್ದ ದೀಪಗಳು. ಕಕ್ಕಾಬಿಕ್ಕಿಯಾದ ಜನಕ್ಕೆ ಆ ಬಾಲಕ ಹೇಳಿದ್ದು ಅದು ತನ್ನ ಗುರುವಿನ ಸಮಾಧಿಯಾಗಿತ್ತು. ಅದಕ್ಕೆ ತಾನು ಅಲ್ಲಿ ಕುಳಿತಿದ್ದು ಎಂದು ಹೇಳಿ ಅವರೆಲ್ಲರನ್ನು ಮತ್ತಷ್ಟು ದಿಗ್ಭ್ರಮೆ ಗೊಳಿಸಿದ್ದ. ಅದಾದ ನಂತರ ಮತ್ತೆ ಆ ಗ್ರಾಮದಲ್ಲಿ ಬಾಲಕ ಎಲ್ಲೂ ಕಾಣಿಸಲಿಲ್ಲ.
ಅದು ಸುಮಾರು 1854 ನೇ ಇಸವಿಯ ಸಂದರ್ಭ ಇರಬಹುದು. ಶಿರಡಿ ಎಂಬ ಅದೃಷ್ಟದ ಊರಿಗೆ ಮುಸಲ್ಮಾನ ಕುಟುಂಬವೊಂದರ ಮದುವೆ ದಿಬ್ಬಣ ಪ್ರವೇಶವಾಗಿತ್ತು. ಒಬ್ಬರು ಬಾಬಾರವರನ್ನು ಕಂಡ ತಕ್ಷಣ ಊರ ಜನರು ಅಚ್ಚರಿಗೊಂಡರು. ಹೀಗೆ ನಾಲ್ಕು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಊರಿಗೆ ಪ್ರವೇಶಿಸಿ ಅದ್ಭುತ ಸೃಷ್ಟಿಸಿ ಮರೆಯಾಗಿದ್ದ ಅದೇ ತೇಜಸ್ವಿ ಬಾಲಕ ಕಣ್ಣಿಗೆ ಬಿದ್ದಿದ್ದ, ಮೈ ಮೇಲೆ ಬಿಳಿಯ ನಿಲುವಂಗಿ, ತಲೆಗೊಂದು ಬಟ್ಟೆ ಸುತ್ತಿಕೊಂಡಿದ್ದ, ಫಕೀರರ ಕೈಯಲ್ಲಿ ಸಾಮಾನ್ಯವಾಗಿ ಕಂಡುಬರುವ ಫಟ್ಕಾ ಹಿಡಿದುಕೊಂಡಿದ್ದ.

ಆ ಯುವಕ ಖನಗುಂಭ ದೇವಸ್ಥಾನದ ಹತ್ತಿರ ಬರುತ್ತಿದ್ದಂತೆ ಅರ್ಚಕ ಭಗವತಿ ಅಜಾನಕ್ಕಾಗಿ ಹೇಳಿದ ಪದಗಳು ಆ ಬಾಲಕನಿಗೆ ಶಾಶ್ವತ ಹೆಸರಾಗಿ ಬಿಟ್ಟಿತ್ತು. ಭಕ್ತಿ , ಭಾವದಿಂದ ಭಕ್ತ ಮಾಲ್ಯ ಕರೆದ ಹೆಸರು ಆ ಯುವಕನನ್ನು ಯಾ ಸಾಯಿ ಯಾ ಬಾಬಾ ಎಂದು ಕರೆದದ್ದು ಸಾಯಿಬಾಬಾ ಎಂಬ ಹೆಸರು ಉಳಿದುಬಿಟ್ಟಿತ್ತು. ಸಾಯಿ ಎಂದರೆ ಸಂತ ಬಾಬಾ ಎಂದರೆ ತಂದೆ ಎಂದರ್ಥ. ಅಲ್ಲಿಂದ ಆ ಯುವಕನಿಗೆ ಹೊಸ ನಾಮಕರಣ ಮಾಡಿಬಿಟ್ಟರು. ಅಲ್ಲಿಂದ ಶಿರಡಿಯಲ್ಲಿ ಶಾಶ್ವತವಾಗಿ ನೆಲೆ ನಿಂತ ಬಾಬಾ ತನ್ನ ಬಳಿ ಬಂದವರ ಜಾತಿ ಧರ್ಮಗಳನ್ನು ಯಾವತ್ತೂ ಕೇಳಲೇ ಇಲ್ಲ. ಸಂಕಷ್ಟಗಳಿಗೆ ಸಾಂತ್ವಾನ ಹೇಳುವುದರ ಜೊತೆಗೆ ಸಮಸ್ಯೆ ಪರಿಹರಿಸಿ ಕಳಿಸುತ್ತಿದ್ದರು. ಈ ಕಾರಣಕ್ಕೆ ಬಾಬಾ ಮಹಾಮಹಿಮರು ಎಂದು ಕರೆಸಿಕೊಳ್ಳುವುದಕ್ಕೆ ಸಾಧ್ಯವಾಗಿದ್ದು.2 ಧರ್ಮದ ಭಕ್ತರನ್ನು ಸಮಾನವಾಗಿ ಕಾಣುತ್ತಿದ್ದ ಸಾಯಿಬಾಬಾ ತಾವು ಯಾವುದೇ ಧರ್ಮಕ್ಕೂ ಸೇರಿದವರಲ್ಲ ಎನ್ನುವುದನ್ನು ತುಂಬಾ ಅರ್ಥಗರ್ಭಿತವಾಗಿ ವಿವರಿಸುತ್ತಿದ್ದರು.
ನೋಡುವುದಕ್ಕೆ ಫಕೀರನ ವೇಷ, ಮುರುಕಲು ಮಸೀದಿ, ತೀರಾ ಅಗತ್ಯ ಎನ್ನುವುದಕ್ಕೆ ದಿನಬಳಕೆ ವಸ್ತುಗಳನ್ನು ಬಿಟ್ಟರೆ ಬಾಬಾ ಬಳಿ ಬೇರೆ ಏನೂ ಇರಲಿಲ್ಲ.ತನ್ನ ಬಳಿ ಇದ್ದದ್ದನ್ನು ಬರಿಗೈಯಲ್ಲಿ ಬರುತ್ತಿದ್ದ ಭಕ್ತರಿಗೆ ನೀಡುತ್ತಿದ್ದ ಸಾಯಿ. ನೊಂದವರ ಪಾಲಿಗೆ ನಿಜವಾದ ಕರುಣಾಮಯಿಯಾದರು. ಬಾಬಾ ಬಾಯಿಂದ ಸದಾ ಬರುತ್ತಿದ್ದ ಮಾತುಗಳೆಂದರೆ “ಸಬ್ ಕಾ ಮಾಲಿಕ್ ಏಕ್” ಅಲ್ಲ ಸಬ ಕಾ ಬಲಾ ಕರೇಗಾ ಎನ್ನುವ ಚೈತನ್ಯಪೂರ್ಣ ಮಾತುಗಳಿಂದಲೇ ಭಕ್ತರ ಸಂಕಷ್ಟಗಳು ದೂರವಾಗುತ್ತಿವೆ. ಕಾಯಿಲೆ ಬಿದ್ದವರು ಹಣಕಾಸಿನ ತೊಂದರೆ ಅನುಭವಿಸುತ್ತಿದ್ದವರು, ಹೀಗೆ ಹತ್ತು ಹಲವು ಬಗೆಯ ಸಮಸ್ಯೆಗಳಿಗೆ ಬಾಬಾ ಅಗ್ನಿ ಕುಂಡದಿಂದ ತೆಗೆದು ಕೊಡುತ್ತಿದ್ದ ಬಸ್ಮ ಪರಿಹಾರವಾಗಿತ್ತು. ಆಶ್ಚರ್ಯಕರ ಸಂಗತಿ ಎಂದರೆ ಬಾಬಾ ಧಾರ್ಮಿಕ ಆಚರಣೆಗಳನ್ನು ಮತ್ತು ಅರ್ಥವಿಲ್ಲದ ಸಂಪ್ರದಾಯಗಳನ್ನು ವಿರೋಧಿಸುತ್ತಿದ್ದರು.

 

 

 

ಬಾಬಾ ಭಕ್ತರಿಗೆ ಹೆಚ್ಚು ಆಪ್ತರಾಗಿದ್ದಕ್ಕೆ ಕಾರಣ ಅವರಿಂದ ನಡೆಯುತ್ತಿದ್ದ ಪವಾಡಗಳು. ಅದೊಂದು ಬಾಬಾರ ದರ್ಶನಕ್ಕೆ ಬಂದಿದ್ದ ಕರ್ಕಡ ಎನ್ನುವ ಮಹಿಳೆ ಅದೊಂದು ದಿನ ಅಡಿಗೆ ಮಾಡಿ ಊಟಕ್ಕೆ ಸಿದ್ಧತೆ ಮಾಡುತ್ತಿದ್ದರು. ಆಗ ತೀರ ಹಸಿದು ಬಂದ ನಾಯಿಯೊಂದು ಆಕೆಯ ಮನೆಯ ಬಾಗಿಲ ಮುಂದೆ ಬಂದು ನಿಂತಿತ್ತು. ಹಿಂದೆ ಮುಂದೆ ಯೋಚನೆ ಮಾಡದೇ ಆ ರೊಟ್ಟಿಯನ್ನು ನಾಯಿಗೆ ನೀಡಿ ನಂತರ ತಾನು ಊಟ ಮಾಡಿ ಬಾಬಾ ದರ್ಶನಕ್ಕೆ ಹೋದಳು. ಅಲ್ಲಿಂದ ಒಂದು ಅಚ್ಚರಿ ಆಕೆಗೆ ಕಾದಿತ್ತು. ಆಕೆ ಹೋದ ತಕ್ಷಣ ಬಾಬಾ ಖುಷಿಯಿಂದ ಸಂತುಷ್ಟ ಭಾವದಲ್ಲಿ ತಾಯಿ ನೀನು ನೀಡಿದ ರೊಟ್ಟಿ ರುಚಿಕರವಾಗಿತ್ತು. ತಿಂದು ತೃಪ್ತನಾದೇ ಎಂದರು. ಇದು ಬಾಬಾ ಅವರ ದೈವೀ ಶಕ್ತಿಗೆ ಇದ್ದ ತಾಕತ್ತು.
ಆದರೆ ಒಂದು ದಿನ ಕಾಲು ಒತ್ತುತ್ತಾ ಇದ್ದ ಸಾಯಿಬಾಬನ ಭಕ್ತ ಅದೊಂದು ಸಂದರ್ಭ ಸಂಸ್ಕೃತ ಶ್ಲೋಕವನ್ನು ಗುನುಗುತ್ತಿದ್ದ. ಆಗ ಬಾಬಾ ಅದ್ಯಾವ ಶ್ಲೋಕ ಗಟ್ಟಿಯಾಗಿ ಹೇಳು ಅದರ ಅರ್ಥವೇನು ಎಂದು ಕೇಳಿದರು. ಆಗ ಅವರಿಗೆ ಸಂಸ್ಕೃತದ ಬಗ್ಗೆ ಏನು ಗೊತ್ತು ಎಂದು ತಾತ್ಪರ್ಯ ಹೇಳಲು ಪ್ರಾರಂಭಿಸಿದ. ಅದಕ್ಕೆ ಬಾಬಾ ನಾನು ಹೇಳಿದ್ದು ತಾತ್ಪರ್ಯ ಅಲ್ಲ, ಪದ ಪದಗಳ ಅರ್ಥ ಎಂದರು. ಒಂದೊಂದು ಪದದ ಅರ್ಥ ಪದ ಪ್ರಯೋಗದ ಔಚಿತ್ಯವನ್ನು ಪ್ರಶ್ನಿಸಿದರು. ಆಗ ಆತನು ಕೊಟ್ಟ ವಿವರಣೆ ಸಮಂಜಸವಲ್ಲ ಎಂದು ಅದರ ಅರ್ಥವೆಲ್ಲವನ್ನು ವ್ಯಾಖ್ಯಾನ ಮಾಡಿದರು. ಇದು ಬಾಬಾ ಅವರಿಗೆ ಇದ್ದ ಅಪರೋಕ್ಷ ಜ್ಞಾನ. ಬಾಬಾ ತಾವು ಇಂದೂ ಅಥವಾ ಮುಸಲ್ಮಾನ್ ಎಂದು ತಾವು ಎಂದಿಗೂ ಹೇಳಿಕೊಳ್ಳಲಿಲ್ಲ. ತಾವು ರಂಜಾನ್ ಮತ್ತು ರಾಮನವಮಿಯನ್ನು ಒಟ್ಟಾಗಿ ಆಚರಿಸಲು ಪ್ರೇರೇಪಿಸಿದ ಮಹಾನ್ ಮಾನವತಾವಾದಿ. ಧರ್ಮದಿಂದ ಮನಸ್ಸುಗಳ ನಡುವೆ ಗೋಡೆ ನಿರ್ಮಾಣವಾಗುತ್ತದೆ. ಸ್ನೇಹ , ಪ್ರೀತಿ ಕರುಣೆಯಿಂದ ಮಾತ್ರ ಪ್ರತಿ ಮನಸ್ಸಿನಲ್ಲಿಯೂ ಭಗವಂತ ನೆಲೆಸುವಂತೆ ಮಾಡುವುದಕ್ಕೆ ಸಾಧ್ಯ ಎಂದು ಹೇಳುತ್ತಿದ್ದರು.

 

ಇಂದಿಗೂ ಬಾಬಾ ಬೇರೆ ಬೇರೆ ಧರ್ಮಗಳಿಗೆ ಬೇರೆ ಬೇರೆ ರೂಪದಲ್ಲಿ ಕಾಣುತ್ತಾರೆ. ಇಂದೂಗಳ ಪಾಲಿಗೆ ದತ್ತಾತ್ರೇಯ ರೂಪದಲ್ಲಿ ಕಾಣುತ್ತಾರೆ. ಲೋಕ ಕಲ್ಯಾಣಕ್ಕಾಗಿ ಜನಿಸಿ ಜಗತ್ತಿಗೆ ಸೌಹಾರ್ದತೆಯ ಬಹು ದೊಡ್ಡ ಪಾಠ ಹೇಳಿಕೊಟ್ಟವರು. ಈ ಕಾರಣಕ್ಕೆ ಇಂದಿಗೂ ದೇವಸ್ಥಾನದಲ್ಲಿ ರಾಮನವಮಿ, ಗುರು ಪೌರ್ಣಮಿ ಹಾಗು ವಿಜಯ ದಶಮಿಯನ್ನು ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶಿರಡಿ ನಗರದಲ್ಲಿ ವಿರಾಜಮಾನವಾಗಿರುವ ಸಾಯಿ ಬಾಬಾರನ್ನು ಕಾಣಲು ಇಂದು ವಿಶ್ವದ ನಾನಾ ಮೂಲೆಗಳಿಂದ ದಿನವೊಂದಕ್ಕೆ ಹತ್ತು ಸಾವಿರಕ್ಕಿಂತ ಅಧಿಕ ಭಕ್ತರು ಬರುತ್ತಾರೆ. ಹೀಗಾಗಿ ಕೇವಲ ಮಹಾರಾಷ್ಟ್ರ ಮಾತ್ರವಲ್ಲದೇ ದೇಶದಲ್ಲೇ ಶಿರಡಿಗೆ ಅಸಂಖ್ಯಾತ ಭಕ್ತರನ್ನು ಸೆಳೆಯಬಲ್ಲ ಯಾತ್ರಾ ಸ್ಥಳಗಳಲ್ಲಿ ಅಗ್ರ ಸ್ಥಾನವನ್ನು ಗಳಿಸಿದೆ. ಸಾಯಿಬಾಬಾ ಅವರು ಸಮಾಧಿಯ ಸ್ಥಿತಿ ತಲುಪಿದ ಎರಡು ವರ್ಷಗಳ ನಂತರ ಅಂದರೆ 1922 ರಲ್ಲಿ ಶಿರಡಿಯಲ್ಲಿ ಮಂದಿರ ನಿರ್ಮಿಸಲಾಯಿತು. ಅಂದು ಕಣ್ಣೆದುರಿಗೆ ಇದ್ದು ಕಾಪಾಡುತ್ತಿದ್ದ ಸಾಯಿಬಾಬಾ ಇಂದು ಸಮಾಧಿಯ ಒಳಗಿಂದಲೇ ಸಲಹುತ್ತಿದ್ದಾರೆ.

 

ಶಿರಡಿಯಲ್ಲಿರುವ ಪ್ರತಿ ಹೆಜ್ಜೆಯೂ ಸಾಯಿಬಾಬನ ಬದುಕಿನೊಂದಿಗೆ ನಂಟು ಬೆಸೆದುಕೊಂಡ ಸ್ಥಳವಾಗಿದೆ. ಹೀಗಾಗಿ ಸಾಯಿ ಮಂದಿರವನ್ನು ದರ್ಶನ ಮಾಡುವುದರ ಜೊತೆಗೆ ಇನ್ನೂ ಕೆಲವು ಸ್ಥಳಗಳನ್ನು ಕಾಣದೆ ಇದ್ದರೆ ಶಿರಡಿ ಯಾತ್ರೆ ಪೂರ್ಣಗೊಳ್ಳುವುದಿಲ್ಲ. ಅದರಲ್ಲೂ ಸಾಯಿಬಾಬಾ ಶಿರಡಿಗೆ ಭೇಟಿ ಕೊಟ್ಟಾಗ ಉಳಿದುಕೊಂಡಿದ್ದ ಬೇವಿನ ಮರದ ಕೆಳಗಿನ ಜಾಗವಾದ, ಬಾಬಾ ಮೊದಲ ಬಾರಿಗೆ ಶಿರಡಿಗೆ ಭೇಟಿ ಕೊಟ್ಟು ಧ್ಯಾನ ಮಾಡಿ ಅದೇ ತನ್ನ ಗುರುವಿನ ಸ್ಥಳ ಎಂದು ತಿಳಿಸಿದ್ದ ಗುರುಸ್ಥಾನ ಮಂದಿರ, ಬಾಬಾ 60 ವರ್ಷ ಉಳಿದುಕೊಂಡಿದ್ದ ದ್ವಾರಕಾಮಾಯಿ ಮಸೀದಿ, ಸಾಯಿಬಾಬಾ ಆಗಾಗ ಬಂದು ಮಲಗುತ್ತಿದ್ದ ಚವಡಿ ಮಂದಿರ, ಬಾಬಾರ ಅಚ್ಚುಮೆಚ್ಚಿನ ಲೆಂಡಿ ಬ್ಯಾಗ್, ಆ ದೇವ ಪುರುಷನಿಂದ ಬೆಳಗಿಸಿದ ನಂದಾದೀಪ, ಹೀಗೆ ಸಾಯಿಬಾಬಾ ಅವರ ನೆನಪನ್ನು ಅಜರಾಮರವಾಗಿಸುವ ಅನೇಕ ಕುರುಹುಗಳನ್ನು ಇಲ್ಲಿ ಕಾಣಬಹುದಾಗಿದೆ.
ಸಾಯಿಬಾಬಾ ಅವರು ಜನ್ಮ ತಳೆದದ್ದೇ ಅಸಹಾಯಕರ ಪಾಲಿಗೆ ಆಪತ್ಬಾಂಧವನಾಗಿ ವಿಶ್ವಾಸವಿಟ್ಟು ಅವರ ಬಳಿ ಹೋದವರು ಯಾವತ್ತು ಬರಿಗೈಯಲ್ಲಿ ವಾಪಸ್ಸು ಮರಳಿದ್ದೇ ಇಲ್ಲ. ಹೀಗಾಗಿ ಇವರು ತನ್ನ ಕ್ಷೇತ್ರಕ್ಕೆ ಅರಸಿ ಬಂದವರು ಕಷ್ಟಗಳನ್ನು ನಿರಂತರವಾಗಿ ಪರಿಹರಿಸುತ್ತಲೇ ಇದ್ದಾರೆ. ಬಾಬಾ ತಮ್ಮ ಅಂತ್ಯ ಕಾಲದಲ್ಲಿ ಭಕ್ತರಿಗೆ 11 ಭರವಸೆಗಳನ್ನು ನೀಡಿ ಮರೆಯಾದರು ಎಂದು ಹೇಳಲಾಗುತ್ತದೆ. ಅವುಗಳೆಲ್ಲದರ ಅರ್ಥವೆಂದರೆ ಶರಣು ಎಂದು ಬೇಡಿ ಬಂದವರನ್ನು ಕಾಪಾಡುತ್ತೇನೆ ಎನ್ನುವುದು ಸಾಯಿಬಾಬಾ ಅವರು ಸಮಾಧಿಯಾಗಿ ನೂರು ವರ್ಷವಾಗುತ್ತದೆ. ಬೆಂಗಳೂರಿನಿಂದ ಶಿರಡಿಗೆ 1011 ಕಿಲೋಮೀಟರ್ ಮತ್ತು ಪುಣೆಯಿಂದ 200 ಕಿಲೋಮೀಟರ್ ಅಂತರವಿದೆ. ಸಾರಿಗೆ ವ್ಯವಸ್ಥೆಗಳ ಸೌಕರ್ಯ ಮತ್ತು ರೈಲಿನ ಮೂಲಕ ಅಥವಾ ವಿಮಾನದ ಮೂಲಕವೂ ಕೂಡ ನೀವು ಶಿರಡಿಗೆ ತಲುಪಬಹುದಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top